ಹೊಸಪೇಟೆ: ಮಕ್ಕಳಿಗೆ ದೇವಸ್ಥಾನದ ಆವರಣವೇ ಪಾಠಶಾಲೆ..!

By Kannadaprabha NewsFirst Published May 27, 2022, 10:07 AM IST
Highlights

*  ಪ್ರೌಢ ಶಾಲೆಯ 100 ಮಕ್ಕಳಿಗಿಲ್ಲ ಕೊಠಡಿ
*  ರಸ್ತೆ ವಿಸ್ತರಣೆಗೆ ಶಾಲಾ ಕಟ್ಟಡ ನೆಲಸಮ
*  ಶಾಲಾ ಮಕ್ಕಳಿಗೆ ಸ್ವಂತ ಕಟ್ಟಡ ಕಲ್ಪಿಸಬೇಕು
 

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಮೇ.27): ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿ ಗ್ರಾಮದಲ್ಲಿ ಸ್ವಂತ ಶಾಲಾ ಕಟ್ಟಡವಿಲ್ಲದೆ ಮಕ್ಕಳು ದೇವಸ್ಥಾನದಲ್ಲಿ ಪಾಠ ಆಲಿಸುವಂಥ ಸ್ಥಿತಿ ಇದೆ. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ತವರು ಕ್ಷೇತ್ರ ಹಾಗೂ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯಲ್ಲೆ ಸ್ಥಿತಿ ಇದೆ. ಇಬ್ಬರು ಸಚಿವರು ಇದ್ದರೂ ಮಕ್ಕಳು ಮಾತ್ರ ದಿನನಿತ್ಯ ಸುಡುಗಾಡೆಪ್ಪ ದೇವರ ಆವರಣದ ಮರಗಳ ನೆರಳಿನಲ್ಲೇ ಪಾಠ ಆಲಿಸುವ ಸ್ಥಿತಿ ಇದೆ.

ಸ್ವಂತ ಕಟ್ಟಡವಿಲ್ಲ:

ಬೈಲುವದ್ದಿಗೇರಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 433 ಮಕ್ಕಳು ಪ್ರವೇಶ ಪಡೆದಿದ್ದಾರೆ. ಈ ಪೈಕಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 100 ಮಕ್ಕಳಿದ್ದಾರೆ. ಈ ಪ್ರೌಢ ಶಾಲೆಯಲ್ಲಿ ಸ್ವಂತ ಶಾಲಾ ಕಟ್ಟಡವಿಲ್ಲದ್ದರಿಂದ ದೇವಸ್ಥಾನದ ಆವರಣದಲ್ಲಿ ಪಾಠ, ಪ್ರವಚನ ಆಲಿಸುವ ಸ್ಥಿತಿ ಇದೆ. ಮೇ 16ರಿಂದ ಶಾಲೆಗಳು ಪುನರಾಂಭವಾಗಿದ್ದು, ಒಂಬತ್ತು ಹಾಗೂ ಹತ್ತನೆ ತರಗತಿ ಮಕ್ಕಳಿಗೆ ಪಾಠ ಕೇಳಲು ಕೊಠಡಿ ಇಲ್ಲದಂತಾಗಿದೆ. ಹಾಗಾಗಿ ದೇಗುಲದ ಆವರಣದಲ್ಲೇ ಪಾಠ ಆಲಿಸುವಂತಾಗಿದೆ. ಮಳೆ,ಗಾಳಿ ಬಂದರೆ, ದೇಗುಲದ ಸಮುದಾಯ ಭವನದಲ್ಲಿ ಶಿಕ್ಷಕರು ಪಾಠ ಮಾಡುತ್ತಾರೆ.

ರೋಹಿತ್ ಚಕ್ರತೀರ್ಥ ಶೈಕ್ಷಣಿಕ ಅರ್ಹತೆ ಬಹಿರಂಗ, ಸಚಿವ ನಾಗೇಶ್ ಸುಳ್ಳು ಹೇಳಿದ್ರಾ?

