Koppal News: ಶಾಲೆಗೆ ಚಕ್ಕರ್ ಹಾಕಿ ಮೋಜು ಮಸ್ತಿ ಮಾಡುವ ಶಿಕ್ಷಕರು; ಇಂಥವರಿಂದ ಗುಣಮಟ್ಟದ ಶಿಕ್ಷಣ ಸಾಧ್ಯವೇ? ಪೋಷಕರು ಆಕ್ರೋಶ

By Kannadaprabha NewsFirst Published Jan 7, 2023, 7:16 AM IST
Highlights

ಪಟ್ಟಣದ ಶಾಸಕರ ಮಾ.ಹಿ.ಪ್ರಾ. ಶಾಲಾ ತರಗತಿಗಳಿಗೆ ವಿನಾಕಾರಣ ಗೈರುಹಾಜರಾಗುವ ಮುಖ್ಯಶಿಕ್ಷಕ ಸೇರಿದಂತೆ ನಾಲ್ವರು ಶಿಕ್ಷಕರ ನಡೆಯಿಂದಾಗಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದ್ದು, ಕೂಡಲೇ ಸಂಬಂಧಿಸಿದ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಿಂದ ಕೂಗು ಕೇಳಿಬಂದಿದೆ.

ಎಂ. ಪ್ರಹ್ಲಾದ

ಕನಕಗಿರಿ (ಜ.7) : ಪಟ್ಟಣದ ಶಾಸಕರ ಮಾ.ಹಿ.ಪ್ರಾ. ಶಾಲಾ ತರಗತಿಗಳಿಗೆ ವಿನಾಕಾರಣ ಗೈರುಹಾಜರಾಗುವ ಮುಖ್ಯಶಿಕ್ಷಕ ಸೇರಿದಂತೆ ನಾಲ್ವರು ಶಿಕ್ಷಕರ ನಡೆಯಿಂದಾಗಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದ್ದು, ಕೂಡಲೇ ಸಂಬಂಧಿಸಿದ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಿಂದ ಕೂಗು ಕೇಳಿಬಂದಿದೆ.

ಶಾಲೆಯಲ್ಲಿ 450 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಒಟ್ಟು 10 ಶಿಕ್ಷಕರು ಕಾರ್ಯ ನಿರ್ವಹಿಸುತ್ತಾರೆ. ಅದರಲ್ಲಿ ಮುಖ್ಯ ಶಿಕ್ಷಕ ಸೇರಿದಂತೆ ನಾಲ್ವರು ಶಿಕ್ಷಕರು ಆಗಾಗ ಶಾಲೆಗೆ ಗೈರಾಗುತ್ತಾರೆ. ಅಲ್ಲದೇ ಹಲವು ಬಾರಿ ಶಾಲೆಗೆ ತಡವಾಗಿ ಆಗಮಿಸುತ್ತಾರೆ. ಶಾಲೆಯು ನಿತ್ಯ ಬೆಳಗ್ಗೆ 9.45ಕ್ಕೆ ಆರಂಭಗೊಳ್ಳುತ್ತದೆ. ಪ್ರಾರ್ಥನೆಗೆ ಕೆಲ ಶಿಕ್ಷಕರು ಹಾಜರಾಗದಿರುವ ಪರಿಣಾಮ ಮಕ್ಕಳು ಸಹ ಹಾಜರಾಗದೇ ಚಕ್ಕರ್‌ ಹೊಡೆಯುತ್ತಿದ್ದು, ಶಾಲೆಯ ವಾತಾವರಣ ಹದಗೆಟ್ಟಿದೆ. ಶಾಲೆಯಲ್ಲಿ 450ಕ್ಕೂ ಹೆಚ್ಚು ಮಕ್ಕಳಿದ್ದು, ಪ್ರಾರ್ಥನಾ ಸಂದರ್ಭದಲ್ಲಿ ಅರ್ಧ ಸಂಖ್ಯೆಯೂ ಕೂಡ ಹಾಜರಿರುವುದಿಲ್ಲ. ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗದ ಶಿಕ್ಷಕರು ತರಗತಿಗಳಲ್ಲಿ ಮೊಬೈಲ್‌ನಲ್ಲಿ ಮುಳುಗಿರುತ್ತಾರೆ. ಶಿಕ್ಷಕರಿಗೆ ಮೊಬೈಲ್‌ನಲ್ಲಿರುವ ಆಸಕ್ತಿ ಕಲಿಕೆಯ ಮೇಲಿಲ್ಲವಾಗಿದೆ. ಶಿಕ್ಷಕರ ನಡವಳಿಕೆಯಿಂದಾಗಿ ಮಕ್ಕಳು ಬೇಸತ್ತಿದ್ದು, ಕಲಿಕೆಯ ಪ್ರಮಾಣ ಕುಂಠಿತವಾಗಿದೆ.

 

 ಶಾಲೆಗೆ ಬಾರದ ಶಿಕ್ಷಕರು; ಕಾದು ಕಾದು ಮನೆಗೆ ಹೋದ ವಿದ್ಯಾರ್ಥಿಗಳು!

