Hijab Row: ಏಕರೂಪ ಸಂಹಿತೆ ಬಗ್ಗೆ ಅಂಬೇಡ್ಕರ್‌ ಹೇಳಿದ್ದೇನು?

By Kannadaprabha News  |  First Published Feb 22, 2022, 12:25 PM IST

ಭಾರತದಲ್ಲಿ ಮುಸ್ಲಿಮರ ಸಾಮಾಜಿಕ ಕೆಡುಕುಗಳು ಮತ್ತು ಮುಸ್ಲಿಂ ದಾಳಿಕೋರರ ಬಗ್ಗೆ ಅತ್ಯಂತ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿದ ಅಗ್ರ ಪಂಥೀಯರಲ್ಲಿ ಅಂಬೇಡ್ಕರರು ಮೊದಲಿಗರು.


ಇತ್ತೀಚೆಗೆ ಉಡುಪಿಯಲ್ಲಿ ಪ್ರಾರಂಭವಾದ ಹಿಜಾಬ್‌ ವಿವಾದವು ನ್ಯಾಯಾಲಯದ ಸುಪರ್ದಿಯಲ್ಲಿ ಇರುವಾಗಲೇ, ಬಹುಸಂಖ್ಯಾತರ ಸಂಸ್ಕೃತಿ ನಾಶಕ್ಕೆ ಹುನ್ನಾರವಾಗಿ ಮಾರ್ಪಾಡಾಗುತ್ತಿರುವ ಹಿನ್ನೆಲೆಯಲ್ಲಿ, ಏಕರೂಪ ನಾಗರಿಕ ಸಂಹಿತೆಗಾಗಿ ಮರು ಒತ್ತಾಯ ಶುರುವಿಟ್ಟುಕೊಂಡಿದೆ.

75 ವರ್ಷಗಳಿಂದಲೂ ಭಾರತ ಜಾತ್ಯತೀತ ರಾಷ್ಟ್ರ, ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವುದು ಅಸಾಧ್ಯ. ಇದರಿಂದ ಮುಸ್ಲಿಮರ ವೈಯಕ್ತಿಕ ಕಾನೂನುಗಳಿಗೆ ಧಕ್ಕೆ ಆಗುತ್ತದೆ ಎಂದು ಕಾಂಗ್ರೆಸ್‌ ಮತ್ತು ಎಡಪಂಥೀಯ ವರ್ಗ ಹೇಳುತ್ತಲೇ ಬಂದಿವೆ. ಹಾಗಾದರೆ ಈ ಕುರಿತು ಸಂವಿಧಾನ ಶಿಲ್ಪಿ ಅಂಬೇಡ್ಕರರು ಯಾವ ಅಭಿಪ್ರಾಯ ಹೊಂದಿದ್ದರು ಎಂದು ಅವಲೋಕಿಸುವುದು ಅತ್ಯಗತ್ಯವಾಗಿದೆ.

Latest Videos

undefined

ಅಂಬೇಡ್ಕರ್‌ ಅಭಿಪ್ರಾಯವೇನು?

