ಬಸ್‌ ಇಲ್ಲದೆ ಜೆಸಿಬಿ ಏರಿ ಶಾಲೆಗೆ ಬರ್ತಾರೆ ಮಕ್ಕಳು; ಶಿರಗುಂಪಿ ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ!

By Ravi Nayak  |  First Published Aug 24, 2022, 5:32 PM IST
  • ಬಸ್‌ ಇಲ್ಲದೇ ಜೆಸಿಬಿ ಏರಿ ಶಾಲೆಗೆ ಬಂದ ವಿದ್ಯಾರ್ಥಿಗಳು!
  • ಕುಷ್ಟಗಿ ತಾಲೂಕಿನ ಶಿರಗುಂಪಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೊಂದರೆ
  • ಕಾಲ್ನಡಿಗೆ, ಬೈಕ್‌ ಸವಾರರಿಗೆ ಕೈಯೊಡ್ಡಿ ಪ್ರಯಾಣ ಮಾಡಬೇಕು

ಕುಷ್ಟಗಿ (ಆ.24) : ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಸಿಕ್ಕ ಸಿಕ್ಕ ವಾಹನಗಳಲ್ಲಿ ಅಪಾಯಕಾರಿಯಾಗಿ ಸಂಚರಿಸುತ್ತಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ಪದೇ ಪದೇ ಕೇಳಿ ಬರುತ್ತಲೇ ಇದೆ. ಶಾಲೆ, ಕಾಲೇಜಿಗೆ ಹೋದ ವಿದ್ಯಾರ್ಥಿಗಳು ವಾಪಸ್‌ ಮನೆಗೆ ಬರುವ ತನಕ ಪಾಲಕರಲ್ಲಿ ಆತಂಕ ಮನೆ ಮಾಡಿರುತ್ತದೆ. ಅಂತಹ ಘಟನೆಯೊಂದು ಕುಷ್ಟಗಿ ತಾಲೂಕಿನ ಶಿರಗುಂಪಿ ಗ್ರಾಮದಲ್ಲಿ ನಡೆದಿದ್ದು, ಇಲ್ಲಿಯ ಸರ್ಕಾರಿ ಪ್ರೌಢಶಾಲೆಗೆ ಬರುವ ವಿದ್ಯಾರ್ಥಿಗಳು ಕಳೆದ ಶನಿವಾರ ಜೆಸಿಬಿಯಲ್ಲಿ ಯಾವುದೇ ಸಪೋರ್ಚ್‌ ಇಲ್ಲದೇ ನಿಂತು ಸರ್ಕಸ್‌ ಮಾಡಿಕೊಂಡು ಜೀವ ಕೈಯ್ಯಲ್ಲಿ ಹಿಡಿದುಕೊಂಡು ಹೋಗಿದ್ದಾರೆ.

ಹಗರಿಗಜಾಪುರ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಹೋಗುವುದೇ ಹರಸಾಹಸ

Latest Videos

undefined

ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ 1 ರಿಂದ 8ನೇ ತರಗತಿಯ ವರೆಗೆ ಮಾತ್ರ ತರಗತಿ ಇದೆ. ಬಳಿಕ ಈ ಗ್ರಾಮದ 40 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು 3 ಕಿ.ಮೀ. ದೂರದ ಶಿರಗುಂಪಿ ಗ್ರಾಮಕ್ಕೆ ತೆರಳಬೇಕು. ಸಮಸ್ಯೆ ಆಗಿದ್ದು ಇಲ್ಲಿಯೇ ಜಾಲಿಹಾಳದಿಂದ ಶಿರಗುಂಪಿಗೆ ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲ. ಶಾಲೆ ಆರಂಭ, ಬಿಡುವ ವೇಳೆಗೆ ಸರಿಯಾಗಿ ವಾಹನ ವ್ಯವಸ್ಥೆ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಸಿಕ್ಕ ಸಿಕ್ಕ ವಾಹನ ಹತ್ತಿ ಸಂಚರಿಸಬೇಕು. ಇಲ್ಲವಾದಲ್ಲಿ ‘ಪಾದಯಾತ್ರೆ’ಯೇ ಗತಿ. ಕೆಲವರು ತಮ್ಮ ಕಾರು, ಟೆಂಪೋ, ಟಂಟಂ, ದ್ವಿಚಕ್ರ ವಾಹನ ನಿಲ್ಲಿಸಿ ಕರೆದೊಯ್ಯುತ್ತಾರೆ. ಶನಿವಾರ ಇದೇ ಶಾಲೆಗೆ ತೆರಳುತ್ತಿರುವ ಐವರು ವಿದ್ಯಾರ್ಥಿಗಳು ಜೆಸಿಬಿಯ ಬಕೆಟ್‌ನಲ್ಲಿ ನಿಂತುಕೊಂಡು ಅಪಾಯಕಾರಿಯಾಗಿ ಹೋಗಿದ್ದಾರೆ.

