ಚುನಾವಣೆಗೂ ಮುನ್ನವೇ ಉಡುಪಿ ಬಿಜೆಪಿ ‘ಸಂಭ್ರಮ’

By Web DeskFirst Published Mar 18, 2019, 1:53 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು,ಇದೇ ವೇಳೆ ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್ ಮೈತ್ರಿಯಲ್ಲಿ ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಆದರೆ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಅಭ್ಯರ್ಥಿ ಇನ್ನೂ ಖಚಿತವಾಗಿಲ್ಲ.  ಇತ್ತ ಬಿಜೆಪಿಯಲ್ಲಿ ಏಕಮುಖ ಸ್ಪರ್ಧೆಯ ಉತ್ಸಾಹ ಹೆಚ್ಚಿದೆ. 

ಉಡುಪಿ :  ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಇನ್ನೂ ಖಚಿತವಾಗದಿದ್ದರೂ, ಬಿಜೆಪಿ ಪಾಳಯದಲ್ಲಿ ಏಕಮುಖ ಸ್ಪರ್ಧೆಯ ರಣೋತ್ಸಾಹ ವ್ಯಕ್ತವಾಗುತ್ತಿದೆ.

ಮೈತ್ರಿಧರ್ಮದ ನೆಪದಲ್ಲಿ ಈ ಕ್ಷೇತ್ರದಲ್ಲಿ ನೆಲೆ ಇಲ್ಲದಿದ್ದರೂ, ಸ್ಪರ್ಧಿಸುವ ಅವಕಾಶ ಪಡೆದಿರುವ ಜೆಡಿಎಸ್‌ ಅಭ್ಯರ್ಥಿಗಾಗಿ ಹುಡುಕುತ್ತಿದೆ. ಇದೇ ಮೈತ್ರಿಧರ್ಮ ಪಾಲನೆಯ ಅನಿವಾರ್ಯತೆಗೆ ಸ್ಪರ್ಧೆಯಿಂದಲೇ ಮುಕ್ತವಾಗಿರುವ ಕಾಂಗ್ರೆಸ್‌ ಸಹಜವಾಗಿಯೇ ನಿಷ್ಕ್ರೀಯವಾಗಿದೆ.

ಕಳೆದ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರದ್ಲಾಂಜೆ ಗೆಲುವು ಸಾಧಿಸಿದ್ದರೆ, ವಿಧಾನಸಭಾ ಚುನಾವಣೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿ ಈಗಾಗಲೇ ಗೆಲುವಿನ ಅಂತರದ ಲೆಕ್ಕಾಚಾರ ಮಾಡುತ್ತಿದೆ.

ಮಂಡ್ಯದಿಂದ ‘ಬಿಜೆಪಿ ಅಭ್ಯರ್ಥಿ’ ಕಣಕ್ಕೆ? ಯಾರಿಗೆ ಟಿಕೆಟ್?

2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದರೆ ಏನಾಗುತ್ತಿತ್ತು? 2018ರ ವಿಧಾನಸಭಾ ಚುನಾವಣೆಯಲ್ಲಿ ಈ ಮೈತ್ರಿ ಒಟ್ಟಾಗಿ ಎಷ್ಟುಮತ ಗಳಿಸುತ್ತಿತ್ತು? ಎಂಬ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ, ಈ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ ಎನ್ನುವ ವಿಶ್ವಾಸ ಬಿಜೆಪಿಯದ್ದು.

2014: ಮತ ಒಗ್ಗೂಡಿದರೂ ಬಿಜೆಪಿ ಅಬಾಧಿತ

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 13,87,319 ಮತದಾರರಿದ್ದರು. ಆ ಚುನಾವಣೆಯಲ್ಲಿ ಗೆದ್ದ ಬಿಜೆಪಿ 5,81,168 (ಶೇ 56.20) ಮತಗಳನ್ನು ಗಳಿಸಿತ್ತು. ಕಾಂಗ್ರೆಸ್‌ 3,99,525 (ಶೇ 38.63) ಮತಗಳನ್ನು ಗಳಿಸಿದ್ದರೆ, ಜೆಡಿಎಸ್‌ ಕೇವಲ 14,895 (ಶೇ 1.44) ಮತಗಳನ್ನಷ್ಟೇ ಗಳಿಸಿತ್ತು. ಬಿಜೆಪಿ ಅಭ್ಯರ್ಥಿ ಬರೋಬ್ಬರಿ 1,81,643 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಇದರ ಆಧಾರದ ಮೇಲೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಪಡೆದ ಮತಗಳನ್ನು ಕೂಡಿಸಿದರೂ, ಅದು ಬಿಜೆಪಿ ಗಳಿಸಿದ ಮತಗಳ ಸಮೀಪಕ್ಕೂ ಬರುವುದಿಲ್ಲ.

2018: ದೋಸ್ತಿಗಳ ಮತಕ್ಕಿಂತ ಬಿಜೆಪಿಯದ್ದು ಹೆಚ್ಚು 

2018ರ ವಿಧಾನಸಭಾ ಚುನಾವಣೆಯಲ್ಲಿ ಈ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 7ರಲ್ಲಿ ಗೆದ್ದಿದೆ, ಕಾಂಗ್ರೆಸ್‌ ಕೇವಲ 1ನ್ನು ಮಾತ್ರ ಉಳಿಸಿಕೊಂಡಿದೆ.

ಈ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 14,77,543 ಮತದಾರರಿದ್ದು, 10,66,936 ಮಂದಿ ಮತದಾನ ಮಾಡಿದ್ದರು. ಅದರಲ್ಲಿ ಬಿಜೆಪಿ 5,70,899 (ಶೇ. 53.50) ಮತಗಳನ್ನು ಗಳಿಸಿತ್ತು. ಕಾಂಗ್ರೆಸ್‌ 4,06,588 (ಶೇ.38.10) ಮತ ಗಳಿಸಿದ್ದರೆ, 7 ವಿಧಾನಸಭಾ ಕ್ಷೇತ್ರಗಳಲ್ಲಷ್ಟೇ ಸ್ಪರ್ಧಿಸಿದ್ದ ಜೆಡಿಎಸ್‌ 90,219 (ಶೇ 8.44) ಮತಗಳನ್ನಷ್ಟೇ ಗಳಿಸಿತ್ತು. ಇದರ ಪ್ರಕಾರ ಬಿಜೆಪಿ ಒಟ್ಟು 1,64,311 ಮತಗಳಿಂದ ಮುಂದಿದೆ. ಇಲ್ಲಿಯೂ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಗಳಿಸಿದ ಮತಗಳನ್ನು ಕೂಡಿಸಿದರೂ, ಅದು ಬಿಜೆಪಿ ಗಳಿಸಿದ ಮತಗಳಿಗಿಂತ ಕಡಿಮೆಯೇ ಆಗಲಿದೆ. ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ, ಬಿಜೆಪಿಯ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ಪಕ್ಕ ಆಗಿರದಿದ್ದರೂ, ಗೆಲುವು ಪಕ್ಕಾ ಎನ್ನಲಾಗುತ್ತಿದೆ.

ವರದಿ : ಸುಭಾಶ್ಚಂದ್ರ ಎಸ್‌.ವಾಗ್ಳೆ

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ.

click me!