ವೋಟರ್‌ ಲೀಸ್ಟ್‌ನಲ್ಲಿ ಪಕ್ಷದ ಚಿಹ್ನೆ : ಕಾಂಗ್ರೆಸ್ ಮುಖಂಡರ ವಿರುದ್ಧ FIR

By Web DeskFirst Published Apr 17, 2019, 7:36 AM IST
Highlights

ಮತದಾರರ ಪಟ್ಟಿಯಲ್ಲಿ ಕಾನೂನು ಬಾಹಿರವಾಗಿ ಅಭ್ಯರ್ಥಿಯ ಭಾವಚಿತ್ರ, ಪಕ್ಷದ ಚಿಹ್ನೆ ಮುದ್ರಣ ಮಾಡಲಾಗುತ್ತಿದ್ದ ಹಿನ್ನೆಲೆಯಲ್ಲಿ 14 ಮಂದಿ ವಿರುದ್ಧ FIR ದಾಖಲಿಸಲಾಗಿದೆ. 

ವೋಟರ್‌ ಲೀಸ್ಟ್‌ನಲ್ಲಿ ಪಕ್ಷದ ಚಿಹ್ನೆ : ಕಾಂಗ್ರೆಸ್  ಮುಖಂಡರ ವಿರುದ್ಧ FIR

ಬೆಂಗಳೂರು :  ನಗರದ ಪ್ರಭಾತ್‌ ಕಾಂಪ್ಲೆಕ್ಸ್‌ನಲ್ಲಿ ಪೊಲೀಸರು ದಾಳಿ ನಡೆಸಿದಾಗ ಸಿಕ್ಕ ಮತದಾರರ ಚೀಟಿಯು ನಕಲಿ ಅಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಆದರೆ ಮತದಾರರ ಪಟ್ಟಿಯಲ್ಲಿ ಕಾನೂನು ಬಾಹಿರವಾಗಿ ಅಭ್ಯರ್ಥಿಯ ಭಾವಚಿತ್ರ, ಪಕ್ಷದ ಚಿಹ್ನೆ ಮುದ್ರಣ ಮಾಡಲಾಗುತ್ತಿತ್ತು ಎಂದು ತಿಳಿಸಿದೆ.

ಈ ಸಂಬಂಧ ಕಾಂಗ್ರೆಸ್‌ ಮುಖಂಡ ಇಬ್ರಾಹಿಂ ಹಾಗೂ ಇತರರನ್ನು ಬಂಧಿಸಿದ ಉಪ್ಪಾರಪೇಟೆ ಠಾಣೆ ಪೊಲೀಸರು, ನಂತರ ಠಾಣಾ ಜಾಮೀನಿನ ಮೇರೆಗೆ ಬಿಡುಗಡೆಗೊಳಿಸಿದ್ದಾರೆ. ಚುನಾವಣಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಠಾಣೆಯಲ್ಲಿ ಐಪಿಸಿ 171 ಹಾಗೂ 127 (ಎ) ಆರ್‌ಪಿ ಕಾಯ್ದೆಯಡಿ ಹದಿನಾಲ್ಕು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇವುಗಳು ಜಾಮೀನು ಸಹಿತ ಕೃತ್ಯಗಳಾಗಿರುವುದರಿಂದ ಇಬ್ರಾಹಿಂ ಸೇರಿದಂತೆ ಇತರ ಆರೋಪಿಗಳು ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ.ಚನ್ನಣ್ಣನವರ್‌ ತಿಳಿಸಿದರು.

ಈ ಗುರುತಿನ ಚೀಟಿಗಳ ಕುರಿತು ಪೊಲೀಸ್‌ ಆಯುಕ್ತರು, ಬಿಬಿಎಂಪಿ ಆಯುಕ್ತರು ಹಾಗೂ ಚುನಾವಣಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅಧಿಕಾರಿಗಳು ವರದಿ ಬಳಿಕ ಮತದಾರರ ಚೀಟಿಗಳ ಕುರಿತು ನಿಖರ ಮಾಹಿತಿ ಸಿಗಲಿದೆ ಎಂದು ಅವರು ಹೇಳಿದರು.

ನಕಲಿ ಮತದಾರರ ಚೀಟಿ ಅಲ್ಲ- ಆಯೋಗ ಸ್ಪಷ್ಟನೆ:

ಕಾಂಪ್ಲೆಕ್ಸ್‌ನಲ್ಲಿ ಮತದಾನ ಚೀಟಿಯನ್ನು ಮುದ್ರಣ ಮಾಡಲಾಗುತ್ತಿತ್ತು. ಮತದಾನದ ಚೀಟಿಯಲ್ಲಿ ಕೇವಲ ಮತದಾರರ ವಿವರ ಇರಬೇಕು. ಆದರೆ, ಮತದಾನ ಚೀಟಿಯಲ್ಲಿ ಪಕ್ಷದ ಚಿಹ್ನೆ ಮತ್ತು ಅಭ್ಯರ್ಥಿಯ ಭಾವಚಿತ್ರ ಮುದ್ರಣ ಮಾಡಲಾಗಿದೆ. ಇದು ಕಾನೂನುಬಾಹಿರವಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರಭಾತ್‌ ಕಾಂಪ್ಲೆಕ್ಸ್‌ನ 3ನೇ ಮಹಡಿಯಲ್ಲಿನ 313 ಕೊಠಡಿ ಸಂಖ್ಯೆಯಲ್ಲಿ ನಕಲಿ ಮತದಾರರ ಗುರುತಿನ ಚೀಟಿ ತಯಾರಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಚುನಾವಣಾ ಆಯೋಗದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ವಿಚಾರಣೆ ನಡೆಸಿದ ಫ್ಲೈಯಿಂಗ್‌ ಸ್ಕಾ$್ವಡ್‌ ತಂಡದ ನೇತೃತ್ವ ವಹಿಸಿದ್ದ ದೇವರಾಜು ವರದಿ ಸಲ್ಲಿಸಿದ್ದು, ಅಲ್ಲಿ ಯಾವುದೇ ನಕಲಿ ಮತದಾರರ ಚೀಟಿಗಳನ್ನು ಮುದ್ರಿಸುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಮತದಾರ ಚೀಟಿಗಳ ಮುದ್ರಣ ಮಾಡಲಾಗುತ್ತಿತ್ತು. ಮತದಾರರ ಚೀಟಿಯಲ್ಲಿ ಪಕ್ಷದ ಚಿಹ್ನೆ, ಅಭ್ಯರ್ಥಿಯ ಭಾವಚಿತ್ರಗಳನ್ನು ಇದ್ದ ಕಾರಣ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಪ್ರಕರಣದ ನಡೆದ ಸ್ಥಳದಲ್ಲಿ 10 ಸಿಪಿಯು, 8 ಕೀ ಬೋರ್ಡ್‌, 1 ಎಚ್‌ಪಿ ಸ್ಕಾ್ಯನರ್‌, 3 ಲ್ಯಾಪ್‌ಟಾಪ್‌, 270 ಹ್ಯಾಂಡ್‌ ಪ್ರಿಂಟ​ರ್‍ಸ್, 400 ಚಾರ್ಜ​ರ್‍ಸ್, 50 ಬ್ಯಾಟರಿ, 450 ಪೇಪರ್‌ ರೋಲ್‌, 88 ಎಲೆಕ್ಟ್ರಿಕಲ್‌ ರೋಲ್ಸ್‌ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಚುನಾವಣಾ ಆಯೋಗದ ತಂಡವು ಇಬ್ರಾಹಿಂ ಎಂಬಾತನನ್ನು ವಿಚಾರಣೆಗೊಳಪಡಿಸಿದ್ದು, ಆತ ಸ್ಥಳದ ಜವಾಬ್ದಾರಿ ತೆಗೆದುಕೊಂಡಿದ್ದ. ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಪರ ಕೆಲಸ ಮಾಡುತ್ತಿದ್ದ. ಕ್ಷೇತ್ರದ ಮತದಾರರು ವಲಸೆ ಹೋಗಿದ್ದು, ಅವರ ಬಗ್ಗೆ ಮಾಹಿತಿ ಕ್ರೋಢೀಕರಿಸಲಾಗುತ್ತಿತ್ತು. 2018ರ ಅಕ್ಟೋಬರ್‌ ತಿಂಗಳಿನಿಂದ ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರವನ್ನು ಸಂಗ್ರಹಿಸಲಾಗುತ್ತಿತ್ತು. ಮತದಾರರ ಮತ್ತು ಸ್ಥಳಾಂತರಗೊಂಡಿರುವ ಮತದಾರರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿತ್ತು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದರು.

ಕ್ಷೇತ್ರದಲ್ಲಿ ಹೆಸರಿದ್ದು, ಬೇರೆಡೆ ಹೋಗಿರುವ ಮತದಾರರನ್ನು ಕರೆ ತಂದು ಮತ ಚಲಾಯಿಸುವಂತೆ ಪ್ರೇರಣೆ ನೀಡುವ ಕೆಲಸ ಮಾಡಲಾಗುತ್ತಿತ್ತು. ಈ ಮೂಲಕ ಮತದಾನದ ಶೇಕಡವಾರು ಪ್ರಮಾಣ ಹೆಚ್ಚಿಸುವ ಉದ್ದೇಶ ಹೊಂದಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿತ್ತು ಎಂದು ವಿಚಾರಣೆ ವೇಳೆ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!