ಜೆಸಿಬಿ ಯಾವುದೇ ಕಾರಣಕ್ಕೂ ಜನರ ಸಂಚಾರಕ್ಕೆ ಯೋಗ್ಯವಲ್ಲ. ಅದರಲ್ಲೂ ಬಕೆಟ್‌ (ಮಣ್ಣನ್ನು ಅಗಿಯಲು, ಜಾಗ ಸ್ವಚ್ಛಗೊಳಿಸಲು ಇರುವ ಸಾಧನ)ನಲ್ಲಿ ಯಾವುದೇ ಸಪೋರ್ಚ್‌ ಇರುವುದಿಲ್ಲ. ವಿದ್ಯಾರ್ಥಿಗಳು ಜೀವದ ಜೊತೆ ಚೆಲ್ಲಾಟವಾಡಿ ಸಂಚರಿಸಿದ್ದಾರೆ.

ಶಾಲೆಯಲ್ಲಿ ಉತ್ತಮ ಸೌಲಭ್ಯ: ಶಿರಗುಂಪಿ ಪ್ರೌಢಶಾಲೆಯಲ್ಲಿ ಸುಸಜ್ಜಿತ ಕಟ್ಟಡ, ವಿಶಾಲವಾದ ಆಟದ ಮೈದಾನ ಮತ್ತು ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂಬ ಉದ್ದೇಶದಿಂದ ಸಮೀಪದ ಹೆಸರೂರು, ದೋಟಿಹಾಳ, ರಾವಣಕಿ ಮತ್ತು ಜಾಲಿಹಾಳ ಗ್ರಾಮದಿಂದ ಸುಮಾರು 55 ವಿದ್ಯಾರ್ಥಿಗಳು ಶಿರಗುಂಪಿ ಗ್ರಾಮದ ಶಾಲೆಗೆ ದಾಖಲಾಗಿದ್ದಾರೆ. ಕಳೆದ 2- 3 ವಷÜರ್‍ಗಳಿಂದ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ ಸೌಕರ್ಯ ಇಲ್ಲವಾಗಿದೆ. ಬೆಳಗ್ಗೆ ಬರುವಾಗ ಬಸ್‌ ಇಲ್ಲವೇ ಖಾಸಗಿ ವಾಹನ, ಬೈಕ್‌, ಟಂಟಂ ಏರಿ ಬಂದರೆ, ಅವಧಿ ಮುಗಿದ ಬಳಿಕ ತಪ್ಪದೇ ಕಾಲ್ನಡಿಗೆಯಲ್ಲಿ ತೆರಳಬೇಕು. ಅಥವಾ ಬೈಕ್‌, ಎತ್ತಿನ ಬಂಡಿ ಸೇರಿ ನಾನಾ ವಾಹನಗಳನ್ನು ಹತ್ತಿ ಮನೆ ತಲುಪಬೇಕಾಗಿದೆ.