ಈ ಶಾಲೆಯಲ್ಲಿ 433 ಮಕ್ಕಳ ಪೈಕಿ ಒಂಬತ್ತು ಮತ್ತು ಹತ್ತನೆ ತರಗತಿಯಲ್ಲಿ 100 ಮಕ್ಕಳು ನೋಂದಣಿಯಾಗಿದ್ದಾರೆ. ಮಕ್ಕಳು ಮರಗಳಡಿಯಲ್ಲಿ ನಿತ್ಯ ಪಾಠ ಆಲಿಸುತ್ತಿರುವುದನ್ನು ಕಂಡು ಪಾಲಕರು ಕೂಡ ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ವರ್ಗಾಯಿಸಿ ಎಂದು ಶಾಲಾ ಶಿಕ್ಷಕರಿಗೆ ದುಂಬಾಲು ಬಿದ್ದಿದ್ದಾರೆ.

ಮದುವೆ ಇದ್ದರೆ ಶಾಲೆಗೆ ರಜೆ:

ದಿನನಿತ್ಯ ದೇವಸ್ಥಾನದ ಆವರಣದಲ್ಲೇ ಪಾಠ-ಪ್ರವಚನ ನಡೆಯುತ್ತಿದೆ. ಒಂದು ವೇಳೆ ದೇವಸ್ಥಾನದ ಆವರಣದಲ್ಲಿ ಮದುವೆ ಕಾರ್ಯಕ್ರಮ ಇದ್ದರೆ, ಆ ದಿನ ಶಿಕ್ಷಕರು ಶಾಲೆಗೆ ರಜೆ ಘೋಷಿಸುತ್ತಾರೆ. ಹಾಗಾಗಿ ಮಕ್ಕಳ ಓದಿನ ಮೇಲೆ ಹೊಡೆತ ಬೀಳುತ್ತಿದೆ ಎಂದು ಪಾಲಕರು ಚಿಂತೀತರಾಗಿದ್ದಾರೆ.

ಇದ್ದ ಕಟ್ಟಡ ನೆಲಸಮ:

ರಾಷ್ಟ್ರೀಯ ಹೆದ್ದಾರಿ-67ರ ರಸ್ತೆ ವಿಸ್ತರಣೆಗಾಗಿ ಇದ್ದ ಎರಡು ಸುಸಜ್ಜಿತ ಕೊಠಡಿಗಳನ್ನು ನೆಲಸಮ ಮಾಡಲಾಗಿದೆ.ಪ್ರಾಥಮಿಕ ಶಾಲೆಯಲ್ಲಿ ಉಳಿದಿರುವ ಕೊಠಡಿಗಳಲ್ಲಿ ಮಕ್ಕಳನ್ನು ಓದಿಸಲಾಗುತ್ತಿದೆ. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ನೆಲಸಮ ಮಾಡಲಾಗಿರುವ ಕೊಠಡಿಗಳನ್ನು ಮರು ಕಟ್ಟಡ ನಿರ್ಮಾಣ ಮಾಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಅಲೆದಾಡುತ್ತಿದ್ದಾರೆ. ಶಾಲಾ ಮಕ್ಕಳಿಗೆ ಶೌಚಾದಿ ಕ್ರಿಯೆಗಳಿಗೂ ಬಯಲೇ ಆಸರೆಯಾಗಿದೆ. ಇಸ್ಕಾನ್‌ನಿಂದ ಬಿಸಿಯೂಟ ಬರುತ್ತಿತ್ತು. ಈ ಊಟವನ್ನು ದೇಗುಲದ ಆವರಣದಲ್ಲೇ ಮಕ್ಕಳು ಉಣ್ಣುವಂತಾಗಿದೆ.

