ನೀಟ್ ಪರೀಕ್ಷೆಯನ್ನೂ ರದ್ದು ಮಾಡಲು ತಮಿಳುನಾಡು ಒತ್ತಾಯ

By Suvarna NewsFirst Published Jun 8, 2021, 4:53 PM IST
Highlights

ಕೊರೋನಾ ಸೋಂಕು ಹೆಚ್ಚುತ್ತಿದ್ದ ಕಾರಣಕ್ಕೆ ಕೇಂದ್ರ ಸರ್ಕಾರವು ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದ ಬೆನ್ನಲ್ಲೇ, ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆ ನಡೆಸುವ ಬಗ್ಗೆಯೂ ಅನುಮಾನಗಳು ವ್ಯಕ್ತವಾಗುತ್ತಿವೆ. ತಮಿಳುನಾಡಿನ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಾಯಕರಂತೂ ನೀಟ್‌ ರದ್ದು ಪರೀಕ್ಷೆಯನ್ನು ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ. 

ಕೊರೊನಾ ಆರ್ಭಟದಿಂದಾಗಿ ಈಗಾಗಲೇ ಸಿಬಿಎಸ್‌ಇ ೧೨ನೇ ತರಗತಿ ಪರೀಕ್ಷೆಗಳನ್ನ ಕೇಂದ್ರ ಸರ್ಕಾರ ರದ್ದುಪಡಿಸಿದೆ. ಇದೀಗ ಮುಂದಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಹೇಗೆ ಎಂಬ ಚರ್ಚೆ ನಡೀತಿದೆ. ಇದರ ನಡುವೆಯೇ ನೀಟ್(NEET) ಪರೀಕ್ಷೆ ಒಳಗೊಂಡಂತೆ ಎಲ್ಲಾ ವೃತ್ತಿಪರ ಹಾಗೂ ಇತರೆ ಕೋರ್ಸ್‌ಗಳ ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂಬ ಕೂಗು ಎದ್ದಿದೆ. ನೀಟ್ ಪರೀಕ್ಷೆಗಳನ್ನ ಕ್ಯಾನ್ಸಲ್ ಮಾಡುವಂತೆ ಕೋರಿ ಎಐಎಡಿಎಂಕೆ ನಾಯಕ ಪನ್ನೀರ್‌ಸೆಲ್ವಂ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಇತ್ತೀಚೆಗಷ್ಟೇ ಪತ್ರ ಬರೆದಿದ್ದರು. ನೀಟ್ ಪರೀಕ್ಷೆ ಬದಲಿಗೆ ಪಿಯುಸಿ ಅಂಕಗಳ ಮೆರಿಟ್ ಆಧಾರದಲ್ಲಿ ವೈದ್ಯಕೀಯ ಸೀಟ್‌ಗಳನ್ನು ಹಂಚಿಕೆ ಮಾಡುವಂತೆ ಅವರು ಮೋದಿಗೆ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಪನ್ನೀರ್ ಸೆಲ್ವಂ ಕೂಡ ಮೋದಿಗೆ ಪತ್ರ ಬರೆದು, ನೀಟ್ ಎಕ್ಸಾಂ ರದ್ದುಗೊಳಿಸುವಂತೆ ಒತ್ತಾಯಿಸೋ ಮೂಲಕ ಸ್ಟಾಲಿನ್ ಸರ್ಕಾರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. 

ಮೋದಿ ಅಂಕಲ್, ಮಕ್ಕಳಿಗೇ ಯಾಕೆ ಅಷ್ಟೊಂದು ಕೆಲ್ಸಾ?: 6 ವರ್ಷದ ಕಾಶ್ಮೀರಿ ಪೋರಿಯ ಕ್ಯೂಟ್ ಪ್ರಶ್ನೆ!

2016ರವರೆಗೂ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೇಳಿಕೊಂಡಿದ್ದರು. ಎಐಎಡಿಎಂಕೆ ಕೂಡ ಇದನ್ನು ತೀವ್ರ ವಿರೋಧಿಸಿ 2017ರಲ್ಲಿ ವಿಧಾನಸಭೆಯಲ್ಲಿ ಎರಡು ಮಸೂದೆಗಳನ್ನು ಮಂಡಿಸಿತ್ತು. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಪತ್ರದಲ್ಲಿ ಪನ್ನೀರ್ ಸೆಲ್ವಂ ಉಲ್ಲೇಖಿಸಿದ್ದಾರೆ.

ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಿಂದ ಬಹಳ ತೊಂದರೆಯಾಗುತ್ತಿದೆ ಎಂದು ಡಿಎಂಕೆ, ಎಐಎಡಿಎಂಕೆ ಸೇರಿದಂತೆ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ದೀರ್ಘಕಾಲದಿಂದ ವಿರೋಧಿಸುತ್ತಲೇ ಬಂದಿವೆ. ಎನ್‌ಸಿಇಆರ್‌ಟಿ-ಸಿಬಿಎಸ್‌ಇ ಪಠ್ಯಕ್ರಮದ ಮಾದರಿಯಲ್ಲಿರುವುದರಿಂದ ಪರೀಕ್ಷೆಯನ್ನು ತೆಗೆದುಕೊಳ್ಳಲು ಪ್ರತ್ಯೇಕ ತರಬೇತಿಯ ಅವಶ್ಯಕತೆಯಿದೆ. ಆದ್ರೆ ಆ ಬಡ ವಿದ್ಯಾರ್ಥಿಗಳಿಗೆ  ಕೋಚಿಂಗ್ ಕೇಂದ್ರಗಳು ವಿಧಿಸುವ ಶುಲ್ಕವನ್ನು ಅವರು ಭರಿಸಲಾಗುವುದಿಲ್ಲ