ಭಾರತದಲ್ಲಿ ಮುಸ್ಲಿಮರ ಸಾಮಾಜಿಕ ಕೆಡುಕುಗಳು ಮತ್ತು ಮುಸ್ಲಿಂ ದಾಳಿಕೋರರ ಬಗ್ಗೆ ಅತ್ಯಂತ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿದ ಅಗ್ರ ಪಂಥೀಯರಲ್ಲಿ ಅಂಬೇಡ್ಕರರು ಮೊದಲಿಗರು. ಅಂದು ಸಂವಿಧಾನ ರಚನಾ ಸಭೆಯಲ್ಲಿ (ನವೆಂಬರ್‌ 23, 1948) ಮಹಮ್ಮದ್‌ ಇಸ್ಮಾಯಿಲ್‌, ನಜಿರುದ್ದೀನ್‌ ಅಹ್ಮದ್‌, ಪಾಕೀರ್‌ ಸಾಹೇಬರು ಸಂವಿಧಾನದ ಭಾಗವಾಗಿರುವ 44ನೇ ವಿಧಿ (ಅಂದು ಸೂಚಿತ 35ನೇ ವಿಧಿ) ಜಾರಿಗೆ ತರುವುದರಿಂದ, ಮುಸ್ಲಿಮರ ವೈಯಕ್ತಿಕ ಹಕ್ಕುಗಳು ಧಮನಗೊಳ್ಳುತ್ತವೆ. ಹಾಗಾಗಿ ಈ ವಿಧಿ​ಯನ್ನು ಕೈಬಿಡಬೇಕೆಂದು ಕಠೋರ ಪ್ರತಿಪಾದನೆ ಮಾಡಿದರು. ಈ ಸಂದರ್ಭದಲ್ಲಿ ಷರಿಯತ್‌ಗಾಗಿ ಈ ದೇಶದ ಐಕ್ಯತೆಯ ಭಾಗವಾದ ಏಕರೂಪ ನಾಗರಿಕ ಸಂಹಿತೆಯನ್ನು ವಿರೂಪಗೊಳಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರರು ಸಾರಿದರು.

ತಿದ್ದುಪಡಿ ಒಪ್ಪಲಾರೆ

ಅಂದಿನ ಚರ್ಚೆಯಲ್ಲಿ, ಗೌರವಾನ್ವಿತ ಡಾ.ಬಿ.ಆರ್‌.ಅಂಬೇಡ್ಕರ್‌ , ‘ಮಾನ್ಯರೇ, ಈ ಅನುಚ್ಛೇದಕ್ಕಾಗಿ ಮಂಡಿಸಲಾದ ತಿದ್ದುಪಡಿಗಳನ್ನು ಒಪ್ಪಿಕೊಳ್ಳಲಾರೆ. ಈ ವಿಷಯವನ್ನು ವ್ಯವಹರಿಸುತ್ತ ಈ ದೇಶಕ್ಕೆ ಒಂದು ನಾಗರಿಕ ಸಂಹಿತೆ ಇರಬೇಕು ಅಥವಾ ಇರಬಾರದು ಎನ್ನುವ ಪ್ರಶ್ನೆಯ ಒಳಿತುಗಳನ್ನು ಚರ್ಚಿಸಲು ನಾನು ಕೇಳಿಕೊಳ್ಳುವುದಿಲ್ಲ. ನಾನು ತಿಳಿದುಕೊಂಡಂತೆ ಆ ವಿಷಯವನ್ನು ಯುಕ್ತ ರೀತಿಯಲ್ಲಿ ಸಾಂದರ್ಭಿಕವಾಗಿ ನನ್ನ ಸ್ನೇಹಿತರಾದ ಮುನ್ಷಿ, ಅಲ್ಲದೆ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್‌ ಚರ್ಚಿಸಿದ್ದಾರೆ. ಮೂಲಭೂತ ಹಕ್ಕಿಗೆ ತಿದ್ದುಪಡಿಯನ್ನು ಮಂಡಿಸಲಾದಾಗ ಈ ವಿಷಯದ ಮೇಲೆ ಪೂರ್ಣ ಪ್ರಮಾಣದ ಟಿಪ್ಪಣಿಯನ್ನು ಮಾಡಲು ನನ್ನಿಂದ ಸಾಧ್ಯ ಮತ್ತು ಈ ಕಾರಣಕ್ಕಾಗಿ ಈ ವಿಷಯವಾಗಿ ನಾನು ಹೆಚ್ಚು ಚರ್ಚಿಸುವುದಿಲ್ಲ.

