1.3 ಕೋಟಿ ರೂ. ಸ್ಕಾಲರ್‌ಶಿಪ್ ಪಡೆದ ಹೈದ್ರಾಬಾದ್‌ನ ಹುಡುಗ

By Suvarna News  |  First Published Aug 13, 2022, 3:05 PM IST

*ಹೈದ್ರಾಬಾದ್‌ನ ವೇದಾಂತ್ ಆನಂದವಾಡೆ ಎಂಬ ವಿದ್ಯಾರ್ಥಿಗೆ ಒಲಿದ ದೊಡ್ಡ ಮೊತ್ತದ ವಿದ್ಯಾರ್ಥಿ ವೇತನ
*ಅಮೆರಿಕದ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಿಂದ ಈ ಸ್ಕಾಲರ್‌ಶಿಪ್ ನೀಡಲಾಗಿದೆ.
*ಅಮೆರಿಕದ ಈ ವಿವಿಯ ಹಳೆಯ ವಿದ್ಯಾರ್ಥಿಗಳ ಪೈಕಿ 17 ನೊಬೆಲ್ ಪುರಸ್ಕೃತರಿದ್ದಾರೆ!
 


ಹೈದರಾಬಾದ್ ಹುಡುಗನಿಗೆ ಅಮೆರಿಕಾದ ವಿಶ್ವವಿದ್ಯಾಲಯವೊಂದರಿಂದ ಬಂಪರ್ ಜಾಕ್ಪಾಟ್ ಹೊಡೆದಿದೆ. ಬರೋಬ್ಬರಿ 1.3  ಕೋಟಿ ರೂ.ಮೊತ್ತದ ಸ್ಕಾಲರ್ಶಿಪ್ ಲಭ್ಯವಾಗಿದೆ. 17 ನೊಬೆಲ್ ಪುರಸ್ಕೃತರನ್ನು ಜಗತ್ತಿಗೆ ನೀಡಿದ ಅಮೆರಿಕಾದ ಪ್ರತಿಷ್ಟಿತ ಯೂನಿರ್ವಸಿಟಿಯಲ್ಲಿ ಕಲಿಯುವ ಅವಕಾಶ ಈ ಹೈದ್ರಾಬಾದ್ ಹುಡುಗನಿಗೆ ಲಭಿಸಿದೆ.  ಹೈದರಾಬಾದ್‌ನ ವೇದಾಂತ್ ಆನಂದವಾಡೆ (Vedant Anandwade) ಅವರು, ನರವಿಜ್ಞಾನ ಮತ್ತು ಮನೋವಿಜ್ಞಾನದಲ್ಲಿ ವೈದ್ಯಕೀಯ ಪದವಿ ಅಧ್ಯಯನಕ್ಕಾಗಿ ಯುನೈಟೆಡ್ ಸ್ಟೇಟ್ಸ್‌ನ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಿಂದ 1.3 ಕೋಟಿ ರೂ. ವಿದ್ಯಾರ್ಥಿವೇತನ ಪಡೆದಿದ್ದಾರೆ.  18 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗಾಗಿ ನಡೆದ ಹವಾಮಾನ ಸ್ಪರ್ಧೆಯ ಸವಾಲಿನಲ್ಲಿ ಗೆದ್ದಿದ್ದಕ್ಕಾಗಿ ಈ ಅದ್ಭುತ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ.  ಮುಂಬರುವ ನವೆಂಬರ್‌ನಲ್ಲಿ ವೇದಾಂತ್ ಆನಂದವಾಡೆ ಪ್ಯಾರಿಸ್‌ಗೆ ಪ್ರಯಾಣಿಸುತ್ತಿದ್ದು, ಯುನೆಸ್ಕೋದಲ್ಲಿ ತೀರ್ಪುಗಾರರ ಮುಂದೆ ತಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸಲಿದ್ದಾರೆ.  ವೇದಾಂತ್ ವಿದೇಶಕ್ಕೆ ಪ್ರಯಾಣಿಸಲು ಮತ್ತು ಶಿಕ್ಷಣವನ್ನು ಮುಂದುವರಿಸಲು ಬಯಸುತ್ತಿದ್ದಾರೆ. ಅಮೆರಿಕಾದ ಕೇಸ್ ವೆಸ್ಟರ್ನ್‌ ವಿವಿಯಲ್ಲಿ ಅವರು ನರವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡಲಿದ್ದು, ಭವಿಷ್ಯದಲ್ಲಿ ಶಸ್ತ್ರಚಿಕಿತ್ಸಕರಾಗಬೇಕೆಂಬ ಬಯಕೆ ಹೊಂದಿದ್ದಾರೆ. 

