ಪಿಯು ವಿದ್ಯಾರ್ಥಿಗಳಿಗೀಗ ‘ಬಹುಪರೀಕ್ಷೆ’ ಕಂಟಕ

By Kannadaprabha News  |  First Published Jun 10, 2021, 7:22 AM IST
  • ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆ ತಪ್ಪಿದೆ. ಆದರೆ, ಎದುರಾಗಲಿದೆ ಹಲವು ಪರೀಕ್ಷೆಗಳು.
  • ಕೊರೋನಾ ಪಿಡುಗಿನಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿದೆ ಎಂದು ಖುಷಿ ಪಡುವ ಪರಿಸ್ಥಿತಿಯಿಲ್ಲ
  • ಪದವಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳು ಅನಿವಾರ್ಯವಾಗಿ ಹಲವು ಪರೀಕ್ಷೆಗಳಿಗೆ ಸಿದ್ಧರಾಗುವಂತಹ ಸನ್ನಿವೇಶ ಸೃಷ್ಟಿ

ವರದಿ : ಲಿಂಗರಾಜು ಕೋರಾ

 ಬೆಂಗಳೂರು (ಜೂ.10): ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆ ತಪ್ಪಿದೆ. ಆದರೆ, ಎದುರಾಗಲಿದೆ ಹಲವು ಪರೀಕ್ಷೆಗಳು. ಕೊರೋನಾ ಪಿಡುಗಿನಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿದೆ ಎಂದು ಖುಷಿ ಪಡುವ ಪರಿಸ್ಥಿತಿಯಿಲ್ಲ. ಏಕೆಂದರೆ, ಪದವಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳು ಅನಿವಾರ್ಯವಾಗಿ ಹಲವು ಪರೀಕ್ಷೆಗಳಿಗೆ ಸಿದ್ಧರಾಗುವಂತಹ ಸನ್ನಿವೇಶ ಸೃಷ್ಟಿಯಾಗಲಿದೆ.

Tap to resize

Latest Videos

ಏಕೆಂದರೆ, ಖಾಸಗಿ ಕಾಲೇಜುಗಳು ಅದರಲ್ಲೂ ಬಹುಬೇಡಿಕೆ ಹೊಂದಿರುವ ಕಾಲೇಜುಗಳು ತಮ್ಮ ಕಾಲೇಜಿಗೆ ವಿದ್ಯಾರ್ಥಿಗಳ ಸೇರ್ಪಡೆಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಅನಾಯಾಸವಾಗಿ ತೇರ್ಗಡೆಯಾದರೂ ಪದವಿ ಶಿಕ್ಷಣಕ್ಕಾಗಿ ತಮ್ಮ ಆಯ್ಕೆಯ ಕಾಲೇಜು ಸೇರಲು ಹಲವು ಪರೀಕ್ಷೆಗಳನ್ನು ಬರೆಯುವ ಸ್ಥಿತಿ ನಿರ್ಮಾಣವಾಗಲಿದೆ.

ಪ್ರಸ್ತುತ ರಾಜ್ಯ ಸರ್ಕಾರ ವಿದ್ಯಾರ್ಥಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಆಧರಿಸಿ ಪಿಯು ಪರೀಕ್ಷೆ ನಡೆಸಿದ್ದಲ್ಲಿ ಎಷ್ಟುಅಂಕ ಗಳಿಸಬಹುದಿತ್ತು ಎಂದು ಅಂದಾಜಿಸಿ ದ್ವಿತೀಯ ಪಿಯುಸಿ ಫಲಿತಾಂಶ ನೀಡಲಿದೆ.

ಡಿಗ್ರಿ ಕಾಲೇಜುಗಳು ಹೇಳೋದೇನು?: ಪಿಯುಸಿ ನಂತರ ವೃತ್ತಿ ಶಿಕ್ಷಣ ಪಡೆಯಲು ಯತ್ನಿಸುವ ವಿಜ್ಞಾನ ಶಾಖೆಯ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಯ ಫಲಿತಾಂಶ ಅವರಿಗೆ ಸೀಟು ಪಡೆಯುವ ಮಾನದಂಡವಾಗಲಿದೆ. ಆದರೆ, ಪದವಿ ಪಡೆಯಬಯಸುವ ವಿಜ್ಞಾನ, ವಾಣಿಜ್ಯ ಹಾಗೂ ಕಲೆ ವಿಭಾಗದ ವಿದ್ಯಾರ್ಥಿಗಳ ಬಳಿ ಸರ್ಕಾರ ತನ್ನ ಮಾನದಂಡದಂತೆ (ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ ಆಧರಿತ ಫಲಿತಾಂಶ) ನೀಡುವ ಅಂಕಪಟ್ಟಿಇರುತ್ತದೆ. ಆದರೆ, ಗ್ರೇಡಿಂಗ್‌ ವ್ಯವಸ್ಥೆಯ ಅಂಕಪಟ್ಟಿಯು ವಿದ್ಯಾರ್ಥಿಯ ಹಾಲಿ ಬೌದ್ಧಿಕ ಮಟ್ಟಅಳೆಯಲು ಸಂಪೂರ್ಣ ವೈಜ್ಞಾನಿಕ ಕ್ರಮವಲ್ಲ ಎಂಬುದು ಬಹುತೇಕ ಖಾಸಗಿ ಹಾಗೂ ಸ್ವಾಯತ್ತ ಪದವಿ ಕಾಲೇಜುಗಳ ಅಭಿಪ್ರಾಯ.

