ಬೆಳಗಾವಿ: ಕನ್ನಡ ಮಾಧ್ಯಮ ಮಕ್ಕಳಿಗೆ ಮಲತಾಯಿ ಧೋರಣೆ!

By Kannadaprabha News  |  First Published Jan 2, 2024, 6:27 AM IST

ಒಂದೇ ಆವರಣದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಹಾಗೂ ಮರಾಠಿ ಮಾಧ್ಯಮ ಶಾಲೆಗಳಿದ್ದರೂ, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಮರಾಠಿ ಶಾಲೆ ಮೇಲಿರುವ ಪ್ರೀತಿ ಕನ್ನಡ ಶಾಲೆ ಮೇಲಿಲ್ಲ ಎನ್ನುವಂತಾಗಿದೆ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಆರೋಪ ಕೇಳಿ ಬಂದಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.


ಬೆಳಗಾವಿ (ಜ.2): ಒಂದೇ ಆವರಣದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಹಾಗೂ ಮರಾಠಿ ಮಾಧ್ಯಮ ಶಾಲೆಗಳಿದ್ದರೂ, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಮರಾಠಿ ಶಾಲೆ ಮೇಲಿರುವ ಪ್ರೀತಿ ಕನ್ನಡ ಶಾಲೆ ಮೇಲಿಲ್ಲ ಎನ್ನುವಂತಾಗಿದೆ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಆರೋಪ ಕೇಳಿ ಬಂದಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.

ಬೆಳಗಾವಿ ತಾಲೂಕಿನ ನಂದಿಹಳ್ಳಿ ಗ್ರಾಮದ ಒಂದೇ ಆವರಣದಲ್ಲಿ ಕನ್ನಡ ಮತ್ತು ಮರಾಠಿ ಮಾಧ್ಯಮ ಶಾಲೆಗಳಿವೆ. ಈ ಎರಡು ಶಾಲೆಗಳು ಸರ್ಕಾರಿ ಶಾಲೆಗಳಾಗಿದ್ದು ಮರಾಠಿ ಮಾಧ್ಯಮದಲ್ಲಿ 150 ಹಾಗೂ ಕನ್ನಡ ಮಾಧ್ಯಮದಲ್ಲಿ 85 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಹತ್ತು ಕೊಠಡಿಗಳಿದ್ದರೆ, ಎರಡು ಕೊಠಡಿಗಳಲ್ಲಿ ಮಾತ್ರ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಂದೇ ಕೊಠಡಿಯಲ್ಲಿ ಮೂರು ತರಗತಿ ನಡೆಸಲಾಗುತ್ತಿದೆ. ಮತ್ತೊಂದು ವರ್ಗದ ಮಕ್ಕಳಿಗೆ ಕಟ್ಟೆ ಮೇಲೆ ಕೂರಿಸಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. 

Tap to resize

Latest Videos

 

ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಲೇ ಹೃದಯಾಘಾತಕ್ಕೆ ಬಲಿಯಾದ ಮುಖ್ಯ ಶಿಕ್ಷಕ

ಏನಿದು ವಾಸ್ತವ?:

ನಂದಿಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಮರಾಠಿ ಹಿರಿಯ ಪ್ರಾಥಮಿಕ ಶಾಲೆಗಳು ಒಂದೇ ಆವರಣದಲ್ಲಿವೆ. ಕನ್ನಡ ಶಾಲೆಯ 2 ಕೊಠಡಿಗಳನ್ನು ಶಿಥಿಲಾವಸ್ಥೆಯಲ್ಲಿರುವುದರಿಂದ ನೆಲಸಮಗೊಳಿಸಲಾಗಿದೆ. ಹೀಗಾಗಿ ಸದ್ಯ ಮರಾಠಿ ಶಾಲೆಯಲ್ಲಿರುವ 2 ಕೊಠಡಿಗಳನ್ನು ಕನ್ನಡ ಮಾಧ್ಯಮ ಕಲಿಯುವ ಮಕ್ಕಳಿಗಾಗಿ ಬಳಸಿಕೊಳ್ಳುತ್ತಿದ್ದೇವೆ ಎಂಬುವುದು ಅಧಿಕಾರಿಗಳು ಹೇಳುತ್ತಿದ್ದಾರೆ.

ಆದರೆ ಮರಾಠಿ ಮಾಧ್ಯಮದ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ನೀಡಿ, ಕೊಠಡಿಯೊಳಗೆ ಕೂರಿಸಿ ಪಾಠ ಮಾಡಲಾಗುತ್ತಿದೆ. ಇಲ್ಲಿ ಕನ್ನಡ ಮಾಧ್ಯಮದ ಮಕ್ಕಳಿಗೆ ಮೂಲಸೌಕರ್ಯ ನೀಡುತ್ತಿಲ್ಲ ಎನ್ನುವುದು ಕನ್ನಡಪರ ಸಂಘಟನೆಗಳ ಆರೋಪ. ಅಲ್ಲದೇ ಮಕ್ಕಳಿಗೆ ಶಾಲಾ ಆವರಣದಲ್ಲೇ ಕೂರಿಸಿ ಪಾಠ ಮಾಡಲಾಗುತ್ತಿದೆ. ಅಲ್ಲದೇ ಕನ್ನಡ ಶಾಲೆಯಲ್ಲಿ, ಮರಾಠಿ ಭಾಷೆಯಲ್ಲಿ ಮ್ಯಾಪ್​ಗಳನ್ನು ಬಿಡಿಸಲಾಗಿದೆ. ನಾಮಫಲಕಗಳನ್ನೂ ಮರಾಠಿ ಭಾಷೆಯಲ್ಲಿ ಹಾಕಲಾಗಿದೆ ಎಂಬ ದೂರು ಕೇಳಿ ಬಂದಿದೆ.

ಈ ವಿಷಯ ತಿಳಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಶಾಲೆಗೆ ದೌಡಾಯಿಸಿ ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು. ಕನ್ನಡ ಶಾಲಾ ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಖಂಡಿಸಿದರು. ಕನ್ನಡ ಸಂಘಟನೆಗಳು ಆಗಮಿಸುವ ವಿಚಾರ ತಿಳಿದು ಶಿಕ್ಷಕರು ಕನ್ನಡ ಮಾಧ್ಯಮ ಮಕ್ಕಳನ್ನು ಕೊಠಡಿಯೊಳಗೆ ಕೂರಿಸಿದರು. ವಿಷಯ ತಿಳಿದು ಬೆಳಗಾವಿ ಗ್ರಾಮೀಣ ಪೊಲೀಸರು ಶಾಲೆಗೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. 

ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಶೋಚನೀಯ ಸ್ಥಿತಿಯಲ್ಲಿ ಸರ್ಕಾರಿ ಕನ್ನಡ ಶಾಲೆಗಳು..!

ನಂದಿಹಳ್ಳಿ ಗ್ರಾಮದಲ್ಲಿ ಕನ್ನಡ ಭಾಷಾ ಮಕ್ಕಳಿಗೆ ಹೊರಗಡೆ ಪಾಠ ಮಾಡುತ್ತಿರುವ ಕುರಿತು ನನಗೆ ಗೊತ್ತೇ ಇಲ್ಲ. ನಂದಿಹಳ್ಳಿ ಗ್ರಾಮ ಅತ್ಯಂತ ಚಿರಪರಿಚಿತವಾಗಿದೆ. ಆದರೆ ಶಾಲೆ ಪರಿಸ್ಥಿತಿ ಬಗ್ಗೆ ನನಗೆ ಹೇಳಿಲ್ಲ. ಆ ರೀತಿಯ ತಾರತಮ್ಯ ಎಲ್ಲಿಯೂ ಆಗುತ್ತಿಲ್ಲ. ಮರಾಠಿ ಶಾಲೆಗಳಲ್ಲಿ ಕಲಿಯುವವರ ಸಂಖ್ಯೆ ಗಣನೀಯ ಕಡಿಮೆ ಆಗಿದೆ. ಮರಾಠಿ ಶಾಲಾ ಮಕ್ಕಳ ಪೋಷಕರು ಕನ್ನಡ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ.

- ಲಕ್ಷ್ಮಿ ಹೆಬ್ಬಾಳಕರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಚಿವೆ

ನಂದಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಕನ್ನಡ ಮತ್ತು ಮರಾಠಿ ಮಾಧ್ಯಮದ ಮಕ್ಕಳ ಬಗ್ಗೆ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. ಕನ್ನಡ ಮಕ್ಕಳ ಸಂಖ್ಯೆ ಇದೀಗ ಹೆಚ್ಚುತ್ತಿದೆ. ಕನ್ನಡ ಮಾಧ್ಯಮದ ಎರಡು ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಅವುಗಳನ್ನು ನೆಲಸಮಗೊಳಿಸಲಾಗಿದೆ. ಹೊಸದಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ. ಹಾಗಾಗಿ, ಸದ್ಯ ಮರಾಠಿ ಮಾಧ್ಯಮ ಶಾಲೆಯಲ್ಲಿ ಎರಡು ಕೊಠಡಿಗಳನ್ನು ಕನ್ನಡ ಮಾಧ್ಯಮದ ಮಕ್ಕಳಿಗೆ ಬಳಸಿಕೊಳ್ಳಲಾಗುತ್ತಿದೆ. ಶಿಕ್ಷಕರೊಬ್ಬರು ರಜೆ ಮೇಲೆ ತೆರಳಿದ್ದರಿಂದ ಕೊಠಡಿ ಹೊರಗೆ ಮಕ್ಕಳಿಗೆ ಪಾಠ ಮಾಡಲಾಗಿದೆ. ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು.

- ಎಸ್‌.ಪಿ.ದಾಸಪ್ಪನವರ, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳಗಾವಿ ಗ್ರಾಮೀಣ

click me!