ಮೈಸೂರಿನಲ್ಲಿ ಒಂದಾಗ್ತಾರಾ ಒಕ್ಕಲಿಗರು-ಕುರುಬರು?

By Web DeskFirst Published Apr 16, 2019, 11:57 AM IST
Highlights

ಜೆಡಿಎಸ್‌ ಜೊತೆ ಚುನಾವಣಾ ಮೈತ್ರಿ ಸಿದ್ದರಾಮಯ್ಯಗೆ ಇಷ್ಟವಿರಲಿಲ್ಲ. ಸರ್ಕಾರ ಹೋದರೆ ಹೋಗಲಿ, ವಿಪಕ್ಷದಲ್ಲಿ ಕೂರೋಣ, ಪಕ್ಷ ಉಳಿಯುತ್ತದೆ ಎಂದು ಸಿದ್ದು ಹೇಳಿದ್ದರು. ಆಗ ಒಪ್ಪದ ರಾಹುಲ್‌ ಈಗ ಹೆಚ್ಚು ಸೀಟು ಗೆಲ್ಲುವಂತೆ ಸಿದ್ದು ಮೇಲೇ ಇನ್ನಿಲ್ಲದ ಪ್ರೆಶರ್‌ ಹಾಕುತ್ತಿದ್ದಾರೆ. ಗೌಡರು ದಿನಾ ಫೋನ್‌ ಮಾಡ್ತಾರೆ, ಅವರ ಜೊತೆ ನೀವೇ ಮಾತಾಡಿ ಎಂದೂ ರಾಹುಲ್‌ ಹೇಳಿದ್ದಾರಂತೆ.

ಮೊದಲನೇ ಹಂತದ ಚುನಾವಣೆಗೆ ಎರಡು ದಿನ ಉಳಿದಿರುವಾಗ ರಾಜ್ಯದ ರಾಜಕಾರಣಿಗಳನ್ನು ಬಿಡಿ, ಪತ್ರಕರ್ತರು ಮತ್ತು ಸರ್ವೇ ಏಜೆನ್ಸಿಗಳನ್ನು ಕೂಡ ಕಾಡುತ್ತಿರುವ ದೊಡ್ಡ ಪ್ರಶ್ನೆಯಿದು. ಹಾಗೆ ನೋಡಿದರೆ ಹಳೆಯ ಮೈಸೂರು ಭಾಗದಲ್ಲಿ ದಶಕಗಳಿಂದಲೂ ಒಕ್ಕಲಿಗರು ಮತ್ತು ಕುರುಬರು ರಾಜಕೀಯದ ಎರಡು ಧ್ರುವಗಳು.

ಮೋದಿ ಮುಖ ನೋಡಿಕೊಂಡು ನಮ್ಮೂರಲ್ಲಿ ಕಳ್ಳನನ್ನು ಗೆಲ್ಲಿಸಬೇಕೆ? ಪ್ರಕಾಶ್ ರೈ

2004ರಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಗೌಡರು ಓಡಾಡಿದಾಗ ಕುರುಬರು ಸ್ವಲ್ಪ ಮಟ್ಟಿಗೆ ದೇವೇಗೌಡರ ಜೊತೆ ಬಂದು ನಿಂತಿದ್ದು ಬಿಟ್ಟರೆ, ಅನಂತರದ ಕಿತ್ತಾಟದ ಬಳಿಕ ಸಮುದಾಯಗಳು ರಾಜಕೀಯವಾಗಿ ಒಟ್ಟಿಗೆ ಬಂದ ಉದಾಹರಣೆ ಇಲ್ಲ. ಕಳೆದ ವರ್ಷವಷ್ಟೇ ಒಕ್ಕಲಿಗ ಬಾಹುಳ್ಯದ ಚಾಮುಂಡೇಶ್ವರಿಯಲ್ಲಿನ ಸಿದ್ದು ಸೋಲನ್ನು ಕಾಂಗ್ರೆಸ್‌ ಮರೆತರೂ ಸಿದ್ದು ಮತ್ತು ಕುರುಬರು ಮರೆತಂತಿಲ್ಲ. ಆದರೆ ಇತಿಹಾಸ ಪಕ್ಕಕ್ಕಿಟ್ಟು ನೋಡಿದರೆ, ಈಗ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಆಯುಷ್ಯ, ಭವಿಷ್ಯ ಈ ಎರಡು ಸಮುದಾಯಗಳ ಕೈಯಲ್ಲಿದೆ.

'ಮಯ್ಯಾಸ್‌' ಕಂಪೆನಿ ಪುನರ್ ನಿರ್ಮಾಣಕ್ಕೆ ಸಿಕ್ಕಿದೆ ಹೊಸ ದಾರಿ!