ನನ್ನ ಸ್ನೇಹಿತ ಹುಸೇನ್‌ ಇಮಾಮರು, ತಿದ್ದುಪಡಿಗಳಿಗೆ ಬೆಂಬಲ ಸೂಚಿಸುತ್ತ ಇಂತಹ ವಿಶಾಲವಾದ ದೇಶಕ್ಕೆ ಸಮಾನವಾದ ಕಾನೂನು ಸಂಹಿತೆಯನ್ನು ಹೊಂದಲು ಸಾಧ್ಯವೇ ಮತ್ತು ಆಶಿಸುವಂತಹದ್ದೇ ಎಂದು ಪ್ರಶ್ನಿಸಿದ್ದಾರೆ. ಪ್ರಶ್ನೆ ಉತ್ತಮವಾಗಿದೆ, ಮಾನವ ಸಂಬಂಧದ ಎಲ್ಲಾ ಸ್ತರಗಳನ್ನೂ ಒಳಗೊಳ್ಳುವ ಏಕರೂಪದ ಕಾನೂನು ಸಂಹಿತೆಯನ್ನು ನಾವು ಹೊಂದಿದ್ದೇವೆ ಎನ್ನುವ ಸರಳ ಸತ್ಯ ಗೊತ್ತಿದ್ದರೂ, ಅವರ ಮಾತು ಕೇಳಿ ನಾನು ಆಶ್ಚರ್ಯಚಕಿತನಾಗಿದ್ದೇನೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.

ದಂಡ ಸಂಹಿತೆ ಮತ್ತು ಅಪರಾಧ ಸಂಹಿತೆಯಲ್ಲಿರುವಂತಹ ಏಕರೂಪದ ಮತ್ತು ಸಮಗ್ರ ಅಪರಾಧ ಸಂಹಿತೆ ದೇಶದಲ್ಲಿ ಚಾಲನೆಯಲ್ಲಿದೆ. ನಮ್ಮಲ್ಲಿ ಆಸ್ತಿ ಹಕ್ಕುಗಳಿಗೆ ಸಂಬಂಧಿ​ತ ಮತ್ತು ಈಗಾಗಲೇ ಚಲಾವಣೆಯಲ್ಲಿರುವ ವರ್ಗಾವಣೆ ಕಾಯ್ದೆ ಕೂಡ ಇದೆ. ಅನಂತರ ನಮ್ಮಲ್ಲಿ ಸಂಧಾನ ಸೂತ್ರ ​ನಿಯಮ ಇದೆ.

35ನೇ ಅನುಚ್ಛೇದ ಏಕೆ ಬೇಕು?

ತಾತ್ಪರ್ಯದಲ್ಲಿ ಏಕರೂಪವಾಗಿರುವ ಮತ್ತು ಸಮಗ್ರ ದೇಶಕ್ಕೆ ಅಳವಡಿಸಲು ಯೋಗ್ಯವಾದ ನಾಗರಿಕ ಕಾನೂನು ಪ್ರವೇಶಿಸಬಾರದ ಯಾವುದಾದರೂ ಕ್ಷೇತ್ರವಿದ್ದರೆ, ಅದು ಮದುವೆ ಮತ್ತು ಉತ್ತರಾಧಿ​ಕಾರ. ಈ ಪುಟ್ಟಮೂಲೆಯನ್ನು ನಾವು ಇಲ್ಲಿಯವರೆಗೂ ಗೆಲ್ಲಲು ಅಸಾಧ್ಯವಾಗಿದೆ ಮತ್ತು ಅಂತಹ ಬದಲಾವಣೆಯನ್ನು ತರಲು 35ನೇ ಅನುಚ್ಛೇದ ಸಂವಿಧಾನದ ಭಾಗವಾಗಬೇಕೆಂದು ಬಯಸುವವರ ಉದ್ದೇಶವು ಇದೇ ಆಗಿದೆ. ಹಾಗಾಗಿ, ನಾವು ಅಂತಹದ್ದೊಂದು ಕಾರ್ಯವನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಬೇಕೇ, ಬೇಡವೇ? ಎನ್ನುವ ವಾಗ್ವಾದವು ವಾಸ್ತವದಲ್ಲಿ, ನಾಗರಿಕ ಸಂಹಿತೆಯು ಆವರಿಸಿರುವ ದೇಶದ ಎಲ್ಲಾ ಕ್ಷೇತ್ರಗಳನ್ನು ನಾವು ಪರಿಗಣಿಸಿದ್ದೇವೆ ಎಂಬ ಸರಳ ಕಾರಣಕ್ಕಾಗಿ ಎಲ್ಲೋ ತಪ್ಪಾಗಿ ಭಾವಿಸಲ್ಪಟ್ಟಿದೆ ಎಂದು ನನಗನಿಸುತ್ತದೆ. ಹಾಗಾಗಿ ಇದನ್ನು ನಾವು ಸಾಧಿ​ಸಲು ಸಾಧ್ಯವೇ ಎಂದು ಈಗ ಕೇಳುವುದು ತುಂಬ ವಿಳಂಬವೆನಿಸುತ್ತದೆ. ನಾನು ಹೇಳುವುದು ನಾವದನ್ನು ಸಾಧಿ​ಸಿದ್ದೇವೆ ಎಂದು.

