ಸ್ಕೂಲ್ ಯೂನಿಫಾರ್ಮ್ ಧರಿಸಿ, ಕುತ್ತಿಗೆಯಲ್ಲಿ ಐಡಿ ಹಾಗೂ ಬ್ಯಾಗ್ ಹಾಕಿಕೊಂಡು ನಿಂತಿರುವ ಈ ಪುಟಾಣಿ ನೋಡೋಕೆ ತುಂಬಾ ಕ್ಯೂಟ್. ಆದರೆ, ಶಾಲಾ ಮಕ್ಕಳಿಗೆ ಈಕೆ ಅಚ್ಚುಮೆಚ್ಚಿನ ಟೀಚರ್.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಫೆ.18): ಸ್ಕೂಲ್ ಯೂನಿಫಾರ್ಮ್ ಧರಿಸಿ, ಕುತ್ತಿಗೆಯಲ್ಲಿ ಐಡಿ ಹಾಗೂ ಬ್ಯಾಗ್ ಹಾಕಿಕೊಂಡು ನಿಂತಿರುವ ಈ ಪುಟಾಣಿ ನೋಡೋಕೆ ತುಂಬಾ ಕ್ಯೂಟ್. ಆದರೆ, ಶಾಲಾ ಮಕ್ಕಳಿಗೆ ಈಕೆ ಅಚ್ಚುಮೆಚ್ಚಿನ ಟೀಚರ್. ಶಿಸ್ತಿನಿಂದ ಮಕ್ಕಳಿಗೆ ಮಗ್ಗಿ, ರೈಮ್ಸ್, ಲೆಕ್ಕ, ಸಮಾನಾರ್ಥಕ ಹಾಗೂ ವಿರೋಧ ಪದ ಮುಂತಾದವುಗಳ ಬಗ್ಗೆ ಪಾಠ ಮಾಡುವ ಈ ಪೋರಿಯಂತೂ ಸಕ್ಕತ್ ಟ್ಯಾಲೆಂಟೆಡ್. ಅಷ್ಟಕ್ಕೂ ಯಾರೀ ಹುಡುಗಿ ಅಂತೀರಾ ಈ ಸ್ಟೋರಿ ನೋಡಿ. ಹೌದು! ಯೂನಿಫಾರ್ಮ್ ಹಾಕಿಕೊಂಡು, ಕೊರಳಲ್ಲಿ ಐಡಿ ಕಾರ್ಡ್ ಹಾಗೂ ಸ್ಕೂಲ್ ಬ್ಯಾಗ್ ಧರಿಸಿ ನೋಡಲು ಯುಕೆಜಿ ಹುಡುಗಿ ತರಹ ಇರುವ ಇವಳು ಕ್ಲಾಸಿನ ಫೇವರೇಟ್ ಟೀಚರ್.
ಆಟದೊಂದಿಗೆ ಪಾಠ ಮಾಡುವ ಈ ರೋಬೊ ಟೀಚರ್ ಅಂದ್ರೆ ಮಕ್ಕಳಿಗೆ ಸಿಕ್ಕಾಪಟ್ಟೆ ಲವ್. ಇವಳು ತರಗತಿಯೊಳಗೆ ಬಂದ್ರೆ ಸಾಕು, ಮಕ್ಕಳು ಇವಳನ್ನು ಮುದ್ದು ಮಾಡುತ್ತಾರೆ, ಇವಳ ಹಿಂದೆಯೇ ಸುತ್ತಾಡುತ್ತಾರೆ. ಅಂದಹಾಗೆ, ಇವಳ ಹೆಸರು ಶಿಕ್ಷಾ, ಶಾಲಾ ವಿದ್ಯಾರ್ಥಿಗಳಿಗಾಗಿಯೇ ನಿರ್ಮಾಣ ಮಾಡಿರುವ ಒಂದು ರೋಬೋಟ್. ಶಿರಸಿಯ ಎಂಇಎಸ್ ಚೈತನ್ಯ ಕಾಲೇಜಿನ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿರುವ ಅಕ್ಷಯ್ ಮಾಶೇಲ್ಕರ್ ಅವರು ಮಕ್ಕಳಿಗೆ ಪಾಠ ಮಾಡುವ ಈ ರೋಬೋಟ್ ಅನ್ನು ತಯಾರಿಸಿದ್ದು, ಇದಕ್ಕೆ ಶಿಕ್ಷಾ ಅಂತಾ ನಾಮಕರಣ ಮಾಡಿದ್ದಾರೆ. ಈ ರೋಬೋಟ್ ಶಿಕ್ಷಾ ಕಾಗುಣಿತ, ಮಗ್ಗಿ, ಪದ್ಯ, ಸಮಾನಾರ್ಥಕ ಹಾಗೂ ವಿರುದ್ಧಾರ್ಥಕ ಪದಗಳು, ಇಂಗ್ಲಿಷ್ ಭಾಷೆಯಲ್ಲಿ ರೈಮ್ಸ್ ಜತೆಗೆ ಮಕ್ಕಳಿಗೆ ಆಟದೊಂದಿಗೆ ಪಾಠ ಮಾಡುತ್ತಾಳೆ.
