
ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಆ.14): ಆಗಸ್ಟ್ 15 ರಂದು ರಾಜ್ಯ ದತ್ತಾಂಶ ಕೇಂದ್ರದ (ಎಸ್ ಡಿ ಸಿ) ಸರ್ವರ್ ಗಳ ನಿರ್ವಹಣೆ ಹಿನ್ನೆಲೆಯಲ್ಲಿ, ಪಿಜಿಇಟಿ 24ರ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ನ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆಯ ನಂತರದ ಪ್ರಕ್ರಿಯೆಯ ವಿವಿಧ ಹಂತಗಳ ದಿನಾಂಕಗಳನ್ನು ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಬುಧವಾರ ತಿಳಿಸಿದ್ದಾರೆ.
ಎಸ್‌ಡಿಸಿ ಸರ್ವರುಗಳ ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಆ.15ರಂದು ಪಿಜಿಇಟಿ-24 ಅಭ್ಯರ್ಥಿಗಳು ಆನ್ಲೈನ್ ಮೂಲಕ ಪ್ರಕ್ರಿಯೆ ನಡೆಸಲು ಸಾಧ್ಯವಾಗುವುದಿಲ್ಲ. ಸ್ವಾತಂತ್ರ್ಯೋತ್ಸವದ ದಿನದಂದು ಕೆಇಎ ಕಾಲ್ ಸೆಂಟರ್ ಕೂಡ ಕಾರ್ಯಾಚರಿಸುವುದಿಲ್ಲ ಎಂದು ತಿಳಿಸಿರುವವರು ಅವರು, ಆಗಸ್ಟ್ 16ರಂದು ಇದು ಪುನರ್ ಆರಂಭಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಚಲನ್ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ಆ.16ರ ಸಂಜೆ 6 ರವರೆಗೆ ಅವಕಾಶವಿರುತ್ತದೆ.
ಶುಲ್ಕ ಪಾವತಿಸಲು ಹಾಗು ಪ್ರವೇಶ ಪತ್ರಗಳನ್ನು ಪಡೆಯಲು ಆ. 17 ಕಡೆಯ ದಿನವಾಗಿರುತ್ತದೆ. ಶುಲ್ಕ ಪಾವತಿಸಿದ ಅಭ್ಯರ್ಥಿಗಳು ಆ.18ರ ಸಂಜೆ 6ಕ್ಕೆ ಮುನ್ನ ಪ್ರವೇಶ ಆದೇಶ ಡೌನ್‌ಲೋಡ್ ಮಾಡಿಕೊಳ್ಳಬೇಕು. ಕಾಲೇಜಿನಲ್ಲಿ ಆ.19ರ ಸಂಜೆ 5.30ಕ್ಕೆ ಮುನ್ನ ಪ್ರವೇಶ ಪಡೆಯಬೇಕು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ಪುನಾರಚನೆ ಚರ್ಚೆಯಲ್ಲಿಲ್ಲ: ಸಚಿವ ಚಲುವರಾಯಸ್ವಾಮಿ
ಡಿಸಿಇಟಿ ವಿಸ್ತರಣೆ: ಡಿಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆಗೂ ದಿನಾಂಕ ವಿಸ್ತರಣೆ ಮಾಡಲಾಗಿದೆ. ಆ.16ರ ಬೆಳಿಗ್ಗೆ 11.55ರವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲು ಮಾಡಬಹುದು. ಆ.17ರಂದು ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಆ.19 ಮತ್ತು 20 ರಂದು ಶುಲ್ಕ ಪಾವತಿ ಮಾಡಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ.