ಮತದಾನದ ದಿನಕ್ಕೆ 90 ಸಾವಿರ ಪೊಲೀಸರು

By Web DeskFirst Published Apr 17, 2019, 8:59 AM IST
Highlights

 ಲೋಕಸಭಾ ಚುನಾವಣಾ ಸಮರದ ಕ್ಲೈಮಾಕ್ಸ್‌ಗೆ ಶಾಂತಿಯುತವಾಗಿ ತೆರೆ ಎಳೆಯಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದ್ದು, ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆಯುವ ಚುನಾವಣೆಗೆ ಒಟ್ಟು 90 ಸಾವಿರ ಪೊಲೀಸರನ್ನು ನಿಯೋಜಿಸಿದೆ.

ಬೆಂಗಳೂರು :  ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ ಹಾಗೂ ನಾಯಕರ ಭರ್ಜರಿ ಭಾಷಣಗಳಿಂದ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣಾ ಸಮರದ ಕ್ಲೈಮಾಕ್ಸ್‌ಗೆ ಶಾಂತಿಯುತವಾಗಿ ತೆರೆ ಎಳೆಯಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದ್ದು, ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆಯುವ ಚುನಾವಣೆಗೆ ಒಟ್ಟು 90 ಸಾವಿರ ಪೊಲೀಸರನ್ನು ನಿಯೋಜಿಸಿದೆ.

ನಗರದ ರಾಜ್ಯ ಪೊಲೀಸ್ ಇಲಾಖೆ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಅವರು, ನಿರ್ಭೀತಿಯಿಂದ ಏ.18 ಮತ್ತು 23 ರಂದು ಲೋಕಸಭಾ ಚುನಾವಣೆಗೆ ಮತ ಚಲಾವಣೆಗೆ ಉತ್ತಮ ವಾತಾವರಣ ನಿರ್ಮಿಸಲಾಗಿದೆ ಎಂದರು.

ಎರಡು ಹಂತದಲ್ಲಿ ಚುನಾವಣೆ ನಡೆಯುವ ಕಾರಣ ಬಂದೋಬಸ್ತ್ ಕಲ್ಪಿಸಲು ಅನುಕೂಲವಾಗಿದೆ. ಆದರೆ ದೇಶದ ಇತರೆ ಭಾಗದಲ್ಲೂ ಸಹ ಚುನಾವಣೆಗಳು ನಡೆಯುತ್ತಿರುವುದರಿಂದ ಈ ಬಾರಿ ಚುನಾವಣೆಗೆ ಕೇಂದ್ರ ಭದ್ರತಾ ಪಡೆಗಳ ಸೇವೆ ನಿರೀಕ್ಷಿತ ಮಟ್ಟದಲ್ಲಿ ಲಭ್ಯವಾಗಿಲ್ಲ.  ಹಾಗಿದ್ದರೂ ಲಭ್ಯವಾದ ಕೇಂದ್ರ ಪಡೆಗಳ ಜತೆಗೆ ರಾಜ್ಯದ ಸಿಐಡಿ, ಕಾರಾಗೃಹ, ಅರಣ್ಯ, ಸಶಸ್ತ್ರ ಮೀಸಲು ಪಡೆಗಳು ಹಾಗೂ ಗೃಹ ರಕ್ಷಕ ದಳ ಸೇರಿದಂತೆ ಪೊಲೀಸರ ಬಳಸಿಕೊಂಡು ಚುನಾವಣೆಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದರು. 

ಕೇಂದ್ರ ಭದ್ರತಾ ಪಡೆಯ 55 ಕಂಪನಿಗಳು ಮೊದಲ ಹಂತದ ಚುನಾವಣೆಗೆ ಹಾಗೂ ಎರಡನೇ ಹಂತದ ಚುನಾವಣೆಗೆ 57 ಕಂಪನಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಇದು ವರೆಗೆ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿ ಸಿದರೆ ಕಾನೂನು ಮತ್ತು ಸುವ್ಯವಸ್ಥೆ ಭಂಗ ಉಂಟಾಗುವ ಅನಾಹುತಗಳು ಸಂಭವಿಸಿಲ್ಲ. ಇದೇ ರೀತಿ ಮತದಾನವನ್ನು ಸಹ ಮುಕ್ತವಾಗಿ ನಡೆಸಲು ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು. 

ನಕ್ಸಲ್ ಭಯವಿಲ್ಲ- ಡಿಜಿಪಿ: ರಾಜ್ಯವು ಎಂಟು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಿಂದ ಮುಕ್ತವಾಗಿದೆ. 2018 ರಲ್ಲಿ ಚಿಕ್ಕಮಗಳೂರು,  ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ಆದರೆ ಯಾವುದೇ ಅಹಿತಕರ ಘಟನೆಗಳು, ಕರಪತ್ರ ಹಂಚುವಿಕೆ, ಚುನಾವಣಾ ವಿರೋಧಿ ಹೇಳಿಕೆಗಳು ಹಾಗೂ ಸಾರ್ವಜನಿಕ ಸಭೆಗಳನ್ನು ಅವರು ನಡೆಸಿದ ಬಗ್ಗೆ ವರದಿಯಾಗಿಲ್ಲ. ಕೆಲ ದಿನಗಳ ಹಿಂದೆ ಕೇರಳದಲ್ಲಿ ನಕ್ಸಲೀಯರ ಎನ್‌ಕೌಂಟರ್‌ಗಳಾಗಿವೆ.

ಹೀಗಾಗಿ ಕೇರಳ ಮತ್ತು ತಮಿಳುನಾಡು ಸಂಪರ್ಕಿಸುವ ರಾಜ್ಯದ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದೇವೆ. ದಿನನಿತ್ಯ ಕೂಂಬಿಂಗ್ ಮತ್ತು ರಾತ್ರಿ ವೇಳೆ ಗಸ್ತು ನಡೆಸಲಾಗುತ್ತಿದೆ. ನಕ್ಸಲ್ ಸಂಚಾರದ ಸ್ಥಳದಲ್ಲಿರುವ ಚುನಾವಣಾ ಮತಗಟ್ಟೆಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದು ವಿವರಿಸಿದರು. 

ಮಂಡ್ಯ, ಹಾಸನ ಸೂಕ್ಷ್ಮ ಕ್ಷೇತ್ರಗಳು: ರಾಜ್ಯದಲ್ಲಿ ಒಟ್ಟು 58,225 ಮತಗಟ್ಟೆಗಳಿವೆ. ಇವುಗಳಲ್ಲಿ 11992  ಸೂಕ್ಷ್ಮ ಹಾಗೂ 46233 ಸಾಮಾನ್ಯ ಮತ ಕೇಂದ್ರಗಳಾಗಿ ಗುರುತಿಸಲಾಗಿದೆ. ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳ ಪೈಕಿ ಮಂಡ್ಯ, ಹಾಸನ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಸೂಕ್ಷ್ಮ ಕ್ಷೇತ್ರಗಳಾಗಿ ಗುರುತಿಸಲಾಗಿದೆ. ಇವುಗಳಿಗೆ ಅತಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ ಎಂದು ಇದೇ ವೇಳೆ ಎಡಿಜಿಪಿ ಕಮಲ್ ಪಂತ್ ಮಾಹಿತಿ ನೀಡಿದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!