ಚುನಾವಣೆಗೆ ದಿನಗಣನೆ: ರಾಜ್ಯ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಮಾಜಿ ಸಂಸದ!

By Web DeskFirst Published Apr 9, 2019, 11:08 AM IST
Highlights

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗ ಕಾಂಗ್ರೆಸ್ ಗೆ ಆಘಾತಕಾರಿ ಸುದ್ದಿ ಬಂದೆರಗಿದೆ. ಕ್ರಿಶ್ಚಿಯನ್ನರಿಗೆ ಟಿಕೆಟ್‌ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಮಾಜಿ ಸಂಸದ, ಮಾಜಿ ಐಪಿಎಸ್‌ ಅಧಿಕಾರಿ ಸಾಂಗ್ಲಿಯಾನ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದಾರೆ.

ಬೆಂಗಳೂರು[ಏ.09]: ಲೋಕಸಭೆ ಚುನಾವಣೆಗೆ ರಾಜ್ಯದಿಂದ ಒಬ್ಬ ಕ್ರಿಶ್ಚಿಯನ್‌ ಅಭ್ಯರ್ಥಿಗೂ ಟಿಕೆಟ್‌ ನೀಡದೆ ಕಾಂಗ್ರೆಸ್‌ ಪಕ್ಷ ವಂಚಿಸಿದೆ ಎಂದು ಆರೋಪಿಸಿ ಮಾಜಿ ಸಂಸದ ಎಚ್‌.ಟಿ. ಸಾಂಗ್ಲಿಯಾನ ಅವರು ಕೆಪಿಸಿಸಿ ಉಪಾಧ್ಯಕ್ಷ ಹುದ್ದೆ ಹಾಗೂ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಅಲ್ಲದೆ, ಎಲ್ಲಾ ಕ್ರಿಶ್ಚಿಯನ್‌ ಸ್ನೇಹಿತರು ಹಾಗೂ ಹಿತೈಷಿಗಳು ಪಕ್ಷದ ಹಂಗಿಲ್ಲದೆ ಯಾವುದೇ ಪಕ್ಷದ ಅಭ್ಯರ್ಥಿಯಾಗಿದ್ದರೂ ಸ್ವಚ್ಛ ಹಾಗೂ ಸೇವಾ ಬದ್ಧತೆಯುಳ್ಳ ಅಭ್ಯರ್ಥಿಗೆ ಮತ ಚಲಾಯಿಸಿ ಎಂದು ಕರೆ ನೀಡಿದ್ದಾರೆ. 50 ವರ್ಷದ ಸಾರ್ವಜನಿಕ ಜೀವನದಲ್ಲಿ 34 ವರ್ಷ ಐಪಿಎಸ್‌ ಅಧಿಕಾರಿ ಹಾಗೂ 16 ವರ್ಷ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. 2004ರಲ್ಲಿ ಸಂಸದನಾಗಿ ಆಯ್ಕೆಯಾಗಿ ಸಂಸದರ ನಿಧಿಯ ಪ್ರತಿಯೊಂದು ರುಪಾಯಿ ಉಪಯೋಗಿಸಿಕೊಂಡು ಜನರಿಗಾಗಿ ಕೆಲಸ ಮಾಡಿದ್ದೇನೆ. ಬಾಗಲೂರು-ಬೂದಿಗೆರೆ ರಸ್ತೆ ನಿರ್ಮಾಣ ಸೇರಿದಂತೆ ಹಲವು ಸಾಧನೆ ಮಾಡಿದ್ದೇನೆ. ಸಂಸದನಾಗಿದ್ದಾಗ ಬಿಜೆಪಿಯ ವಿಪ್‌ ಉಲ್ಲಂಘಿಸಿ ನಾಗರಿಕ ಪರಮಾಣು ಒಪ್ಪಂದದ ಪರ ಮತ ಚಲಾಯಿಸಿದ್ದೇನೆ.

ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಗೆ ಇಕ್ಕಟ್ಟು!: ಟಿಕೆಟ್ ಬೇಡಿಕೆ ಇಟ್ಟ ಮಾಜಿ ಸಂಸದ!

2008ರಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡ ಬಳಿಕ ಪಕ್ಷ ನೀಡಿರುವ ಹಲವು ಜವಾಬ್ದಾರಿ ನಿಭಾಯಿಸಿ ಪ್ರಸ್ತುತ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಆದರೆ, ಇತ್ತೀಚೆಗೆ ಕಾಂಗ್ರೆಸ್‌ ಪಕ್ಷವು ಕ್ರಿಶ್ಚಿಯನ್‌ ಸಮುದಾಯವನ್ನು ನಿರ್ಲಕ್ಷಿಸಿದೆ. ಕಾಂಗ್ರೆಸ್‌ ಪಾಲಿಗೆ ಮತ ಬ್ಯಾಂಕ್‌ ಆಗಿರುವ ಕ್ರಿಶ್ಚಿಯನ್‌ ಸಮುದಾಯವು ಅವಕಾಶಗಳನ್ನು ನೀಡುವಾಗ ಮಾತ್ರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. 2019ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಶಿಕ್ಷಣ, ಆರೋಗ್ಯ, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಸಮುದಾಯಕ್ಕೆ ಒಂದು ಟಿಕೆಟ್‌ ಕೂಡ ನೀಡಿಲ್ಲ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

click me!