ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಶೋಚನೀಯ ಸ್ಥಿತಿಯಲ್ಲಿ ಸರ್ಕಾರಿ ಕನ್ನಡ ಶಾಲೆಗಳು..!

ಗಡಿಭಾಗದ ಶಾಲೆಗಳು ಶಿಥಿಲಾವಸ್ಥೆಯಲ್ಲಿ ಇದ್ದು, ವಿದ್ಯಾರ್ಥಿಗಳು ಭಯದಲ್ಲಿ ಶಿಕ್ಷಣ ಕಲಿಯಬೇಕು. ಶಿಕ್ಷಕರೂ ಭಯದಲ್ಲಿಯೇ ಮಕ್ಕಳಿಗೆ ಪಾಠ ಬೋಧನೆ ಮಾಡಬೇಕಾದ ಅನಿವಾರ್ಯತೆ ಇದೆ. ತಾಲೂಕಿನಲ್ಲಿ ಅಲ್ಲಲ್ಲಿ ಶಾಲೆಗಳು ಶಿಥಿಲಾವಸ್ಥೆಯಲ್ಲಿದ್ದು, ಭಯದ ನಡುವೆ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದು, ಈ ನಡುವೆ 133 ಪ್ರಾಥಮಿಕ ಶಾಲಾ ಕೋಣೆಗಳು,19 ಪ್ರೌಢ ಶಾಲೆ ಕೋಣೆಗಳು ದುರಸ್ತಿಗೆ ಕಾದಿವೆ. 22 ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳು ಶತಮಾನ ಪೊರೈಸಿವೆ. ಶತಮಾನ ಪೊರೈಸಿದ ಶಾಲೆಗಳ ಸ್ಥಿತಿಯೂ ಇದೇ ರೀತಿ ಇದೆ.

Government Kannada Schools in Deplorable Condition on Karnataka Maharashtra Border grg

ಖಾಜು ಸಿಂಗೆಗೋಳ

ಇಂಡಿ(ಡಿ.22): ಮೊದಲೇ ಕನ್ನಡ ಶಾಲೆಗಳು ಎಂದರೆ ಎಲ್ಲರಿಗೂ ತಾತ್ಸಾರ ಮನೋಭಾವ. ಈ ಮನಸ್ಥಿತಿಯಿಂದಲೇ ಅದೆಷ್ಟೋ ಕನ್ನಡ ಶಾಲೆಗಳು ಕುಂಠುತ್ತಾ ಸಾಗಿ ಅವಸಾನದತ್ತ ಸಾಗಿವೆ. ಇದರ ಮಧ್ಯೆ ಮಹಾಗಡಿಗೆ ಹೊಂದಿಕೊಂಡಿರುವ ಇಂಡಿ ತಾಲೂಕಿನ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿವೆ.

ಹೌದು, ಗಡಿಭಾಗದ ಶಾಲೆಗಳು ಶಿಥಿಲಾವಸ್ಥೆಯಲ್ಲಿ ಇದ್ದು, ವಿದ್ಯಾರ್ಥಿಗಳು ಭಯದಲ್ಲಿ ಶಿಕ್ಷಣ ಕಲಿಯಬೇಕು. ಶಿಕ್ಷಕರೂ ಭಯದಲ್ಲಿಯೇ ಮಕ್ಕಳಿಗೆ ಪಾಠ ಬೋಧನೆ ಮಾಡಬೇಕಾದ ಅನಿವಾರ್ಯತೆ ಇದೆ. ತಾಲೂಕಿನಲ್ಲಿ ಅಲ್ಲಲ್ಲಿ ಶಾಲೆಗಳು ಶಿಥಿಲಾವಸ್ಥೆಯಲ್ಲಿದ್ದು, ಭಯದ ನಡುವೆ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದು, ಈ ನಡುವೆ 133 ಪ್ರಾಥಮಿಕ ಶಾಲಾ ಕೋಣೆಗಳು,19 ಪ್ರೌಢ ಶಾಲೆ ಕೋಣೆಗಳು ದುರಸ್ತಿಗೆ ಕಾದಿವೆ. 22 ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳು ಶತಮಾನ ಪೊರೈಸಿವೆ. ಶತಮಾನ ಪೊರೈಸಿದ ಶಾಲೆಗಳ ಸ್ಥಿತಿಯೂ ಇದೇ ರೀತಿ ಇದೆ.

ಬೆಂಗಳೂರಿನಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಶುಚಿಗೊಳಿಸಿದ ಪ್ರಕರಣ; ಮುಖ್ಯ ಶಿಕ್ಷಕಿ ಅಮಾನತು!

