ಆಶ್ರಯ ಮನೆಯಲ್ಲಿ ಅಂಗನವಾಡಿ, ನಿತ್ಯ ಭಯದ ವಾತಾವರಣದಲ್ಲಿ ಕಾಲ ಕಳೆಯುವ ಮಕ್ಕಳು!

By Suvarna News  |  First Published Aug 14, 2024, 8:59 PM IST

ಕೊಪ್ಪಳದ ನವಲಿಯಲ್ಲಿ ಶಿಥಿಲಗೊಂಡ ಆಶ್ರಯ ಮನೆಯ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು, ನಿತ್ಯ ಭಯದ ವಾತಾವರಣದಲ್ಲಿ ಮಕ್ಕಳು ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.


ಅಮರಪ್ಪ ಕುರಿ

ನವಲಿ (ಆ.14): ಶಿಥಿಲಗೊಂಡ ಆಶ್ರಯ ಮನೆಯ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು, ನಿತ್ಯ ಭಯದ ವಾತಾವರಣದಲ್ಲಿ ಮಕ್ಕಳು ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.

Latest Videos

undefined

ಹೌದು! ಇದು ಕನಕಗಿರಿ ತಾಲೂಕಿನ ನವಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6ನೇ ಅಂಗನವಾಡಿ ಕೇಂದ್ರದ ದುಸ್ಥಿತಿ. ಮೊದಲಿದ್ದ ಬಾಡಿಗೆ ಕಟ್ಟಡ ಮಳೆಯಿಂದ ಸೋರುತ್ತಿದೆ ಎಂದು 2 ವರ್ಷದ ಹಿಂದೆ ಇಲ್ಲಿ ಅಂಗನವಾಡಿ ಕೇಂದ್ರ ಪ್ರಾರಂಭಿಸಲಾಗಿದೆ. ಆದರೆ ಈ ಕಟ್ಟಡವೂ ಅಪಾಯಕಾರಿಯಾಗಿದೆ.
ಗ್ರಾಮದ 4ನೇ ವಾರ್ಡ್‌ನ ವ್ಯಾಪ್ತಿಯ ಈ ಅಂಗನವಾಡಿ ಕೇಂದ್ರದ ಆವರಣ ಕಲ್ಲು, ಕಟ್ಟಿಗೆ, ಹಸಿರು ಕಸದ ತಾಣವಾಗಿ ಮಾರ್ಪಟ್ಟಿದ್ದು, ಅಂಗನವಾಡಿ ಅವ್ಯವಸ್ಥೆಯ ಅಗರವಾಗಿದೆ. ಮಕ್ಕಳಿಗೆ ಆಟವಾಡಲು ಜಾಗವಿಲ್ಲ. ಶೌಚಾಲಯವಿಲ್ಲ. ಮೂಲಭೂತ ಸೌಲಭ್ಯವಂತೂ ಗಗನಕುಸುಮವಾಗಿದೆ.

ಗರ್ಭಿಣಿಯರು, ಬಾಣಂತಿಯರಿಗೆ ವಿತರಿಸಿದ ಅಂಗನವಾಡಿ ಬೆಲ್ಲದ ಪೊಟ್ಟಣದಲ್ಲಿ ಸತ್ತ ಇಲಿ ಪತ್ತೆ

ಕೆಲ ವರ್ಷಗಳಿಂದ ಅಂಗನವಾಡಿ ಕೇಂದ್ರ ಇದ್ದರೂ ಕಟ್ಟಡ ಇದುವರೆಗೆ ಬಣ್ಣವನ್ನೇ ಕಂಡಿಲ್ಲ. ಹೊರಗೆ ನಾಮಫಲಕ ಅಳವಡಿಸಿಲ್ಲ. ಇನ್ನು ಕೇಂದ್ರದ ಒಳಗೆ ಕಾಲಿಟ್ಟರೆ ಕಗ್ಗತ್ತಲು ಬಿಟ್ಟು ಬೇರೆನೂ ಕಾಣಲ್ಲ. ಕೇಂದ್ರಕ್ಕೆ ಬರುವ ಮಕ್ಕಳಿಗೆ ಇದೊಂದು ಜೈಲಿನ ಕೋಣಿಯಂತೆ ಭಾಸವಾಗುತ್ತಿದೆ. ಆಟ ಆಡುತ್ತಾ ಪಾಠ ಆಲಿಸಬೇಕಾದ ಪುಟ್ಟ ಕಂದಮ್ಮಗಳು ಕೈದಿಗಳಂತೆ ಇರಬೇಕಾದ ವಾತಾವರಣವಿದೆ. ಅಂಗನವಾಡಿಯಲ್ಲಿ ಸೂಕ್ತ ವಿದ್ಯುತ್ ಸಹ ಇಲ್ಲದಿರುವುದು ವಿಪರ್ಯಾಸ.

