* ಎಸ್ಸೆಸ್ಸೆಲ್ಸಿಯ ಇಂಗ್ಲಿಷ್‌ನಲ್ಲಿ 50 ಅಂಕ ವ್ಯತ್ಯಾಸ
* ಪ್ರಜೆಂಟೇಶನ್ ಶಾಲೆಯ ವಿದ್ಯಾರ್ಥಿನಿ ಸಾನಿಯಾ ದೊಡಮನಿಗೆ ಸಮಸ್ಯೆ
* 50 ಅಂಕಗಳ ವ್ಯತ್ಯಾಸದಿಂದ ಉತ್ತಮ ಕಾಲೇಜಿಗೆ ಪ್ರವೇಶ ಸಿಗುವುದೇ ಎಂಬ ಪ್ರಶ್ನೆ
ಬಸವರಾಜ ಹಿರೇಮಠ
ಧಾರವಾಡ(ಮೇ.28): ಕಷ್ಟ ಪಟ್ಟು ಓದಿ ಹೆಚ್ಚಿನ ಅಂಕಗಳನ್ನು ಪಡೆದರೂ ತಾಂತ್ರಿಕ ಸಮಸ್ಯೆಯಿಂದಾಗಿ ಆನ್‌ಲೈನ್ ಫಲಿತಾಂಶದಲ್ಲಿ ಬರೋಬ್ಬರಿ 50 ಅಂಕಗಳ ವ್ಯತ್ಯಾಸದಿಂದ ಧಾರವಾಡದ ವಿದ್ಯಾರ್ಥಿನಿಯೊಬ್ಬಳು ಗೊಂದಲದಲ್ಲಿ ಸಿಲುಕಿದ್ದಾಳೆ.
ಪ್ರಜೆಂಟೇಶನ್ ಶಾಲೆಯ ವಿದ್ಯಾರ್ಥಿನಿ ಸಾನಿಯಾ ದೊಡಮನಿ ನೈಜವಾಗಿ ಇಂಗ್ಲಿಷ್ ವಿಷಯಕ್ಕೆ 91 ಅಂಕ ಪಡೆದಿದ್ದಾಳೆ. ಫಲಿತಾಂಶ ದಿನ ಆನ್‌ಲೈನ್ ಮೂಲಕ ಪಡೆದ ಫಲಿತಾಂಶದಲ್ಲಿ 41 ಅಂಕಗಳಿವೆ. ಹೀಗಾಗಿ ವಿದ್ಯಾರ್ಥಿನಿ ತೊಂದರೆಗೆ ಸಿಲುಕಿದ್ದಾಳೆ.
SSLC ಪರೀಕ್ಷೆಯಲ್ಲಿ ರಾಯಚೂರು ಜಿಲ್ಲೆಗೆ ಫಸ್ಟ್ , ಆಧಾರ್ ಕಾರ್ಡ್‌ಗಾಗಿ ಅಲೆದಾಡಿ ಸುಸ್ತು!
ಎಸ್ಸೆಸೆಲ್ಸಿ ಫಲಿಂತಾಶ ಬಂದಾಗ ಸಾನಿಯಾಗೆ ಅಚ್ಚರಿ ಕಾದಿತ್ತು. ಎಲ್ಲ ವಿಷಯಗಳಿಗೂ ಅಂದುಕೊಂಡಷ್ಟು ಅಂಕಗಳು ಬಂದಿವೆ. ಆದರೆ, ಇಂಗ್ಲಿಷ್ ವಿಷಯಕ್ಕೆ ಮಾತ್ರ ಬರೀ 41 ಅಂಕ ಬಂದಿರುವುದು ಸಾನಿಯಾಗೆ ಕಣ್ಣೀರು ತರಿಸಿದೆ. ಅಪ್ಪಾ, ನನಗೆ ಇಷ್ಟೊಂದು ಕಡಿಮೆ ಅಂಕ ಬರಲು ಸಾಧ್ಯವೇ ಇಲ್ಲ. ಏನಾದರೂ ಮಾಡು ಎಂದು ದುಂಬಾಲು ಬಿದ್ದಾಗ, ಅವರ ತಂದೆ ಉತ್ತರ ಪತ್ರಿಕೆ ತರೆಯಿಸಿ ನೋಡಿದ್ದಾರೆ. ಉತ್ತರ ಪತ್ರಿಕೆಯಲ್ಲಿ ಎಲ್ಲ ರೀತಿಯಿಂದ ಅಂಕ ಎಣಿಕೆ ಮಾಡಿದಾಗ 91 ಅಂಕ ಸ್ಪಷ್ಟವಾಗಿವೆ. ಆದರೆ, ಆನ್‌ಲೈನ್ ಫಲಿತಾಂಶದಲ್ಲಿ 41 ಇದೆ.
ಸಾನಿಯಾ ಕನ್ನಡಕ್ಕೆ 98, ಹಿಂದಿಗೆ 97, ಗಣಿತಕ್ಕೆ 96, ವಿಜ್ಞಾನಕ್ಕೆ 98 ಹಾಗೂ ಸಮಾಜಕ್ಕೆ 97 ಅಂಕಗಳು ಬಂದಿವೆ. ಇಂಗ್ಲಿಷ್ ವಿಷಯಕ್ಕೆ ಮಾತ್ರ 41 ಅಂಕಗಳು ಬಂದಿದ್ದು ಒಟ್ಟಾರೆ 625ಕ್ಕೆ 552 ಅಂಕಗಳಿವೆ. ಆದರೆ, ಉತ್ತರ ಪತ್ರಿಕೆಯಲ್ಲಿ ಇಂಗ್ಲಿಷ್ ವಿಷಯಕ್ಕೆ 91 ಅಂಕಗಳಿದ್ದು ಒಟ್ಟು 50 ಅಂಕಗಳು ಕಡಿತಗೊಂಡಿದ್ದು ವಿದ್ಯಾರ್ಥಿನಿ ಈಗ ಏನೂ ತೋಚದೇ ಕಂಗಲಾಗಿದ್ದಾಳೆ. ಎಲ್ಲವೂ ಸರಿಯಾಗಿದ್ದರೆ 602 ಅಂಕ ಪಡೆದು ಉತ್ತಮ ಸ್ಥಾನದಲ್ಲಿರುತ್ತಿದ್ದ ಸಾನಿಯಾ ಈಗ ಪಿಯುಸಿ ಪ್ರವೇಶಕ್ಕೂ ಪರದಾಡಬೇಕಿದೆ.
ಅಂಕಗಳಲ್ಲಿ ವ್ಯತ್ಯಾಸವಾಗಿರುವ ಹಿನ್ನೆಲೆಯಲ್ಲಿ ಪ್ರಜೆಂಟೇಶನ್ ಶಾಲೆಗೆ ಹೋಗಿ ಪರಿಶೀಲನೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನೀವೇ ಬೆಂಗಳೂರಿಗೆ ಹೋಗಿ ಸರಿ ಮಾಡಿಕೊಂಡು ಬನ್ನಿ. ಈ ವಿಷಯದಲ್ಲಿ ತಮ್ಮದೇನೂ ಪಾತ್ರವಿಲ್ಲ ಎಂದು ಹೇಳುತ್ತಿದ್ದಾರೆ. ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲ. ಈಗಾಗಲೇ ಪಿಯುಸಿ ಪ್ರವೇಶ ಶುರುವಾಗಿದ್ದು ಮಗಳಿಗೆ ಹೆಚ್ಚಿನ ಅಂಕ ಇದ್ದರೂ ಸಹ ಅಂಕ ಪಟ್ಟಿಯಲ್ಲಿ ಕಡಿಮೆ ಅಂಕ ಬಂದಿದೆ. 50 ಅಂಕಗಳ ವ್ಯತ್ಯಾಸದಿಂದ ಉತ್ತಮ ಕಾಲೇಜಿಗೆ ಪ್ರವೇಶ ಸಿಗುವುದೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ ಎಂದು ಸಾನಿಯಾಳ ತಂದೆ ಅಜೀಜ್ ಆತಂಕ ವ್ಯಕ್ತಪಡಿಸಿದರು.
ಯಾದಗಿರಿ: ಅಂದು ಭಿಕ್ಷುಕಿ ಇಂದು SSLC ಫಲಿತಾಂಶದಲ್ಲಿ ಸಾಧಕಿ...!
ಒಮ್ಮೊಮ್ಮೆ ಯಾರದ್ದೋ ಮಾಡಿರುವ ತಪ್ಪಿಗೆ ಮತ್ತಾರೋ ತೊಂದರೆ ಅನುಭವಿಸುತ್ತಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದ್ದು, ಕೂಡಲೇ ಶಾಲೆಯ ಆಡಳಿತ ಮಂಡಳಿ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಅಥವಾ ಶಿಕ್ಷಣ ಇಲಾಖೆಯಾದರೂ ಇಂತಹ ತಾಂತ್ರಿಕ ಸಮಸ್ಯೆಗಳಿಗೆ ಕೂಡಲೇ ಪರಿಹಾರ ನೀಡಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಅನುಕೂಲ ಆಗಲಿದೆ.
ಕೆಲವೊಮ್ಮೆ ತಾಂತ್ರಿಕ ಕಾರಣದಿಂದ ಈ ರೀತಿ ಅಂಕಗಳಲ್ಲಿ ವ್ಯತ್ಯಾಸ ಬರುವುದು ಸಾಮಾನ್ಯ. ಕೂಡಲೇ ಈ ಬಗ್ಗೆ ಬೆಂಗಳೂರು ಕಚೇರಿಗೆ ಮಾಹಿತಿ ಒದಗಿಸುವ ಮೂಲಕ ವ್ಯತ್ಯಾಸವಾಗಿರುವ ಅಂಕಗಳನ್ನು ಸೇರಿಸಿ ಅಂಕ ಪಟ್ಟಿ ತರಿಸಲಾಗುವುದು ಅಂತ ಡಿಡಿಪಿಐ ಎಸ್.ಎಸ್. ಕೆಳದಿಮಠ ತಿಳಿಸಿದ್ದಾರೆ.