ನೆಲ ಕಚ್ಚಿದ ಅಭಿವೃದ್ಧಿ:

ಖಾಸಗಿ ಶಾಲೆಗಳು ನಡೆಸುತ್ತಿರುವ ಪೈಪೋಟಿ ಮಧ್ಯ ಗಡಿಭಾಗದ ಸರ್ಕಾರಿ ಕನ್ನಡ ಶಾಲೆಗಳು ಅಭಿವೃದ್ಧಿಯಲ್ಲಿ ನೆಲಕಚ್ಚುತ್ತಿವೆ. ಸರ್ಕಾರಿ ಶಾಲೆಯಲ್ಲಿ ಉತ್ತಮ ಬೋಧನೆ ದೊರೆಯುತ್ತಿದೆಯಾದರೂ, ಕೋಣೆಗಳ ಕೊರತೆ, ಶೈಕ್ಷಣಿಕ ವಾತಾವರಣ ಕಲ್ಪಿಸದೇ ಇರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದೆ.

ನಂಜುಂಡಪ್ಪ ವರದಿ ಪ್ರಕಾರ ಗಡಿ ತಾಲೂಕುಗಳು ಅಭಿವೃದ್ಧಿಯಾಗಬೇಕು ಎಂದು ಇದೆ. ಆದರೆ, ಆಯೋಗ ನೀಡಿದ ವರದಿ ಮೇಲೆ ಎಷ್ಟೋ ಸರ್ಕಾರಗಳು ಬಂದು ಹೋದರೂ ನಂಜುಂಡಪ್ಪ ವರದಿ ಯಥಾವತ್ತಾಗಿ ಅನುಷ್ಠಾನಗೊಳಿಸಿ, ಗಡಿಭಾಗದ ಅಭಿವೃದ್ಧಿ ಜೊತೆಗೆ ಗಡಿಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವ ಕೆಲಸವನ್ನು ಯಾವ ಸರ್ಕಾರಗಳೂ ಮಾಡುತ್ತಿಲ್ಲ ಎಂಬುವುದು ದುರ್ದೈವದ ಸಂಗತಿ. ನ.1ಕ್ಕೆ ಕನ್ನಡ ಉಳಿಯಬೇಕು. ಕನ್ನಡ ಬೆಳೆಸಬೇಕು ಎಂದು ಕೇವಲ ಭಾಷಣಕ್ಕೆ ಮಾತ್ರ ಕನ್ನಡ ಸೀಮಿತಗೊಂಡಂತೆ ಜನರಿಗೆ ಭಾಸವಾಗುತ್ತಿದೆ.

ಅಪಾಯದಲ್ಲಿ ಹಂಚನಾಳ ಶಾಲೆ:

ತಾಲೂಕಿನ ಹಂಚನಾಳ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 154 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 6 ಜನ ಶಿಕ್ಷಕರಿದ್ದು, ಒಟ್ಟು 4 ಕೋಣೆಗಳಲ್ಲಿವೆ. ಎಲ್ಲ ಕೋಣೆಗಳು ಶಿಥಿಲಗೊಂಡು, ಚಾವಣಿಯ ಸಿಮೆಂಟ್‌ ಕಿತ್ತು ಬಿದ್ದಿವೆ. ಶಿಥಿಲಗೊಂಡ ಕೋಣೆಯಲ್ಲಿಯೇ 1 ರಿಂದ 7ನೇ ತರಗತಿಯವರೆಗೆ 154 ಮಕ್ಕಳು ಪಾಠಕಲಿಯಬೇಕಾದ ಅನಿವಾರ್ಯತೆ ಇದೆ.

