ಸಿದ್ದರಾಮಯ್ಯ ನಂಗೆ ಮನೆ ದೇವರಿದ್ದ ಹಾಗೆ: ಬಿಜೆಪಿ ಅಭ್ಯರ್ಥಿ!

By Web DeskFirst Published Apr 13, 2019, 12:18 PM IST
Highlights

ರಾಜ್ಯದ ಮೊದಲ ಹಂತದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮತದಾರ ದೊರೆಯನ್ನು ಓಲೈಸಿಕೊಳ್ಳಲು ಅಭ್ಯರ್ಥಿಗಳು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲಿಯೂ ಭಾವನಾತ್ಮಕವಾಗಿ ಮತದಾರನ ಮನ ಸೆಳೆಯಲು ಕಸರತ್ತು ನಡೆಯುತ್ತಿದ್ದು, ಹಾಸನ ಅಭ್ಯರ್ಥಿ ಕಾಂಗ್ರೆಸ್ ಕಾರ್ಯಕರ್ತರ ಮನೆ ಗೆಲ್ಲಲು ಮಾತನಾಡಿದ್ದು ಹೀಗೆ....

ಹಾಸನ: ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ ನಡೆಯಲಿದ್ದು, ಮೊದಲ ಹಂತಕ್ಕೆ ಬಹುತೇಕ ಸಿದ್ಧತೆ ನಡೆದಿದೆ. ಕಡೆಯ ಆಟಕ್ಕೆ ಎಲ್ಲ ಅಭ್ಯರ್ಥಿಗಳು ತಮ್ಮದೇ ಆದ ರೀತಿಯಲ್ಲಿ ತಯಾರಿ ನಡೆಸಿಕೊಳ್ಳುತ್ತಿದ್ದು, ತಮ್ಮ ಕಡೆಯ ದಾಳವನ್ನು ಉದುರಿಸುತ್ತಿದ್ದಾರೆ. ಚುನಾವಣೆ ಹಿಂದಿನ ದಿನ ರಾತ್ರಿ ನಡೆಯುವ ಹಣ, ಹೆಂಡ ಬಲದ ಹೊರತಾಗಿ, ಮತದಾರನ ಮತ ಗೆಲ್ಲಲು ಭಾವಾನಾತ್ಮಕವಾಗಿ ಆಟ ಆರಂಭಿಸದ್ದಂತೂ ಸುಳ್ಳಲ್ಲ.

ಹಾಸನದಲ್ಲಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡ, ಮಾಜಿ ಸಚಿವ ಎಂ. ಮಂಜು ಅಭ್ಯರ್ಥಿ. ತಮ್ಮ ಬೆಂಬಲಿಗರ ಮತದೊಂದಿಗೆ, ಕಾಂಗ್ರೆಸ್ ಮತ ಸೆಳೆಯುವುದು ಅನಿವಾರ್ಯವಾಗಿರುವ ಮಂಜು ಅವರು ಇದೀಗ 'ನನಗೆ ಸಿದ್ದರಾಮಯ್ಯ ಅವರು ಇಷ್ಚ...' ಎನ್ನುವ ಮೂಲಕ, ಕಾಂಗ್ರೆಸ್ಸಿಗರ ಮನ ಗೆಲ್ಲಲು ಯತ್ನಿಸುತ್ತಿದ್ದಾರೆ. 

ಒಂದು ಕಾಲದಲ್ಲಿ ಜೆಡಿಎಸ್ ಜತೆ ಇದ್ದ ಸಿದ್ದರಾಮಯ್ಯ ಕಾಂಗ್ರೆಸ್‌ ಸೇರಿ ಸುಮಾರು ಒಂದೂವರೆ ದಶಕಗಳಾಗಿವೆ. ಇದುವರೆಗೂ ಜೆಡಿಎಸ್ ಹಾಗೂ ದೇವೇಗೌಡ ಕುಟುಂಬದೊಂದಿಗೆ ಹಾವು-ಮುಂಗುಸಿಯಂತಿದ್ದ ಸಿದ್ದರಾಮಯ್ಯ ಇದೀಗ ರೇವಣ್ಣ ಮನೆಗೆ ಹೋಗೂ ಭೋಜನ ಸವಿದರು. ಇವರ ನಡುವೆ ದ್ವೇಷವೇ ಇರಲಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಇದೀಗ ಜೆಡಿಎಸ್ ವರಿಷ್ಠ ದೇವೇಗೌಡರೊಂದಿಗೇ ಪ್ರಚಾರ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಜು, 'ಇವರು ಯಾವತ್ತು ಜೊತೆಯಾಗ್ತಾರೊ, ಯಾವತ್ತು ಬಿಡ್ತಾರೊ ಅವರನ್ನೇ ಕೇಳಬೇಕು. 