ವಿಷಜಂತುಗಳು ತಾಣ:
ಅಂಗನವಾಡಿ ಕೇಂದ್ರದ ಆವರಣದಲ್ಲಿ ಹಗಲಿನಲ್ಲಿಯೇ ಹಾವು, ಚೇಳು ಸೇರಿದಂತೆ ವಿಷಜಂತುಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಮಕ್ಕಳು ಭಯಭೀತರಾಗುತ್ತಿದ್ದಾರೆ. ಕನಿಷ್ಠ ಕೇಂದ್ರದ ಆವರಣದ ಸ್ವಚ್ಛತೆಯ ಬಗ್ಗೆ ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗಮನವಹಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅನಂತ್ ಅಂಬಾನಿ ರಾಧಿಕಾ ಹನಿಮೂನ್‌, ಬೆಡ್‌ ರೂಂನ ಒಂದು ದಿನದ ಬಾಡಿಗೆ 31 ಲಕ್ಷ!

ಈ ಅಂಗನವಾಡಿ ಕೇಂದ್ರವು 4ನೇ ವಾರ್ಡ್‌ನ ವ್ಯಾಪ್ತಿಗೆ ಬರುತ್ತದೆ. ಪ್ರತಿದಿನ ಸುಮಾರು 12ಕ್ಕೂ ಹೆಚ್ಚು ಮಕ್ಕಳು ಬರುತ್ತಾರೆ. 5 ಗರ್ಭೀಣಿಯರು, 6 ಜನ ಬಾಣಂತಿಯರು ಮಧ್ಯಾಹ್ನ ಬಂದು ಊಟ ಮಾಡಿಕೊಂಡು ಹೋಗುತ್ತಾರೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆ ಈರಮ್ಮ ನವಲಿ.

ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕಟ್ಟಡ ಒದಗಿಸುವ ಜತೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನುವುದು ಪಾಲಕರ ಆಗ್ರಹವಾಗಿದೆ. ಅಂಗನವಾಡಿ ಕೇಂದ್ರದ ಅವರಣದಲ್ಲಿ ಮುಳ್ಳು ಕಲ್ಲು, ಗಿಡಗಂಟೆ ಬೆಳೆದಿವೆ. ದಿನ ಬೆಳಗಾದರೆ ಹಾವು, ಚೇಳು ಮತ್ತು ವಿಷಜಂತುಗಳು ಇರುತ್ತವೆ. ಈ ಭಯದಲ್ಲಿ ಮಕ್ಕಳು ಶಿಕ್ಷಣ ಪಡೆಯಬೇಕಾಗಿದೆ ಎನ್ನುತ್ತಾರೆ ನವಲಿ ಗ್ರಾಮಸ್ಥ ಹನುಮಂತಪ್ಪ ಹುನಕುಂಟಿ.

ನಾನು ಆಗಸ್ಟ್‌ ತಿಂಗಳಿಂದ ಇಲ್ಲಿ ಕಾರ್ಯ ಮಾಡುತ್ತಿದ್ದೇನೆ. ಹೀಗಾಗಿ ನಮ್ಮ ವ್ಯಾಪ್ತಿಯ ಬರುವ ಎಲ್ಲ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡುವುದಕ್ಕೆ ಆಗಿಲ್ಲ. ಮುಂದೆ ಭೇಟಿ ನೀಡಿ ಅಲ್ಲಿಯ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಪರಿಹರಿಸಲಾಗುವುದು ಎಂದು ಅಂಗನವಾಡಿ ಮೇಲ್ವಿಚಾರಕಿ ಶೈಲಾ ಸಾಲಿಮಠ ತಿಳಿಸಿದ್ದಾರೆ.

click me!