ತಿದ್ದುಪಡಿಯ ವಿಷಯಕ್ಕೆ ಬರುವುದಾದರೆ, ನಾನು ಕೇವಲ ಎರಡು ಗಮನಾರ್ಹ ಅಂಶವನ್ನು ಹೇಳಬಯಸುತ್ತೇನೆ. ನಾನು ಗಮನಿಸಿದ ಮೊದಲ ವಿಷಯವು ಈ ತಿದ್ದುಪಡಿಗಳನ್ನು ಮಂಡಿಸಿದವರ ಪ್ರಕಾರ, ಮುಸ್ಲಿಂ ವೈಯಕ್ತಿಕ ಕಾನೂನು ಈ ದೇಶಕ್ಕೆ ಸಂಬಂಧಿ​ಸಿದಂತೆ ಅಪಭ್ರಂಶಗೊಳಿಸಲಾಗದ, ಸಂಪೂರ್ಣ ಭಾರತದಲ್ಲಿ ಏಕರೂಪವಾಗಿರುವಂತಹದ್ದು ಎಂದು. ನಾನು ಈ ಅಭಿಪ್ರಾಯವನ್ನು ಸವಾಲಿಗೆಳೆಯ ಬಯಸುತ್ತೇನೆ.

ಷರಿಯತ್‌ ಕಾನೂನು ಇರಲಿಲ್ಲ

ಈ ಅನುಚ್ಛೇದದ ಬಗ್ಗೆ ಮಾತನಾಡಿದ ನನ್ನೆಲ್ಲಾ ಸ್ನೇಹಿತರು ಬಹುಶಃ 1935ರ ವರೆಗೆ ವಾಯವ್ಯ ಗಡಿಯ ಪ್ರಾಂತ್ಯಗಳು ಷರಿಯತ್‌ ಕಾನೂನಿಗೆ ಒಳಪಟ್ಟಿರಲಿಲ್ಲ ಎಂಬುದನ್ನು ಮರೆತಿರಬೇಕು. ಅವು ಉತ್ತರಾಧಿ​ಕಾರ ಮತ್ತು ಇತರ ವಿಷಯಗಳಲ್ಲಿ ಎಷ್ಟರ ಮಟ್ಟಿಗೆ ಹಿಂದೂ ಕಾನೂನನ್ನು ಅನುಸರಿಸುತ್ತಿದ್ದವೆಂದರೆ, 1939ರಲ್ಲಿ ಕೇಂದ್ರ ಶಾಸಕಾಂಗವು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿ ವಾಯವ್ಯ ಗಡಿ ಪ್ರಾಂತ್ಯದ ಮುಸ್ಲಿಮರಿಗೆ ಅನ್ವಯವಾಗಿದ್ದ ಹಿಂದೂ ಕಾನೂನನ್ನು ಹಿಂಪಡೆದು, ಷರಿಯತ್‌ ಕಾನೂನನ್ನು ಅಳವಡಿಸಲಾಯಿತು.

ವಾಯವ್ಯ ಗಡಿ ಪ್ರಾಂತ್ಯವಲ್ಲದೆ 1937ರ ತನಕ ಭಾರತದ ಉಳಿದ ಭಾಗಗಳು ಎಂದರೆ ಏಕೀಕೃತ ಪ್ರಾಂತ್ಯಗಳು, ಕೇಂದ್ರೀಯ ಪ್ರಾಂತ್ಯಗಳು, ಬಾಂಬೆ ಇತ್ಯಾದಿ ಕಡೆಗಳಲ್ಲಿನ ಮುಸ್ಲಿಮರು ಉತ್ತರಾಧಿ​ಕಾರದ ವಿಷಯದಲ್ಲಿ ಹಿಂದೂ ಕಾನೂನನ್ನೇ ಅನುಸರಿಸುತ್ತಾರೆ ಎಂಬುದನ್ನು ಅವರು ಮರೆತಿದ್ದಾರೆ. ಷರಿಯತ್‌ ಕಾನೂನನ್ನು ಅನುಸರಿಸುತ್ತಿದ್ದ ಇತರೆ ಮುಸ್ಲಿಮರಿಗೆ ಸರಿಸಮಾನವಾದ ಸಮತಲಕ್ಕೆ ಇವರನ್ನು ತರಲು 1937ರಲ್ಲಿ ಶಾಸಕಾಂಗವು ಮಧ್ಯೆ ಪ್ರವೇಶಿಸಿ ದೇಶದ ಉಳಿದ ಭಾಗಗಳಲ್ಲಿಯೂ ಷರಿಯತ್‌ ಕಾನೂನನ್ನು ಅಳವಡಿಸಿತು.

ಧರ್ಮದ ಹಂಗಿಲ್ಲದ ಕಾನೂನು

ಶ್ರೀ ಕರುಣಾಕರ ಮೆನನ್‌ ಅವರಿಂದ ನನಗೆ ಸಿಕ್ಕ ಮಾಹಿತಿ ಏನೆಂದರೆ, ಉತ್ತರ ಮಲಬಾರಿನಲ್ಲಿ ಹಿಂದೂ, ಮುಸ್ಲಿಮರಾದಿಯಾಗಿ ಎಲ್ಲರಿಗೂ ಮರುಮಕ್ಕತಾಯಂ ಕಾನೂನು ಅನ್ವಯಿಸುತ್ತದೆ. ಮರುಮಕ್ಕತಾಯಂ ಕಾನೂನು ಪಿತೃಪ್ರಧಾನ ಕಾನೂನಿನ ರೂಪವಾಗಿರದೆ, ಮಾತೃಪ್ರಧಾನ ಕಾನೂನಿನ ರೂಪ ಎಂಬುವುದನ್ನು ಇಲ್ಲಿ ನೆನಪಿಡಬೇಕು. ಹಾಗಾಗಿ ಉತ್ತರಮಲಬಾರಿನ ಮುಸಲ್ಮಾನರು ಇಂದಿನವರೆಗೂ ಮರುಮಕ್ಕತಾಯಂ ಕಾನೂನನ್ನು ಪಾಲಿಸುತ್ತಿದ್ದಾರೆ.

ಆ ಕಾರಣದಿಂದ ಸನಾತನ ಕಾಲದಿಂದಲೂ ಪರಿಪಾಲಿಸಿಕೊಂಡು ಬಂದಿರುವ ಮುಸ್ಲಿಂ ಕಾನೂನು ಬದಲಾಯಿಸಲಾರದ ಕಾನೂನು ಆಗಿರುವುದೆಂದು ವರ್ಗೀಕೃತ ಹೇಳಿಕೆಯನ್ನು ನೀಡುವುದು ನಿರುಪಯುಕ್ತವಾಗಿದೆ. ಕೆಲ ಭಾಗಗಳಲ್ಲಿ ಅದರಂತಹ ಕಾನೂನು ಅನ್ವಯವಾಗುವಂತಹದಲ್ಲ, ಆದರೂ ಅದನ್ನು ಹತ್ತು ವರ್ಷಗಳ ಹಿಂದೆ ಅನ್ವಯಮಾಡಲಾಗಿದೆ. ಯಾವುದೇ ಧರ್ಮದ ಹಂಗಿಲ್ಲದೆ ಎಲ್ಲಾ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಅಳವಡಿಸುವ ಉದ್ದೇಶಕ್ಕಾಗಿ ಹಿಂದೂ ಕಾನೂನಿನ ಕೆಲ ಭಾಗಗಳನ್ನು, ಅವು ಹಿಂದೂ ಕಾನೂನಿನಲ್ಲಿನವು ಎಂಬುದಕ್ಕಿಂತ ಅವು ಬಹುಸೂಕ್ತವೆಂದು 35ನೇ ಅನುಚ್ಛೇದವು ಬಿಂಬಿಸುವ ಹೊಸ ನಾಗರಿಕ ಸಂಹಿತೆಗಳಲ್ಲಿ ಅಳವಡಿಸಲಾಗಿದೆ.