ಪಾಪಾ‌ ಸಿದ್ದರಾಮಯ್ಯರನ್ನು ಅವರ ಅನುಕೂಲಕ್ಕೆ ಒತ್ತಡ ಹಾಕಿ ಕರೆತಂದಿದ್ದಾರೆ,' ಎಂದರು. 'ದೇವೇಗೌಡರು ಮಂಡ್ಯದಲ್ಲಿ ಸಿದ್ದರಾಮಯ್ಯ ಬಂದ್ರೂ ಏನೂ ಆಗಲ್ಲ ಎಂದಿದ್ರು. ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದರು. ಆದ್ರೂ ಒತ್ತಡ ಹಾಕಿ ಕರೆತಂದು ಪ್ರಚಾರ ಮಾಡಿದ್ದಾರೆ. ಯಾರೇ ಬಂದರೂ ಮಾತು ಕೇಳೋ ಸ್ಥಿತಿಯಲ್ಲಿ ಜನರಿಲ್ಲ. ವಿರುದ್ದವಾಗಿ ಮತ ಹಾಕಲು ತಳಮಟ್ಟದಲ್ಲಿ ಜನರು ತೀರ್ಮಾನಿಸಿದ್ದಾರೆ. ಎಷ್ಟೇ ಮಾಡಿದ್ರೂ ಅವರಿಗೆ ಅನುಕೂಲ ಆಗಲ್ಲ. ಸಿದ್ದರಾಮಯ್ಯ ಪ್ರಚಾರ ಮಾಡಿದರೂ ಜೆಡಿಎಸ್‌ಗೆ  ಅನುಕೂಲ ಆಗೋಲ್ಲ,' ಎಂದರು. 

ನಾನೇನು ಎಳೆ ಮಗೂನಾ? 

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಮೂಡಲಹಿಪ್ಪೆ ಗ್ರಾಮದಲ್ಲಿ ಪ್ರಚಾರ ನಡೆಸಿ, ಮಾತನಾಡಿದ ಮಂಜು, 'ಸಿದ್ದರಾಮಯ್ಯ ಕಳ್ಳೆತ್ತು ಎಂದಿರೊ ಬಗ್ಗೆ ನಾನೇನೂ ಕಾಮೆಂಟ್ ಮಾಡಲ್ಲ. ದೇವೇಗೌಡರ ಕುಟುಂಬದಿಂದ ನನಗಿಂತ ಜಾಸ್ತಿ ನೋವಾಗಿರೋದು ಸಿದ್ದರಾಮಯ್ಯ ಅವರಿಗೆ. ನಾನು ಯಾವಾಗಲೂ ಸಿದ್ದರಾಮಯ್ಯ ಪರ ಇದ್ದೋನು. ನಾನು ದೇಶಕ್ಕಾಗಿ ತೀರ್ಮಾನ ತೆಗೆದುಕೊಂಡಿದ್ದೇನೆ. ಜಿಲ್ಲೆಯ ಎಲ್ಲಾ ನಾಯಕರಿಗೂ ಸ್ವಾತಂತ್ರ್ಯ ಸಿಗಬೇಕೆಂದು ಈ ತೀರ್ಮಾನ ಮಾಡಿದ್ದೇನೆ. ನಾನು ಎಲ್ಲಿಯೂ ನನ್ನ ಸಿದ್ದರಾಮಯ್ಯ ಕಳಿಸಿದ್ದಾರೆ ಎಂದು ಹೇಳಿಲ್ಲ. ನನ್ನನ್ನ ಬೇರೆಯವರು ಬಿಜೆಪಿಗೆ ಕಳಿಸೊಕೆ ನಾನೇನು ಎಳೆ ಮಗೂನಾ?,' ತಮ್ಮ ವಿರುದ್ದ ಕಟು ಟೀಕೆ ಮಾಡಿದ್ದ ಸಿದ್ದರಾಮಯ್ಯ ಗೆ ಸೌಮ್ಯ ಮಾತಿನಲ್ಲೇ ತಿರುಗೇಟು ನೀಡಿದರು ಮಂಜು.

'ನಾನು ಮಂತ್ರಿಯಾದಾಗ ನನ್ಬ ಶಕ್ತಿ ಏನೆಂದು ನಾನು ಪ್ರೂವ್ ಮಾಡಿದ್ದೀನಿ. ಮೇಲ್ಮಟ್ಟದಲ್ಲಿ ಯಾವ ನಾಯಕರೂ ಕೈ ಎತ್ತಿದ್ರು ಜನ ಯಾರ ಮಾತನ್ನೂ ಕೇಳಲ್ಲ. ನಾನು ಎಂದೂ ಪಕ್ಷ ದ್ರೋಹ ಮಾಡಿಲ್ಲ,ಈ ಮೈತ್ರಿಯ ಅನೈತಿಕ ಸಂಬಂಧದ ವಿರುದ್ದ ನಾನು ಹೋಗಿದ್ದೇನೆ. ಈ ಸಂಬಂಧದಿಂದ ಮಕ್ಕಳೇ ಹುಟ್ಟಲ್ವಲ್ಲಾ? ಎಂಟು ತಿಂಗಳಾಯ್ತು ಒಂದು ದಿನವೂ ಮಂಚದ ಮೇಲೇ ಮಲಗಿಲ್ವಲ್ರೀ? ಈವರೆಗೆ ಯಾರನ್ನೂ ಮಾತನಾಡಿಸಿಲ್ಲವಲ್ಲ ಎಂದು ಲೇವಡಿ ಮಾಡಿದರು.

