ನಾಥೂರಾಮ್ ಆರ್‌ಎಸ್‌ಎಸ್ ಚಡ್ಡಿ ಇದ್ದ ಹಾಗೆ: ಅಜಂ ಖಾನ್!

By Web DeskFirst Published May 17, 2019, 2:25 PM IST
Highlights

ನಾಥೂರಾಮ್ ಗೋಡ್ಸೆ ಚರ್ಚೆ ಇಲ್ಲಿಗೆ ನಿಲ್ಲುವ ಲಕ್ಷಣ ಇಲ್ಲ| ಭವಿಷ್ಯ ಮಾತನಾಡಬೇಕಾದ ಬಾಯಲ್ಲಿ ಭೂತ ಕಾಲದ ಘಟನಾವಳಿಗಳು| ಗೋಡ್ಸೆ ಒಬ್ಬರಿಗೆ ದೇಶಭಕ್ತ, ಮತ್ತೊಬ್ಬರಿಗೆ ಅಂಧಭಕ್ತ| ಗೋಡ್ಸೆಯನ್ನು ದೇಶಭಕ್ತ ಎಂದು ಕರೆದು ಕ್ಷಮೆ ಕೇಳಿದರು| ಗೋಡ್ಸೆ ಆರ್ ಎಸ್ ಎಸ್ ಚಡ್ಡಿ ಇದ್ದಂತೆ ಎಂದ ಅಜಂ ಖಾನ್| ‘ದೇಶ ಗಾಂಧಿ ಜೊತೆ ಗುರುತಿಸಿಕೊಳ್ಳಬೇಕೋ ಗೋಡ್ಸೆ ಜೊತೆ ಗುರುತಿಸಿಕೊಳ್ಳಬೇಕೋ ಜನ ತೀರ್ಮಾನಿಸಲಿ’|

ರಾಂಪುರ್(ಮೇ.17): ಇಡೀ ಜಗತ್ತು ಕನಿಷ್ಟ ಏನಿಲ್ಲವೆಂದರೂ ಅರ್ಧ ಶತಮಾನದ ಭವಿಷ್ಯದ ಕುರಿತು ಚಿಂತಿಸುತ್ತದೆ. ಆದರೆ ಭಾರತ ಮಾತ್ರ ಭೂತಕಾಲದ ಘಟನಾವಳಿಗಳನ್ನು ಕೆದಕುತ್ತಾ, ಅದು ಹೀಗೆ, ಇದು ಹಾಗೆ ಎಂದೆಲ್ಲಾ ಬಡಿದಾಡಿಕೊಳ್ಳುತ್ತದೆ. ಅದರಲ್ಲೂ ಚುನಾವಣೆಯ ಸಂದರ್ಭದಲ್ಲಿ ಹೂತಿರುವ ಹೆಣಗಳೂ ಮೇಲೆದ್ದು ಬಂದು ಬಾಯಿ ಬಡಿದುಕೊಳ್ಳುತ್ತವೆ.

ಅಭಿವೃದ್ಧಿ, ಭವಿಷ್ಯ, ಭದ್ರತೆ, ಶೀಕ್ಷಣ, ಮೂಲ ಸೌಕರ್ಯದ ಕುರಿತು ಮಾತನಾಡಬೇಕಾದ ರಾಜಕಾರಣಿಗಳು, ಭೂತಕಾಲದ ಘಟನಾವಳಿಗಳನ್ನು ಹೆಕ್ಕಿ ಹೆಕ್ಕಿ ತೆಗೆದು ವಿವಾದ ಸೃಷ್ಟಿಸುತ್ತಾರೆ. ಈ ಬಾರಿ ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಕುರಿತಾದ ವಾದ ಪ್ರತಿವಾದ ಪ್ರಾಮುಖ್ಯತೆ ಪಡೆದುಕೊಂಡಿದೆ.

ನಾಥೂರಾಮ್ ಗೋಡ್ಸೆ ಕುರಿತು ನಟ, ರಾಜಕಾರಣಿ ಕಮಲ್ ಹಾಸನ್ ನೀಡಿದ ಹೇಳಿಕೆ ಇದೀಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿದೆ. ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿ ಹಲವು ಬಿಜೆಪಿ ನಾಯಕರು ಗೋಡ್ಸೆ ಪರ ಹೇಳಿಕೆ ನೀಡಿ ಕ್ಷಮೆಯಾಚಿಸಿದ್ದಾರೆ.

ಆದರೆ ವಿವಾದವನ್ನು ಇಷ್ಟಕ್ಕೆ ನಿಲ್ಲಿಸಿದರೆ ಹೇಗೆ ಹೇಳಿ? ಅದರಂತೆ ಗೋಡ್ಸೆ ವಿರುದ್ಧ ಇದೀಗ ಹಲವರು ಧ್ವನಿ ಎತ್ತಿದ್ದಾರೆ. ಆದರೆ ಗೋಡ್ಸೆ ಟೀಕಿಸುವ ಭರದಲ್ಲಿ ಅವರು ನೀಡುತ್ತಿರುವ ಹೇಳಿಕೆ ಮತ್ತದೇ ಬೆಂಕಿಗೆ ತುಪ್ಪ ಸುರಿಯುವ ಕೆಲಸಕ್ಕೆ ಸೀಮಿತವಾಗಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರುತು ಖಾಕಿ ಚಡ್ಡಿ ರೀತಿಯೇ ನಾಥೂರಾಮ್ ಗೂಡ್ಸೆ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಹೇಳಿದ್ದಾರೆ. ಆರ್‌ಎಸ್‌ಎಸ್ ಸಿದ್ಧಾಂತವನ್ನೇ ನಂಬಿದ್ದ ಗೋಡ್ಸೆ ಮಹಾತ್ಮಾ ಅವರನ್ನು ಕೊಲೆ ಮಾಡಿದ ಎಂದು ಅಜಂ ಖಾನ್ ಆರೋಪಿಸಿದ್ದಾರೆ.

ನಮ್ಮ ದೇಶ ಗಾಂಧಿ ಜೊತೆ ಗುರುತಿಸಿಕೊಳ್ಳಬೇಕೋ ಅಥವಾ ಗೂಡ್ಸೆ ಜೊತೆ ಗುರುತಿಸಿಕೊಳ್ಳಬೇಕೋ ಎಂಭುದನ್ನು ಜನ ನಿರ್ಧರಿಸಲಿದ್ದಾರೆ ಎಂದು ಅಜಂ ಖಾನ್ ಹೇಳಿದ್ದಾರೆ. ಮಾನವೀಯತೆಯೋ ಅಥವಾ ಖಾಕಿ ಚಡ್ಡಿಯೋ ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದು ಹೇಳಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!