ದಕ್ಷಿಣ ಭಾರತದಲ್ಲಿ ಕಮಾಲ್ ಮಾಡಿದ ಪ್ರಧಾನಿ ಮೋದಿ ರೋಡ್ ಶೋ.. ಉತ್ತರದಲ್ಲೇ ಅನಿರೀಕ್ಷಿತ ಆಘಾತ

By Kannadaprabha News  |  First Published Jun 5, 2024, 11:52 AM IST

ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಕನಿಷ್ಠ 50 ಸೀಟುಗಳನ್ನು ಗೆಲ್ಲುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಎಡೆಬಿಡದೆ ನಡೆಸಿದ ಪ್ರಚಾರ ಸಮಾವೇಶಗಳು ಹಾಗೂ ರೋಡ್‌ಶೋಗಳು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಫಲ ನೀಡಿವೆ. 


ಬೆಂಗಳೂರು: ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಕನಿಷ್ಠ 50 ಸೀಟುಗಳನ್ನು ಗೆಲ್ಲುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಎಡೆಬಿಡದೆ ನಡೆಸಿದ ಪ್ರಚಾರ ಸಮಾವೇಶಗಳು ಹಾಗೂ ರೋಡ್‌ಶೋಗಳು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಫಲ ನೀಡಿವೆ. 

ದಕ್ಷಿಣ ಭಾರತದಲ್ಲಿರುವ ಒಟ್ಟು 130 ಸೀಟುಗಳ ಪೈಕಿ ಕಳೆದ ಬಾರಿ ಬಿಜೆಪಿ 29 ಸೀಟು ಗಳನ್ನು ಗೆದ್ದಿದ್ದರೆ, ಈ ಬಾರಿ 49 ಸೀಟುಗಳನ್ನು ಗೆದ್ದಿದೆ. ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ನರೇಂದ್ರ ಮೋದಿ ದಕ್ಷಿಣ ಭಾರತಕ್ಕೆ ಪದೇಪದೇ ಭೇಟಿ ನೀಡಿ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರು. ಮೂರು ತಿಂಗಳಲ್ಲಿ ಅವರು 20ಕ್ಕೂ ಹೆಚ್ಚು ಬಾರಿ ದಕ್ಷಿಣ ಭಾರತದ ಐದು ರಾಜ್ಯಗಳಿಗೆ ಬಂದಿದ್ದರು. ತಮಿಳುನಾಡಿಗೆ ಏಳು ಬಾರಿ, ಕೇರಳ ಮತ್ತು ತೆಲಂಗಾಣಕ್ಕೆ ತಲಾ ನಾಲ್ಕು ಬಾರಿ, ಕರ್ನಾಟಕಕ್ಕೆ ಮೂರು ಬಾರಿ ಹಾಗೂ ಆಂಧ್ರಪ್ರದೇಶಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. 

Latest Videos

ಪ್ರತಿ ಭೇಟಿಯಲ್ಲೂ 2-3 ಕಡೆ ಪ್ರಚಾರ ಸಮಾವೇಶ ಅಥವಾ ರೋಡ್‌ಶೋ ನಡೆಸಿದ್ದರು. ಹೀಗಾಗಿ ಪ್ರಾದೇಶಿಕ ಪಕ್ಷಗಳು ಹಾಗೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ದಕ್ಷಿಣ ಭಾರತದಲ್ಲೂ ಬಿಜೆಪಿ ತನ್ನ ಸೀಟು ಗಳಿಕೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಇದ್ದ ಏಕೈಕ ಸರ್ಕಾರವಾದ ಕರ್ನಾಟಕ ಸರ್ಕಾರ ಕೂಡ ಕಳೆದ ವರ್ಷ ಅವಧಿ ಮುಗಿಸಿತ್ತು. ಹಾಗಿದ್ದರೂ ಬಿಜೆಪಿಗೆ ಈ ಭಾಗದಲ್ಲಿ ಒಳ್ಳೆ ಗಳಿಕೆಯಾಗಿದೆ. ಆದರೆ ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಪಶ್ಚಿಮ ಬಂಗಾಳ ಹಾಗೂ ಹರ್ಯಾಣದಲ್ಲಿ ಬಿಜೆಪಿಗೆ ಅನಿರೀಕ್ಷಿತ ಆಘಾತ ಉಂಟಾಗಿದೆ. ಅಲ್ಪಸಂಖ್ಯಾತ ಮತಗಳು ವಿಭಜನೆಯಾಗದೆ ಇಂಡಿಯಾ ಮೈತ್ರಿಕೂಟದ ಪರ ಸ್ಪಷ್ಟವಾಗಿ ಧ್ರುವೀಕರಣಗೊಂಡಿರುವುದೂ  ಈ ಹಿನ್ನಡೆಗೆ ಪ್ರಮುಖ ಕಾರಣಗಳಲ್ಲಿ ಒಂದು.

ಈಡೇರದ ಬಿಜೆಪಿ ‘ಅಬ್‌ ಕೀ ಬಾರ್‌ 400 ಪಾರ್‌’ ಕನಸು..!

click me!