ಸೋಲು ಖಚಿತವಾದಾಗ ಬಿಜೆಪಿಯಿಂದ ಕೋಮು ಗಲಭೆ ಸೃಷ್ಟಿ: ಬಿ.ಕೆ.ಹರಿಪ್ರಸಾದ್
ಮಕ್ಕಳಿಗೆ ಬೋರಿಂಗ್ ಅನಿಸೋ ತರಗತಿಯನ್ನು ಆಸಕ್ತಿಯ ತಾಣವಾಗಿ ಮಾರ್ಪಡಿಸುವ ಈ ರೋಬೊಟ್, ಮಕ್ಕಳಿಗೆ ಪಾಠ ಮಾಡುವಲ್ಲಿ ಶಿಕ್ಷಕರಿಗೆ ಅತ್ಯುತ್ತಮ ಸಹಾಯಕಿ ಕೂಡಾ. ಶಿಕ್ಷಣವನ್ನು ಮಕ್ಕಳ ತಲೆಗೆ ಹೇರುವ ಬದಲು ಮಕ್ಕಳು ಸಂತೋಷದಿಂದ ಶಿಕ್ಷಣ ಪಡೆಯುವಂತಾಗಬೇಕು ಅನ್ನೋದು ಈ ರೋಬೊ ಶಿಕ್ಷಾ ನಿರ್ಮಾಣದ ಉದ್ದೇಶ. ಇದರಲ್ಲಿ ಪ್ರಮುಖವಾಗಿ 1 ರಿಂದ 3ನೇ ತರಗತಿಯ ಮಕ್ಕಳಿಗೆ ಅಗತ್ಯವಿರುವ ಶಿಕ್ಷಣವನ್ನು ಈ ರೋಬೋಟ್ ಒಳಗೆ ಪ್ರೋಗ್ರಾಂ ಮೂಲಕ ಮೊದಲೇ ಫೀಡ್ ಮಾಡಲಾಗಿದೆ. ಹೀಗಾಗಿ ಫೀಡ್ ಮಾಡಿದ ವಿಷಯವನ್ನು ಸುಲಭವಾಗಿ, ಅರ್ಥವಾಗುವ ರೀತಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಾಳೆ ಈ ರೋಬೊ ಶಿಕ್ಷಾ.
ಇನ್ನು ಮ್ಯೂಸಿಕಲ್ ಚೇರ್, ಕೆರೆ ದಡ ಗೇಮ್ಸ್ ಕೂಡಾ ಮಕ್ಕಳೊಂದಿಗೆ ಆಡುವುದರಿಂದ ಮಕ್ಕಳಿಗೆ ಈ ರೋಬೋ ಶಿಕ್ಷಾ ಅಂದ್ರೆ ತುಂಬಾ ಇಷ್ಟ. ಈ ರೋಬೋ ಶಿಕ್ಷಾ ಕಂಡು ಮಕ್ಕಳು ಸಕ್ಕತ್ ಖುಷಿ ಪಡುತ್ತಿದ್ದು, ರೋಬೋ ಮಾಡುವ ಪಾಠವನ್ನು ಮಕ್ಕಳು ಸಂತೋಷದಿಂದ ಕಲಿಯುತ್ತಿದ್ದಾರೆ. ಅಂದಹಾಗೆ, ಕಳೆದ ಒಂದೂವರೆ ವರ್ಷಗಳ ಕಾಲ ಪರಿಶ್ರಮಪಟ್ಟು ಅಕ್ಷಯ್ ಮಾಶೇಲ್ಕರ್ ಹಾಗೂ ಇವರ ಸ್ನೇಹಿತ ಆದರ್ಶ್ ದೇವಾಡಿಗ ಜತೆಯಾಗಿ ಈ ವಿದ್ಯುತ್ ಚಾಲಿತ ರೋಬೋಟ್ ತಯಾರಿಸಿದ್ದಾರೆ. ಇದರಲ್ಲಿ ಹಲವು ಸೆನ್ಸಾರ್‌ಗಳನ್ನು ಅಳವಡಿಕೆ ಮಾಡಲಾಗಿದ್ದು, ಅದರಲ್ಲೂ ಸ್ಮಾರ್ಟ್ ಕಾರ್ಡ್‌ಗಳನ್ನು ಈ ಗೊಂಬೆ ಕೈಗೆ ಸ್ಪರ್ಶಿಸುತ್ತಿದ್ದಂತೆ ತಟ್ಟ ಅಂತಾ ಕಾರ್ಡ್‌ನಲ್ಲಿ ಬರೆದಿರುವ ಅಕ್ಷರಗಳ ಬಗ್ಗೆ ಉಲ್ಲೇಖ ಮಾಡುತ್ತಾಳೆ.
