ಕಾಸರಗೋಡು ಕನ್ನಡಿಗರ ಹೆಬ್ಬೆಟ್ಟು ಮತದಾನ!

By Web DeskFirst Published Apr 26, 2019, 9:00 AM IST
Highlights

ಕಳೆದ ಏಪ್ರಿಲ್ 23 ರಂದು ಕಾಸರಗೋಡಿನಲ್ಲಿ ಲೋಕಸಭಾ ಚುನಾವಣೆಯ ಮತದಾನ ನಡೆದಿದ್ದು, ಈ ವೇಳೆ ಮತಗಟ್ಟೆಗೆ ಬಂದ ಮತದಾರರು ಪರದಾಡಿದಂತ ಸ್ಥಿತಿ ಎದುರಾಯ್ತು. ಯಾಕೆ..?

ಮಂಗಳೂರು :  ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡು ಕ್ಷೇತ್ರದಲ್ಲಿ ಏ.23ರಂದು ನಡೆದ ಲೋಕಸಭಾ ಚುನಾವಣೆ ವೇಳೆ ಮತಗಟ್ಟೆಯಲ್ಲಿ ಕನ್ನಡವನ್ನು ಕಡೆಗಣಿಸಿ ಮಲಯಾಳಂ ಭಾಷೆಗೆ ಪ್ರಾಧಾನ್ಯತೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. 

ಇದರ ನಡುವೆಯೇ ಬಹುತೇಕ ಮತಗಟ್ಟೆಗಳಲ್ಲಿ ಅಕ್ಷರಜ್ಞಾನ ಇದ್ದರೂ ಮತಗಟ್ಟೆಪುಸ್ತಕಕ್ಕೆ (17-ಎ ರಿಜಿಸ್ಟ್ರಾರ್‌) ಕನ್ನಡಿಗ ಮತದಾರರಿಂದ ಬಲಾತ್ಕಾರವಾಗಿ ಹೆಬ್ಬೆಟ್ಟು ಹಾಕಿಸಿಕೊಂಡ ವಿದ್ಯಮಾನ ಬೆಳಕಿಗೆ ಬಂದಿದೆ. ಸಾಕ್ಷರ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೇರಳ ನೆಲದಲ್ಲೇ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಈ ರೀತಿಯಲ್ಲೂ ದೌರ್ಜನ್ಯ ನಡೆಸಿರುವುದು ಕನ್ನಡಿಗ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ಸಿದ್ಧತೆ ನಡೆಸುತ್ತಿವೆ.

ಕಾಸರಗೋಡು ಕ್ಷೇತ್ರದ ಕುಂಬ್ಡಾಜೆ, ಏತಡ್ಕ, ಅಕಲ್ಪಾಡಿ, ಬದಿಯಡ್ಕ, ಕೂಡ್ಲು, ಕುರುವೈಲು, ಕುಬಣೂರು ಸೇರಿದಂತೆ ಬಹುತೇಕ ಎಲ್ಲ ಮತಗಟ್ಟೆಗಳಲ್ಲಿ ಏ.23ರಂದು ಮತದಾನದಂದು ಮತಗಟ್ಟೆಗಳಲ್ಲಿ ಅಕ್ಷರಜ್ಞಾನಿಗಳು ಸಹಿ ಹಾಕುವ ಬದಲು ಹೆಬ್ಬೆಟ್ಟು ಒತ್ತಿದ್ದಾರೆ. ಮತದಾನ ನಿಧಾನಗತಿಯಲ್ಲಿ ಸಾಗುತ್ತದೆ ಎಬ ಕಾರಣ ಮುಂದೊಡ್ಡಿದ ಮತಗಟ್ಟೆಸಿಬ್ಬಂದಿ ಮತದಾನ ತ್ವರಿತವಾಗಿ ಸಾಗಲು ಹೆಬ್ಬೆಟ್ಟು ಒತ್ತುವಂತೆ ಹೇಳಿದ್ದಾರೆ. ಇದನ್ನು ಕೆಲವು ಮಂದಿ ವಿರೋಧಿಸಿ ಸಹಿ ಹಾಕಿದ್ದರೆ ಹೆಚ್ಚಿನವರು ಪ್ರತಿರೋಧ ತೋರಿಸಲು ಅಸಹಾಯಕರಾಗಿ ಮರುಮಾತಿಲ್ಲದೆ ಹೆಬ್ಬೆಟ್ಟು ಗುರುತು ಹಾಕಿದ್ದಾರೆ.