ಗುಲಬರ್ಗಾ ವಿವಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ಕ್ಯಾನ್ಸಲ್

ಶಾಲಾ ಮಕ್ಕಳಿಗೆ ಸ್ವಂತ ಕಟ್ಟಡ ಕಲ್ಪಿಸಬೇಕು. ಇಲ್ಲವೆ, ಪಕ್ಕದ ಧರ್ಮಸಾಗರ ಗ್ರಾಮದ ಸರ್ಕಾರಿ ಶಾಲೆಗೆ ಮಕ್ಕಳನ್ನು ಸ್ಥಳಾಂತರಿಸಬೇಕು ಎಂದು ಬೈಲುವದ್ದಿಗೇರಿ ಗ್ರಾಮಸ್ಥರು ಹಾಗು ಮಕ್ಕಳ ಪಾಲಕರು ಒತ್ತಾಯಿಸಿದ್ದಾರೆ.
ಶಾಲಾ ಮಕ್ಕಳು, ಶಿಕ್ಷಕರು ಹಾಗು ಮುಖ್ಯಗುರುಗಳು ಕೂಡ ಗ್ರಾಮಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಂದರೆ ಮೊದಲು ಪ್ರೌಢಶಾಲೆ ಕಟ್ಟಡ ನಿರ್ಮಿಸಿ ಕೊಡಿ ಎಂದು ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ, ಇದುವರೆಗೆ ಕಟ್ಟಡ ನಿರ್ಮಾಣ ಮಾಡಿಲ್ಲ. ಹಾಗಾಗಿ ದೇಗುಲದ ಆವರಣವೇ ಮಕ್ಕಳಿಗೆ ಆಸರೆಯಾಗಿದೆ. ಮಳೆ,ಗಾಳಿ ಬಂದರೆ ಮಕ್ಕಳ, ಶಿಕ್ಷಕರ ಪರದಾಟ ಹೇಳತೀರದಾಗಿದೆ.

ಬೈಲುವದ್ದಿಗೇರಿ ಪ್ರೌಢಶಾಲೆಯಲ್ಲಿ 100 ಮಕ್ಕಳು ಪ್ರವೇಶ ಪಡೆದಿದ್ದಾರೆ. 9 ಹಾಗೂ ಹತ್ತನೇ ತರಗತಿ ಮಕ್ಕಳಿಗೆ ಕೊಠಡಿ ಇಲ್ಲದಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಉಪವಿಭಾಗಾಧಿಕಾರಿಗಳು ಸರ್ಕಾರಿ ಜಾಗ ನೀಡಲು ಒಪ್ಪಿದ್ದಾರೆ. ಜಾಗ ಹಸ್ತಾಂತರವಾದ ಬಳಿಕ ಕಟ್ಟಡ ನಿರ್ಮಿಸಲಾಗುವುದು ಅಂತ ವಿಜಯನಗರ ಡಿಡಿಪಿಐ ಜಿ. ಕೊಟ್ರೇಶ್‌ ತಿಳಿಸಿದ್ದಾರೆ.  

ನಮಗೆ ಶಾಲಾ ಕಟ್ಟಡ ನಿರ್ಮಿಸಿ ಕೊಡಲಿ. ಬಯಲಿನಲ್ಲೇ ಪಾಠ ಕೇಳುವ ಸ್ಥಿತಿ ಇದೆ.ನಮ್ಮ ಸ್ಥಿತಿಯನ್ನು ಪರಿಹರಿಸಬೇಕು. ಹಾಗಾಗಿ ಕೂಡಲೇ ಕಟ್ಟಡ ನಿರ್ಮಿಸಬೇಕು. ಇಲ್ಲಿವರೆಗೆ ಸೂಕ್ತ ಸ್ಥಳದಲ್ಲಿ ಪಾಠ ಮಾಡಲಿ ಅಂತ ಬೈಲುವದ್ದಿಗೇರಿ ಪ್ರೌಢಶಾಲೆ ಮಕ್ಕಳು ಆಗ್ರಹಿಸಿದ್ದಾರೆ. 
 

click me!