ಕೋವಿಡ್‌ ಏರಿಕೆ: ಶಾಲೆಗಳು, ಪಿಯು ಕಾಲೇಜು ವಿಳಂಬ?

By Kannadaprabha NewsFirst Published Aug 1, 2021, 7:54 AM IST
Highlights

* ಈ ವಾರ ಶಾಲೆ ತೆರೆಯಲು ಶಿಫಾರಸು ಮಾಡಿದ್ದ ತಜ್ಞರು

* ಕೋವಿಡ್‌ ಏರಿಕೆ: ಶಾಲೆಗಳು, ಪಿಯು ಕಾಲೇಜು ವಿಳಂಬ?

* ಸಿಎಂ ಒಬ್ಬರಿಂದಲೇ ನಿರ್ಧಾರ ಡೌಟು

ಬೆಂಗಳೂರು(ಆ.01): ರಾಜ್ಯದಲ್ಲಿ ಆಗಸ್ಟ್‌ ಮೊದಲ ವಾರದಿಂದ ಶಾಲೆ, ಪಿಯು ಕಾಲೇಜುಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಶಿಫಾರಸು ಮಾಡಿದ್ದರೂ, ಕಳೆದ ಕೆಲ ದಿನಗಳಿಂದ ಹೆಚ್ಚುತ್ತಿರುವ ಕೋವಿಡ್‌ ಪ್ರಕಣದ ಹಿನ್ನೆಲೆಯಲ್ಲಿ ಸರ್ಕಾರ ಈ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಳ್ಳದೆ ಇನ್ನಷ್ಟುದಿನ ಕಾದು ನೋಡುವ ಸಾಧ್ಯತೆ ಇದೆ.

ಒಂದೆಡೆ ಕೋವಿಡ್‌ ಪ್ರಕರಣದಲ್ಲಿ ಹೆಚ್ಚಳ ಕಂಡುಬರುತ್ತಿದೆ. ಮತ್ತೊಂದೆಡೆ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಇನ್ನೂ ರಚನೆಗೊಂಡಿಲ್ಲ. ಹಾಗಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಹೊಸ ಸಚಿವರು ಬರಬೇಕಿದೆ. ಶಾಲೆ, ಪಿಯು ಕಾಲೇಜುಗಳ ಆರಂಭದ ಬಗ್ಗೆ ಮುಖ್ಯಮಂತ್ರಿಗಳೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಬಹಳ ಕಡಿಮೆ. ಹಾಗಾಗಿ ಶಿಕ್ಷಣ ಇಲಾಖೆಗೆ ಹೊಸ ಸಚಿವರು ಬಂದ ಬಳಿಕವಷ್ಟೇ ಅಂತಿಮ ನಿರ್ಧಾರ ಹೊರಬೀಳಬಹುದು ಎನ್ನುತ್ತವೆ ಇಲಾಖೆಯ ಮೂಲಗಳು.

ಡಾ.ದೇವಿಶೆಟ್ಟಿನೇತೃತ್ವದ ತಜ್ಞರ ಸಮಿತಿ ಆದಷ್ಟುಬೇಗ ಶಾಲೆ, ಪಿಯು ಕಾಲೇಜು ಆರಂಭಿಸಲು ಸರ್ಕಾರಕ್ಕೆ ವರದಿ ನೀಡಿತ್ತಾದರೂ, ಇದಕ್ಕೂ ಮುನ್ನ ಶಿಕ್ಷಕರು, ಪೋಷಕರು, ಶಿಕ್ಷಣ ತಜ್ಞರು ಸೇರಿ ಸಂಬಂಧಿಸಿದ ಎಲ್ಲರ ಅಭಿಪ್ರಾಯ ಪಡೆಯುವಂತೆ ಶಿಫಾರಸು ಮಾಡಿತ್ತು. ಅದರಂತೆ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್‌ ಅವರ ನೇತೃತ್ವದಲ್ಲಿ ಶಿಕ್ಷಣ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರನ್ನೊಳಗೊಂಡ ಕಾರ್ಯಪಡೆ ರಚಿಸಿ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಲು ಸೂಚಿಸಿತ್ತು.

ಕಾರ್ಯಪಡೆಯು ಸಂಬಂಧಿಸಿದ ಎಲ್ಲರೊಂದಿಗೆ ಮೂರು ಸುತ್ತಿನ ಸಭೆ ನಡೆಸಿ ಎಲ್ಲ ವರ್ಗದಿಂದಲೂ ಶಾಲೆ ಆರಂಭಕ್ಕೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಆಗಸ್ಟ್‌ ಮೊದಲ ವಾರದಿಂದ ಹಂತ ಹಂತವಾಗಿ ಶಾಲೆ ಮತ್ತು ಪಿಯು ಕಾಲೇಜುಗಳನ್ನು ಆರಂಭಿಸಬಹುದೆಂದು ವರದಿ ನೀಡಿತ್ತು. ಮೊದಲ ಹಂತದಲ್ಲಿ 6ರಿಂದ 12ನೇ ತರಗತಿವರೆಗೆ, ನಂತರ ಪರಿಸ್ಥಿತಿ ನೋಡಿಕೊಂಡು ಉಳಿದ ತರಗತಿಗಳನ್ನು ಆರಂಭಿಸಬಹುದೆಂದು ಜ.26ರಂದು ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ.

ಆದರೆ, ಈ ಮಧ್ಯೆ ರಾಜಕೀಯ ಬೆಳವಣಿಗೆಗಳು ನಡೆದು ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇಡೀ ಸಚಿವ ಸಂಪುಟ ಬದಲಾವಣೆಯಾಗುತ್ತಿದೆ. ಮತ್ತೊಂದೆಡೆ ಕೋವಿಡ್‌ ಸಂಖ್ಯೆಯೂ ಹೆಚ್ಚತೊಡಗಿದೆ. ಹಾಗಾಗಿ ಶಾಲಾರಂಭದ ವಿಚಾರಲ್ಲಿ ಏನೇ ನಿರ್ಧಾರವಾಗಬೇಕಾದರೂ ಇಲಾಖೆಗೆ ಹೊಸ ಸಚಿವರು ಬಂದ ಬಳಿಕವೇ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

click me!