ದೇಶದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇತ್ತ ಪ್ರಚಾರ ಅಬ್ಬರವೂ ಕಾವು ಪಡೆಯುತ್ತಿದೆ. ಹಿರಿಯ ನಾಯಕರು ನೇತೃತ್ವ ವಹಿಸಿ ಮತದಾರರ ಸೆಳೆವ ಯತ್ನ ಮಾಡುತ್ತಿದ್ದಾರೆ. ಇತ್ತ ಟ್ರಬಲ್ ಶೂಟರ್ ಕೂಡ ಕಣಕ್ಕೆ ಇಳಿದಿದ್ದು, ಅವರ ಎದುರೇ ಕಾಂಗ್ರೆಸ್ ನಾಯಕರಿಬ್ಬರು ಬೈದಾಡಿಕೊಂಡಿದ್ದಾರೆ.
ಬಳ್ಳಾರಿ : ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಹಾಗೂ ಕೂಡ್ಲಿಗಿಯ ಮಾಜಿ ಶಾಸಕ ಸಿರಾಜ್ ಶೇಖ್ ಪರಸ್ಪರ ಬೈದಾಡಿಕೊಂಡ ಪ್ರಸಂಗ ಮಂಗಳವಾರ ನಡೆಯಿತು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿ.ಎಸ್.ಉಗ್ರಪ್ಪ ನಾಮಪತ್ರ ಸಲ್ಲಿಸಿದ ಬಳಿಕ ಡೀಸಿ ಕಚೇರಿ ಆವರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡುತ್ತಿದ್ದರು. ಈ ವೇಳೆ ಮಾಜಿ ಶಾಸಕ ಸಿರಾಜ್ ಶೇಖ್ ಆಗಮಿಸುತ್ತಿದ್ದಂತೆಯೇ, ‘ಲೇ ನಿನ್ನ ನೋಡ್ಕೋತೀನಿ. ನಾಳೆ ಸಿಗು’ ಎಂದು ಶಾಸಕ ಭೀಮಾ ನಾಯ್ಕ ಆವಾಜ್ ಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿರಾಜ್, ‘ಅದೇನ್ ನೋಡ್ಕೊತೀಯಾ ನೋಡ್ಕೋ ಹೋಗು’ ಎಂದರು. ಇಬ್ಬರ ನಡುವೆ ಮಾತಿನ ಚಕಮಕಿ ಮತ್ತಷ್ಟುಜೋರಾಗಲಿದೆ ಎನ್ನುವಷ್ಟರಲ್ಲಿ ಸಚಿವ ಡಿಕೆಶಿ ಅತ್ತ ಗಮನ ಹಾಯಿಸುತ್ತಿದ್ದಂತೆಯೇ ಇಬ್ಬರು ಮೌನಕ್ಕೆ ಶರಣಾದರು.
ಶಾಸಕ ಭೀಮಾನಾಯ್ಕ ಹಾಗೂ ಮಾಜಿ ಶಾಸಕ ಸಿರಾಜ್ ಶೇಖ್ ಇಬ್ಬರ ನಡುವೆ ಹಿಂದಿನಿಂದಲೂ ವೈಮನಸ್ಸಿದ್ದು, ಸಿರಾಜ್ ಅವರನ್ನು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿರುವುದಕ್ಕೆ ಭೀಮಾನಾಯ್ಕ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.