ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಲಬುರಗಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ಡಾ. ಉಮೇಶ್ ಜಾಧವ್ ಗೆಲುವಿಗೆ ಬೇಕಾದ ತಂತ್ರಗಳ ಬಗ್ಗೆ ಚರ್ಚೆ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ.
ಕಲಬುರಗಿ, [ಏ.07]: ಕಲಬುರಗಿ ಲೋಕಸಭಾ ಅಖಾಡದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಡಾ. ಖರ್ಗೆಯವರಿಗೆ ನಡುಕ ಶುರುವಾಗಿದೆ ಎಂದಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್, ಬಿಜೆಪಿ ಈ ಬಾರಿ ಕಲಬುರಗಿ ಸಂಸತ್ ಗದ್ದುಗೆ ಹತ್ತಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ಕಲಬುರಗಿಯಲ್ಲಿ ಪಕ್ಷದ ಕಚೇರಿಯಲ್ಲಿ ಕಾಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಶೆಟ್ಟರ್, 'ಕಳೆದ 5 ದಶಕದಿಂದ ಶಾಸಕಾರಾಗಿ, ಸಂಸದರಾಗಿ ಹತ್ತು ಹಲವು ಹಂತದಲ್ಲಿ ಅಧಿಕಾರದಲ್ಲಿರೋ ಖರ್ಗೆಯವರೇ ಹೈದರಾಬಾದ್ ಕರ್ನಾಟಕ ಹಿಂದುಳಿಯಲು ಕಾರಣ' ಎಂದು ವಾಗ್ದಾಳಿ ನಡೆಸಿದರು.
ತಾವು ಅಧಿಕಾರದಲ್ಲಿದ್ದರೂ ಗೆದ್ದು ಬಂದ ಪ್ರದೇಶದ ಸರ್ವತೋಮುಖ ಪ್ರಗತಿಗೆ ಅವರ ಕೊಡುಗೆ ಶೂನ್ಯ ಎಂದು ಜರಿದ ಅವರು, ಡಾ.ಉಮೇಶ ಜಾಧವ್ ಅವರೇ ಕಲಬುರಗಿಯಲ್ಲಿ ತಮ್ಮ ವಿರುದ್ಧದ ಬಿಜೆಪಿ ಅಭ್ಯರ್ಥಿ ಎಂದು ಗೊತ್ತಾಗುತ್ತಿದ್ದಂತೆಯೇ ಕಾಂಗ್ರೆಸ್, ಖರ್ಗೆ ಎಲ್ಲರಿಗೂ ನಡುಕ ಶುರುವಾಗಿದೆ ಎಂದರು.
ಡಾ.ಜಾಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗ ಅದನ್ನು ಅಂಗೀಕರಿಸದಂತೆ ಸ್ಪೀಕರ್ ರಮೇಶ ಕುಮಾರ್ ಮೇಲೆ ಕಾಂಗ್ರೆಸ್ ಒತ್ತಡ ಹೇರಿತ್ತು. ಇದು ಕಾಂಗ್ರೆಸ್ ಪಕ್ಷ ಮಾಡಿದ ನಾಚಿಕೆ ತರುವಂತಹ ಕೆಲಸ.
ಆದರೆ ಸ್ಪೀಕರ್ ರಮೇಶ ಕುಮಾರ್ ಅವರು ರಾಜೀನಾಮೆ ಅಂಗೀಕರಿಸಿದ್ದಾರೆ. ತಾವು ಸ್ಪೀಕರ್ ಆಗಿದ್ದಾಗ 12 ಶಾಸಕರ ರಾಜೀನಾಮೆ ಸ್ವೀಕರಿಸಿದ್ದಾಗಿ ಹೇಳುತ್ತಲೇ ಕಾಂಗ್ರೆಸ್ ಪಕ್ಷ, ಡಾ.ಜಾಧವ್ ನಾಮಪತ್ರ ತಿರಸ್ಕಾರಕ್ಕೆ ಹಲವು ಹಂತಗಳಲ್ಲಿ ಗುದ್ದಾಡಿದ್ದಾರೆ. ಅದೆಲ್ಲ ಆಟ ನಡೆದಿಲ್ಲ ಎಂದರು.
ಕಣದಲ್ಲಿ ಸದ್ಯ ಜಾಧವ್ ಹೆಸರಿನ 3 ಅಭ್ಯರ್ಥಿಗಳಿದ್ದಾರೆ. ನೂರು ಜನ ಜಾಧವ್ ಬಂದರೂ ಬರಲಿ, ಡಾ.ಉಮೇಶ ಜಾಧವ್ ಗೆಲುವು ಯಾರಿಂದಲೂ ತಡೆಯೋಕೆ ಆಗೋದಿಲ್ಲ.
ದೇಶದಲ್ಲಿ ಲೋಕ ಸಮರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಭಾರಿ ಬಹುಮತದೊಂದಿಗೆ ಗೆದ್ದು ಬಂದು ಗದ್ದುಗೆ ಹಿಡಿಯಲಿದೆ. ಮೋದಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಲಿದ್ದಾರೆ. ಮೋದಿ ಪ್ರಧಾನಿಯಾದ ನಂತರ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಕಿಚಡಿ ಸರ್ಕಾರ ಇರೋದಿಲ್ಲ ಎಂದು ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಶೆಟ್ಟರ್ ಕಿಚಡಿ ಸರಕಾರ ಪತನವಾಗೋದು ನಿಶ್ಚಿತ. ಮೋದಿ ಪ್ರಧಾನಿಯಾಗುತ್ತಿದ್ದಂತೆಯೇ ಕುಮಾರಸ್ವಾಮಿಯವರೇ ತಾವಾಗಿಯೇ ರಾಜೀನಾಮೆ ಕೊಟ್ಟು ಹೋಗಬಹುದು ಎಂದು ಹೇಳಿದರು.