* ನಾನು ಕುವೆಂಪು, ನಾಡಗೀತೆಗೆ ಅವಮಾನ ಮಾಡಿಲ್ಲ
* ಯಾರೋ ಬರೆದಿದ್ದನ್ನು ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿದ್ದೆ
* ಅದರ ಬಗ್ಗೆ ತನಿಖೆಯಾಗಿ ನನಗೆ ಕ್ಲೀನ್‌ಚಿಟ್ ಸಿಕ್ಕದೆ
ಬೆಂಗಳೂರು(ಜೂ.01): ನಾನು ಕುವೆಂಪು ಅವರ ವ್ಯಕ್ತಿತ್ವಕ್ಕಾಗಲಿ, ಬರಹಕ್ಕಾಗಲಿ ಯಾವುದೇ ಅವಮಾನ ಮಾಡಿಲ್ಲ. ಮಾಡುವ ಉದ್ದೇಶವೂ ನನಗಿಲ್ಲ. ರಾಜಕೀಯ ಹಿತಾಸಕ್ತಿಗಾಗಿ ಹೀಗೆ ಒಬ್ಬ ಕನ್ನಡಿಗನನ್ನು ತೇಜೋವಧೆ ಮಾಡಿ ಹಣಿಯವ ಕೆಲಸವನ್ನು ಮಾಡಬೇಡಿ ಎಂದು ವಿವಾದಿತ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮನವಿ ಮಾಡಿದ್ದಾರೆ.
ಕುವೆಂಪು ಅವರ ಪಠ್ಯ ಹಾಗೂ ನಾಡಗೀತೆ ವಿಚಾರವಾಗಿ ತಮ್ಮ ವಿರುದ್ಧದ ಆರೋಪ, ವಿವಾದಗಳಿಗೆ ಸ್ಪಷ್ಟನೆ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, 2017ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಸಚಿವರೊಬ್ಬರು ‘ಕನ್ನಡ ಶಾಲೆಗಳಲ್ಲಿ ಅರೇಬಿಕ್ ಭಾಷೆ ಕಲಿಸುತ್ತೇವೆ’ ಎಂದು ನೀಡಿದ ಹೇಳಿಕೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಆ ಆಕ್ರೋಶದ ಒಂದು ಭಾಗವಾಗಿ ಯಾರೋ ಒಬ್ಬರು ನಾಡಗೀತೆಯ ದಾಟಿಯಲ್ಲಿ ನಾಲ್ಕು ಸಾಲುಗಳನ್ನು ಬರೆದು ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದರು. ವಾಟ್ಸ್‌ಅಪ್ ಮೂಲಕ ಬಂದಿದ್ದ ಯಾರೋ ಬರೆದಿದ್ದ ಆ ಸಾಲುಗಳನ್ನು ನಾನು ನನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದೆ. ಇದು ವಾಟ್ಸ್‌ಅಪ್‌ನಲ್ಲಿ ಬಂದಿದ್ದು ಎಂದೂ ನಾನು ಉಲ್ಲೇಖಿಸಿದ್ದೆ.
ಕುವೆಂಪುಗೆ ಅಪಮಾನ : ರೋಹಿತ್ ಚಕ್ರತೀರ್ಥ ವಜಾಗೆ ಒಕ್ಕಲಿಗರ ಸಂಘ ಆಗ್ರಹ
ಆದರೆ, ನನ್ನ ವಿರುದ್ಧ ಹಿಂದೆಯೇ ದೂರು ನೀಡಿ ತನಿಖೆಯೂ ಆಗಿ ವಸ್ತುಸ್ಥಿತಿ ವಿವರಿಸಿದಾಗ ಪೊಲೀಸರು ನನ್ನದೇನೂ ತಪ್ಪಿಲ್ಲ ಎಂದು ಕಳುಹಿಸಿದ್ದರು. ಆದರೆ, ಕೆಲವರು ಈಗ ರಾಜಕೀಯಕ್ಕಾಗಿ, ಸ್ವಹಿತಾಸಕ್ತಿಗಾಗಿ ಹಳೆಯ ವಿಚಾರವನ್ನು ತೆಗೆದುಕೊಂಡು ನಾನೇ ಆ ಸಾಲುಗಳನ್ನು ಬರೆದಿದ್ದೇನೆಂದು ಬಿಂಬಿಸಿ ನನ್ನ ವ್ಯಕ್ತಿತ್ವಕ್ಕೆ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಹಿತಾಸಕ್ತಿಗಾಗಿ ಹೀಗೆ ಒಬ್ಬ ಕನ್ನಡಿಗನನ್ನು, ಕನ್ನಡದ ಸಾಹಿತಿಯನ್ನು, ಕನ್ನಡದ ಪ್ರೀತಿಯುಳ್ಳ ಭಾರತೀಯನನ್ನು ದಯವಿಟ್ಟು ತೇಜೋವಧೆ ಮಾಡಿ ಹಣಿಯುವ ಕೆಲಸ ಮಾಡಬಾರದು ಎಂದು ನನ್ನ ಪ್ರಾರ್ಥನೆ ಎಂದು ಹೇಳಿದ್ದಾರೆ.
ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರು ಹೇಳಿರುವಂತೆ ಕುವೆಂಪು ಅವರು ಬರೆದಿರುವ ನಾಡಗೀತೆಗೆ ಅಪಮಾನ ಮಾಡಿದ ವ್ಯಕ್ತಿಗೆ ಶಿಕ್ಷೆಯಾಗಲಿ, ಅವರನ್ನು ಪತ್ತೆಹಚ್ಚುವ ಕೆಲಸವನ್ನು ವ್ಯವಸ್ಥೆ ಮಾಡಲಿ ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.