ಶಿಕ್ಷಕರ ಪರಿಹಾರಕ್ಕೆ ಪಿಯು ಪರೀಕ್ಷಾ ಶುಲ್ಕ: ವಿರೋಧ

By Kannadaprabha News  |  First Published Jun 8, 2021, 10:57 AM IST
  • ವಿದ್ಯಾರ್ಥಿಗಳು ಸರ್ಕಾರಕ್ಕೆ ಪಾವತಿಸಿರುವ ಶುಲ್ಕ ಕೊರೋನಾ ಪರಿಹಾರಕ್ಕೆ
  • ಸಂಕಷ್ಟದಲ್ಲಿರುವ ಶಿಕ್ಷಕರ ಪರಿಹಾರ ನಿಧಿಗೆ ಶುಲ್ಕ ಹಣ ಬಳಕೆ
  • ಪೋಷಕರಿಂದ ಶುಲ್ಕದ ಹಣ ಬಳಕೆಗೆ ಭಾರೀ ವಿರೋಧ

 ಬೆಂಗಳೂರು (ಜೂ.08):  ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿರುವುದರಿಂದ ವಿದ್ಯಾರ್ಥಿಗಳು ಸರ್ಕಾರಕ್ಕೆ ಪಾವತಿಸಿರುವ ಶುಲ್ಕದ ಹಣವನ್ನು ಕೊರೋನಾದಿಂದ ಸಂಕಷ್ಟದಲ್ಲಿರುವ ಖಾಸಗಿ ಶಾಲಾ- ಕಾಲೇಜು ಶಿಕ್ಷಕರಿಗೆ ಪರಿಹಾರ ನೀಡಲು ಚಿಂತನೆ ನಡೆಸುತ್ತಿರುವ ಸರ್ಕಾರದ ನಡೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಕೊರೋನಾ ಲಾಕ್‌ಡೌನ್‌ನಿಂದ ಸಣ್ಣ ಪುಟ್ಟಕೆಲಸ ಮಾಡುತ್ತಿರುವವರು, ಕೂಲಿ ಕಾರ್ಮಿಕರು, ಅಸಂಘಟಿತ ವಲಯದಲ್ಲಿರುವವರು ಕೂಲಿ-ನಾಲಿ ಮಾಡಿ ಮಕ್ಕಳನ್ನು ಓದಿಸಲು ಸರ್ಕಾರಕ್ಕೆ ಪಾವತಿಸಿರುವ ಹಣವನ್ನು ಯಾವ ಆಧಾರದಲ್ಲಿ ಬಳಸಿಕೊಳ್ಳುತ್ತಾರೆ. ನಮ್ಮ ಒಪ್ಪಿಗೆ ಇಲ್ಲದೆ, ನಮ್ಮ ಮಕ್ಕಳ ಶುಲ್ಕದ ಹಣವನ್ನು ಬಳಸಿಕೊಳ್ಳಲು ಸರ್ಕಾರಕ್ಕೆ ಯಾವ ಹಕ್ಕಿದೆ ಎಂದು ಪೋಷಕರು ಪ್ರಶ್ನಿಸಿದ್ದಾರೆ.

Tap to resize

Latest Videos

ಪ್ರತಿ ವಿದ್ಯಾರ್ಥಿಗೆ ಪರೀಕ್ಷಾ ಶುಲ್ಕವಾಗಿ 190 ರು., ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳಿಂದ 500 ರು., ತಡವಾಗಿ ಶುಲ್ಕ ಪಾವತಿಸಿರುವವರಿಂದ 700ರಿಂದ 1320 ರು. ವರೆಗೆ ವಿವಿಧ ಹಂತದಲ್ಲಿ ಪಿಯು ಇಲಾಖೆಯು ಶುಲ್ಕ ಪಾವತಿಸಿಕೊಂಡಿದೆ. ಸುಮಾರು 6.25 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು 11 ಕೋಟಿ ರು.ಗಳಿಗೂ ಹೆಚ್ಚಿನ ಮೊತ್ತ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

ಪಿಯು ಪರೀಕ್ಷಾ ಶುಲ್ಕ ವಾಪಸ್‌ಗೆ ವಿದ್ಯಾರ್ಥಿಗಳು, ಪೋಷಕರ ಆಗ್ರಹ ..

ಶಿಕ್ಷಕರಿಗೆ ಪರಿಹಾರ ನೀಡುವುದಕ್ಕಾಗಿ ಇಲಾಖೆಯಲ್ಲಿ ಲಭ್ಯವಿರುವ ಅನುದಾನದ ಮಾಹಿತಿಯನ್ನು ಸಚಿವರು ಕೇಳಿದ್ದು, ಶುಲ್ಕದ ಮೊತ್ತವನ್ನು ಸೇರಿಸಿದರೆ ದೊಡ್ಡ ಮೊತ್ತವಾಗಬಹುದು. ಅದನ್ನೇ ಶಿಕ್ಷಕರಿಗೆ ಪರಿಹಾರ ನೀಡಲು ಬಳಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ ಎನ್ನಲಾಗಿದೆ. ಶಿಕ್ಷಕರ ಅನುಕಂಪ ಗಿಟ್ಟಿಸಲು ಸರ್ಕಾರದ ಹಣ ವಿನಿಯೋಗಿಸಲಿ. ಆದರೆ, ವಿದ್ಯಾರ್ಥಿಗಳ ಶುಲ್ಕವನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಖಾಸಗಿ ಶಾಲಾ ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಸಂಚಾಲಕ ಬಿ.ಎನ್‌. ಯೋಗಾನಂದ ಒತ್ತಾಯಿಸಿದ್ದಾರೆ.

ಉಪನ್ಯಾಸಕ ಸಂಘಟನೆಗಳ ವಿರುದ್ಧ ಆಕ್ರೋಶ: ‘ಇನ್ನು ಶುಲ್ಕದ ಮೊತ್ತವನ್ನು ಕೊರೋನಾದಿಂದ ಸಂಕಷ್ಟದಲ್ಲಿರುವ ಶಾಲಾ-ಕಾಲೇಜು ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಬಳಸುವಂತೆ ಸರ್ಕಾರಿ ಕಾಲೇಜು ಉಪನ್ಯಾಸಕರ ಸಂಘವು ಸರ್ಕಾರಕ್ಕೆ ಸಲಹೆ ನೀಡಿದೆ. ಉಪನ್ಯಾಸಕರು ಕೇವಲ ಒಂದು ದಿನದ ಸಂಬಳವನ್ನು ನೀಡಲು ಸಹ ಮುಂದೆ ಬಂದಿಲ್ಲ. ಇಂತಹ ಸಮಯದಲ್ಲಿ ಉಪನ್ಯಾಸಕರ ಸಂಘಕ್ಕೆ ಸಲಹೆ ನೀಡಲು ಯಾವ ನೈತಿಕತೆ ಇದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಸರ್ಕಾರ ತೀರ್ಮಾನಿಸಲಿದೆ

ದ್ವಿತೀಯ ಪಿಯು ವಿದ್ಯಾರ್ಥಿಗಳು ಪಾವತಿಸಿರುವ ಪರೀಕ್ಷಾ ಶುಲ್ಕವನ್ನು ಏನು ಮಾಡಬೇಕು ಎಂಬುದನ್ನು ಸರ್ಕಾರ ತೀರ್ಮಾನಿಸಲಿದೆ. ಇಲಾಖಾ ಹಂತದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ.

- ಆರ್‌. ಸ್ನೇಹಲ್‌, ಪಿಯು ಮಂಡಳಿ ನಿರ್ದೇಶಕಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!