ಶಾಲೆ ಬಿಡುವ ಮುನ್ನವೇ ಅಂದರೆ ಸಂಜೆ 4 ಗಂಟೆಗೆ ಒಂದು ಬಸ್‌ ಇದೆ. ಇದಾದ ಬಳಿಕ ಸಮಯಕ್ಕೆ ಬಸ್‌ ಇಲ್ಲವಾಗಿದೆ. ಇದರಿಂದ ವಿದ್ಯಾರ್ಥಿಗಳು ಬೇಸತ್ತಿದ್ದಾರೆ. ಶಾಲೆ ಬಿಟ್ಟು ಮನೆ ಸೇರುವಷ್ಟರಲ್ಲಿ ನಿತ್ಯ ಕತ್ತಲಾಗುವುದು ಸಾಮಾನ್ಯವಾಗಿದೆ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಧೋರಣೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಹಿಂದೆಯೂ ನಡೆದಿತ್ತು: ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಜೆಸಿಬಿಯಲ್ಲಿ ಪ್ರಯಾಣ ಮಾಡುತ್ತಿರುವ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ಕಳೆದ ವರ್ಷ ಆ. 31ರಂದು ಸಮರ್ಪಕ ಬಸ್‌ ಸೌಲಭ್ಯ ಇಲ್ಲದ್ದರಿಂದ ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದಿಂದ 5 ಕಿಮೀ ದೂರದಲ್ಲಿರುವ ಹ್ಯಾಟಿ ಗ್ರಾಮದವರೆಗೆ ಜೆಸಿಬಿಯಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಿದ್ದರು. ಈ ಕುರಿತು ಕನ್ನಡಪ್ರಭ ಸಚಿತ್ರ ವರದಿ ಮಾಡಿ ಗಮನ ಸೆಳೆದಿತ್ತು. ವರದಿಯಿಂದ ಎಚ್ಚೆತ್ತ ಸಾರಿಗೆ ಇಲಾಖೆಯ ಅಧಿಕಾರಿಗಳು ಮರುದಿನವೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‌ ವ್ಯವಸ್ಥೆ ಕಲ್ಪಿಸಿದ್ದನ್ನು ಸ್ಮರಿಸಬಹುದು.

2ನೇ ತರಗತಿಯ ವಿದ್ಯಾರ್ಥಿಯನ್ನು ಬಿಟ್ಟು ತರಗತಿಗೆ ಬೀಗ: 10 ಶಾಲಾ ಸಿಬ್ಬಂದಿ ಅಮಾನತು

ನಮ್ಮ ಶಾಲಾ ಸಮಯಕ್ಕೆ ಬಸ್‌ ಇಲ್ಲ. ನಿತ್ಯ ಕಾಲ್ನಡಿಗೆಯಲ್ಲಿ ಇಲ್ಲವೆ ಬೈಕ್‌ ಏರಿ ಪ್ರಯಾಣ ಮಾಡಬೇಕಿದೆ. ಇದರಿಂದ ಓದಿನ ಮೇಲೆ ಪರಿಣಾಮ ಬೀರುತ್ತಿದೆ. ಸಂಜೆ 4.40ಕ್ಕೆ ದೋಟಿಹಾಳ ಕಡೆ ಬಸ್‌ ಓಡಿಸಿದರೆ ಅನುಕೂಲವಾಗುತ್ತದೆ.

ನೊಂದ ವಿದ್ಯಾರ್ಥಿಗಳು

ಶಾಲೆ ಬಿಡುವುದಕ್ಕೂ ಮುಂಚೆ ಒಂದು ಬಸ್‌ ಇದೆ. ಸಮಯ ಹೊಂದಾಣಿಕೆಯಾಗುತ್ತಿಲ್ಲ. ಇತ್ತೀಚೆಗೆ ನಡೆದ ಎಸ್‌ಡಿಎಂಸಿ ಸಭೆಯಲ್ಲಿ ಪಾಲಕರು, ಮುಖಂಡರು ಶಾಲೆ ಬಿಡುವ ಸಮಯಕ್ಕೆ ಬಸ್‌ ಓಡಿಸುವಂತೆ ಕುಷ್ಟಗಿ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ. ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಸಮಸ್ಯೆ ಬಗೆಹರಿದರೆ ವಿದ್ಯಾರ್ಥಿಗಳಿಗೆ ತುಂಬಾ ಅನೂಕೂಲವಾಗಲಿದೆ.

ಮಹಾಂತಯ್ಯ ಸೊಪ್ಪಿಮಠ, ಮುಖ್ಯಶಿಕ್ಷಕರು, ಶಿರಗುಂಪಿ ಪ್ರೌಢಶಾಲೆ

click me!