ಮುಸ್ಲಿಂ ಭಾವನೆಗೆ ಧಕ್ಕೆ ಇಲ್ಲ

ನಾಗರಿಕ ಸಂಹಿತೆಯನ್ನು ರೂಪಿಸಿದವರು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡಿದ್ದಾರೆ ಎಂದು ಹೇಳುವ ಸನ್ನಿವೇಶವನ್ನು ಸೃಷ್ಟಿಮಾಡಿಕೊಡಲಾರದೆಂದು ನಾನು ಗಾಢವಾಗಿ ನಂಬುತ್ತೇನೆ. ಈ ಬಗ್ಗೆ ಭರವಸೆ ಕೊಡುವುದು ನನ್ನ ಎರಡನೆಯ ಅಭಿಪ್ರಾಯ. ಈ ವಿಷಯಗಳಲ್ಲಿ ಅವರ ಭಾವನೆಗಳನ್ನು ಸ್ವಲ್ಪ ಅರ್ಥೈಸಿಕೊಳ್ಳಬಲ್ಲೆ. ಈ 35ನೇ ಅನುಚ್ಛೇದವನ್ನು ಸ್ವಲ್ಪ ಹೆಚ್ಚಾಗಿಯೇ ವಿಶ್ಲೇಷಿಸಿದಂತೆನಿಸುತ್ತದೆ. ಆದರೆ ಆ ಅನುಚ್ಛೇದವು ದೇಶದ ನಾಗರಿಕರಿಗೆ ನಾಗರಿಕ ಸಂಹಿತೆಯನ್ನು ಭದ್ರಪಡಿಸಲು ಸರ್ಕಾರವು ಶ್ರಮಿಸಬೇಕು ಎಂದು ಮಾತ್ರ ಹೇಳುತ್ತದೆ.

ಅದು ಸಂಹಿತೆಯ ರಚನೆಯ ಅನಂತರ ಸರ್ಕಾರವು ನಾಗರಿಕರ ಮೇಲೆ, ನಾಗರಿಕರೆನ್ನುವ ಕಾರಣಕ್ಕಾಗಿ, ಬಲವಂತದಿಂದ ಹೇರಬೇಕೆಂದು ಮಾತ್ರ ಹೇಳುವುದಿಲ್ಲ. ಪ್ರಾಥಮಿಕ ಹಂತದಲ್ಲಿ ಸಂಹಿತೆಯ ಅಳವಡಿಕೆಯು ಸ್ವಯಂಪ್ರೇರಿತವಾಗಲು ಸಂಹಿತೆಯನ್ನು ಅನುಸರಿಸಲು ಸಿದ್ಧರಿದ್ದೇವೆ ಎಂದು ಘೋಷಣೆ ಮಾಡುವವರಿಗೆ ಮಾತ್ರ ಈ ಸಂಹಿತೆ ಅನ್ವಯಿಸಬೇಕು ಎಂದು ಮುಂಬರುವ ಲೋಕಸಭೆಯು ಮುನ್ನುಡಿ ಬರೆಯುವುದು ಸರ್ವಥಾ ಸಾಧ್ಯವಿದೆ. ಅಂಥ ಕೆಲ ವಿಧಾನಗಳ ಮೂಲಕ ಲೋಕಸಭೆಯು ಹಿನ್ನೆಲೆಯನ್ನು ಅರಿತುಕೊಳ್ಳಬಹುದು.

ಆತಂಕಪಡಬೇಕಿಲ್ಲ

ಇದು ಹೊಸ ವಿಧಾನವೇನೂ ಅಲ್ಲ, ವಾಯವ್ಯ ಗಡಿ ಆಗದ ಪ್ರಾಂತ್ಯಗಳನ್ನು ಹೊರತುಪಡಿಸಿ ಇತರೆ ಪ್ರಾಂತ್ಯಗಳಲ್ಲಿ 1937ರ ಸುಮಾರಿಗೆ ಷರಿಯತ್‌ ​ನಿಯಮದಲ್ಲಿ ಇದನ್ನು ಅಳವಡಿಸಿಕೊಳ್ಳಲಾಯಿತು. ಈ ಅನುಚ್ಛೇದವು ಇಲ್ಲೊಂದು ಮುಸಲ್ಮಾನರು ಅನುಸರಿಸುವ ಷರಿಯತ್‌ ಕಾನೂನಿದೆ, ಅದಕ್ಕೆ ಬದ್ಧನಾಗಿರುವ ಇಂಗಿತವುಳ್ಳ ಓರ್ವ ಮುಸಲ್ಮಾನ ರಾಜ್ಯದ ಓರ್ವ ಅ​ಧಿಕಾರಿಯ ಬಳಿ ಹೋಗಿ ತಾನು ಅದಕ್ಕೆ ಬದ್ಧನಾಗಿರುವನೆಂದು ಘೋಷಿಸಬೇಕು ಮತ್ತು ಹಾಗೆ ಘೋಷಣೆ ಮಾಡಿದ ಅನಂತರ ಆತ ಮತ್ತು ಆತನ ವಾರಸುದಾರರು ಷರಿಯತ್‌ ಕಾನೂನಿಗೆ ಒಳಪಡುತ್ತಾರೆ ಎಂದು ಹೇಳುತ್ತದೆ. ಈ ರೀತಿಯಾದ ಅವಕಾಶವನ್ನು ಪರಿಚಯಿಸಲು ಲೋಕಸಭೆಗೆ ನಿಜವಾಗಿಯೂ ಸಾಧ್ಯವಿದೆ. ಹೀಗಾದಲ್ಲಿ ನನ್ನ ಸ್ನೇಹಿತರು ತೋಡಿಕೊಂಡ ಆತಂಕಗಳು ಸಂಪೂರ್ಣವಾಗಿ ಮಾಯವಾಗಲಿವೆ. ಹೀಗಾಗಿ ನಾನು ಈ ತಿದ್ದುಪಡಿಗಳಲ್ಲಿ ಹುರುಳಿಲ್ಲವೆಂದು ಮಂಡಿಸುತ್ತ ಅವುಗಳನ್ನು ವಿರೋಧಿ​ಸುತ್ತೇನೆ.

ಅಂದು ಸೂಚಿತವಾಗಿದ್ದ ಎಲ್ಲಾ ತಿದ್ದುಪಡಿಗಳನ್ನು ಅಂತಿಮವಾಗಿ ತಿರಸ್ಕರಿಸಲಾಯಿತು. ಈ ಪ್ರಸ್ತಾವವನ್ನು ಅಂಗೀಕರಿಸಲಾಯಿತು. 35ನೇ ಅನುಚ್ಛೇದವನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಆದ್ದರಿಂದ ಏಕರೂಪ ನಾಗರಿಕ ಸಂಹಿತೆಯ ಶೀಘ್ರ ಜಾರಿಗೆ, ಪ್ರಜ್ಞಾವಂತ ನಾಗರಿಕ ಸಮಾಜ ಒತ್ತಾಯಿಸುತ್ತಿದೆ.

- ಡಾ.ಸುಧಾಕರ ಹೊಸಳ್ಳಿ, ಸಂವಿಧಾನ ವಿಶ್ಲೇಷಕ 

click me!