ರಾಜಕೀಯವನ್ನೇ ಬಿಡುವ ಸವಾಲು ಹಾಕಿದ ರೇವಣ್ಣ

By Web DeskFirst Published Apr 12, 2019, 7:31 AM IST
Highlights

ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ರಾಜಕೀಯವನ್ನೇ ತೊರೆಯುವ ಬಗ್ಗೆ ಮಾತನಾಡಿದ್ದಾರೆ. ದೇಶದಲ್ಲಿ ಲೋಕಸಭಾ ಚುನಾವಣಾ ಸಮರ ಆರಂಭವಾಗಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ರಾಜಕೀಯ ಬಿಡುತ್ತೇನೆ ಎಂದಿದ್ದಾರೆ. 

ಮೈಸೂರು :  ಈ ಬಾರಿ ಯಾವುದೇ ಕಾರಣಕ್ಕೂ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಅವರು ಮತ್ತೆ ಪ್ರಧಾನಿ ಆಗುವುದಿಲ್ಲ. ಮೋದಿ ಪ್ರಧಾನಿಯಾದರೆ ನಾನು ರಾಜಕೀಯ ಬಿಡುವೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಘೋಷಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಸಮ್ಮಾನ್‌ ಯೋಜನೆಗೆ ರಾಜ್ಯದಿಂದ ಕೇಂದ್ರಕ್ಕೆ 15 ಲಕ್ಷ ರೈತರ ಪಟ್ಟಿಕಳುಹಿಸಲಾಗಿದ್ದು, ಇದು ಸುಳ್ಳು ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದರು.

ರಾಜ್ಯ ಸರ್ಕಾರದಿಂದ ರೈತರ ಪಟ್ಟಿಯೇ ಬಂದಿಲ್ಲ ಎಂದು ಮೋದಿ ಮೈಸೂರಿನ ಬಿಜೆಪಿ ಸಮಾವೇಶದಲ್ಲಿ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪಟ್ಟಿಯನ್ನು ನರೇಂದ್ರ ಮೋದಿಗೆ, ಯಡಿಯೂರಪ್ಪಗೆ ಕಳುಹಿಸಲಾಗುವುದಿಲ್ಲ. ಯಾರಿಗೆ ಕಳುಹಿಸಬೇಕೋ ಅವರಿಗೆ ಕಳುಹಿಸಿದ್ದೇವೆ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅತ್ಯುತ್ತಮವಾದ ಬಜೆಟ್‌ ಮಂಡಿಸಿದ್ದಾರೆ. ರೈತರ 43 ಸಾವಿರ ಕೋಟಿ ರು. ಸಾಲಮನ್ನಾ ಮಾಡಿದ್ದಾರೆ. ಮೋದಿ ಮತ್ತು ಬಿಜೆಪಿಯವರು ರೈತರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ. ಅವರ ಕೊಡುಗೆ ಏನು? ಎಂಬುದನ್ನು ಹೇಳಲಿ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ವೃದ್ಧರಿಗೆ. ಗರ್ಭಿಣಿಯರಿಗೆ ನೆರವು ನೀಡುತ್ತಿದೆ. ಪ್ರವಾಹ ಪೀಡಿತ ಕೊಡಗಿನ ಪುನರ್ವಸತಿಗೆ ಕ್ರಮಕೈಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ಇಬ್ಬರೂ ಬಿಜೆಪಿಯ ಶಾಸಕರೇ ಇದ್ದರೂ ಕೇಂದ್ರ ಸರ್ಕಾರ ಯಾವುದೇ ನೆರವು ನೀಡಲಿಲ್ಲ ಎಂದು ಟೀಕಿಸಿದರು.

ಜೇಟ್ಲಿಗೂ ತಿರುಗೇಟು: ಲೋಕೋಪಯೋಗಿ ಇಲಾಖೆಯ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಲಾಗುತ್ತದೆ ಎಂಹ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರನ್ನು ತರಾಟೆಗೆ ತೆಗೆದುಕೊಂಡ ರೇವಣ್ಣ, ಇಲಾಖೆಗೆ ಶೇ.5ರಷ್ಟುಹಣ ಉಳಿಸುವ ಕೆಲಸ ಮಾಡಿದ್ದೇನೆಯೇ ಹೊರತು ಹೊಡೆಯುವ ಕೆಲಸ ಮಾಡಿಲ್ಲ ಎಂದರು.

click me!