ಸರ್ವೇ ಏಜೆನ್ಸಿಗಳ ಪ್ರಕಾರ ಮತಗಟ್ಟೆಯಲ್ಲಿ ಇಬ್ಬರೂ ಒಟ್ಟಿಗೆ ಬಂದರೆ ಬಿಜೆಪಿಯನ್ನು 2014ರ ಆಸುಪಾಸಿಗೆ ತಡೆಯಬಹುದು. ಒಂದು ವೇಳೆ ಇಬ್ಬರೂ ಬರದೇ ಹೋದರೆ ಮೋದಿ ಗಾಳಿ ತಡೆಯುವುದು ಕಷ್ಟ. ಮೋದಿ ಅಲೆಯಲ್ಲಿ ಬಹುತೇಕ ಜಾತಿಗಳ ಯುವಕರು ಓಡಾಡುತ್ತಿದ್ದಾಗ ಜಾತಿ ಸಮೀಕರಣ ಒಂದೇ ಅದನ್ನು ಸ್ವಲ್ಪ ಮಟ್ಟಿಗೆ ತಡೆಯಬಲ್ಲದು. ಆದರೆ ದೇವೇಗೌಡರು ಮತ್ತು ಸಿದ್ದುಗೆ ತಮ್ಮ ಸಮುದಾಯದ ಮತಗಳನ್ನು ಒಂದು ಮಾತಿನಿಂದ ಇನ್ನೊಬ್ಬರಿಗೆ ಕೊಡಿಸುವ ಶಕ್ತಿ ಉಳಿದುಕೊಂಡಿದೆಯೇ? ಈ ಚುನಾವಣೆಯಲ್ಲಿ ಪರೀಕ್ಷೆ ಆಗಬೇಕು.

ಸಿದ್ದು ಬೆನ್ನು ಹತ್ತಿರುವ ರಾಹುಲ್ ಗಾಂಧಿ 

ಚುನಾವಣಾ ಪೂರ್ವ ಮೈತ್ರಿ ಸಿದ್ದರಾಮಯ್ಯಗೆ ಎಳ್ಳಷ್ಟೂಇಷ್ಟವಿರಲಿಲ್ಲ. ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲೂ ‘ರಾಜ್ಯ ಸರ್ಕಾರ ಹೋದರೆ ಹೋಗಲಿ ವಿಪಕ್ಷದಲ್ಲಿ ಕೂರೋಣ, ಪಕ್ಷ ಉಳಿಯುತ್ತದೆ’ ಎಂದಿದ್ದರು ಸಿದ್ದು. ಆದರೆ ರಾಹುಲ… ಒತ್ತಡದಿಂದ ಸೀಟು ಬಿಟ್ಟುಕೊಡಲು ತಯಾರಾಗಿದ್ದರು. ಈಗ ಕಳೆದ ಹತ್ತು ದಿನದಿಂದ ರಾಹುಲ್ ಗಾಂಧಿ ಅವರು ಸಿದ್ದು ಮೇಲೆ ಇನ್ನಿಲ್ಲದ ಪ್ರೆಶರ್‌ ಹಾಕುತ್ತಿದ್ದು, ‘ದೇವೇಗೌಡರು ಹಾಗೂ ನೀವು ಒಟ್ಟಾಗಿ ಬರದೇ ಇದ್ದರೆ 8 ದಾಟುವುದು ಕಷ್ಟವಿದೆ.

ಮುಂದಿನದು ಮುಂದೆ ನೋಡೋಣ, ಈಗ ಒಗ್ಗಟ್ಟಾಗಿ ಬನ್ನಿ. ನಾನು ದೇವೇಗೌಡರ ಜೊತೆ ಮಾತನಾಡುತ್ತೇನೆ. ಅವರು ದಿನಾ ಫೋನ್‌ ಮಾಡುತ್ತಾರೆ. ಕುಮಾರಸ್ವಾಮಿ ಜೊತೆ ಬೇಡ, ನೇರವಾಗಿ ನೀವು ಹಾಗೂ ಗೌಡರು ಕುಳಿತುಕೊಂಡು ಮಾತನಾಡಿ’ ಎಂದಿದ್ದಾರೆ. ಎಲ್ಲಿಯಾದರೂ ಒಬ್ಬರ ವಿರುದ್ಧ ಒಬ್ಬರು ಕೆಲಸ ಮಾಡಿ ಬಿಜೆಪಿ 20ರವರೆಗೆ ಬಂದರೆ ಏನು ಮಾಡುವುದು ಎನ್ನುವುದು ದಿಲ್ಲಿ ಕಾಂಗ್ರೆಸ್‌ ನಾಯಕರ ಪೀಕಲಾಟ. ಎಲ್ಲ ದಿಲ್ಲಿ ನಾಯಕರೂ ಹೀಗೆಯೇ. ನಿರ್ಣಯ ತೆಗೆದುಕೊಳ್ಳುವಾಗ ರಾಜ್ಯದವರು ಹೇಳಿದ್ದನ್ನು ಕೇಳೋದಿಲ್ಲ. ಆದರೆ ಪರಿಹಾರ ಸಿಗದೇ ಇದ್ದಾಗ ರಾಜ್ಯಗಳ ನಾಯಕರಿಗೆ ಕೈಮುಗಿಯುತ್ತಾ ಓಡಾಡುತ್ತಾರೆ.