ಈ ಶಾಲೆಯ ಚಾವಣಿ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಪ್ಲಾಸ್ಟರ್‌ ಕಳಚಿಬಿದ್ದು ಕಬ್ಬಿಣದ ರಾಡುಗಳು ಕಾಣಿಸುತ್ತಿವೆ. ಚಾವಣಿ ಗೋಡೆ ಮುಟ್ಟಿದರೆ ಸಿಮೆಂಟ್‌ ಉದುರಿ ಬೀಳುತ್ತಿದೆ. ಮಳೆ ಬಂದರೆ ಶಾಲಾ ಕೋಣೆಯಲ್ಲಿ ಮಳೆ ನೀರೇ ಆವರಿಸುತ್ತಿದೆ. ಕೋಣೆಗಳು ದುರಸ್ತಿ ಕಂಡಿಲ್ಲ. ಇದರ ನಡುವೆಯೇ ವಿದ್ಯಾರ್ಥಿಗಳು ಪಾಠ ಕಲಿಯುವ ಪರಿಸ್ಥಿತಿ ಉದ್ಭವವಾಗಿದೆ. ಇದು ಸರ್ಕಾರಿ ಶಾಲೆಯ ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ದುರಸ್ತಿಗೆ ಕಾದಿರುವ 86 ಪ್ರಾಥಮಿಕ ಶಾಲೆಗಳ 133 ಕೋಣೆಗಳು, 6 ಪ್ರೌಢ ಶಾಲೆಗಳ 19 ಕೋಣೆಗಳ ಪಟ್ಟಿಯನ್ನು ಬಿಇಒ ಕಚೇರಿಯಲ್ಲಿ ಪಟ್ಟಿ ಮಾಡಿ ಸಿದ್ಧಪಡಿಸಿಟ್ಟುಕೊಂಡಿದ್ದು, ದುರಸ್ತಿ ಯಾವಾಗ ಮಾಡುತ್ತಾರೆಯೋ ಎಂಬುದು ಶಿಕ್ಷಣ ಪ್ರೇಮಿಗಳು,ಮಕ್ಕಳ ಪಾಲಕರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಹಂಚನಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ಶಿಕ್ಷಣ ಇದೆ. ಒಟ್ಟು 4 ಕೋಣೆಗಳು ಇವೆ. ಎಲ್ಲ ಕೋಣೆಗಳು ಶಿಥಿಲಗೊಂಡಿವೆ. ಮಳೆ ಬಂದರೆ ಚಾವಣಿ ಸೋರಿ ನೀರು ಕೋಣೆಯೊಳಗೆ ಬರುತ್ತದೆ. ನಾನು ವರ್ಗಾವಣೆಯಾಗಿ ಇಲ್ಲಿಗೆ ಬಂದು 15 ದಿನವಾಗಿದೆ. ಶಾಲೆ ಕೋಣೆಗಳ ದುರಸ್ತಿ ಕುರಿತು ಪಿಡಿಒ ಅವರಿಗೆ ಮನವಿ ಮಾಡಿದ್ದೇನೆ. ಅವರು 2 ಕೋಣೆಗಳು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಕೋಣೆಗಳ ಸ್ಥಿತಿ ಕುರಿತು ಬಿಇಒ ಸಾಹೇಬರಿಗೆ ಪತ್ರ ಬರೆಯುತ್ತೇನೆ ಎಂದು ಹಂಚನಾಳ  ಸಪ್ರಾಶಾ ಮುಖ್ಯಶಿಕ್ಷಕ ಬಿ.ಎಸ್‌.ಜಮಖಂಡಿ ತಿಳಿಸಿದ್ದಾರೆ. 

ಕೋಲಾರ ಘಟನೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಕೃತ್ಯ; ಶಾಲಾ ಮಕ್ಕಳಿಂದಲೇ ಟಾಯ್ಲೆಟ್ ಕ್ಲೀನ್ ಮಾಡಿಸಿದ ಶಿಕ್ಷಕರು!

ಹಂಚನಾಳ ಶಾಲೆ ಶಿಥಿಲಗೊಂಡಿದ್ದು ಗಮನಕ್ಕೆ ಬಂದಿದೆ. ಇಂತಹ ಹಲವು ಶಾಲೆಗಳ ಕೋಣೆಗಳು ಶಿಥಿಲಗೊಂಡಿವೆ. ಇಂತಹ ಶಾಲಾ ಕೋಣೆಗಳ ದುರಸ್ತಿಗಾಗಿಯೇ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಶಾಸಕರ ಅನುದಾನದಲ್ಲಿ ₹1 ಕೋಟಿ ಅನುದಾನ ಕೋಣೆಗಳ ದುರಸ್ತಿಗಾಗಿ ಇಟ್ಟಿದ್ದಾರೆ. ಕೋಣೆಗಳ ದುರಸ್ತಿ ಮಾಡುವ ಶಾಲೆಗಳ ಪಟ್ಟಿ ಮಾಡಲಾಗಿದೆ. ಮಂಜೂರು ಆದ ಕೂಡಲೇ ಕೋಣೆಗಳ ದುರಸ್ತಿ ಮಾಡಿಸಲಾಗುತ್ತದೆ ಎಂದು ಇಂಡಿ ಬಿಇಒ ಟಿ.ಎಸ್‌.ಆಲಗೂರ ಹೇಳಿದ್ದಾರೆ.  

ನಮ್ಮ ಗ್ರಾಮವಾದ ಹಂಚನಾಳದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳ ಕೋಣೆಗಳು ಶಿಥಿಲಗೊಂಡು ಹಲವು ವರ್ಷಗಳಾಗಿವೆ. ಮಳೆ ಬಂದರೆ ಕೋಣೆಗಳೆಲ್ಲ ಸೋರಿ ನೀರು ಬರುತ್ತದೆ. ಈ ಪರಿಸ್ಥಿತಿಯಲ್ಲಿ ಮಕ್ಕಳು ಪಾಠ ಕಲಿಯುವುದು ಹೇಗೆ?. ಸಂಬಂಧಿಸಿದವರು ಕೂಡಲೇ ಹೊಸ ಕೋಣೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹಂಚನಾಳ ಕರವೇ ಗ್ರಾಮ ಘಟಕದ ಅಧ್ಯಕ್ಷ ಕೋಬಣ್ಣ ಪೂಜಾರಿ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios