ಉಡುಪಿ ಜಿಲ್ಲೆಯಲ್ಲಿ 625ಕ್ಕೆ 625 ಅಂಕ ಪಡೆದ ಐವರು ವಿದ್ಯಾರ್ಥಿಗಳ ಪೈಕಿ, ಇಬ್ಬರು ವಿದ್ಯಾರ್ಥಿಗಳ ಕೌಟುಂಬಿಕ ಹಿನ್ನೆಲೆ ನೋಡಿದರೆ, ಇವರ ಸಾಧನೆ ಯಾವ ಪವಾಡಕ್ಕೂ ಕಡಿಮೆ ಏನಲ್ಲ ಅನಿಸುತ್ತೆ.
ವರದಿ ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಮೇ.19): ಉಡುಪಿಯಲ್ಲಿ ಶ್ರಮಜೀವಿಗಳ ಮಕ್ಕಳು ಶ್ರಮಪಟ್ಟು ಎಸೆಸೆಲ್ಸಿ ಟಾಪರ್ಸ್ ಆಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 625ಕ್ಕೆ 625 ಅಂಕ ಪಡೆದ ಐವರು ವಿದ್ಯಾರ್ಥಿಗಳ ಪೈಕಿ, ಇಬ್ಬರು ವಿದ್ಯಾರ್ಥಿಗಳ ಕೌಟುಂಬಿಕ ಹಿನ್ನೆಲೆ ನೋಡಿದರೆ, ಇವರ ಸಾಧನೆ ಯಾವ ಪವಾಡಕ್ಕೂ ಕಡಿಮೆ ಏನಲ್ಲ ಅನಿಸುತ್ತೆ.
ಆತ ಕೊಪ್ಪಳ ಜಿಲ್ಲೆಯ ಹುಡುಗ, ತಂದೆ ಕೊಪ್ಪಳದಲ್ಲಿ ಕಾರ್ಮಿಕ. ತಾಯಿ ಜೀವನೋಪಾಯಕ್ಕೆ ದುಡಿಯುವ ಸಲುವಾಗಿ ಉಡುಪಿಯ ಮಲ್ಪೆ ಗೆ ಬಂದವರು. ಮಲ್ಪೆ ಬಂದರಿನಲ್ಲಿ ಮೀನು ಬುಟ್ಟಿಗಳನ್ನು ಹೊತ್ತು ಕೂಲಿ ಕೆಲಸ ಮಾಡುವವರು. ಸದ್ಯ ಈ ಕಾರ್ಮಿಕರ ಮಗ ಪುನೀತ್ ನಾಯ್ಕ್ ರಾಜ್ಯದಲ್ಲಿ ಎಸೆಸೆಲ್ಸಿ ಟಾಪರ್! 625ಕ್ಕೆ 625 ಅಂಕ ಪಡೆದು, ಡಿಸಿ ಆಗುವ ಆಸೆ ಹೊತ್ತ ಕನಸುಗಾರ!
ಉಡುಪಿಗೆ ಅತಿ ಹೆಚ್ಚು ಜನ ಉತ್ತರ ಕರ್ನಾಟಕ ಭಾಗದಿಂದ ಕೂಲಿ ಕೆಲಸಕ್ಕೆ ಬರುತ್ತಾರೆ. ಇಲ್ಲಿ ಕಟ್ಟಡ ಕಾರ್ಮಿಕರಾಗಿ ಅಥವಾ ಮಲ್ಪೆ ಬಂದರಿನಲ್ಲಿ ಮೀನು ಬುಟ್ಟಿ ಹೊರವ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಹೀಗೆ ವಲಸೆ ಬಂದವರ ಮಕ್ಕಳು ಉಡುಪಿ ಜಿಲ್ಲೆಯ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುತ್ತಿದ್ದಾರೆ. ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿ ಪುನೀತ್ ನಾಯ್ಕ್, ಮಾಡಿರುವ ಈ ಸಾಧನೆ, ಲಕ್ಷಗಟ್ಟಲೆ ಫೀಸು ತೆಗೆದುಕೊಂಡು ಪಾಸಿಂಗ್ ಮಾರ್ಕ್ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಶಾಲೆಗಳಿಗೆ ಮಾದರಿಯಾಗಿದೆ. ಪುನೀತ್ ಸಹೋದರ ಕೂಡ ಈ ಹಿಂದೆ ಇದೇ ಕಾಲೇಜಿನಲ್ಲಿ ಕಲಿತು ಉತ್ತಮ ಅಂಕ ಪಡೆದಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಆತಂಕ, ಶಾಲೆಗಳಿಗೆ ರಜೆ ಘೋಷಣೆ
ಪುನೀತ್ ಗೆ ಐಎಎಸ್ ಆಫೀಸರ್ ಆಗಬೇಕು ಅನ್ನೋ ಕನಸಿದೆ. 4:00 ಗಂಟೆಗೆ ಎದ್ದು ಮಲ್ಪೆ ಬಂದರಿನಲ್ಲಿ ಮೀನು ಹೆಕ್ಕಿ, ನಂತರ ಮನೆಗೆ ಬಂದು ಓದಿ ಪೂರ್ಣಾಂಕಗಳ ಸಾಧನೆ ಮಾಡಿದ, ಪರಿಪೂರ್ಣ ಸಾಧಕ ಪುನೀತ್ ನಾಯ್ಕ್!
ಗಾರೆ ಕೆಲಸದವನ ಮಗಳಿಗೆ ಪೂರ್ಣಾಂಕ: ಉಡುಪಿ ಜಿಲ್ಲೆಯಲ್ಲಿ ಪೂರ್ಣ ಅಂಕಗಳನ್ನು ಪಡೆದ ಮತ್ತೋರ್ವ ವಿದ್ಯಾರ್ಥಿನಿ ಗಾಯತ್ರಿ. ಹಿಜಾಬ್ ವಿವಾದದಿಂದ ಪ್ರಪಂಚದಾದ್ಯಂತ ಹೆಸರು ಮಾಡಿದ ಸರಕಾರಿ ಪದವಿ ಪೂರ್ವ ಹೆಮ್ಮಕ್ಕಳ ಕಾಲೇಜಿಗೆ ನಿಜ ಅರ್ಥದಲ್ಲಿ ಕೀರ್ತಿ ತಂದ ಹುಡುಗಿ ಗಾಯತ್ರಿ. ಉಡುಪಿಯ ಕಡಿಯಾಳಿ ಸಮೀಪದ ಗಾರೆ ಕೆಲಸ ಮಾಡುವ ಬಡಕುಟುಂಬದಿಂದ ಬಂದ ಪ್ರತಿಭೆ ಈಕೆ. ಗಾರೆ ಕೆಲಸ ಮಾಡಿ ಬೇರೆಯವರಿಗೆ ಮನೆ ಕಟ್ಟಿಕೊಡುತ್ತಿದ್ದ ತಂದೆ, ಬಡತನದಲ್ಲೂ ಮಗಳಿಗೆ ಉತ್ತಮ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ್ದರು. ಹಾಗಾಗಿ ಬಡತನದ ಅಡ್ಡಿ ಇಲ್ಲದೆ ಗಾಯತ್ರಿ ಪೂರ್ಣಾಂಕಗಳನ್ನು ಪಡೆದಂತಾಗಿದೆ. ತಂದೆ ಗಾರೆ ಕೆಲಸ ಮಾಡುತ್ತಿದ್ದರೆ ತಾಯಿ ಬೀಡಿ ಕಟ್ಟುವ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದಾರೆ.
SSLC Result 2022 Declared ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ
ಹೃದ್ರೋಗ ವೈದ್ಯೆ ಆಗುವ ಕನಸು: ಉಡುಪಿಯ ಸರಕಾರಿ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಗಾಯತ್ರಿ ಪ್ರತಿಕ್ರಿಯಿಸಿ 625 ಅಂಕ ಬರಬಹುದು ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ, ಆದರೆ ನನಗೆ ಒಂದು ಕನಸು ಇತ್ತು. ನಮ್ಮದು ಸರ್ಕಾರಿ ಶಾಲೆಯಾದರೂ ಅತ್ಯುತ್ತಮ ಶಿಕ್ಷಣ ನೀಡಿದ್ದಾರೆ. ಕಾರ್ಡಿಯಾಲಜಿಸ್ಟ್ ಆಗಬೇಕೆಂಬ ಆಸೆ ಇದೆ, ವಿಜ್ಞಾನ ವಿಭಾಗದ ಪಿಸಿಎಂಬಿ ಕಲಿಯುತ್ತೇನೆ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ, ಹೃದಯ ಸಂಬಂಧಿ ಕಾಯಿಲೆ ಹೋಗಲಾಡಿಸಲು ತಜ್ಞರಸಂಖ್ಯೆ ಹೆಚ್ಚಬೇಕು ಹಾಗಾಗಿ ನಾನು ಹೃದ್ರೋಗ ತಜ್ಞ ಯಾಗ ಬಯಸುತ್ತೇನೆ ಉತ್ತಮ ಸೇವೆ ನೀಡುವುದು ನನ್ನ ಆಸೆಯಾಗಿದೆ ಎಂದು ಹೇಳಿದ್ದಾಳೆ
ಉಳಿದಂತೆ ಉಡುಪಿ ಜಿಲ್ಲೆಯಲ್ಲಿ ಪೂರ್ಣ ಅಂಕಗಳನ್ನು ಪಡೆದ ಇತರ ವಿದ್ಯಾರ್ಥಿಗಳು: ಕುಂದಾಪುರ ತಾಲೂಕಿನ ಸಿದ್ದಾಪುರ ಸರಕಾರಿ ಹೈಸ್ಕೂಲಿನ ವೈಷ್ಣವಿ ಶೆಟ್ಟಿ, ಕುಂದಾಪುರ ತಾಲೂಕಿನ ಕಾಳಾವರ ಸರಕಾರಿ ಕಾಲೇಜಿನ ನಿಶಾ, ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ಸಾಂದೀಪನಾ ಇಂಗ್ಲೀಷ್ ಮಿಡೀಯಂ ಹೈಸ್ಕೂಲಿನ ಅಕ್ಷತಾ ಕೂಡ ಪೂರ್ಣ ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