ರಾಜ್ಯದಲ್ಲಿ ಅನ್‌ಲಾಕ್‌ಗೆ ಸಿದ್ಧತೆ : ಶಾಲಾ-ಕಾಲೇಜು ಓಪನ್ ಆಗುತ್ತಾ..? ...

ಪ್ರತಿ ಕಾಲೇಜಿಂದ ಪ್ರತ್ಯೇಕ ಪರೀಕ್ಷೆ: ಪ್ರತಿ ಕಾಲೇಜು ತಮ್ಮ ಪದವಿ ಸೀಟುಗಳ ಪ್ರವೇಶಕ್ಕೆ ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸಿ ಮಕ್ಕಳ ಸಾಮರ್ಥ್ಯ ಅಳೆಯಲು ಮುಂದಾಗಿವೆ. ಹಾಗಾಗಿ ಪದವಿ ಕೋರ್ಸುಗಳ ಪ್ರವೇಶ ಪಡೆಯಲಿಚ್ಛಿಸುವ ಪ್ರತಿಯೊಬ್ಬ ವಿದ್ಯಾರ್ಥಿಯೂ ತಾನು ಪ್ರವೇಶ ಇಚ್ಛಿಸುವ ಕನಿಷ್ಠ ನಾಲ್ಕಾರು ಕಾಲೇಜುಗಳ ಪ್ರವೇಶ ಪರೀಕ್ಷೆ ಎದುರಿಸಬೇಕಾದ ಸನ್ನಿವೇಶ ಎ¨ಸುರಾಗಿದೆ. ಏಕೆಂದರೆ ಒಂದು ಅಥವಾ ಎರಡು ಕಾಲೇಜುಗಳ ಪರೀಕ್ಷೆ ಎದುರಿಸಿದರೂ ಒಂದು ವೇಳೆ ಸೀಟು ಸಿಗದೆ ಹೋಗಬಹುದು. ಹಾಗಾಗಿ ಕನಿಷ್ಠ ನಾಲ್ಕೈದು ಕಾಲೇಜುಗಳ ಪರೀಕ್ಷೆಯನ್ನಾದರೂ ಎದುರಿಸಬೇಕಾಗುತ್ತದೆ.

ದ್ವಿತೀಯ PUC ಪರೀಕ್ಷೆ ರದ್ದು, ಜುಲೈ ಅಥವಾ ಆಗಸ್ಟ್‌ನಲ್ಲಿ SSLC ಎಕ್ಸಾಮ್: ಯಾರೂ ಫೇಲ್ ಆಗೋಲ್ಲ ..

ರಾಜ್ಯದಲ್ಲಿ ಸುಮಾರು 1100 ಖಾಸಗಿ ಮತ್ತು ಸ್ವಾಯತ್ತ ಪದವಿ ಕಾಲೇಜುಗಳಿದ್ದು, ಒಂದೊಂದು ಕಾಲೇಜು ಈ ಕೋವಿಡ್‌ ಪರಿಸ್ಥಿತಿಯಲ್ಲಿ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಸಿಲುಕಬೇಕಾಗುತ್ತದೆ. ಈ ಎಲ್ಲಾ ಕಾಲೇಜು ಪ್ರವೇಶ ಪರೀಕ್ಷೆ ನಡೆಸುವುದಿಲ್ಲ ಎಂದಿಟ್ಟುಕೊಂಡರೂ ಬಹು ಬೇಡಿಕೆಯ ಕಾಲೇಜುಗಳು ಪ್ರವೇಶ ಪರೀಕ್ಷೆ ನಡೆಸುವುದು ಮಾತ್ರ ಖಚಿತ. ಸಾಮಾನ್ಯವಾಗಿ ನಮ್ಮ ಕಾಲೇಜಿನಲ್ಲಿ ಸೀಟಿಗೆ ಬೇಡಿಕೆ ಹೆಚ್ಚಿರುತ್ತದೆ. ಹೀಗಾಗಿ ಮಕ್ಕಳ ಸಾಮರ್ಥ್ಯ ಪರೀಕ್ಷೆ ನಡೆಸಲು ಪ್ರತಿ ವರ್ಷ ಇಂತಹ ಪ್ರವೇಶ ಪರೀಕ್ಷೆ ನಡೆಸುತ್ತಿದ್ದೆವು. ಈ ವರ್ಷವೂ ನಡೆಸುತ್ತೇವೆ ಎಂದು ಹೇಳುತ್ತಾರೆ ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನ ಪ್ರಾಂಶುಪಾಲರಾದ ಸ್ನೇಹ ಲತಾ.

