ಡಿಕೆಶಿ ವಿರುದ್ಧ ಎಂಬಿ ಪಾಟೀಲ್ ಗರಂ

By Web DeskFirst Published Apr 12, 2019, 7:59 AM IST
Highlights

ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಇದೀಗ ಗೃಹ ಸಚಿವ  ಎಂ.ಬಿ ಪಾಟೀಲ್ ಗರಂ ಆಗಿದ್ದಾರೆ. ಮೂಗು ತೂರಿಸುವುದನ್ನು ಬಿಟ್ಟು ಸುಮ್ಮನಿರಲಿ ಎಂದು ಟಾಂಗ್ ನೀಡಿದ್ದಾರೆ. 

ಅರಸೀಕೆರೆ :  ಪ್ರತ್ಯೇಕ ಧರ್ಮದ ವಿಚಾರದಲ್ಲಿ ಜನರಿಂದ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದೇವೆ, ನಮ್ಮಿಂದ ತಪ್ಪಾಗಿದೆ ಎಂಬ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಬಳ್ಳಾರಿಯಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆಗೆ ಸಂಬಂಧಿಸಿ ಗೃಹ ಸಚಿವ ಎಂ.ಬಿ.ಪಾಟೀಲ ತೀವ್ರ ಕಿಡಿಕಾರಿದ್ದಾರೆ. 

ಡಿಕೆಶಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಅಗತ್ಯ ಇಲ್ಲ. ಮೊದಲು ಅವರು ಒಕ್ಕಲಿಗರ ಮನೆ ಸರಿಮಾಡಿಕೊಳ್ಳಲಿ. ಅಷ್ಟಕ್ಕೂ ಒಕ್ಕಲಿಗರ ಕ್ಷೇತ್ರ ವ್ಯಾಪ್ತಿಯಲ್ಲಿ ಡಿಕೆಶಿ ಎಷ್ಟುಮಂದಿ ಶಾಸಕರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ಹೇಳಲಿ ಗೃಹ ಸಚಿವ ತಿರುಗೇಟು ನೀಡಿದರು.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಬುಧವಾರ ರಾತ್ರಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ ಈ ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತ ಧರ್ಮ ನನ್ನ ಅಸ್ಮಿತೆ, ಹಾಗೆಯೇ ಒಕ್ಕಲಿಗರ ಧರ್ಮ ಅವರ ಅಸ್ಮಿತೆ ಎಂದು ಪಕ್ಕದಲ್ಲಿದ್ದ ಪ್ರಜ್ವಲ್‌ ರೇವಣ್ಣ ಅವರನ್ನು ತೋರಿಸಿ ಹೇಳಿದ ಎಂ.ಬಿ.ಪಾಟೀಲ, ಇತರೆ ಧರ್ಮಗಳ ಬಗ್ಗೆ ಮಾತನಾಡಲು ಆಯಾ ಧರ್ಮಕ್ಕೆ ಸಂಬಂಧಿಸಿದ ಮಠಾಧೀಶರು ಇದ್ದಾರೆ ಎಂದು ಟಾಂಗ್‌ ನೀಡಿದರು. ಜತೆಗೆ, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿ ನನ್ನ ಹೇಳಿಕೆಗೆ ಈಗಲೂ ಬದ್ಧ. ಈ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!