ಪಠ್ಯ ಪುಸ್ತಕ ಪರಿಷ್ಕರಣೆ, ದಿನಕ್ಕೊಂದು ತಿರುವು: ಸಿಎಂ ಮಧ್ಯಪ್ರವೇಶಕ್ಕೆ ಸಾಹಿತಿಗಳ ಆಗ್ರಹ!

By Govindaraj S  |  First Published May 27, 2022, 1:30 AM IST

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ, ಶಿಕ್ಷಣ ತಜ್ಞರು, ಚಿಂತಕರು, ಸಾಹಿತಿಗಳು, ಪ್ರಗತಿಪರರು ಪರಿಷ್ಕರಣೆ ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ. 


ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಮೇ.27): ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ, ಶಿಕ್ಷಣ ತಜ್ಞರು, ಚಿಂತಕರು, ಸಾಹಿತಿಗಳು, ಪ್ರಗತಿಪರರು ಪರಿಷ್ಕರಣೆ ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ. ಈ ನಡುವೆ ಲೇಖಕರು ತಮ್ಮ ಬರಹವನ್ನ ಪಠ್ಯದಿಂದ ಹಿಂಪಡೆಯುತ್ತೇವೆಂಬ ಅಭಿಯಾನ ಆರಂಭಿಸಿದ್ದು, ಸಿಎಂ ಮಧ್ಯ ಪ್ರವೇಶಿಸಿ ವಿವಾದ ಬಗೆಹರಿಸುವಂತೆ ಹಿರಿಯ ಸಾಹಿತಿಗಳು ಸಿಎಂ ಮೊರೆ ಹೋಗಿದ್ದಾರೆ. ಕಳೆದ 2-3 ದಿನಗಳಿಂದ ಸಾಹಿತಿಗಳು ಪಠ್ಯದಲ್ಲಿರುವ ತಮ್ಮ ಲೇಖನವನ್ನು ಹಿಂಪಡೆಯುತ್ತೇವೆಂಬ ಅಭಿಯಾನ ಆರಂಭಿಸಿದ್ದು ದೇವನೂರು ಮಹಾದೇವ, ಡಾ. ಜಿ ರಾಮಕೃಷ್ಣ ಅವರ ಸಾಲಿಗೆ ದಿನಕ್ಕೊಂದು ಹೆಸರು ಸೇರುತ್ತಿದೆ. 

Tap to resize

Latest Videos

ಈ ವಿವಾದಕ್ಕೆ ಕನ್ನಡ ಪರ ಹೋರಾಟಗಾರರು ಕೈಜೊಡಿಸಿರೋದು ಮತ್ತಷ್ಟು ಬಲ ತುಂಬುತ್ತಿದೆ. ಇನ್ನು ಈ ವಿವಾದ ತಾರಕ್ಕೇರ್ತಿರುವ ಮಧ್ಯೆಯೇ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ಸಿಎಂ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ವಿವಾದಕ್ಕೆ ತೆರೆ ಎಳೆಯಬೇಕೆಂದು ಮನವಿ ಮಾಡಿದ್ದಾರೆ. ಚಕ್ರತೀರ್ಥ ಅವರ ಸಮಿತಿಯ ಪರಿಷ್ಕೃತ ಪಠ್ಯವನ್ನು ತಡೆಹಿಡಿದು, ಹಿಂದಿನ ಪಠ್ಯವನ್ನ ಬೋಧಿಸಿ, ಇಲ್ಲ ವಿವಾದಿತ ಪಠ್ಯವನ್ನ ಮಕ್ಕಳಿಗೆ ಬೋದಿಸಬೇಡಿ ಎಂದು ಸಿಎಂಗೆ ಹಂಪ ನಾಗರಾಜಯ್ಯ ಮನವಿ ಮಾಡಿದ್ದಾರೆ. 