'ವಿ ಆರ್ ಹ್ಯುಮನ್': ಗಾಯಗೊಂಡ ತರೂರ್ ಭೇಟಿಯಾದ ಸೀತಾರಾಮನ್!

ಸಿದ್ದು ಏನು ಮಾಡಬಹುದು?

ಈಗಲೇ ಉತ್ತರ ಹೇಳೋದು ಕಷ್ಟ. ಆದರೆ ಅವರಿಗೆ ತಾವೇ ಹಟ ಹಿಡಿದು ಟಿಕೆಟ್‌ ಪಡೆದುಕೊಂಡಿರುವ ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸಿಕೊಳ್ಳುವುದು ಮುಖ್ಯ. ಅದನ್ನು ಗೆಲ್ಲದೇ ಇದ್ದರೆ ಇನ್ನಿಲ್ಲದ ಸಮಸ್ಯೆ ಸೃಷ್ಟಿಆಗುತ್ತದೆ. ಆದರೆ ಗೆಲ್ಲುವುದಕ್ಕೆ ದೇವೇಗೌಡರ ಬೆಂಬಲ ಬೇಕು. ಮೈಸೂರಲ್ಲಿ ಒಕ್ಕಲಿಗರು ವಿಜಯಶಂಕರ್‌ ಜೊತೆ ನಿಂತರೆ, ಹಾಸನ ಮತ್ತು ತುಮಕೂರಿನಲ್ಲಿ ಕುರುಬರು ಪ್ರಜ್ವಲ್‌ ಮತ್ತು ದೇವೇಗೌಡರ ಜೊತೆ ನಿಲ್ಲುತ್ತಾರೆ. ಆದರೆ ಸಿದ್ದು ದಿಲ್ಲಿ ನಾಯಕರಿಗೆ ಹೇಳಿರುವ ಪ್ರಕಾರ, ಮಂಡ್ಯದಲ್ಲಿ ಪ್ರಯತ್ನ ಮಾಡುತ್ತೇನೆ, ಆದರೆ ಯಾವುದೇ ಗ್ಯಾರಂಟಿ ಕೊಡೋದಕ್ಕೆ ಆಗೋದಿಲ್ಲ. ಅಂದ ಹಾಗೆ ಕಳೆದ ವರ್ಷವಷ್ಟೇ ಕಾಂಗ್ರೆಸ್‌ ಜೊತೆ 3 ಗಂಟೆಯಲ್ಲಿ ಮೈತ್ರಿ ಮಾಡಿಕೊಂಡ ಜೆಡಿಎಸ್‌, ನಂತರ ಸಿದ್ದರಾಮಯ್ಯ ಅವರ ರಾಜಕಾರಣ ಮುಗೀತು ಎಂದು ಷರಾ ಬರೆದಿತ್ತು. ಈಗ ಅಸ್ತಿತ್ವಕ್ಕಾಗಿ ಮತ್ತೆ ಜೆಡಿಎಸ್‌ ನಾಯಕರೇ ಸಿದ್ದು ಮನೆಗೆ ಎಡತಾಕುತ್ತಿರುವುದು ವಿಪರ್ಯಾಸ. ರಾಜಕೀಯದಲ್ಲಿ ಸುಲ್ತಾನರು ಬದಲಾಗುತ್ತಲೇ ಇರುತ್ತಾರೆ.

- ಪ್ರಶಾಂತ್ ನಾತು, ಸುವರ್ಣನ್ಯೂಸ್ ದೆಹಲಿ ಪ್ರತಿನಿಧಿ

ರಾಜಕಾರಣದ ಸುದ್ದಿಗಾಗಿ   ಕ್ಲಿಕ್ ಮಾಡಿ 

click me!