CBSE 12ನೇ ತರಗತಿ ಫಲಿತಾಂಶ ಪ್ರಕಟ: ಶೇ 99.37ರಷ್ಟು ಮಕ್ಕಳು ಪಾಸ್!

By Kannadaprabha NewsFirst Published Jul 30, 2021, 3:17 PM IST
Highlights

* ಸಿಬಿಎಸ್‌ಇಯು 12ನೇ ತರಗತಿ ಫಲಿತಾಂಶ

* ಶೇ.99.37 ಫಲಿತಾಂಶದೊಂದಿಗೆ 12.96 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣ

* ದೆಹಲಿ ವಿದ್ಯಾರ್ಥಿಗಳು ಶೇ.99.84ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣ

ನವದೆಹಲಿ(ಜು.30): ಕೋವಿಡ್‌ ಹಿನ್ನೆಲೆಯಲ್ಲಿ ರದ್ದಾದ 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಶೇ.99.37 ಫಲಿತಾಂಶದೊಂದಿಗೆ 12.96 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 10 ಹಾಗೂ 11ನೇ ತರಗತಿಯ ಫೈನಲ್ ರಿಸಲ್ಟ್ ಹಾಗೂ 12ನೇ ತರಗತಿಯ ಪ್ರೀ ಬೋರ್ಡ್‌ ಎಕ್ಸಾಂ ಅಂಕಗಳನ್ನಾಧರಿಸಿ ಈ ಫಲಿತಾಂಶ ನೀಡಲಾಗಿದೆ. ಅಧಿಕೃತ ವೆಬ್‌ಸೈಟ್ cbseresults.nic.in ಅಥವಾ cbse.gov.in ನಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.

ದೆಹಲಿ ವಿದ್ಯಾರ್ಥಿಗಳು ಶೇ.99.84ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಸುಮಾರು 1,50,152 ಮಂದಿ ವಿದ್ಯಾರ್ಥಿಗಳು ಶೇ.90ರಷ್ಟು ಅಂಗಳನ್ನು ಗಳಿಸಿದ್ದಾರೆ, 70,004 ವಿದ್ಯಾರ್ಥಿಗಳು ಶೇ.95ರಷ್ಟು ಫಲಿತಾಂಶ ಗಳಿಸಿದ್ದಾರೆ.

ಈ ಸೂತ್ರದ ಆಧಾರದಲ್ಲಿ ಫಲಿತಾಂಶ

ಈ ಬಾರಿ ಸಿಬಿಎಸ್ಇ 12ನೇ ತರಗತಿ ಫಲಿತಾಂಶ 30:30:40 ಸೂತ್ರದಡಿ ತಯಾರಿಸಲಾಗಿದೆ. 10 ಮತ್ತು 11ನೇ ತರಗತಿ ಅಂತಿಮ ಪರೀಕ್ಷೆ ಅಂಕ ಮತ್ತು 12ನೇ ತರಗತಿಯಲ್ಲಿ ಈಗಾಗಲೇ ನಡೆಸಿರುವ ಪೂರ್ವ ಸಿದ್ಧತಾ ಪರೀಕ್ಷೆಗಳ ಅಂಕ ಆಧರಿಸಿ 30:30:40 ಅನುಪಾತ ಆಧರಿಸಿ ಫಲಿತಾಂಶ ಪ್ರಕಟಿಸಲಾಗಿದೆ.

ಲಿತಾಂಶ ವೀಕ್ಷಣೆ ಹೇಗೆ.?

ವಿದ್ಯಾರ್ಥಿಗಳು ಇಂದು, ಜುಲೈ 30ರಂದು ಮಧ್ಯಾಹ್ನ ಪ್ರಕಟಗೊಂಡಿರುವ CBSE 12ನೇ ತರಗತಿ ಫಲಿತಾಂಶವನ್ನು ಬೋರ್ಡ್ ಅಧಿಕೃತ ಜಾಲತಾಣ cbseresults.nic.in ಅಥವಾ cbse.gov.in ಗೆ ಭೇಟಿ ನೀಡಿ, ನೋಂದಣಿ ಸಂಖ್ಯೆ ನಮೂದಿಸಿ ನೋಡಬಹುದು. ಅಲ್ಲದೇ ವಿದ್ಯಾರ್ಥಿಗಳು ಡಿಜಿಲಾಕರ್ ನಲ್ಲಿ ತಮ್ಮ ಫಲಿತಾಂಶ ಪಡೆಯಬಹುದು.

ಮೋದಿ ನೇತೃತ್ವದ ಸಭೆಯಲ್ಲಿ ಪರೀಕ್ಷೆ ರದ್ದು

ಜೂ.1ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆ ರದ್ದು ಮಾಡಲಾಗಿತ್ತು. ಇದರ ಬೆನ್ನಲ್ಲೇ ಐಸಿಎಸ್‌ಇ ಪರೀಕ್ಷೆ ರದ್ದು ಮಾಡಲಾಗಿತ್ತು.

click me!