ಹದಿಹರೆಯದ ಮಕ್ಕಳಲ್ಲಿ ಹೆಚ್ಚುತ್ತಿದೆ ಪ್ರೇಮ ಕಹಾನಿ, ಬೆಂಗಳೂರು, ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚು, ಮಕ್ಕಳ ರಕ್ಷಣಾ ಆಯೋಗಕ್ಕೆ ಚೈಲ್ಡ್ ರೈಟ್ಸ್ ಟ್ರಸ್ಟ್ ಪತ್ರ.
ಲಿಂಗರಾಜು ಕೋರಾ
ಬೆಂಗಳೂರು(ಏ.16): ರಾಜ್ಯದಲ್ಲಿ ಶಾಲಾ ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲೇ ಪ್ರೀತಿ ಪ್ರೇಮ ಕಹಾನಿ ಹಾಗೂ ಲೈಂಗಿಕ ವಿಚಾರಗಳ ಚರ್ಚೆಯಲ್ಲಿ ಆಸಕ್ತಿ ವಹಿಸುವ ಮೂಲಕ ದಾರಿತಪ್ಪುತ್ತಿರುವುದು ಹೆಚ್ಚಾಗುತ್ತಿದೆ. ಈ ಬಗ್ಗೆ ಪೋಷಕರು, ಶಿಕ್ಷಕರಿಂದ ದೂರುಗಳು ಹೆಚ್ಚಾಗಿ ಕೇಳಿಬರುತ್ತಿದೆ ಎಂಬ ಅಂಶವನ್ನು ಸ್ವಯಂ ಸೇವಾ ಸಂಸ್ಥೆಯಾದ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನಕ್ಕೆ ತಂದಿದೆ.
ಈ ಸಂಬಂಧ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಟ್ರಸ್ಟ್‌ನ ಸಂಚಾಲಕ ನಾಗಸಿಂಹ ಜಿ.ರಾವ್, ಚಿಕ್ಕವಯಸ್ಸಿನಲ್ಲೇ ಮಕ್ಕಳು ವಯಸ್ಸಿಗೆ ಮೀರಿದ ವಿಚಾರಗಳ ಚರ್ಚೆ, ಆಲೋಚನೆಯಲ್ಲಿ ತೊಡಗುತ್ತಿದ್ದಾರೆ. ಇದನ್ನು ನಿಯಂತ್ರಿಸಲು ‘ಲೈಂಗಿಕ ದೌರ್ಜನ್ಯ, ಕಿರುಕುಳ, ಶೋಷಣೆ ವಿಚಾರದಲ್ಲಿ ವಯಸ್ಕರಂತೆ ನಡೆದುಕೊಳ್ಳುವ ಹದಿಹರೆಯದ ಮಕ್ಕಳಿಗೂ ಪೋಸ್ಕೋ ಕಾಯ್ದೆಯಡಿ ಶಿಕ್ಷೆ ವಿಧಿಸಲು ಅವಕಾಶವಿರುವ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಹಾಗಾಗಿ 2023-24ನೇ ಶೈಕ್ಷಣಿಕ ಸಾಲಿನ ಆರಂಭದಲ್ಲೇ ಶಾಲೆಗಳಲ್ಲಿ ಪೋಸ್ಕೋ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಆದೇಶ ಮಾಡುವಂತೆ ಶಿಕ್ಷಣ ಇಲಾಖೆಗೆ ಆದೇಶ ಮಾಡುವಂತೆ ಕೋರಿದ್ದಾರೆ.
ಉತ್ತರಕನ್ನಡದ ಹಾಲಕ್ಕಿ ಮಹಿಳೆಯ ಸಮಾಜಮುಖಿ ಕಾರ್ಯಕ್ಕೆ ಮನಸೋತ ಉದ್ಯಮಿ ಆನಂದ್ ಮಹೀಂದ್ರಾ
ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ನಾಗಸಿಂಹ ಜಿ.ರಾವ್, ಮಕ್ಕಳ ಹಕ್ಕುಗಳ ರಕ್ಷಣೆ, ಜಾಗೃತಿ ಕಾರ್ಯದಲ್ಲಿ ತೊಡಗಿರುವ ನಮ್ಮ ಸಂಸ್ಥೆಗೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ನಿತ್ಯ ಪೋಷಕರು, ಶಿಕ್ಷಕರು ತಮ್ಮ ಮಕ್ಕಳ ವಿಚಾರಗಳ ಬಗ್ಗೆ ಸಲಹೆ, ಸೂಚನೆಗಳನ್ನು ಕೇಳಿ ಕರೆ ಮಾಡುತ್ತಿರುತ್ತಾರೆ. ಇತ್ತೀಚೆಗೆ ಬರುತ್ತಿರುವ ಕರೆಗಳಲ್ಲಿ ಹೆಚ್ಚಾಗಿ ಹದಿಹರೆಯದ ವಯಸ್ಸಿನಲ್ಲೇ ನಮ್ಮ ಮಕ್ಕಳು ಪ್ರೀತಿ, ಪ್ರೇಮ ಎಂದು ತಲೆಕೆಡಿಸಿಕೊಂಡಿದ್ದಾರೆ ಏನು ಮಾಡುವುದು, ಅವರಿಗೆ ಹೇಗೆ ಬುದ್ದಿ ಹೇಳುವುದು ಎಂದು ಕೇಳುತ್ತಿದ್ದಾರೆ. ಇನ್ನು ಕೆಲ ಪೋಷಕರು ತಮ್ಮ ಮಕ್ಕಳು ಮನೆಯನ್ನೇ ಬಿಟ್ಟು ಹೋಗಿ ಮದುವೆಯಾಗುವ ಆಲೋಚಿಸಿರುವ ಪ್ರಕರಣಗಳ ಬಗ್ಗೆಯೂ ಮಾಹಿತಿ ನೀಡಿ ಆತಂಕ ತೋಡಿಕೊಂಡಿದ್ದಾರೆ.