Textbook Controversy: ದೇವನೂರ ಭೇಟಿಯಾಗಿ ಪಠ್ಯ ಬಗ್ಗೆ ಮನವೊಲಿಕೆ: ಸಚಿವ ನಾಗೇಶ್‌

ರಾಷ್ಟ್ರಕವಿ ಕುವೆಂಪು ಅವರಿಗೆ 4ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಬರಗೂರು ಸಮಿತಿ ಅವಮಾನ ಮಾಡಿದೆ ಎಂಬ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿರುವ ರಾಮಚಂದ್ರಪ್ಪ ಪರಿಸರ ಅಧ್ಯಯನ ಪುಸ್ತಕದ ಪರಿಷ್ಕರಣೆ  ಮಾಡಿದ್ದು ನಾವಲ್ಲ. ನಮ್ಮ ಕಾಲದ ಪರಿಷ್ಕರಣೆಯಲ್ಲಿ ಇದನ್ನ ಬರೆದಿಲ್ಲ ನಾನು ಕುವೆಂಪು ಅವರ ʼಮನುಜ ಮತ ವಿಶ್ವಪಥʼ ಸಂದೇಶದ ಬೆಳಕಿನಲ್ಲಿ ಸಾಗುತ್ತಿದ್ದೇನೆ, ನಾನು ಮತ್ತು ನನ್ನಂತವರು ಅವರ ಅರ್ಥಪೂರ್ಣ ಸಾಧನೆಯನ್ನು ಸ್ವಲ್ಪವೂ ಕಡೆಗಣಿಸಲು ಸಾಧ್ಯವೇ ಇಲ್ಲ ಅಂತ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರೋಹಿತ್ ಚಕ್ರತೀರ್ಥ ಈ ಲೇಖಕರ ಹಿಂದೆ ರಾಜಕೀಯ ಪಕ್ಷ ಅಥವಾ ಒಂದು ಸಿದ್ಧಾಂತ ಟೂಲ್ ಕಿಟ್ ನಂತೆ ವರ್ಕ್ ಮಾಡ್ತಿದೆ. ಇವರ ಹಿಂದೆ ಬಂದೂಕು ಇಟ್ಟು ಗುಂಡು ಹೊಡೆಯಲಾಗ್ತಿದೆ,  ಒಮ್ಮೆ ಹಾಕಿ ಅಂತಾರೆ ಒಮ್ಮೆ ತೆಗೆಯಿರಿ ಅಂತಾರೆ. 

ಪ್ರತಿಭಟನೆ ಮಾಡುವವರು ಯಾವಾಗಲೂ ಮುಕ್ತರು, ಕೋಟ್ಯಾಂತರ ಜನರು ಪಠ್ಯ ಪರಿಷ್ಕರಣೆಯ ಪರವಾಗಿದ್ದಾರೆ. ಪ್ರತಿಭಟಿಸುವವರು ಪರಿಷ್ಕರಣೆಯ ಪಾಠಗಳನ್ನ ಸರಿಯಾಗಿ ಓದಬೇಕು ಎಂದು ಟಾಂಗ್ ಕೊಟ್ಟಿದ್ದಾರೆ. ಇನ್ನು ಅವರ ವಿದ್ಯಾರ್ಹತೆ ಬಗ್ಗೆ ಎದ್ದಿದ್ದ ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದು ಸಚಿವರು ಮಾತನಾಡುವ ಬರದಲ್ಲಿ ಕೆಲ ತಪ್ಪು ಮಾಹಿತಿ ಹೇಳಿರಬಹುದು. ನಾನು ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ಸುಮಾರು 4-5 ವರ್ಷಗಳ  ಕಾಲ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದೇನೆ. ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದೇನೆ, ವಿಜ್ಞಾನ, ಗಣಿತ, ವ್ಯಕ್ತಿ ಚಿತ್ರ, ಮಕ್ಕಳ ಕಥೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 35 ಪುಸ್ತಕಗಳು ಪ್ರಕಟಣೆಯಾಗಿವೆ. 

ರೋಹಿತ್ ಚಕ್ರತೀರ್ಥ ಶೈಕ್ಷಣಿಕ ಅರ್ಹತೆ ಬಹಿರಂಗ, ಸಚಿವ ನಾಗೇಶ್ ಸುಳ್ಳು ಹೇಳಿದ್ರಾ?

ಐಐಟಿ, ಸಿಇಟಿ, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ತರಬೇತಿ ಮಾಡ್ತೇನೆ. ಸೂತ್ರ ಎಂಬ ವಿಜ್ಞಾನ ಪತ್ರಿಕೆಯ ಸಂಪಾದಕನಾಗಿದ್ದೇನೆ ಅಂತಾ ಸ್ಪಷ್ಟ ಪಡಿಸಿದ್ದಾರೆ. ಸಾಹಿತಿಗಳು, ಶಿಕ್ಷಣ ತಜ್ಞರು, ಪ್ರಗತಿಪರರು ಎಷ್ಟೇ ಆಕ್ರೋಶ ವ್ಯಕ್ತಪಡಿಸಿದರೂ ಶಿಕ್ಷಣ ಸಚಿವರು ಕ್ಯಾರೇ ಎನ್ನುತ್ತಿಲ್ಲ, ಇನ್ನು ಸಿಎಂಗೆ ಬರೆದಿರೋ ಪತ್ರಕ್ಕೆ ಪ್ರತಿಕ್ರಿಯೆಯೇ ಇಲ್ಲ. ಈಗಾಗ್ಲೆ ಪರಿಷ್ಕರಣೆ ಪಠ್ಯ ಶೇ.80 ರಷ್ಟು ಪ್ರಿಂಟ್ ಆಗಿದ್ದು ಅದನ್ನ ತಡೆಯೋ ಮಾತೇ ಇಲ್ಲ ಅಂತಿದೆ ಶಿಕ್ಷಣ ಇಲಾಖೆ. ಚಕ್ರತೀರ್ಥ ವಿದ್ಯಾರ್ಹತೆ ಗೂ ಉತ್ತರ ಸಿಕ್ಕಿದ್ದು ಈ ವಿವಾದ ಮತ್ಯಾವ ಸ್ವರೂಪ ಪಡೆಯುತ್ತೆ ಎಂಬುದನ್ನ ಕಾದುನೋಡಬೇಕಿದೆ.

click me!