ಬೆಂಗಳೂರು (ಜೂ.10): ರಾಜ್ಯದಲ್ಲಿ ಕೋವಿಡ್ ತಹಬದಿಗೆ ಬಂದ ಬಳಿಕವೇ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗುತ್ತದೆ, ಈ ಸಂಬಂಧ ವಾರಂತ್ಯಕ್ಕೆ ಆಯಾ ಬಿಇಒ ಕಚೇರಿಗಳ ಮೂಲಕ ಮಾದರಿ ಪ್ರಶ್ನೆ ಪತ್ರಿಕೆಗಳು ಶಾಲೆಗಳಿಗೆ ತಲುಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ ಬಗ್ಗೆ ಬುಧವಾರ ರಾಜ್ಯದ ಎಲ್ಲಾ 34 ಶೈಕ್ಷಣಿಕ ಜಿಲ್ಲೆಗಳ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿದ ಸಚಿವರು, ಈ ವಾರದೊಳಗೆ ಆಯಾ ಬಿಇಒ ಕಚೇರಿಗಳ ಮೂಲಕ ಮಾದರಿ ಪ್ರಶ್ನೆ ಪತ್ರಿಕೆಗಳು ಶಾಲೆಗಳಿಗೆ ತಲುಪಲಿವೆ. ಮಕ್ಕಳಿಗೆ ಓಎಂಆರ್ ಶೀಟ್ ರೂಪದಲ್ಲಿರುವ ಪ್ರಶ್ನೆ ಪತ್ರಿಕೆಗಳಿಗೆ ಹೇಗೆ ಉತ್ತರಿಸಬೇಕೆಂದು ಶಿಕ್ಷಕರು ಸಲಹೆ ನೀಡಬೇಕು ಎಂದರು.
ಪಿಯು ವಿದ್ಯಾರ್ಥಿಗಳಿಗೀಗ ‘ಬಹುಪರೀಕ್ಷೆ’ ಕಂಟಕ
ಪರೀಕ್ಷೆಯಲ್ಲಿ ಪ್ರತಿ ವಿಷಯಕ್ಕೆ 40 ಅಂಕದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ಪ್ರಶ್ನೆಗೂ ಪ್ರಶ್ನೆ ಪತ್ರಿಕೆಯಲ್ಲೇ ನಾಲ್ಕು ಉತ್ತರಗಳನ್ನೂ (ಮಲ್ಟಿಪಲ್ ಚಾಯ್ಸ್) ನೀಡಲಾಗಿರುತ್ತದೆ. ಅದರಲ್ಲಿ ಸರಿಯಾದ ಉತ್ತರ ಗುರುತು ಮಾಡಬೇಕು. ಪ್ರಶ್ನೆಗಳು ನೇರ ಮತ್ತು ಸುಲಭವಾಗಿರುವುದರಿಂದ ಮಕ್ಕಳಿಗೆ ಹೆಚ್ಚಿನ ಗೊಂದಲವಾಗುವುದಿಲ್ಲ ಎಂದರು.
ಮಕ್ಕಳ ಮುಂದಿನ ವ್ಯಾಸಂಗಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿಯಾಗಲಿರುವ ಕಾರಣ ಕೋವಿಡ್ ತಹಬದಿಗೆ ಬಂದ ಬಳಿಕವಷ್ಟೇ ಕೇವಲ ಎರಡು ದಿನ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ಬದಲಾಗಿರುವ ಪರೀಕ್ಷಾ ಪದ್ಧತಿ ಕುರಿತು ತಿಳಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ನಮ್ಮ ಅಧಿಕಾರಿಗಳು ಮತ್ತು ಶಿಕ್ಷಕರ ಮಾಡಬೇಕು. ಸಾಧ್ಯವಾದರೆ ಶಾಲೆಗಳು ಆರಂಭಗೊಂಡ ಬಳಿಕ ನಿತ್ಯ ನಾಲ್ಕೈದು ಮಕ್ಕಳನ್ನು ಶಾಲೆಗೆ ಕರೆಸಿಕೊಂಡು ಆತ್ಮವಿಶ್ವಾಸ ತುಂಬಿ ಎಂದು ಸಲಹೆ ನೀಡಿದರು.
ಶಿಕ್ಷಕರಿಗೆ ಲಸಿಕೆಗಾಗಿ ಪ್ರಸ್ತಾವನೆ: ಕಳೆದ ಬಾರಿಗಿಂತ ಹೆಚ್ಚಿನ ಸುರಕ್ಷತಾ ವಾತಾವರಣದಲ್ಲಿ ಪರೀಕ್ಷೆ ನಡೆಸಲು ಈಗಾಗಲೇ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೆಚ್ಚಿನ ಪರೀಕ್ಷಾ ಕೇಂದ್ರ ಸ್ಥಾಪನೆ ಸೇರಿದಂತೆ ಮಕ್ಕಳು ತಮ್ಮ ವಾಸಸ್ಥಳದ ಸಮೀಪವಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಎಲ್ಲ ಮಕ್ಕಳಿಗೂ ಎನ್-95 ಮಾಸ್ಕ್‌ಗಳನ್ನು ಒದಗಿಸಲಾಗುತ್ತದೆ. ಲಸಿಕೆ ಪಡೆದ ಶಿಕ್ಷಕರನ್ನೇ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳಬೇಕಾಗಿರುವುದರಿಂದ ಶಿಕ್ಷಕರಿಗೆ ಲಸಿಕೆ ನೀಡಲು ಕ್ರಮ ವಹಿಸುವಂತೆ ಈಗಾಗಲೇ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ 30 ಸಾವಿರ ಮಕ್ಕಳು ಹೆಚ್ಚಾಗಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆ ಯಶಸ್ಸಿಗಾಗಿ ಈ ವಾರದೊಳಗೆ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಆಯುಕ್ತರು/ನಿರ್ದೇಶಕರ ಸಭೆ ನಡೆಸಲಾಗುವುದು ಹಾಗೆಯೇ ಜಿಲ್ಲೆಯ ಜಿಲ್ಲಾಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಕಾರಿಗಳೊಂದಿಗೆ ವಿಡಿಯೋ ಕಾನೆರೆನ್ಸ್ ಮೂಲಕ ಸಭೆ ನಡೆಸಲಾಗುವುದು ಎಂದು ಸಚಿವ ಸುರೇಶ್‌ಕುಮಾರ್ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಅಪರ ಆಯುಕ್ತರಾದ ನಳಿನ್ ಅತುಲ್ (ಕಲಬುರಗಿ), ಮೇಜರ್ ಸಿದ್ದಲಿಂಗಯ್ಯ ಹಿರೇಮಠ (ಧಾರವಾಡ) ಹಾಗೂ ಇಲಾಖೆಯ ನಿರ್ದೇಶಕರು ಭಾಗವಹಿಸಿದ್ದರು.