ಮಾಜಿ ಅಧಿಕಾರಿಯನ್ನೇ ಒತ್ತಾಯಿಸಿದ್ರು:

ಕಾಸರಗೋಡಿನ ಕುಂಬ್ಡಾಜೆ ಬೂತ್‌ ನಂಬರ್‌ 77ರಲ್ಲಿ 1200ಕ್ಕೂ ಅಧಿಕ ಮತದಾರರಿದ್ದಾರೆ. ಅಲ್ಲಿ ಸುಮಾರು 800ಕ್ಕೂ ಅಧಿಕ ಮಂದಿ ಮತದಾರರು ಮತಗಟ್ಟೆಸಿಬ್ಬಂದಿಯ ಒತ್ತಡಕ್ಕೆ ಕಟ್ಟುಬಿದ್ದು ಮತಗಟ್ಟೆಪುಸ್ತಕದಲ್ಲಿ ಅನಿವಾರ್ಯವಾಗಿ ಹೆಬ್ಬೆಟ್ಟು ಹಾಕಿದ್ದಾರೆ. ಹೀಗೆ ಹೆಬ್ಬೆಟ್ಟು ಹಾಕಿದವರಲ್ಲಿ ನಿವೃತ್ತ ಅಧಿಕಾರಿಗಳು, ಶಿಕ್ಷಕರು ಹಾಗೂ ಸುಶಿಕ್ಷಿತರು ಸೇರಿದ್ದಾರೆ ಎನ್ನುವುದು ವಿಪರ್ಯಾಸ.

‘ಕುಂಬ್ಡಾಜೆ ಮತಗಟ್ಟೆಯಲ್ಲಿ ರಿಜಿಸ್ಟ್ರಾರ್‌ ಪುಸ್ತಕಕ್ಕೆ ಸಹಿ ಹಾಕಲು ಹೋದಾಗ ಅಲ್ಲಿನ ಸಿಬ್ಬಂದಿ ತಡೆದು ಹೆಬ್ಬೆಟ್ಟು ಹಾಕುವಂತೆ ಒತ್ತಾಯಿಸಿದರು. ವಿರೋಧಿಸಿದಾಗ, ನಿರುಪಾಯರಾಗಿ ಸಹಿ ಹಾಕಲು ಅವಕಾಶ ನೀಡಿದರು’ ಎನ್ನುತ್ತಾರೆ ಅಲ್ಲಿನ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಅರವಿಂದ ಕುಮಾರ್‌.

‘ಸಹಿ ಮಾಡುವ ಸಲುವಾಗಿಯೇ ಮತದಾರರಿಗಾಗಿ ಮತಗಟ್ಟೆಯಲ್ಲಿ ಪ್ರತ್ಯೇಕ ಪೆನ್ನನ್ನು ಇರಿಸುತ್ತಾರೆ. ಸಹಿ ಮಾಡಲು ಅಸಾಧ್ಯವಾದರೆ ಮಾತ್ರ ಹೆಬ್ಬೆಟ್ಟಿಗೆ ಅವಕಾಶ ನೀಡಬಹುದು ಎಂಬುದು ಚುನಾವಣೆಯ ನಿಯಮ. ಆದರೆ ಈ ಬಾರಿ ಹೆಬ್ಬೆಟ್ಟು ಹಾಕುವುದನ್ನೇ ಪ್ರಧಾನ ಎಂಬಂತೆ ಮತಗಟ್ಟೆಸಿಬ್ಬಂದಿ ವರ್ತಿಸಿದ್ದಾರೆ’ ಎಂದು ಅರವಿಂದ ಕುಮಾರ್‌ ಆರೋಪಿಸುತ್ತಾರೆ.

ಹೆಬ್ಬೆಟ್ಟಿಗೆ ಒತ್ತಾಯ ಯಾಕೆ?:

ಚುನಾವಣಾ ಆಯೋಗದ ನಿಯಮ ಪ್ರಕಾರ ಸಹಿ ಹಾಕುವುದಕ್ಕೆ ಮೊದಲ ಆದ್ಯತೆ. ನಿರಕ್ಷರಿಯಾದರೆ ಮಾತ್ರ ಹೆಬ್ಬೆಟ್ಟು ಹಾಕಬಹುದು. ಆದರೆ ಇಲ್ಲಿ ಹೆಬ್ಬೆಟ್ಟಿಗೆ ಒತ್ತಡ ಹಾಕಿರುವುದು ಚುನಾವಣಾ ಪ್ರಕ್ರಿಯೆಯಲ್ಲೂ ಕನ್ನಡಿಗರನ್ನು ಕಪಿಮುಷ್ಠಿಯಲ್ಲಿ ಹಿಡಿಯುವ ಪ್ರಯತ್ನ ಮಲಯಾಳಿ ಭಾಷಿಕ ಸಿಬ್ಬಂದಿಯಿಂದ ನಡೆಯಿತೇ ಎಂಬ ಶಂಕೆ ವ್ಯಕ್ತವಾಗಿದೆ. ಮತಗಟ್ಟೆಗೆ ಆಗಮಿಸಿದ ಕನ್ನಡಿಗರ ಪೈಕಿ ಅಕ್ಷರಜ್ಞಾನ ಇಲ್ಲದವರು ಇಲ್ಲವೇ ಇಲ್ಲ. ಹಾಗಿರುವಾಗ ಬತಾಲ್ಕಾರವಾಗಿ ಹೆಬ್ಬೆಟ್ಟು ಗುರುತಿಗೆ ಒತ್ತಡ ಹಾಕಿರುವುದು ಮತಗಟ್ಟೆಸಿಬ್ಬಂದಿಯ ದ್ವಿಮುಖ ಧೋರಣೆಯನ್ನು ಇದು ತೋರಿಸುತ್ತದೆ ಎನ್ನುತ್ತಾರೆ ಅರವಿಂದ ಕುಮಾರ್‌.

