ಚಕ್ರವರ್ತಿ ಸೂಲೆಬೆಲೆ ಬರೆದ ಪಠ್ಯಕ್ಕೆ ಕೊಕ್‌: ಪ್ರಿಯಾಂಕ ಖರ್ಗೆ

By Kannadaprabha NewsFirst Published Jun 10, 2023, 4:30 AM IST
Highlights

ಚಕ್ರವರ್ತಿ ಸೂಲಿಬೆಲೆ ಯಾರು? ಯಾವ ಪಿಎಚ್‌ಡಿ ಮಾಡಿದ್ದಾರೆ? ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಬರೆದ ಪಾಠವನ್ನು ಪಠ್ಯಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ ಎಂದು ಪ್ರಶ್ನಿಸಿದ ಪ್ರಿಯಾಂಕ್‌ ಖರ್ಗೆ 

ಬೆಂಗಳೂರು(ಜೂ.10):  ಚಕ್ರವರ್ತಿ ಸೂಲಿಬೆಲೆ ವಾಸ್ತವವನ್ನು ಹೇಳುವ ವ್ಯಕ್ತಿ ಅಲ್ಲ. ಅಂತಹ ಬಾಡಿಗೆ ಭಾಷಣಕಾರರು ಬರೆದಿದ್ದನ್ನೆಲ್ಲಾ ನಮ್ಮ ಮಕ್ಕಳು ಓದಿದರೆ ಅವರ ಭವಿಷ್ಯ ಏನಾಗಬೇಕು. ಹಾಗಾಗಿ ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಿರುವ ಅವರು ಬರೆದಿರುವ ಪಠ್ಯವಿಷಯವನ್ನು ತೆಗೆದುಹಾಕುತ್ತೇವೆ ಎಂದು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಖಾರವಾಗಿ ಹೇಳಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ಯಾರು? ಯಾವ ಪಿಎಚ್‌ಡಿ ಮಾಡಿದ್ದಾರೆ? ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಬರೆದ ಪಾಠವನ್ನು ಪಠ್ಯಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

Latest Videos

ಚಕ್ರವರ್ತಿ ಸೂಲಿಬೆಲೆ ಬೆನ್ನಿಗೆ ನಿಂತ ಯತ್ನಾಳ್, ಎಂ.ಬಿ. ಪಾಟೀಲ್‌ ವಿರುದ್ಧ ಕಿಡಿ

ಚಕ್ರವರ್ತಿ ಸೂಲಿಬೆಲೆ ಯಾವ ಪಿಎಚ್‌ಡಿ ಮಾಡಿದ್ದಾರೆ? ಬಾಡಿಗೆ ಭಾಷಣಕಾರರನ್ನೆಲ್ಲಾ ನೀವು ಲೇಖಕರು, ಸಾಹಿತಿಗಳು ಮಾಡಿದರೆ ಅದನ್ನು ನಮ್ಮ ಮಕ್ಕಳು ಓದಬೇಕಾ? ಕರ್ನಾಟಕ ಸಾಹಿತ್ಯಕ್ಕೆ ಅಷ್ಟುಬರ ಬಂದಿದೆಯಾ? ಯಾರು ಇವರೆಲ್ಲಾ? ವಾಟ್ಸಪ್‌ ಯುನಿವರ್ಸಿಟಿಯಲ್ಲಿ ಓದೋರು ಇವರು. ಅಲ್ಲಿಯ ಕುಲಪತಿಗಳು ನಮ್ಮ ಮಕ್ಕಳ ಪಠ್ಯಪುಸ್ತಕ ರಚನೆ ಮಾಡಲು ಪ್ರಾರಂಭ ಮಾಡಿದ್ದಾರೆ. ಅಂತಹ ಪಾಠವನ್ನು ನಮ್ಮ ಮಕ್ಕಳು ಕಲಿತರೆ ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು? ಎಂದು ಕಿಡಿಕಾರಿದರು.

ಭಗತ್‌ ಸಿಂಗ್‌, ಸುಖದೇವ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಪಾಠ ಇದೆ ಎಂದು ಕೇಳಿದ ಪ್ರಶ್ನೆಗೆ, ಭಗತ್‌ ಸಿಂಗ್‌ ಬಗ್ಗೆ ಅಪಾರವಾದ ಗೌರವ ಇದೆ. ಅವರ ನಿಜವಾದ ಇತಿಹಾಸವನ್ನು ನಾವು ಹೇಳ್ತೀವಿ. ನಾನು ನಾಸ್ತಿಕ ಏಕೆ ಆಗಿದ್ದೇನೆ ಎಂಬ ಭಗತ್‌ ಸಿಂಗ್‌ ಅವರ ಪುಸ್ತಕ ಇದೆ. ಅದನ್ನು ಚಕ್ರವರ್ತಿ ಸೂಲಿಬೆಲೆ ಓದಿ ಬಿಡಲಿ ಸಾಕು. ಇತಿಹಾಸವನ್ನು ತಿರುಚದೇ ಪಾಠಗಳನ್ನು ನಾವು ಪಠ್ಯಪುಸ್ತಕದಲ್ಲಿ ಅಳವಡಿಸುತ್ತೇವೆ ಎಂದರು.

ಚಕ್ರವರ್ತಿ ಸೂಲಿಬೆಲೆಗಿಂತ ಒಳ್ಳೆಯ ಸಾಹಿತಿಗಳು ನಮ್ಮಲ್ಲಿ ಇಲ್ಲವಾ? ಚಕ್ರವರ್ತಿ ಸೂಲಿಬೆಲೆ ವಾಸ್ತವ ಹೇಳುವ ವ್ಯಕ್ತಿ ಅಲ್ಲ. ಅವರು ಬರೆದಿರೋ ಪಠ್ಯವನ್ನು ನಾನು ಯಾಕೆ ಓದಲಿ. ಓದೋಕೆ ನನಗೆ ಸಾಕಷ್ಟುಇದೆ. ಚಕ್ರವರ್ತಿ ಸೂಲಿಬೆಲೆ ಬರೆದ ಪಾಠ ನಮ್ಮ ಜನರಿಗೆ, ನಮ್ಮ ಮಕ್ಕಳಿಗೆ ಅಗತ್ಯ ಇಲ್ಲ. ಅದನ್ನು ಪಠ್ಯಪುಸ್ತಕದಿಂದ ತೆಗೆಯುತ್ತೇವೆ ಎಂದರು.

click me!