'ಮಂಡ್ಯಕ್ಕೆ ಅಂಬಿ ಕೊಂಡೊಯ್ಯಬೇಕಂದಿದ್ದು ನಾನು, ತಂದೆ ಮೇಲಾಣೆಗೂ ಇದು ಸತ್ಯ'

By Web DeskFirst Published Apr 17, 2019, 7:51 AM IST
Highlights

ಮಂಡ್ಯಕ್ಕೆ ಅಂಬಿ ಕೊಂಡೊಯ್ಯಬೇಕಂದಿದ್ದು ನಾನು, ತಂದೆ ಮೇಲಾಣೆಗೂ ಇದು ಸತ್ಯ| ಮುಖ್ಯಮಂತ್ರಿಗಳು ಸೆಕ್ಯುರಿಟಿ ಸಮಸ್ಯೆ ಆಗುತ್ತೆ ಅಂದಿದ್ದರು ಎಂದ ಅಂಬರೀಷ್‌ ಪುತ್ರ

ಮಂಡ್ಯ[ಏ.17]: ‘‘ಅಂಬರೀಷ್‌ ಅವರ ಪಾರ್ಥಿವ ಶರೀರವನ್ನು ಕೊನೇ ಬಾರಿ ಮಂಡ್ಯಕ್ಕೆ ಕೊಂಡೊಯ್ಯದಿದ್ದರೆ ತಪ್ಪಾಗುತ್ತೆ ಅಂತ ಹೇಳಿದ್ದು ನಾನು. ಇದು ನಮ್ಮ ತಂದೆ ಮೇಲಾಣೆಗೂ ಸತ್ಯ’’ ಎಂದು ಅಂಬರೀಷ್‌ ಪುತ್ರ ಅಭಿಷೇಕ್‌ ಅಂಬರೀಷ್‌ ಗೌಡ ಹೇಳಿದ್ದಾರೆ.

ಸಿಲ್ವರ್‌ ಜ್ಯೂಬಿಲಿ ಪಾರ್ಕ್ನಲ್ಲಿ ಸ್ವಾಭಿಮಾನಿ ಸಮ್ಮಿಲನ ಸಮಾವೇಶದಲ್ಲಿ ಮಾತನಾಡಿಸ ‘ಆ ಮಹಾತಾಯಿ ಮಂಡ್ಯಕ್ಕೆ ಅಂಬರೀಷ್‌ ಪಾರ್ಥೀವ ಶರೀರ ಕೊಂಡೊಯ್ಯುವುದು ಬೇಡ ಎಂದಿದ್ದಾರೆಂದು ಕುಮಾರಸ್ವಾಮಿ ಹೋದ ಕಡೆಯಲ್ಲೆಲ್ಲಾ ಆರೋಪಿಸುತ್ತಿದ್ದರು. ಅದಕ್ಕೆ ನಾನು ಈ ವಿಚಾರ ಮಾತನಾಡಲು ನಿರ್ಧರಿಸಿದ್ದೇನೆæ. ನ.24ರಂದು ರಾತ್ರಿ 9.30ಕ್ಕೆ ವಿಕ್ರಂ ಆಸ್ಪತ್ರೆಯಲ್ಲಿ ನಾನಿದ್ದೆ. ಅಂಬರೀಷ್‌ ಪಾರ್ಥಿವ ಶರೀರ ಮಂಡ್ಯಕ್ಕೆ ಕೊಂಡೊಯ್ಯಲು ಆಗೋದಿಲ್ಲ, ಕಷ್ಟ, ಸೆಕ್ಯುರಿಟಿ ಮಾಡಲು ಸಾಧ್ಯವಿಲ್ಲ, ಜನ ರೊಚ್ಚಿಗೆದ್ದು ಬಿಡ್ತಾರೆ ಎಂದು ಮುಖ್ಯಮಂತ್ರಿ ಹೇಳಿದ್ದರು. ನಂತರ ಮರುದಿನ ಬೆಳಗಿನ ಜಾವ ಎಂಟು ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿ ಇದೇ ಮುಖ್ಯಮಂತ್ರಿಗಳು, ಬೇಜಾರ್‌ ಮಾಡಿಕೊಳ್ಳಬೇಡ ನೀನು ಕೇಳಿದ್ದು ಆಗೋ ಮಾತಲ್ಲ ಅಂದಿದ್ದರು. ಆ ಸಮಯದಲ್ಲಿ ತಂದೆಯ ದರ್ಶನ ಮಾಡಿಕೊಂಡು ಹೋಗ್ತಿದ್ದ ಮಂಡ್ಯದ ಅಭಿಮಾನಿಯೊಬ್ಬ, ಅಂಬರೀಷ್‌ರನ್ನು ಮಂಡ್ಯಕ್ಕೆ ಕರೆದುಕೊಂಡು ಬರದಿದ್ದರೆ ಸುಮ್ಮನೆ ಬಿಡೋದಿಲ್ಲ ಎಂದು ಮುಖ್ಯಮಂತ್ರಿ ಹೆಸರಿಡಿದು ಕೂಗಿದರು. ಹೀಗಾಗಿ ಅಂಬರೀಷ್‌ ಅವರಿಗೆ ಗೌರವ ಸಲ್ಲಿಸಿದ್ದು ಮುಖ್ಯಮಂತ್ರಿ ಅಲ್ಲ, ಸರ್ಕಾರ ಅಲ್ಲ ಬದಲಾಗಿ ಕರ್ನಾಟಕದ ಜನತೆ, ಮಂಡ್ಯದ ಜನತೆ ಎಂದು ಅಬಿಷೇಕ್‌ ಹೇಳಿದರು.

ನಾನು ಮುಖ್ಯಮಂತ್ರಿ ಬಗ್ಗೆ ಮಾತನಾಡಿದ್ದು ಅವರಿಗೆ ಬೇಜಾರಾಗಿರಬಹುದು. ನಾನು ಸಣ್ಣವನು, ಆದರೆ ಮುಖ್ಯಮಂತ್ರಿಗಳು ಸಾವಿನ ಸೋವು ಆ ತಾಯಿ ಮುಖದಲ್ಲಿ ಕಾಣಲಿಲ್ಲ ಅಂತ ನನ್ನ ತಾಯಿ ಬಗ್ಗೆ ಹೇಳಿದರು. ಅದು ಸರಿನಾ? ನಾನು ಮುಖ್ಯಮಂತ್ರಿ ಹೇಳಿದಂತೆ ರಾಜಕಾರಣದಲ್ಲಿ ಅಂಬೆಗಾಲಿಕ್ಕುತ್ತಿರುವವನು, ಆದರೆ ನಾನು ಕೇಳಿದ್ದು ತಪ್ಪಾ ಎಂದು ಅಭಿಷೇಕ್‌ ಈ ಸಂದರ್ಭದಲ್ಲಿ ಪ್ರಶ್ನಿಸಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!