ಕೆಲ ಶಿಕ್ಷಕರು ಕರೆ ಮಾಡಿ ಮಕ್ಕಳು ಶಾಲೆಯಲ್ಲಿ ನಿರ್ಭಯವಾಗಿ ಲೈಂಗಿಕ ವಿಚಾರವನ್ನು ಮಾತನಾಡತೊಡಗಿದ್ದಾರೆ. ಶಿಕ್ಷಕರಿಗೂ ಗೌರವ, ಭಯ ಪಡದೆ ಇಂತಹ ಮಾತುಗಳನ್ನು ಆಡುವ ಪ್ರವೃತ್ತಿ ಬೆಳೆಯುತ್ತಿದೆ. ಮಕ್ಕಳ ನಡೆಯ ಬಗ್ಗೆ ಪೋಷಕರ ಗಮನಕ್ಕೆ ತಂದರೂ ಅವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದನ್ನು ಹೇಗೆ ತಡೆಯುವುದು ಎಂದು ಸಲಹೆ ಕೇಳುತ್ತಿದ್ದಾರೆ. ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಇಂತಹ ದೂರುಗಳು ಸಾಮಾನ್ಯವಾಗಿವೆ ಎಂದು ತಿಳಿಸಿದರು.
‘ಹೀನ ಕೃತ್ಯ ಮಾಡಿದರೆ ಮಕ್ಕಳಿಗೂ ಕಠಿಣ ಶಿಕ್ಷೆ’
ಈ ಹಿನ್ನೆಲೆಯಲ್ಲಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ. ಕೋವಿಡ್ ಸಮಯದಲ್ಲಿ ಆನ್‌ಲೈನ್ ಶಿಕ್ಷಣದ ಪ್ರಭಾವದಿಂದ ಮಕ್ಕಳಲ್ಲಿ ಇಂತಹ ಚಟುವಟಿಕೆಗಳು ಹೆಚ್ಚಾಗಿವೆ. ಆನ್‌ಲೈನ್‌ನಲ್ಲಿ ಲೈಂಗಿಕ ವಿಚಾರಗಳ ಬಗ್ಗೆ ಹುಡುಕಾಟ ನಡೆಸಿರುವುದು ಕಂಡುಬಂದಿದೆ. ಹಾಗಾಗಿ ಅವರಿಗೆ ತಮ್ಮ ತಪ್ಪಿನ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ನಿರ್ಭಯ ಪ್ರಕರಣದ ನಂತರ ಮಕ್ಕಳ ನ್ಯಾಯ (ರಕ್ಷಣೆ-ಪೋಷಣೆ) ಕಾಯ್ದೆಯಲ್ಲಿ ಆಗಿರುವ ಬದಲಾವಣೆಯಂತೆ 16-17ನೇ ವಯಸ್ಸಿನಲ್ಲಿ ಹೀನವಾದ ಕೃತ್ಯ ಎಸಗುವ ಮಕ್ಕಳ ಮನೋಸ್ಥಿತಿಯನ್ನು ಗಮನಿಸಿ ಅವರನ್ನು ಹಿರಿಯರ ವರ್ಗಕ್ಕೆ ಸೇರಿಸಿ ಶಿಕ್ಷೆ ನೀಡಬಹುದಾಗಿದೆ. ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಶೈಕ್ಷಣಿಕ ವರ್ಷದ ಆರಂಭದಲ್ಲೇ ಪ್ರತೀ ವರ್ಷ ಜಾಗೃತಿ ಅಥವಾ ತರಬೇತಿ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ನಡೆಸಬೇಕು. ಹಾಗಾಗಿ ಆಯೋಗವು ಶಿಕ್ಷಣ ಇಲಾಖೆಗೆ ಈ ಬಗ್ಗೆ ಆದೇಶ ಮಾಡಬೇಕೆಂದು ಮನವಿ ಮಾಡಿದ್ದಾರೆ.