ಸಿಇಟಿ ಮಾದರಿ ಪರೀಕ್ಷೆಗೆ ಪೋಷಕರ ಆಗ್ರಹ

ಪ್ರತಿ ಕಾಲೇಜು ಪರೀಕ್ಷೆ ನಡೆಸುವ ಸ್ಥಿತಿ ನಿರ್ಮಾಣ ಮಾಡುವುದು ಸರಿಯಲ್ಲ. ನಿರ್ಮಾಣವಾಗುವುದಿಲ್ಲವೇ? ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸಿಇಟಿ, ನೀಟ್‌ ಮತ್ತಿತರ ಅರ್ಹತಾ ಪರೀಕ್ಷೆ ಮಾದರಿಯಲ್ಲಿ ಪದವಿ ಕೋರ್ಸುಗಳ ಪ್ರವೇಶಕ್ಕೂ ಸರ್ಕಾರ ಒಂದು ಪರೀಕ್ಷೆ ನಡೆಸಲಿ. ಅದನ್ನು ಬಿಟ್ಟು ಮಕ್ಕಳ ಮೇಲೆ ಬಹು ಪರೀಕ್ಷೆಗಳ ಒತ್ತಡ ಹಾಕಬಾರದು ಎಂಬ ಆಗ್ರಹ ಪೋಷಕರ ವಲಯದಲ್ಲಿ ವ್ಯಕ್ತವಾಗಿದೆ. ಪಿಯು ಪರೀಕ್ಷೆ ನಡೆಸಿದರೆ ಮಕ್ಕಳಿಗೂ ಸೋಂಕು ತಗುಲುವ ಆತಂಕದಿಂದ ರದ್ದುಪಡಿಸಲಾಗಿದೆ. ಆದರೆ, ಈಗ ವಿದ್ಯಾರ್ಥಿಗಳು ಹತ್ತಾರು ಕಾಲೇಜುಗಳ ಪರೀಕ್ಷೆ ಬರೆಯಲು ಹೋದಾಗ ಸೋಂಕು ತಗುಲಿದರೆ ಯಾರು ಹೊಣೆ ಎಂಬುದು ಪೋಷಕರ ಪ್ರಶ್ನೆ.

ಸರ್ಕಾರಿ ಕಾಲೇಜುಗಳ ಗೊಂದಲ

ಇನ್ನು, 415ಕ್ಕೂ ಹೆಚ್ಚು ಸರ್ಕಾರಿ ಪದವಿ ಕಾಲೇಜುಗಳಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳ ಪ್ರವೇಶಕ್ಕೆ ಯಾವ ಮಾನದಂಡ ಅನುಸರಿಸಲಾಗುತ್ತದೆ ಎಂಬ ಬಗ್ಗೆ ಸರ್ಕಾರದಿಂದ ಇನ್ನೂ ಯಾವುದೇ ಮಾರ್ಗಸೂಚಿ ಪ್ರಕಟವಾಗಿಲ್ಲ. ವಿಜ್ಞಾನ ವಿಷಯಗಳ ಪ್ರವೇಶಕ್ಕೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಯುವ ಸಿಇಟಿ ಅಂಕಗಳನ್ನೇ ಪರಿಗಣಿಸುವ ಬಗ್ಗೆ ಸರ್ಕಾರ ಒಂದೆಡೆ ಚಿಂತನೆ ನಡೆಸಿದೆ. ಆದರೆ, ಎಲ್ಲ ವಿಜ್ಞಾನ ಶಾಖೆಯ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯುವುದಿಲ್ಲ. ಹಾಗಾಗಿ ಏನು ಮಾಡಬೇಕು ಎಂಬ ಗೊಂದಲ ಎದುರಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!