ಇದೇವೇಳೆ ಕಾಸರಗೋಡು ಹಾಗೂ ಮಂಜೇಶ್ವರ ಅಸೆಂಬ್ಲಿ ಕ್ಷೇತ್ರದಲ್ಲಿ ನಿಧಾನಗತಿಯಲ್ಲಿ ಮತದಾನ ನಡೆಸಿದ ಬಗ್ಗೆ ಕನ್ನಡಿಗ ಮತದಾರರಿಂದ ವ್ಯಾಪಕ ಆಕ್ಷೇಪ ಕೇಳಿಬಂದಿದ್ದು ಬಗ್ಗೆ ಸಿಬ್ಬಂದಿಯಿಂದ ಸಮಜಾಯಿಷಿಸಿ ಪಡೆಯುವಂತೆ ಕನ್ನಡಪರ ಸಂಘಟನೆಗಳು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿವೆ.

ಒಂದೇ ಕಡೆ 800 ಜನಕ್ಕೆ ಹೆಬ್ಬೆಟ್ಟು ಹಾಕಿಸಿದರು!

ಕಾಸರಗೋಡಿನ ಕುಂಬ್ಡಾಜೆ ಬೂತ್‌ ನಂಬರ್‌ 77ರಲ್ಲಿ 1200ಕ್ಕೂ ಅಧಿಕ ಮತದಾರರಿದ್ದಾರೆ. ಅಲ್ಲಿ ಸುಮಾರು 800ಕ್ಕೂ ಅಧಿಕ ಮಂದಿ ಮತದಾರರು ಮತಗಟ್ಟೆಸಿಬ್ಬಂದಿಯ ಒತ್ತಡಕ್ಕೆ ಕಟ್ಟುಬಿದ್ದು ಮತಗಟ್ಟೆಪುಸ್ತಕದಲ್ಲಿ ಅನಿವಾರ್ಯವಾಗಿ ಹೆಬ್ಬೆಟ್ಟು ಹಾಕಿದ್ದಾರೆ. ಹೀಗೆ ಹೆಬ್ಬೆಟ್ಟು ಹಾಕಿದವರಲ್ಲಿ ನಿವೃತ್ತ ಅಧಿಕಾರಿಗಳು, ಶಿಕ್ಷಕರು ಹಾಗೂ ಸುಶಿಕ್ಷಿತರು ಸೇರಿದ್ದಾರೆ ಎನ್ನುವುದು ವಿಪರ್ಯಾಸ.

ಚುನಾವಣಾ ಆಯೋಗಕ್ಕೆ ಮೊರೆ

ನಮ್ಮ ಸಂಘಟನೆಯಿಂದ ಮೇ 5ರಂದು ಸಭೆ ಕರೆಯಲಾಗಿದ್ದು ಈ ಕುರಿತು ಚರ್ಚೆ ನಡೆಸಲಿದ್ದೇವೆ. ಮುಂದೆ ಸ್ಥಳೀಯ ಪಂಚಾಯ್ತಿ ಚುನಾವಣೆ ಹಾಗೂ ಮಂಜೇಶ್ವರ ಅಸೆಂಬ್ಲಿ ಉಪ ಚುನಾವಣೆ ನಡೆಯಲಿದೆ. ಆ ವೇಳೆಗೆ ಈ ಎಲ್ಲ ಗೊಂದಲಗಳÜನ್ನು ಸರಿಪಡಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಿದ್ದೇವೆ.

- ಮುರಳೀಧರ್‌ ಬಳ್ಳಕುರಾಯ, ಅಧ್ಯಕ್ಷರು, ಕಾಸರಗೋಡು ಕನ್ನಡ ಕಾವಲು ಸಮಿತಿ

ವರದಿ : ಆತ್ಮಭೂಷಣ್‌

click me!