ಹೊಸಪೇಟೆ, ಗಂಗಾವತಿಯಿಂದ ಶಾಲೆಗೆ ತಡವಾಗಿ ಬರುತ್ತಿರುವ ಶಿಕ್ಷಕರು ಸ್ಥಳೀಯ ಮಟ್ಟದ ಶಿಕ್ಷಕರು ಶಾಲೆಯನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಹೀಗಾಗಿ ಸ್ಥಳೀಯ ಶಿಕ್ಷಕರೇ ಶಾಲೆ ಆರಂಭಿಸಿ, ಸಮಸ್ಯೆ ಇತ್ಯರ್ಥಪಡಿಸಬೇಕೆಂಬ ನಿರ್ಧಾರ ಅಕ್ಕಪಕ್ಕದ ನಗರಗಳಿಂದ ಬರುವ ಶಿಕ್ಷಕರದ್ದಾಗಿದೆ. ಈ ನಿಲುವಿಗೆ ಒಪ್ಪದ ಸ್ಥಳೀಯ ಶಿಕ್ಷಕರು ಎಲ್ಲರೂ ಸೇರಿ ಕೆಲಸ ಮಾಡೋಣ. ಇಲ್ಲಿ ಎಲ್ಲರಿಗೂ ಒಂದೇ ನಿಯಮ. ಆ ನಿಯಮದಂತೆ ಕೆಲಸ ಮಾಡೋಣವೆಂದು ಶಾಲಾ ಮುಖ್ಯಶಿಕ್ಷಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಗಿದ್ದ ನಿರ್ಧಾರ ಬಯಲಾಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸರ್ಕಾರ ಉದ್ದೇಶ ಧಕ್ಕೆ:

ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ಸರ್ಕಾರ ಕೋಟಿಗಟ್ಟಲೇ ಖರ್ಚು ಮಾಡಿ ಉಚಿತವಾಗಿ ಶೂ- ಸಾಕ್ಸ್‌, ಪಠ್ಯಪುಸಕ್ತ, ಸಮವಸ್ತ್ರ ಸೇರಿ ನಾನಾ ಸೌಲಭ್ಯ ಒದಗಿಸುತ್ತಿದೆ. ಆದರೆ, ಶಿಕ್ಷಕರು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡದೇ ಆತ್ಮವಂಚನೆ ಮಾಡಿಕೊಳ್ಳುವುದಲ್ಲದೇ ತಮ್ಮ ಕರ್ತವ್ಯಕ್ಕೂ ದ್ರೋಹ ಬಗೆಯುವುದು ಒಂದು ಕಡೆಯಾದರೆ ಮತ್ತೊಂದೆಡೆ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗದೆ ಸರ್ಕಾರದ ಸದುದ್ದೇಶಕ್ಕೆ ಧಕ್ಕೆ ಉಂಟಾಗುತ್ತಿರುವುದು ಸುಳ್ಳಲ್ಲ.

ವರದಿ ಪಡೆದ ಬಿಇಒ:

ಶಿಕ್ಷಕರ ನಡವಳಿಕೆ ಹಾಗೂ ಗೈರುಹಾಜರಾಗುತ್ತಿರುವ ದೂರಿನನ್ವಯ ಕ್ಷೇತ್ರ ಶಿಕ್ಷಣಧಿಕಾರಿಗಳು ಸಿಆರ್‌ಪಿಯಿಂದ ವರದಿ ಪಡೆದುಕೊಂಡಿದ್ದಾರೆ. ಮುಖ್ಯ ಶಿಕ್ಷಕ ಸೇರಿ ನಾಲ್ವರು ಸಹ ಶಿಕ್ಷಕರು ಗೈರು ಹಾಜರಾಗಿರುವುದು ಕಂಡುಬಂದಿದೆ. ಈ ಕುರಿತು ಬಿಇಒ ಅವರ ಆದೇಶದ ಮೇರೆಗೆ ಶಾಲೆಗೆ ಭೇಟಿ ನೀಡಿ, ವರದಿ ಪಡೆಯಲಾಗಿದೆ. ವರದಿ ಆಧರಿಸಿ ಬಿಇಒ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಕ್ಷಕರಲ್ಲಿ ಹೊಂದಾಣಿಕೆ ಕೊರತೆಯಿಂದ ಶಾಲೆಗೆ ಬೀಗ ಜಡಿದಿದ್ದ ಗ್ರಾಮಸ್ಥರು, ಬಿಇಒ ಸಂಧಾನ ಬಳಿಕ ಶಾಲೆ ಓಪನ್‌

ಶಾಲೆಯ ಹಲವು ಸಮಸ್ಯೆಗಳ ಕುರಿತು ಸಭೆ ನಡೆಸಲಾಗಿದ್ದು, ಮತ್ತೊಮ್ಮೆ ತಪ್ಪಾಗದಂತೆ ನೋಡಿಕೊಳ್ಳಲು ಶಿಕ್ಷಕರಿಗೆ ಸೂಚಿಸಲಾಗಿದೆ. ಬಸ್‌ ಕೊರತೆಯಿಂದ ಶಾಲೆಗೆ ತಡವಾಗಿ ಬಂದಿದ್ದೇನೆ.

ಸುರೇಶ ಪತ್ತಾರ, ಮುಖ್ಯ ಶಿಕ್ಷಕ

ಶಾಸಕರ ಮಾದರಿ ಶಾಲೆಯ ನಾಲ್ವರು ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗದ ಹಾಗೂ ಮೊಬೈಲ್‌ನಲ್ಲಿದ್ದು ಮಕ್ಕಳ ಕಲಿಕೆಗೆ ಸಮಸ್ಯೆಯಾಗಿರುವ ಬಗ್ಗೆ ಸಂಪೂರ್ಣ ವರದಿ ಪಡೆಯಲು ಆದೇಶಿಸಿದ್ದು, ವರದಿ ಅನ್ವಯ ಶಿಕ್ಷಕರ ಮೇಲೆ ಕ್ರಮ ವಹಿಸಲಾಗುವುದು.

ಸೋಮಶೇಖರಗೌಡ, ಬಿಇಒ, ಗಂಗಾವತಿ

click me!