ಪಬ್ಲಿಕ್‌ ಮಾದರಿಯಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣ: ಸಚಿವ ಮಧು ಬಂಗಾರಪ್ಪ

By Kannadaprabha News  |  First Published Jan 2, 2024, 2:00 AM IST

ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳ ಮಾದರಿಯಲ್ಲಿ ಉನ್ನತೀಕರಿಸಿ ಉತ್ತಮ ಶಿಕ್ಷಣ ನೀಡುವ ಗುರಿ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. 
 


ಸಿರಿಗೆರೆ (ಜ.02): ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳ ಮಾದರಿಯಲ್ಲಿ ಉನ್ನತೀಕರಿಸಿ ಉತ್ತಮ ಶಿಕ್ಷಣ ನೀಡುವ ಗುರಿ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಯೋಜಿಸಿದ್ದ ತರಳಬಾಳು ಕ್ರೀಡಾಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಉನ್ನತೀಕರಿಸಿದ ಶಾಲೆಗಳಲ್ಲಿ ಸಂಗೀತ, ನೃತ್ಯ, ದೈಹಿಕ ಶಿಕ್ಷಣ ತರಬೇತಿ, ಇಂಗ್ಲಿಷ್‌ ಜ್ಞಾನವನ್ನು ಕಲಿಸುವಂತಹ ಶಿಕ್ಷಣವನ್ನು ಜಾರಿಗೆ ತರುವ ಉದ್ದೇಶ ಇದೆ. ಜೊತೆಗೆ ಕರ್ನಾಟಕ ಪಬ್ಲಿಕ್‌ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಇದೆ ಎಂದರು.

ರಾಜ್ಯದಲ್ಲಿ 75 ಸಾವಿರ ಶಾಲೆಗಳು ಇವೆ. ಅವುಗಳಲ್ಲಿ 1 ಕೋಟಿ 20 ಲಕ್ಷ ಮಕ್ಕಳು ಓದುತ್ತಿದ್ದಾರೆ. ಅವರಿಗೆ ಉತ್ತಮ ರೀತಿಯ ಶಿಕ್ಷಣ ನೀಡುವುದು ಇಲಾಖೆಯ ಹೊಣೆಗಾರಿಕೆಯಾಗಿದೆ ಎಂದರು. ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸಲು ಅನುಭವ ಇರುವ ತರಳಬಾಳು ಶ್ರೀಗಳ ಮಾರ್ಗದರ್ಶನ ಬೇಕಾಗಿದೆ. ವಿಶ್ವವಿದ್ಯಾಲಯದ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅವರ ಸಂಸ್ಥೆಯೇ ಒಂದು ಸರ್ಕಾರ ಇದ್ದಂತೆ ಇದೆ. ಈಗಾಗಲೇ ಶಿಕ್ಷಣ ಇಲಾಖೆಯ ಸಮಸ್ಯೆಗಳ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಮೊದಲಿನಿಂದಲೂ ತರಳಬಾಳು ಮಠದ ಮೇಲೆ ವಿಶ್ವಾಸ ಹೊಂದಿದ್ದರು. ಆ ದಾರಿಯಲ್ಲಿ ನಾನೂ ಕೂಡ ನಡೆಯುತ್ತಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದರು.

Tap to resize

Latest Videos

undefined

ಆರ್ಥಿಕ ಪ್ರಗತಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಸನ್ನಿಹಿತ: ಪ್ರಲ್ಹಾದ್‌ ಜೋಶಿ

ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಆಶೀರ್ವಚನದಲ್ಲಿ ಧಾರವಾಡದ ಮುರುಘಾಮಠದ ಮೃತ್ಯುಂಜಯ ಶ್ರೀಗಳು ಶಿಕ್ಷಣಾರ್ಥಿಗಳ ದಾಸೋಹಕ್ಕಾಗಿ ಅಪಾರವಾಗಿ ಶ್ರಮಿಸಿದ್ದನ್ನು ಸ್ಮರಿಸಿ, ಪಾಟೀಲ ಪುಟ್ಟಪ್ಪ, ಬಿಡಿ ಜತ್ತಿ, ಆರ್.ಸಿ. ಹಿರೇಮಠ, ಹಿರೇಮಲ್ಲೂರ ಈಶ್ವರನ್‌ ಅವರಂಥ ಮೇಧಾವಿಗಳು ಮೃತ್ಯುಂಜಯ ಶ್ರೀಗಳ ದಾಸೋಹದಲ್ಲಿ ಶಿಕ್ಷಣ ಪಡೆದವರು ಎಂದರು. ಮುಳಗುಂದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಕ್ರೀಡಾಮೇಳದ ಅಂಗವಾಗಿ ನಡೆದ ನೃತ್ಯ, ಸಂಗೀತ, ಮಲ್ಲಿಹಗ್ಗ ನಮಗೆ ಅದ್ಭುತವಾಗಿ ಕಂಡವು. 

ಇಂತಹ ಚಟುವಟಿಕೆಗಳನ್ನು ಬೇರೆ ಯಾವುದೇ ವಿದ್ಯಾಸಂಸ್ಥೆಯಲ್ಲಿ ತಾವು ಕಂಡಿದ್ದಿಲ್ಲ. ಅಂತಹ ಆಶ್ಚರ್ಯ ನಮಗಾಯಿತು. ಕ್ರೀಡೆ ಮನಸ್ಸನ್ನು ಅರಳಿಸುತ್ತದೆ. ಮಕ್ಕಳು ದೈಹಿಕ ಸ್ವಾಸ್ಥ್ಯ ಕಾಪಾಡಿಕೊಂಡು ಆರೋಗ್ಯವಂತರಾಗಿ ಇರಬೇಕು ಎಂದರು. ೨೦೨೪ರ ತರಳಬಾಳು ದಿನದರ್ಶಿಕೆಯನ್ನು ಮಲ್ಲಿಕಾರ್ಜುನ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರವಿಶಂಕರ್‌ ರೆಡ್ಡಿ, ಬಿಇಓ ನಾಗಭೂಷಣ್‌, ಮಾಜಿ ಸಚಿವ ಎಚ್.‌ಆಂಜನೇಯ, ಪ್ರೊ.ಎಸ್.ಬಿ.ರಂಗನಾಥ್‌ ಮುಂತಾದವರು ವೇದಿಕೆಮೇಲಿದ್ದರು. ತರಳಬಾಳು ಕಲಾಸಂಘದ ವಿದ್ಯಾರ್ಥಿನಿಯರು ಭರತನಾಟ್ಯ, ಯಕ್ಷಗಾನ ಮತ್ತು ಮಲ್ಲಿಹಗ್ಗ ಪ್ರದರ್ಶನ ನೀಡಿದರು. ತರಳಬಾಳು ಸಂಗೀತ ಶಾಲಾ ಮಕ್ಕಳು ವಚನ ಗೀತೆಗಳನ್ನು ಹಾಡಿದರು.

ಮೈಸೂರಲ್ಲಿ ಮುಖ್ಯಮಂತ್ರಿ ಪುತ್ರನ ಗೆಲ್ಲಿಸಲು ಷಡ್ಯಂತ್ರ: ಪ್ರತಾಪ್‌ ಸಿಂಹ ಆರೋಪ

ರೋಮಾಂಚನಗೊಳಿಸಿದ ಬಾಲಕಿಯರ ಮಲ್ಲಿಹಗ್ಗ: ಸಿರಿಗೆರೆಯ ಶಾಲೆಗಳಲ್ಲಿ ಓದುತ್ತಿರುವ ಬಾಲಕಿಯರು ಪ್ರದರ್ಶಿಸಿದ ಮಲ್ಲಿಹಗ್ಗ ನೋಡುಗರನ್ನು ರೋಮಾಂಚನಗೊಳಿಸಿತು. ಇಪ್ಪತ್ತು ಅಡಿಗಳಷ್ಟು ಎತ್ತರಕ್ಕೆ ತೂಗುಹಾಕಿದ್ದ ಹಗ್ಗಳನ್ನು ಹಿಡಿದು ಬಾಲಕಿಯರು ಏರಿ-ಇಳಿಯುತ್ತ ನೋಡುಗರನ್ನು ಉಸಿರು ಬಿಗಿ ಹಿಡಿಯುವಂತೆ ಮಾಡಿದರು. ಹಗ್ಗಗಳನ್ನು ಏರಿ ಹಲವು ಪಟ್ಟುಗಳನ್ನು ಅವರು ಪ್ರದರ್ಶಿಸಿದರು. ಯೋಗದಲ್ಲಿ ಜನಪ್ರಿಯವಾಗಿರುವ ಹಲವು ಆಸನಗಳನ್ನು ಆಕಾಶದೆತ್ತರದಲ್ಲಿ ಹಗ್ಗ ಸುತ್ತಿಕೊಂಡು ಲೀಲಾಜಾಲವಾಗಿ ಪ್ರದರ್ಶಿಸಿ ವೀಕ್ಷಕರನ್ನು ಚಕಿತಗೊಳಿಸಿದರು.

click me!