ಚುನಾವಣೆ ಗೆಲ್ಲಲು ಮೋದಿ ನಾಮಬಲವೊಂದಿದ್ದರೆ ಸಾಕೇ?

By Web DeskFirst Published Apr 9, 2019, 11:29 AM IST
Highlights

ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳಷ್ಟು ಮಾತ್ರ ಬಾಕಿ ಉಳಿದಿವೆ. ರಾಜಕೀಯ ಪಕ್ಷಗಳು ಅಂತಿಮ ಹಂತದ ಕಸರತ್ತಿನಲ್ಲಿ ತೊಡಗಿವೆ. ಬಿಜೆಪಿಯವರು ಮೋದಿ ಹೆಸರನ್ನು ಇಟ್ಟುಕೊಂಡು ಮತ ಬೇಟೆ ನಡೆಸುತ್ತಿದ್ದಾರೆ. ಮತದಾರ ಪ್ರಭು ಅಭ್ಯರ್ಥಿಗಳ ಕೆಲಸ ನೋಡಿ ವೋಟ್ ಹಾಕ್ತಾರಾ? ಮೋದಿ ನಾಮಬಲಕ್ಕೆ ವೋಟ್ ಹಾಕ್ತಾರಾ? ಅನ್ನೋದು ಕುತೂಹಲದ ವಿಚಾರ. 

ನವದೆಹಲಿ (ಏ. 09): ಮೋದಿ ವಿರುದ್ಧ ವಾರಾಣಸಿಯಲ್ಲಿ ಎಲ್ಲ ವಿಪಕ್ಷಗಳ ಪರವಾಗಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಪ್ರಿಯಾಂಕಾ ಗಾಂಧಿ ಪ್ರಸ್ತಾವನೆ ಇಟ್ಟಿದ್ದಾರೆ. ಅಖಿಲೇಶ್‌ ಇದನ್ನು ಒಪ್ಪಿಕೊಂಡಿದ್ದರೆ, ಮಾಯಾವತಿ ಸಮ್ಮತಿ ಇನ್ನೂ ಸಿಕ್ಕಿಲ್ಲ. ಮೋದಿ ವಿರುದ್ಧ ನಿಲ್ಲುವಂತೆ ಬಿಜೆಪಿ ಬಗ್ಗೆ ಮುನಿಸಿಕೊಂಡಿರುವ ಮುರಳಿ ಮನೋಹರ ಜೋಶಿ ಅವರನ್ನೇ ಪ್ರಿಯಾಂಕಾ ಸಂಪರ್ಕ ಮಾಡಿದ್ದಾರಂತೆ.

28 ಕ್ಷೇತ್ರಗಳಿಗೆ 478 ಅಭ್ಯರ್ಥಿಗಳು ಫೈನಲ್: ಇಲ್ಲಿದೆ ಪಟ್ಟಿ!

1952 ರಿಂದ ಒಂದು ದಶಕದ ಕಾಲ ಕಾಂಗ್ರೆಸ್‌ ಪಕ್ಷದಿಂದ ಯಾರೇ ನಿಂತರೂ ಮಹಾತ್ಮ ಗಾಂಧಿ ಅವರ ಸ್ವಾತಂತ್ರ್ಯ ಕೊಡಿಸಿದ ಪಕ್ಷ ಎಂದು ಜನ ವೋಟು ನೀಡುತ್ತಿದ್ದರು. ನಂತರದ ದಿನಗಳಲ್ಲಿ ಇಂದಿರಾ ಹೆಸರಲ್ಲಿ ಪ್ರಾಣಿ ನಿಂತರೂ ಗೆಲ್ಲುತ್ತದೆ ಎಂಬ ಮಾತು ಪ್ರಚಲಿತವಾಗಿತ್ತು. ಆದರೆ ನಂತರ ಅಭ್ಯರ್ಥಿ ಯಾರೇ ನಿಂತರೂ ಜನ ವೋಟು ಹಾಕುತ್ತಾರೆ ಎಂಬ ವಾತಾವರಣ ಇರಲಿಲ್ಲ. 

2004ರಲ್ಲಿ ಕೂಡ ಅಟಲ್ ಬಿಹಾರಿ ಸೋತಿದ್ದು ಅವರ ಮೇಲಿನ ಸಿಟ್ಟಿನಿಂದಲ್ಲ. ಬದಲಾಗಿ, ಸಂಸದರ ಮೇಲಿನ ಆಕ್ರೋಶದಿಂದಾಗಿ. ಆದರೆ 2019ರಲ್ಲಿ ಮೋದಿ ಮತ್ತು ಬಿಜೆಪಿ ಮಗದೊಮ್ಮೆ ಚುನಾವಣೆಯನ್ನು ಪಕ್ಕಾ ಅಮೆರಿಕದ ಅಧ್ಯಕ್ಷೀಯ ಮಾದರಿಯಲ್ಲಿ ನಡೆಸಲು ಹೊರಟಿದ್ದು, ಇಲ್ಲಿ ಅಭ್ಯರ್ಥಿಯ ಮುಖ ಗೌಣ ಆದರೆ ಮಾತ್ರ ಬಿಜೆಪಿಗೆ ಲಾಭ. ಅಭ್ಯರ್ಥಿಯ ಮುಖ ಮಾಡಿದ ಕೆಲಸ ಮಹತ್ವ ಪಡೆಯತೊಡಗಿದರೆ 2004ರ ಸ್ಥಿತಿ ಮರುಕಳಿಸಬಹುದು ಎಂಬ ಆತಂಕ ಬಿಜೆಪಿಯಲ್ಲಿದೆ. ಹೀಗಾಗಿಯೇ ಏನೋ, 3ರಿಂದ 4 ಸಲ ಆರಿಸಿ ಬಂದು ಕೇಂದ್ರದಲ್ಲಿ ಮಂತ್ರಿ ಆದವರೂ ಕೂಡ ತಮ್ಮ ಬಗ್ಗೆ ಹೇಳಿಕೊಳ್ಳದೆ ಮೋದಿ, ಮೋದಿ, ಮೋದಿ ಎನ್ನುತ್ತಿದ್ದಾರೆ. ಈಗ ಬಿಜೆಪಿ ಅಭ್ಯರ್ಥಿಗಳಿಗೆ ಮೋದಿ ಹೆಸರೊಂದು ಇದ್ದರೆ ಸಾಕು.

ಚುನಾವಣೆಗೆ ದಿನಗಣನೆ: ರಾಜ್ಯ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಮಾಜಿ ಸಂಸದ!

ಮೋದಿ ಒಮ್ಮೆ ಬಂದರೆ ಸಾಕು

ಇವತ್ತು ಇಡೀ ದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಚಾರಕ್ಕೆ ಮೋದಿ ಒಮ್ಮೆ ಬಂದರೆ ಸಾಕು ಎನ್ನುತ್ತಿದ್ದಾರೆ. ಬಿಜೆಪಿಯ ಇತರ ನಾಯಕರಾದ ರಾಜನಾಥ್‌ ಸಿಂಗ್‌, ಸುಷ್ಮಾ, ಜೇಟ್ಲಿ ಕಾರ್ಯಕ್ರಮ ನಮಗೆ ಬೇಡ ಎಂದು ಅಭ್ಯರ್ಥಿಗಳು ನೇರವಾಗಿಯೇ ಹೇಳುತ್ತಿದ್ದಾರೆ.

ಅಮಿತ್‌ ಶಾ ರೋಡ್‌ ಶೋಗೆ ಸ್ವಲ್ಪ ಮಟ್ಟಿಗಿನ ಬೇಡಿಕೆ ಇದೆ. ಶಾ ಹೆಸರಿನ ಬಗ್ಗೆ ಇರುವ ಹೆದರಿಕೆ ಕಾರಣದಿಂದ ಆ ಬೇಡಿಕೆ. ಅಮಿತ್‌ ಶಾ ಹೆಸರಿನಿಂದ ವೋಟುಗಳು ಬರುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರು ಬಂದು ಹೋದರೆ ಸಂಘಟನೆಯ ಸಣ್ಣಪುಟ್ಟವ್ಯತ್ಯಾಸಗಳು ಸರಿ ಆಗುತ್ತವೆ. ಇನ್ನೊಂದು ಕುತೂಹಲ ಎಂದರೆ, ಮೋದಿಯಷ್ಟೇ ದೇಶದ ಬಹುತೇಕ ಕ್ಷೇತ್ರಗಳಲ್ಲಿ ಬಹು ಬೇಡಿಕೆ ಇರುವುದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ   ಕ್ಲಿಕ್ ಮಾಡಿ 
 

click me!