ಇದನ್ನೂ ಓದಿ: Job Alert: ಮದ್ರಾಸ್ ಐಐಟಿ ವಿದ್ಯಾರ್ಥಿಗಳಿಗೆ ಬಂಪರ್ ಜಾಬ್ ಆಫರ್ಸ್!

Tap to resize

Latest Videos

ವೇದಾಂತ್ ಆನಂದವಾಡೆ 8 ನೇ ತರಗತಿಯಿಂದಲೇ ವಿದೇಶದಲ್ಲಿ ಓದಲು ಬಯಸಿದ್ದರು. ಆರಂಭದಲ್ಲಿ ಜೀವಶಾಸ್ತ್ರವನ್ನು ಕೇಂದ್ರಬಿಂದುವಾಗಿ ಆರಿಸಿಕೊಂಡಿದ್ರು. 10 ನೇ ತರಗತಿಯ ನಂತರ ಸಾಂಕ್ರಾಮಿಕ ರೋಗ ಹರಡಿದಾಗ ವೇದಾಂತ್ ತಾಯಿ ಅವನನ್ನು ಡೆಕ್ಸ್ಟೆರಿಟಿ ಗ್ಲೋಬಲ್‌ಗೆ ಪರಿಚಯಿಸಿದರು. 16 ನೇ ವಯಸ್ಸಿನಲ್ಲಿ, ಅವರು ಮೂರು ತಿಂಗಳ ವೃತ್ತಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ ವಿದೇಶದ ಕಾಲೇಜುಗಳಿಗೆ ಶಾರ್ಟ್‌ಲಿಸ್ಟ್ ಆಗಿ, ಅಲ್ಲಿಗೆ ಹೋಗಲು ಸಹಾಯ ಮಾಡುವ ಸಲಹೆಗಾರರನ್ನು ಪಡೆದರು. ತರಗತಿಯಲ್ಲಿ ಒದಗಿಸಲಾದ ಸಾಪ್ತಾಹಿಕ ಕಾರ್ಯಯೋಜನೆಯ ಪರಿಣಾಮವಾಗಿ ಅವರು ಆತ್ಮವಿಶ್ವಾಸ ಮತ್ತು ಸ್ವಾತಂತ್ರ್ಯ ಗಳಿಸಿಕೊಂಡರು. ಮಾಸಿಕ ಕಾರ್ಯಯೋಜನೆಯು ವಿದ್ಯಾರ್ಥಿಗಳು ತಾವು ಭಾಗವಹಿಸಬೇಕಾದ ಅವಕಾಶಗಳು, ಸ್ಪರ್ಧೆಗಳು ಮತ್ತು ರಸಪ್ರಶ್ನೆಗಳನ್ನು ಆಯ್ಕೆ ಮಾಡುವಂತೆ ಮಾಡಿತು. 

ಮಕ್ಕಳಿಗೆ ವೇದಾಂತ್ (Vedant) ಅವರು ಸಂದೇಶ ನೀಡಿದ್ದು, ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮತ್ತು ಅವರ ಸಾಮರ್ಥ್ಯಗಳ ಮೇಲೆ ಕೇಂದ್ರೀಕರಿಸಲು ಸಲಹೆ ನೀಡಿದ್ದಾರೆ. ಏಕೆಂದರೆ ಅದು ಉತ್ತಮ ಕಾಲೇಜುಗಳನ್ನು ಹುಡುಕಿಕೊಡುತ್ತವೆ ಅನ್ನೋದು ಅವರ ಅಭಿಪ್ರಾಯ. ಶಿಕ್ಷಣ (Education)ದ ಹೊರತಾಗಿ ಇತರ ಚಟುವಟಿಕೆಗಳನ್ನು ಒಳಗೊಂಡಿರುವ ಸರ್ವಾಂಗೀಣವಾದ ರೆಸ್ಯೂಮ್ ಅನ್ನು ನಿರ್ಮಿಸಬೇಕು ಎಂದು ವೇದಾಂತ್, ಮಕ್ಕಳಿಗೆ ಸಲಹೆ ನೀಡಿದ್ದಾರೆ. 

ಇದನ್ನೂ ಓದಿ: ಅತಿ ಕಿರಿಯ ಆಪ್‌ ಡೆವಲಪರ್: ಗಿನ್ನೆಸ್ ದಾಖಲೆ ಬರೆದ ಹರಿಯಾಣದ ಹುಡುಗ!

ಇನ್ನು ವೇದಾಂತ್ ಅವರ ತಾಯಿ ವಿಜಯ ಲಕ್ಷ್ಮಿ ಆನಂದವಾಡೆ (Vijaylakshmi Anandawade) ಅವರು ತಮ್ಮ ಮಗನ ಬಗ್ಗೆ ಹೆಮ್ಮೆ ಪಡುತ್ತಾರೆ. 1.3 ಕೋಟಿ ರೂ.ಗಳ ಸ್ಕಾಲರ್‌ಶಿಪ್‌ನಿಂದ ಸಂತಸಗೊಂಡಿದ್ದಾರೆ. ವೇದಾಂತ್ ತನ್ನ ಸಿವಿಯನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟು ತನಗಾಗಿ ಉತ್ತಮ ವೇದಿಕೆಯನ್ನು ನಿರ್ಮಿಸಲು ಸಾಧ್ಯವಾದ ಕೌಶಲ್ಯವನ್ನ ಕೊಂಡಾಡಿದ್ದಾರೆ. ಆಟವಾಡುವುದು, ಸಂಗೀತವನ್ನು ರಚಿಸುವುದು ಮತ್ತು ಅಧ್ಯಯನ ಮಾಡುವುದರೊಂದಿಗೆ ತನ್ನ ಮಗ ಅಂತಿಮವಾಗಿ ತನ್ನ ಉತ್ಸಾಹವನ್ನು ಮುಂದುವರಿಸಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ. ಪ್ರತಿ ಮಗುವೂ ಅದರೊಂದಿಗೆ ಹುಟ್ಟಿರುವುದರಿಂದ ಅವರ ಮಗುವಿನ ವಿಶಿಷ್ಟ ಗುಣ ಏನೆಂದು ಪೋಷಕರು ಕಂಡುಹಿಡಿಯಬೇಕು. ಈ ಅವರ ಸಮಗ್ರ ಬೆಳವಣಿಗೆಗೆ ಸಹಾಯ ಮಾಡಬೇಕು ಅನ್ನೋದು ವೇದಾಂತ್ ತಾಯಿ ಮಾತು. ಹೈದ್ರಾಬಾದ್‌ ಹುಡುಗನ ಈ ಸಾಧನೆಗೆ ವ್ಯಾಪಕ ಮೆಚ್ಚೆಗೆ ವ್ಯಕ್ತವಾಗಿದೆ. ಹಲವಾರು ನೊಬೆಲ್ ಪುರಸ್ಕೃತರನ್ನು ನೀಡಿರುವ ವಿವಿಯೊಂದರಿಂದ ದೊಡ್ಡ ಮೊತ್ತದ ಸ್ಕಾಲರ್‌ಶಿಪ್ ಪಡೆಯುವುದು ಸಾಮಾನ್ಯವಾದ ಸಂಗತಿ ಏನಲ್ಲ. ಹಾಗಾಗಿ, ವೇದಾಂತ್ ಆನಂದವಾಡೆ ಅವರ ಪ್ರಯತ್ನಕ್ಕೆ ಮತ್ತು ಸಾಧನೆಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ವೇದಾಂತ್ ಸಾಕ್ಷಿಯಾಗಿದ್ದಾರೆ. 

click me!