ಬಿಜೆಪಿ ರಾಮಮಂದಿರ ನಾಯಕರು ಲೋಕಸಭೆ ಅಖಾಡದಿಂದಲೇ ದೂರ

By Web DeskFirst Published Apr 3, 2019, 9:10 AM IST
Highlights

ಬಿಜೆಪಿಯ ರಾಮಮಂದಿರ ನಾಯಕರು ಲೋಕಸಭೆ ಅಖಾಡದಿಂದಲೇ ದೂರ| ಅಡ್ವಾಣಿ, ಜೋಶಿಗೆ ಟಿಕೆಟ್‌ ಇಲ್ಲ, ಉಮಾ, ಕಟಿಯಾರ್‌ ಸ್ಪರ್ಧೆ ಇಲ್ಲ| ಗೌರ್ನರ್‌ ಹುದ್ದೆಯ ಕಾರಣ ಕಲ್ಯಾಣ್‌ ಸಿಂಗ್‌ ಕಣಕ್ಕಿಳಿವಂತಿಲ್ಲ

ಲಖನೌ[ಏ.03]: ಬಿಜೆಪಿಗೆ ರಾಜಕೀಯವಾಗಿ ಬಹುದೊಡ್ಡ ಲಾಭ ತಂದುಕೊಟ್ಟಅಯೋಧ್ಯೆ ರಾಮಜನ್ಮಭೂಮಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಯಕರಲ್ಲಿ ಬಹುತೇಕ ಮಂದಿ ಈ ಬಾರಿಯ ಲೋಕಸಭೆ ಚುನಾವಣೆ ಅಖಾಡದಿಂದಲೇ ದೂರ ಉಳಿದಿದ್ದಾರೆ.

1980 ಹಾಗೂ 1990ರ ದಶಕದಲ್ಲಿ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಲ್ಯಾಣ್‌ ಸಿಂಗ್‌ ಹಾಗೂ ವಿನಯ್‌ ಕಟಿಯಾರ್‌ ಅವರಂತಹ ನಾಯಕರು ರಾಮಮಂದಿರ ನಿರ್ಮಾಣಕ್ಕಾಗಿ ಉಗ್ರ ಹೋರಾಟ ನಡೆಸಿದ್ದರು. ಆದರೆ 3 ದಶಕಗಳಲ್ಲಿ ಪ್ರಾಯಶಃ ಇದೇ ಮೊದಲ ಬಾರಿಗೆ ಈ ಎಲ್ಲ ನಾಯಕರು ಚುನಾವಣೆಯಿಂದ ದೂರ ಸರಿದಿದ್ದಾರೆ ಎಂದು ವಿಶ್ವ ಹಿಂದು ಪರಿಷತ್‌ ನಾಯಕ ಶರದ್‌ ಶರ್ಮಾ ತಿಳಿಸಿದ್ದಾರೆ.

ರಾಮ ರಥಯಾತ್ರೆ ಕೈಗೊಂಡಿದ್ದ ಅಡ್ವಾಣಿ, ಬಾಬ್ರಿ ಮಸೀದಿ ಧ್ವಂಸವಾದ ಸಂದರ್ಭ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಮುರಳಿ ಮನೋಹರ ಜೋಶಿ ಅವರಿಗೆ ಟಿಕೆಟ್‌ ನಿರಾಕರಣೆಯಾಗಿದೆ. ವಿವಾದಿತ ಸ್ಥಳ ಧ್ವಂಸಗೊಂಡಾಗ ಘಟನಾ ಸ್ಥಳದಲ್ಲಿದ್ದರು ಎಂದು ಲಿಬರ್‌ಹನ್‌ ಆಯೋಗದ ವರದಿಯಲ್ಲಿ ಉಲ್ಲೇಖಗೊಂಡಿರುವ ಉಮಾ ಭಾರತಿ ತಾವಾಗಿಯೇ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.

ಕರಸೇವೆಯಲ್ಲಿ ಗುರುತಿಸಿಕೊಂಡಿದ್ದ ಬಜರಂಗದಳದ ಸಂಸ್ಥಾಪಕ ಅಧ್ಯಕ್ಷ ವಿನಯ್‌ ಕಟಿಯಾರ್‌ಗೆ ಟಿಕೆಟ್‌ ಸಿಕ್ಕಿಲ್ಲ. ಅಯೋಧ್ಯೆ ಹೋರಾಟ ತುತ್ತತುದಿಯಲ್ಲಿದ್ದಾಗ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್‌ ಸಿಂಗ್‌ ಅವರು ರಾಜಸ್ಥಾನ ರಾಜ್ಯಪಾಲರಾಗಿರುವುದರಿಂದ ಸ್ಪರ್ಧಿಸುತ್ತಿಲ್ಲ.

click me!