ಸುಮಾರು ಒಂದರಿಂದ ಒಂದೂವರೆಗೆ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ರೋಬೋ ಕಡಿಮೆ ತೂಕ ಇರುವುದರಿಂದ ಎಲ್ಲಿಗೆ ಬೇಕಾದರೂ ಸುಲಭವಾಗಿ ಸಾಗಿಸಬಹುದು. ಅಲ್ಲದೇ, ಇದನ್ನು ಯಾರು ಬೇಕಾದ್ರೂ ನಿಯಂತ್ರಿಸಬಹುದಾಗಿದೆ. ಶಿರಸಿಯ ನೆಮ್ಮದಿ ಕುಟೀರ ಸಭಾಮಂಟಪದ ಪಕ್ಕದಲ್ಲಿರುವ ಕೋಣೆಯಲ್ಲಿ ಅಕ್ಷಯ್ ಹಾಗೂ ಆದರ್ಶ್ ವಿಕ್ರಂ ಸಾರಾಭಾಯಿ ವಿಜ್ಞಾನ ಕೇಂದ್ರ ನಿರ್ಮಾಣ ಮಾಡಿಕೊಂಡು ವಿಜ್ಞಾನದ ವಿವಿಧ ಮಾದರಿಗಳನ್ನು ತಯಾರಿಸುತ್ತಿದ್ದು, ಇದರ ನಡುವೆ ತಮ್ಮ ಕನಸಿನ ಕೂಸಾಗಿರುವ ರೋಬೊ ಶಿಕ್ಷಾಗಳ ನಿರ್ಮಾಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನರಂತೆ ಮಾತನಾಡುವ ಹಾಗೆ ಈ ರೋಬೋಟ್‌ನ ಅಪ್‌ಡೇಟ್ ವರ್ಷನ್ 2.1 ರೋಬೊ ಶಿಕ್ಷಾ ತಯಾರಿ ಮಾಡಲು ಅಕ್ಷಯ್ ಹಾಗೂ ಆದರ್ಶ್ ದೇವಾಡಿಗ ಯೋಜನೆ ಹೊಂದಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಆಡಳಿತದಲ್ಲಿ ಜನರ ಬದುಕಿನ ಜೊತೆ ಚೆಲ್ಲಾಟ: ಎಚ್‌ಡಿಕೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಲೆಗಳು ರೋಬೊಗಳ ಜತೆ ಮಕ್ಕಳಿಗೆ ಪಾಠ ಮಾಡುವಂತೆ ನಮ್ಮ ರಾಜ್ಯದಲ್ಲೂ ಪ್ರತೀ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಶಿಕ್ಷಕರು ರೋಬೊ ಜತೆ ಮಕ್ಕಳಿಗೆ ಪಾಠ ಮಾಡಬೇಕೆಂದು ಇವರ ಆಸೆ. ಒಟ್ಟಿನಲ್ಲಿ ಈ ಆಧುನಿಕ ಯುಗದಲ್ಲಿ ಮಕ್ಕಳಿಗೆ ಆಧುನಿಕ ತಂತ್ರಜ್ಞಾನದ ಜತೆ ವಿದ್ಯಾರ್ಥಿಗಳು ಪಾಠ ಕಲಿಯಬೇಕು, ಶಿಕ್ಷಕರಿಗೂ ಪಾಠ ಮಾಡಲು ಸಹಾಯವಾಗಬೇಕು ಎಂಬ ಉದ್ದೇಶದಿಂದ ರೋಬೋ ಶಿಕ್ಷಾವನ್ನು ನಿರ್ಮಿಸಲಾಗಿದೆ. ಆಟದೊಂದಿಗೆ ಪಾಠ ಕಲಿತು ವಿದ್ಯಾರ್ಥಿಗಳು ಬೆಳೆಯಬೇಕೆಂಬ ಕನಸಿನೊಂದಿಗೆ ಅಸ್ಥಿತ್ವಕ್ಕೆ ಬಂದ ಈ ರೋಬೋ ಶಿಕ್ಷಾದಿಂದ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿ ಆದರೂ ಸಂದೇಹವಿಲ್ಲ.