ಮಧುರೈನಲ್ಲಿ ಏಮ್ಸ್ ವೈದ್ಯಕೀಯ ಕಾಲೇಜು ಇದ್ದರೂ, ತಮಿಳುನಾಡಿಗೆ ಈವರೆಗೂ 11 ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಇನ್ನು ಸಿಬಿಎಸ್‌ಸಿ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಪನ್ನೀರ್‌ಸೆಲ್ವಂ ಹೇಳಿದ್ದಾರೆ.

ಉನ್ನತ ಶಿಕ್ಷಣಕ್ಕಾಗಿ ಪಶ್ಚಿಮ ಬಂಗಾಳದಲ್ಲಿ ಕ್ರೆಡಿಟ್ ಕಾರ್ಡ್ ಸ್ಕೀಮ್!

ನೀಟ್ ಪರೀಕ್ಷೆ ಮಾತ್ರವಲ್ಲ, ಎಲ್ಲಾ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನೂ ರದ್ದುಗೊಳಿಸಲು ಏಕರೂಪದ ನೀತಿ ನಿರ್ಧಾರ ಕೈಗೊಳ್ಳುವಂತೆ ಪತ್ರದಲ್ಲಿ ಮೋದಿಗೆ ಪನ್ನೀರ್‌ಸೆಲ್ವಂ ವಿನಂತಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಪ್ರವೇಶ ಪಡೆಯುವ ಸಂಬಂಧ ನಿರ್ಧಾರ ಕೈಗೊಳ್ಳಲು ರಾಜ್ಯಗಳಿಗೆ ಕೇಂದ್ರ ಅವಕಾಶ ನೀಡಬೇಕು. ಆಗ ತಮಿಳುನಾಡು ನಿಮಗೆ ಕೃತಜ್ಞರಾಗಿರುತ್ತದೆ ಎಂದು ಹೇಳಿದ್ದಾರೆ. ಜೂನ್ 5 ರಂದು, ತಮಿಳುನಾಡ ಸರ್ಕಾರವು 12 ನೇ ತರಗತಿ ರಾಜ್ಯ ಮಂಡಳಿಯ ಸಾರ್ವಜನಿಕ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡುವ ಬಗ್ಗೆ ತೀರ್ಮಾನಿಸಲು ಫಲಕವನ್ನು ರಚಿಸಲಾಗುವುದು ಮತ್ತು ಅಂತಹ ಅಂಕಗಳು ಕಾಲೇಜು ಕೋರ್ಸ್‌ಗಳಿಗೆ ಪ್ರವೇಶದ ಮಾನದಂಡವಾಗಿರುತ್ತದೆ” ಎಂದು ಹೇಳಿದ್ದಾರೆ ಪನ್ನೀರ್ಸೆಲ್ವಂ.

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ ಹಲವು ರಾಜ್ಯಗಳು 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡುವ ನಿರ್ಧಾರ ಕೈಗೊಳ್ಳುತ್ತಿವೆ. ಕರ್ನಾಟಕವೂ ಪಿಯುಸಿ ದ್ವಿತೀಯ ಪರೀಕ್ಷೆಯನ್ನುರದ್ದು ಮಾಡಿದೆ. ಇನ್ನು ಎಸ್ಸೆಸ್ಸೆಲ್ಸಿ ತರಗತಿ ಪರೀಕ್ಷೆ ನಡೆಸುವ ಬಗ್ಗೆಯೂ ಅನೇಕ ರಾಜ್ಯಗಳಲ್ಲಿ ಗೊಂದಲವಿದೆ. 

ಪ್ಲೀಸ್... 4G ನೆಟ್ ಕೊಡಿ ಎಂದು ವಿದ್ಯಾರ್ಥಿಗಳು ಕೇಳುತ್ತಿರುವುದು ಯಾಕೆ?

ಕೋವಿಡ್‌ ಸೋಂಕು ಹಾಗೂ ಮಕ್ಕಳ ಆರೋಗ್ಯದ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ರದ್ದು ಮಾಡಿರುವದು ಸೂಕ್ತಕ್ರಮವಾಗಿದೆ ಎಂದು ಕೆಲವರು ವಾದಿಸಿದರೆ, ಬೋರ್ಡ್ ಎಕ್ಸಾಮ್‌ಗಳನ್ನು ನಡೆಸಬೇಕಿತ್ತು ಎಂದು ವಾದಿಸುವವರಿಗೇನೂ ಕಡಿಮೆ ಇಲ್ಲ. ವಾದ- ಪ್ರತಿವಾದಗಳೇನೇ ಇರಲಿ. ಕೋವಿಡ್ ಸೋಂಕಿನಿಂದಾಗಿ ಇಡೀ ಶೈಕ್ಷಣಿಕ ವ್ಯವಸ್ಥೆಯಂತೂ ಬಡುಮೇಲಾಗಿರುವುದು ನಿಜ.

click me!