ರಾಜ್ಯಾದ್ಯಂತ 236 ಕೇಂದ್ರಗಳಲ್ಲಿ 8.42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ 50 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. ಮೌಲ್ಯಮಾಪನ ಕಾರ್ಯಕ್ಕೆ ಒಟ್ಟು 73 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ನಿಯೋಜನೆ.
ಬೆಂಗಳೂರು(ಏ.16): ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಶನಿವಾರಕ್ಕೆ ಮುಕ್ತಾಯಗೊಂಡಿದ್ದು ಏ.24ರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯಾದ್ಯಂತ 236 ಕೇಂದ್ರಗಳಲ್ಲಿ 8.42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ 50 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. ಮೌಲ್ಯಮಾಪನ ಕಾರ್ಯಕ್ಕೆ ಒಟ್ಟು 73 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (ಕೆಎಸ್‌ಇಎಬಿ) ನಿರ್ದೇಶಕ (ಪರೀಕ್ಷೆಗಳು) ಎಚ್.ಎನ್.ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.
‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುಸೂತ್ರವಾಗಿ ಮುಕ್ತಾಯಗೊಂಡಿವೆ. ಮೌಲ್ಯಮಾಪನ ಕಾರ್ಯಕ್ಕೆ ಅಗತ್ಯ ಶಿಕ್ಷಕರನ್ನು ಈಗಾಗಲೇ ನಿಯೋಜಿಸಲಾಗಿದೆ. ಮೌಲ್ಯಮಾಪನ ಕಾರ್ಯ ಮುಗಿದ ಬಳಿಕ ಫಲಿತಾಂಶವನ್ನು ಕಂಪ್ಯೂಟರೀಕರಣಗೊಳಿಸಿ ಯಾವಾಗ ಪ್ರಕಟಿಸಬಹುದು ಎಂಬುದನ್ನು ಪರಿಶೀಲಿಸಿ ಫಲಿತಾಂಶ ಪ್ರಕಟಣೆಯ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಲೋಪ: ಏಳು ಶಿಕ್ಷಕರ ಅಮಾನತು
ಮಾ.31ರಿಂದ ಆರಂಭವಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಶನಿವಾರ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ಸುಸೂತ್ರವಾಗಿ ನಡೆಯುವುದರೊಂದಿಗೆ ಮುಕ್ತಾಯವಾಯಿತು. ಈ ಬಾರಿ ಪರೀಕ್ಷೆಗೆ 8.42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿಯಾಗಿ ಪರೀಕ್ಷೆ ಬರೆದಿದ್ದರು. ರಾಜ್ಯಾದ್ಯಂತ 3305 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.