ಮೋದಿ ಕಾಪ್ಟರ್‌ನಲ್ಲಿ ಹೋಗಿ ಬಾಂಬ್‌ ಹಾಕಿದ್ರಾ?

By Web DeskFirst Published Apr 17, 2019, 8:59 AM IST
Highlights

ಮೋದಿ ಕಾಪ್ಟರ್‌ನಲ್ಲಿ ಹೋಗಿ ಬಾಂಬ್‌ ಹಾಕಿದ್ರಾ?| ಮೋದಿ ಸರ್ಜಿಕಲ್‌ ಸ್ಟೆ್ರೖಕ್‌ ಅನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ: ಸಿದ್ದು| ಬಿಎಸ್‌ವೈ ತಿಪ್ಪರಲಾಗ ಹಾಕಿದರೂ ಸಮ್ಮಿಶ್ರ ಸರ್ಕಾರ ಬೀಳಿಸಲಸಾಧ್ಯ| 

ಮೈಸೂರು[ಏ.17]: ಸರ್ಜಿಕಲ್‌ ಸ್ಟ್ರೖಕ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಯುದ್ಧ ಮಾಡೋದು ಯೋಧರು, ಮೋದಿ ಏನು ಹೆಲಿಕಾಪ್ಟರ್‌ನಲ್ಲಿ ಹೋಗಿ ಬಾಂಬ್‌ ಹಾಕಿದ್ರಾ?, ಗನ್‌ ತೆಗೆದುಕೊಂಡು ಹೋಗಿದ್ರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮಂಗಳವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದ ಹಾಗೂ ಚಾಮರಾಜಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಪಕ್ಷದ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಸರ್ಜಿಕಲ್‌ ಸ್ಟೆ್ರೖಕ್‌ ಮಾಡಿದ್ದು ನಮ್ಮ ಯೋಧರು. ಹಿಂದೆಯೂ ಅವರು ಆ ಕೆಲಸ ಮಾಡಿದ್ರು, ಈಗಲೂ ಮಾಡಿದ್ದಾರೆ. ಅವರಿಗೆ ನಮ್ಮ ಸೆಲ್ಯೂಟ್‌. 1948ರಲ್ಲಿ ಮೊದಲ ಯುದ್ಧ ಆದಾಗ ಮೋದಿ ಹುಟ್ಟಿರಲೇ ಇಲ್ಲ ಎಂದರು.

ಮೋದಿ ಸಾಧನೆ ಬಗ್ಗೆ ಮಾತನಾಡಲ್ಲ:

ಪ್ರಧಾನಿ ಮೋದಿ ದೇಶದ ಅಭಿವೃದ್ಧಿ ಹಾಗೂ ತಮ್ಮ ಐದು ವರ್ಷದ ಸಾಧನೆ ಏನು ಎಂಬುದರ ಬಗ್ಗೆ ಮಾತನಾಡಲ್ಲ. ಹೀಗಾಗಿ ದೇಶದ ಜನತೆ ಬಿಜೆಪಿಯನ್ನು ನಂಬಲ್ಲ ಎಂದರು.

ರಾಮಮಂದಿರಕ್ಕೆ ವಿರೋಧ ಇಲ್ಲ:

ರಾಮಮಂದಿರ ನಿರ್ಮಾಣಕ್ಕೆ ನಮ್ಮ ತಕರಾರಿಲ್ಲ. ಆದರೆ, ಬಿಜೆಪಿ 11 ವರ್ಷ ಅಧಿಕಾರದಲ್ಲಿತ್ತು. ಅಂದು ಏಕೆ ರಾಮಮಂದಿರ ನಿರ್ಮಿಸಲಿಲ್ಲ. ಈಗ ರಾಜಕೀಯ ಸ್ಟಂಟ್‌ಗಾಗಿ ಕೇಂದ್ರ ಲೋಕಪಾಲರನ್ನು ನೇಮಕ ಮಾಡಿದೆ ಎಂದರು.

ತಿಪ್ಪರಲಾಗ ಹಾಕಿದ್ರೂ ಬೀಳಲ್ಲ ಸರ್ಕಾರ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಪ್ಪರಲಾಗ ಹೊಡೆದರೂ ರಾಜ್ಯ ಸಮ್ಮಿಶ್ರ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ತಿಳಿಸಿದರು.

ಲೋಕಸಭಾ ಚುನಾವಣೆ ಫಲಿತಾಂಶ ಬಂದ ದಿನವೇ ರಾಜ್ಯ ಸಮ್ಮಿಶ್ರ ಸರ್ಕಾರ ಉರುಳುತ್ತದೆ. ಹಿಂದಿನಿಂದಲೂ ಸರ್ಕಾರ ಉರುಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಅದು ಅಸಾಧ್ಯ ಎಂದರು.

ಮೈಸೂರು ಅಥವಾ ತುಮಕೂರು-ಎರಡಲ್ಲಿ ಒಂದನ್ನು ಜೆಡಿಎಸ್‌ನವರು ಕೇಳಿದ್ದರು. ನಾನೇನು ಮೈಸೂರಿಗೆ ಹಠ ಹಿಡಿದಿರಲಿಲ್ಲ. ಹಿಂದಿನ ಫಲಿತಾಂಶ ಹಾಗೂ ಮತ ಪಡೆದಿರುವುದರ ಆಧಾರದ ಮೇಲೆ ನಮಗೆ ಮೈಸೂರು ಬೇಕು ಎಂದು ಕೇಳಿದ್ದೆ. ದೇವೇಗೌಡರು ಬೆಂಗಳೂರು ಉತ್ತರ ಬದಲು ತುಮಕೂರಿನಿಂದಲೇ ಕಣಕ್ಕಿಳಿಯಲು ಬಯಸಿದ್ದರಿಂದ ಗೊಂದಲ ಬಗೆಹರಿಯಿತು ಎಂದು ಸ್ಪಷ್ಟನೆ ನೀಡಿದರು.

ಈಗ ರಾಹು-ಕೇತು ಇಲ್ಲ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಹು- ಕೇತುಗಳೆಲ್ಲ ಸೇರಿಕೊಂಡು ನನ್ನನ್ನು ಸೋಲಿಸಿದವು ಎಂದಿದ್ದೀರಾ? ಈಗ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಈಗ ರಾಹು- ಕೇತುಗಳಿಲ್ಲವೇ? ಎಂದು ಕೇಳಿದಾಗ, ಏಯ್‌ ಅವೆಲ್ಲಾ ಏನಿಲ್ಲ ಬಿಡಪ್ಪ, ಈಗ ಮೈತ್ರಿ ಮಾಡಿಕೊಂಡು ಎಲ್ಲಾ ಒಟ್ಟಾಗಿಯೇ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!