ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮುದ್ದೆ, ಜೋಳದ ರೊಟ್ಟಿ

By Govindaraj S  |  First Published Aug 14, 2022, 3:45 AM IST

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟದಲ್ಲಿ ರಾಗಿಮುದ್ದೆ ಮತ್ತು ಜೋಳದ ರೊಟ್ಟಿನೀಡಲು ಅನುಮತಿ ಕೋರಿ ರಾಜ್ಯ ಶಿಕ್ಷಣ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.


ಬೆಂಗಳೂರು (ಆ.14): ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟದಲ್ಲಿ ರಾಗಿಮುದ್ದೆ ಮತ್ತು ಜೋಳದ ರೊಟ್ಟಿನೀಡಲು ಅನುಮತಿ ಕೋರಿ ರಾಜ್ಯ ಶಿಕ್ಷಣ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಆಧರಿಸಿ ಶಿಕ್ಷಣ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. 

ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿರುವ ಲಕ್ಷಾಂತರ ಮೆಟ್ರಿಕ್‌ ಟನ್‌ ಜೋಳ ಮತ್ತು ರಾಗಿ ಉಗ್ರಾಣಗಳಲ್ಲಿದ್ದು ಅದನ್ನು ಬಳಸಿಕೊಂಡು ಮಕ್ಕಳಿಗೆ ಬಿಸಿಯೂಟದಲ್ಲಿ ರಾಗಿಮುದ್ದೆ ಮತ್ತು ಜೋಳದ ರೊಟ್ಟಿನೀಡಲು ಕ್ರಮ ವಹಿಸುವಂತೆ ಕೋರಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಬಿಸಿಯೂಟ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ನಿರ್ದಿಷ್ಟಅನುಪಾತದಲ್ಲಿ ಅನುದಾನ ಒದಗಿಸುತ್ತಿರುವುದರಿಂದ ಈ ಬಗ್ಗೆ ಕೇಂದ್ರದ ಅಭಿಪ್ರಾಯವನ್ನು ರಾಜ್ಯ ಸರ್ಕಾರ ಕೇಳಿದೆ. ಒಂದು ವೇಳೆ ಕೇಂದ್ರ ಸರ್ಕಾರ ಒಪ್ಪಿದರೆ ಬಿಸಿಯೂಟದಲ್ಲಿ ರಾಗಿ ಮುದ್ದೆ, ಜೋಳದ ರೊಟ್ಟಿನೀಡುವ ಪ್ರಸ್ತಾವನೆಗೆ ಸಮ್ಮತಿ ಸೂಚಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

Tap to resize

Latest Videos

ಶಾಲಾ ಮಕ್ಕಳಿಗೆ ಮೊಟ್ಟೆ ಯೋಜನೆ ರಾಜ್ಯಕ್ಕೆ ವಿಸ್ತರಣೆ

ಉತ್ತರಕ್ಕೆ ರೊಟ್ಟಿ, ದಕ್ಷಿಣಕ್ಕೆ ರಾಗಿ ಮುದ್ದೆ: ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ರಾಜ್ಯ ಸರ್ಕಾರ ರಾಜ್ಯದ ರೈತರಿಂದ ಒಟ್ಟು 3.14 ಲಕ್ಷ ಮೆಟ್ರಿಕ್‌ ಟನ್‌ನಷ್ಟುರಾಗಿ ಮತ್ತು 1.10 ಲಕ್ಷ ಮೆಟ್ರಿಕ್‌ ಟನ್‌ನಷ್ಟುಜೋಳ ಖರೀದಿ ಮಾಡಿರುವ ಸರ್ಕಾರ ರಾಜ್ಯದ ಉಗ್ರಾಣಗಳಲ್ಲಿ ಶೇಖರಿಸಿದೆ. ಪ್ರತಿ ವರ್ಷ ರೈತರಿಂದ ದೊಡ್ಡ ಪ್ರಮಾಣದಲ್ಲಿ ರಾಗಿ, ಜೋಳ ಖರೀದಿಸುವುದರಿಂದ ಕಾಲಮಿತಿಯಲ್ಲಿ ಹಳೆಯ ದಾಸ್ತಾನನ್ನು ಖಾಲಿ ಮಾಡಬೇಕಾದ ಅನಿವಾರ್ಯತೆ ಇದೆ. 

ಈ ನಿಟ್ಟಿಯಲ್ಲಿ ಈಗಾಗಲೇ ಬಡವರಿಗೆ ನೀಡಿರುವ ಬಿಪಿಎಲ್‌, ಅಂತ್ಯೋದಯ ಕಾರ್ಡುದಾರಿಗೆ ಅಕ್ಕಿ ಜೊತೆ ಉತ್ತರ ಕರ್ನಾಟಕದಲ್ಲಿ ಜೋಳ, ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ರಾಗಿ ನೀಡಲಾಗುತ್ತಿದೆ. ಆದರೂ, ಇದು ನಿಗದಿತ ಅವಧಿಯಲ್ಲಿ ದಾಸ್ತಾನು ಖಾಲಿಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಹಾಗಾಗಿ ಈಗ ಅದೇ ರೀತಿ ಉತ್ತರ ಕರ್ನಾಟಕ ಭಾಗದ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಜೋಳದ ರೊಟ್ಟಿ, ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳ ಮಕ್ಕಳಿಗೆ ರಾಗಿ ಮುದ್ದೆ ನೀಡುವ ಪ್ರಸ್ತಾವನೆಯನ್ನು ಆಹಾರ ನಾಗರಿಕ ಪೂರೈಕೆ ಇಲಾಖೆ ಶಿಕ್ಷಣ ಇಲಾಖೆಯ ಮುಂದಿಟ್ಟಿದೆ. ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದರೆ ಇದು ಜಾರಿಯಾಗುವುದು ಖಚಿತ ಎನ್ನುತ್ತಾರೆ ಅಧಿಕಾರಿಗಳು.

ಶಾಲೆ ಮಕ್ಕಳಿಗೆ ಮೊಟ್ಟೆ ಬೇಡ: ಕೇಂದ್ರಕ್ಕೆ ವರದಿ

ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ರಾಗಿಮುದ್ದೆ, ಜೋಳದ ರೊಟ್ಟಿನೀಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಯನ್ನು ಪರಿಶೀಲಿಸಿ ರಾಜ್ಯ ಸರ್ಕಾರದೊಂದಿಗೂ ಚರ್ಚಿಸಲಾಗಿದ್ದು ಕೇಂದ್ರ ಸರ್ಕಾರದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜೊತೆ ಸಂವಹನ ನಡೆಸಲಾಗಿದೆ. ಕೇಂದ್ರದ ಒಪ್ಪಿಗೆ ದೊರೆತ ಬಳಿಕ ರಾಜ್ಯ ಸರ್ಕಾರದೊಂದಿಗೆ ಮತ್ತೊಮ್ಮೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
-ಆರ್‌.ವಿಶಾಲ್‌, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

click me!