'ನನ್ನ ಮೇಲೆ ಪ್ರೀತಿಯಿದ್ದರೆ ಎ ಮಂಜು ಸೋಲಿಸಿ,' ಎಂದು ಕರೆ ನೀಡಿದ್ದ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಂಜು ಅವರು, ಸಿದ್ದರಾಮಯ್ಯ ಮೇಲೆ ಪ್ರೀತಿ ಇದ್ರೆ ಜನ ನನ್ನನ್ನೇ ಗೆಲ್ಲಿಸುತ್ತಾರೆ. ಯಾಕೆಂದ್ರೆ ಸಿದ್ದರಾಮಯ್ಯರನ್ನ ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ದನ್ನ ಜನ ಮರೆತಿದ್ದಾರಾ? ಈಗ ರಾಹುಲ್ ಗಾಂಧಿ ಹೇಳಿದ್ದಾರೆ  ಎಂದು ಜೊತೆಯಲ್ಲಿ ಬರುತ್ತಿದ್ದಾರೆ. ಇದಾದ ತಕ್ಷಣ ಮೊದಲು ದೂರ ಮಾಡೋದೇ ಸಿದ್ದರಾಮಯ್ಯರನ್ನ. ಚುನಾವಣೆ ಮುಗಿದ ಬಳಿಕ ಗೌಡರು ಮತ್ತೆ ಸಿದ್ದರಾಮಯ್ಯರನ್ನ ದೂರ ಮಾಡ್ತಾರೆ.' ಎಂದರು.

ಸಿದ್ದು ವಿರುದ್ಧ ದೇವೇಗೌಡರು ಮಾತನಾಡಿದ್ದನ್ನು ಮರೆತರಾ?

ಸಿದ್ದರಾಮಯ್ಯರ ವಿರುದ್ದ ದೇವೇಗೌಡರು ಆಡಿರೋ ಮಾತು ನೆನೆಸಿಕೊಂಡ್ರೆ ಅವರನ್ನ ಸಿದ್ದು ಮಾತನಾಡಿಸಲ್ಲ. ಇಂಥ ನೀಚನನ್ನ ಬೆಳೆಸಿದೆ ಎಂದು ಹೇಳಿದ್ದು  ಮರೆತು ಹೋಯಿತಾ? ಸಿದ್ದರಾಮಯ್ಯ ಸ್ವಾಭಿಮಾನಿಗಳಪ್ಪ. ಇದನ್ನೆಲ್ಲಾ ಹೇಗೆ ಸಹಿಸಿಕೊಂಡು ಸುಮ್ಮನಿದ್ದಾರೋ ಗೊತ್ತಿಲ್ಲ. ನಾನೂ ಅವರ ಫಾಲೋಯರ್. ಅವರು ರಾಹುಲ್ ಗಾಂಧಿಗೆ ಕಟ್ಟು ಬಿದ್ದಿದ್ದಾರೆ. ನಾನು ಕಾರ್ಯಕರ್ತರಿಗೆ ಕಟ್ಟು ಬಿದ್ದಿದ್ದೀನಿ. ಅವರು ಏನಾದ್ರು ಹೇಳಬಹುದು. ಅವರು ನನ್ನ ಗುರು. ಏನೇ ಅಂದ್ರೂ ಮನೆ ದೇವರು, ಮನೆ ದೇವರೇ. ಬೇರೆ ಪ್ರಶ್ನೆನೇ ಇಲ್ಲಾ ಅದ್ರಲ್ಲಿ. ಸಿದ್ದು ನನಗೆ ಮನೆ ದೇವರಿದ್ದ ಹಾಗೆ. ಎಂದು  ಬಣ್ಣಿಸಿದರು. 

'ಸಿದ್ದರಾಮಯ್ಯ ಗೆ ನನ್ನ ಮೇಲೆ ಪ್ರೀತಿ ಇದೆಯೋ ಇಲ್ವೋ ಗೊತ್ತಿಲ್ಲ ನನಗೆ ಪ್ರೀತಿ ಇದೆ. ನಾನು ಅವರನ್ನ ಇಷ್ಟ ಪಟ್ಟಿದ್ದೀನಿ ಅವರನ್ನ ನಂಬುತ್ತೇನೆ,' ಎಂದರು ಬಿಜೆಪಿ ಅಭ್ಯರ್ಥಿ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!