ಸರ್ಕಾರ ರಚನೆ ಕಸರತ್ತು : ಸಂಜೆ ಉಭಯ ಮೈತ್ರಿಕೂಟಗಳ ಪ್ರತ್ಯೇಕ ಸಭೆ: ಬೆಂಬಲ ಪತ್ರ ನೀಡಲಿರುವ ಮಿತ್ರಪಕ್ಷಗಳು

Published : Jun 05, 2024, 10:36 AM IST
ಸರ್ಕಾರ ರಚನೆ ಕಸರತ್ತು : ಸಂಜೆ ಉಭಯ ಮೈತ್ರಿಕೂಟಗಳ ಪ್ರತ್ಯೇಕ ಸಭೆ: ಬೆಂಬಲ ಪತ್ರ ನೀಡಲಿರುವ ಮಿತ್ರಪಕ್ಷಗಳು

ಸಾರಾಂಶ

 ಇಂದು ಸಂಜೆ ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳು ಹಾಗೂ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳು ಪ್ರತ್ಯೇಕವಾಗಿ ಸಭೆ ನಡೆಸಲಿದ್ದು, ಕೇಂದ್ರದಲ್ಲಿ ಸರ್ಕಾರ ರಚನೆಗಾಗಿ ತಮ್ಮದೇ ಆ ಪ್ಲಾನ್ ಮಾಡಲಿದ್ದಾರೆ.

ನವದೆಹಲಿ: ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಬಂದಿದ್ದರೂ ಇಂಡಿಯಾ ಮೈತ್ರಿಕೂಟವೂ ಕೂಡ ಮಿತ್ರರನ್ನೆಲ್ಲಾ ಸೇರಿಸಿ ಕೇಂದ್ರದಲ್ಲಿ ಸರ್ಕಾರ ರಚನೆಯ ಕಸರತ್ತಿಗೆ ಮುಂದಾಗಿದೆ. ಹೀಗಾಗಿ ಇಂದು ಸಂಜೆ ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳು ಹಾಗೂ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳು ಪ್ರತ್ಯೇಕವಾಗಿ ಸಭೆ ನಡೆಸಲಿದ್ದು, ಕೇಂದ್ರದಲ್ಲಿ ಸರ್ಕಾರ ರಚನೆಗಾಗಿ ತಮ್ಮದೇ ಆ ಪ್ಲಾನ್ ಮಾಡಲಿದ್ದಾರೆ.

ಎನ್‌ಡಿಎ ಮೈತ್ರಿಕೂಟದ ನಾಯಕರ ಸಭೆ ಸಂಜೆ 4 ಗಂಟೆಗೆ ದೆಹಲಿ ಖಾಸಗಿ ಹೊಟೇಲೊಂದರಲ್ಲಿ ನಡೆಯಲಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಟಿಡಿಪಿ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು, ಬಿಹಾರ್ ಸಿಎಂ ನಿತೀಶ್ ಕುಮಾರ್, ಕರ್ನಾಟಕದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಎಲ್ ಜೆ ಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸೇರಿ ಹಲವರು ನಾಯಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸ್ವತಃ ಅಮಿತ್ ಶಾ ದೂರವಾಣಿ ಕರೆ ಮಾಡಿ ಈ ನಾಯಕರಿಗೆ ಸಭೆಗೆ ಆಹ್ವಾನ ನೀಡಿದ್ದಾರೆ. ಹೊಸ ಸರ್ಕಾರ ರಚನೆ ಕುರಿತು ಸಭೆ ನಡೆಯಲಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಜೂನ್ 9 ರಂದು  ಮೋದಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಎನ್‌ಡಿಎ ಕೂಟದ ಸಭೆಯಲ್ಲಿ ಭಾಗಿಯಾಗುವುದಾಗಿ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಈಗಾಗಲೇ ತಿಳಿಸಿದ್ದಾರೆ.

ಇಂಡಿಯಾ ಕೂಟದ ನಾಯಕರ ಸಭೆ

ಇತ್ತ ಬಿಜೆಪಿ ಎನ್‌ಡಿಎ ಮೈತ್ರಿಕೂಟವನ್ನು 290 ರ ಸ್ಥಾನಕ್ಕೆ ಕಟ್ಟಿ ಹಾಕಿರುವ ಇಂಡಿಯಾ ಕೂಟ ಕೂಡ ಹೊಸ ಸರ್ಕಾರ ರಚನೆಗೆ ತನ್ನದೇ ಆದ ಕಸರತ್ತು ನಡೆಸಲಿದೆ. ಇದಕ್ಕಾಗಿ ಇಂದು ಸಂಜೆ 6  ಗಂಟೆಗೆ ದೆಹಲಿಯ  ರಾಜಾಜಿ ಮಾರ್ಗ್‌ನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಯಲಿದೆ. 
ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಅಖಿಲೇಶ್ ಯಾದವ್, ಶರದ್ ಪವಾರ್, ಆಪ್ ಪಕ್ಷದ ನಾಯಕರು, ಡಿಎಂಕೆ, ಟಿಎಂಸಿ ಹಾಗೂ ಎಡ ಪಕ್ಷಗಳ ನಾಯಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಹೊಸ ಸರ್ಕಾರ ರಚನೆ ಕುರಿತು ಇಲ್ಲಿ ಇಂಡಿಯಾ ನಾಯಕರು ಚರ್ಚಿಸಲಿದ್ದಾರೆ. ಇಂಡಿಯಾ ಕೂಟದ ಜೊತೆ ಇರುವುದಾಗಿ ದೀದಿ ಮಮತಾ ಬ್ಯಾನರ್ಜಿ ಈಗಾಗಲೇ ಘೋಷಿಸಿದ್ದಾರೆ.

ಎನ್‌ಡಿಎ ಸಭೆಗೂ ಮುನ್ನವೇ ಶುರುವಾಯ್ತಾ ಭಿನ್ನರಾಗ

ಇನ್ನೊಂದೆಡೆ ಬಿಹಾರದ ಜೆಡಿಯು ಶಾಸಕ ಖಾಲಿದ್ ಅನ್ವರ್, ನಿತೀಶ್‌ಕುಮಾರ್ ಪ್ರಧಾನಿಯಾಗಬೇಕು ಎಂಬಂತೆ ಬ್ಯಾಟಿಂಗ್ ಮಾಡಿದ್ದಾರೆ. ಇದು ಎನ್‌ಡಿಎ ಸಭೆಗೂ ಮುನ್ನವೇ ಮೈತ್ರಿಯಲ್ಲಿ ಭಿನ್ನರಾಗ ಶುರುವಾಗಿದೆಯೇ ಎಂಬ ಪ್ರಶ್ನೆ ಮೂಡಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಎಂಎಲ್‌ಸಿ ಖಾಲಿದ್ ಅನ್ವರ್,  ದೇಶಕ್ಕೆ ನಿತೀಶ್‌ಕುಮಾರ್‌ಗಿಂತ ಒಳ್ಳೆಯ ಪ್ರಧಾನಿ ಯಾರಿದ್ದಾರೆ. ದೇಶದ‌ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಗೌರವ ಕೊಡುವ‌ ನಾಯಕ ನಿತೀಶ್ ಕುಮಾರ್, ದೇಶದ ಜನರ ನಾಡಿ ಮಿಡಿತ ಮತ್ತು ಜನರ ಕಷ್ಟಕ್ಕೆ ಸ್ಪಂದಿಸೋ ವ್ಯಕ್ತಿ ನಿತೀಶ್ ಕುಮಾರ್ ಎಂದು ಹೇಳಿದ್ದಾರೆ. ತಮ್ಮ ಮಾತಿನ ಕೊನೆಯಲ್ಲಿ ನಾವು ಎನ್‌ಡಿಎ ಭಾಗವಿದ್ದೇವೆ ಎಂದ ಅನ್ವರ್ ಹೇಳಿದ್ದಾರೆ. ಆದರೆ ಅನ್ವರ್ ಅವರ ಈ ಮಾತಿನಿಂದ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರಾ ಎಂಬ ಅನುಮಾನ ಮೂಡಿದೆ. 

ಎನ್‌ಡಿಎಗೆ ಬೆಂಬಲ ಪತ್ರ ನೀಡಲಿರುವ ಮಿತ್ರಪಕ್ಷಗಳು
ಇಂದು ಸಂಜೆ ನಾಲ್ಕು ಗಂಟೆಗೆ ನಡೆಯಲಿರುವ ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಮೈತ್ರಿ ಪಕ್ಷಗಳು ಸರ್ಕಾರ ರಚನೆಗೆ ತಮ್ಮ ಬೆಂಬಲವಿದೆ ಎಂದು ತಿಳಿಸುವ ಬೆಂಬಲ ಪತ್ರ ನೀಡಲಿವೆ ಎಂದು ತಿಳಿದು ಬಂದಿದೆ. ಮಿತ್ರಪಕ್ಷಗಳು ನೀಡುವ ಪತ್ರಗಳ ಬೆಂಬಲದ ಮೂಲಕ ಸರ್ಕಾರ ರಚನೆಯ ಮುಂದಿನ ಕಾರ್ಯ ಸುಗಮವಾಗಲಿದೆ. ಮಿತ್ರ ಪಕ್ಷಗಳ ಬೆಂಬಲ ಪತ್ರದೊಂದಿಗೆ ರಾಷ್ಟ್ರಪತಿಗಳ ಬಳಿ ತೆರಳುವ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಜೆಡಿಯು, ಟಿಡಿಪಿ, ಎಲ್ಜೆಪಿ, ಜೆಡಿಎಸ್ ಪಕ್ಷಗಳು ಬೆಂಬಲ ಪತ್ರ ನೀಡಲಿವೆ. 

ಲೋಕಸಭೆ ಚುನಾವಣೆ ಫಲಿತಾಂಶ 2024: ಕಾಂಗ್ರೆಸ್‌ ಪುಟಿದೇಳುವಂತೆ ಮಾಡಿದ ಖರ್ಗೆ

PREV
Read more Articles on
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!