ಸಂಜೆ 5.30ಕ್ಕೆ ಬೆಳಗಾವಿ ವಿಟಿಯು ಪರೀಕ್ಷೆ ಅಂತ್ಯ, ಸಂಜೆ 5.40ಕ್ಕೆ ರಿಸಲ್ಟ್‌ ; ಹತ್ತೇ ನಿಮಿಷಕ್ಕೆ ಫಲಿತಾಂಶ

Published : May 23, 2026, 05:00 AM IST
VTU University

ಸಾರಾಂಶ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಅಂತಿಮ ಸೆಮಿಸ್ಟರ್ ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳಲ್ಲಿ ಫಲಿತಾಂಶ ಪ್ರಕಟಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ. ಡಿಜಿಟಲ್ ಮೌಲ್ಯಮಾಪನ ಪದ್ಧತಿಯಿಂದಾಗಿ ಈ ತ್ವರಿತ ಪ್ರಕ್ರಿಯೆ ಸಾಧ್ಯವಾಗಿದ್ದು, 56,192 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ವು ಅಂತಿಮ ಸೆಮಿಸ್ಟರ್‌ನ ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 10 ನಿಮಿಷದೊಳಗೆ ಫಲಿತಾಂಶ ಪ್ರಕಟಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಇಷ್ಟು ತ್ವರಿತವಾಗಿ ವಿವಿಯೊಂದು ಫಲಿತಾಂಶ ಪ್ರಕಟಿಸಿರುವುದು ದೇಶದಲ್ಲಿ ಇದೇ ಮೊದಲು.

ಬಿ.ಇ. ಮತ್ತು ಬಿ.ಟೆಕ್ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ 56,192 ವಿದ್ಯಾರ್ಥಿಗಳು ಹಾಜರಾಗಿದ್ದರು. ಶುಕ್ರವಾರ ಸಂಜೆ 5.30ಕ್ಕೆ ಪರೀಕ್ಷೆ ಅಂತ್ಯವಾಗಿದ್ದು, 5.40ಕ್ಕೆ ಫಲಿತಾಂಶ ಬಿಡುಗಡೆ ಮಾಡಿದೆ. ಶೇ.99.98 ಫಲಿತಾಂಶ ಸಾಧಿಸಿದೆ. ಫಲಿತಾಂಶವನ್ನು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹಾಗೂ ಕುಲಸಚಿವ(ಮೌಲ್ಯಮಾಪನ) ಪ್ರೊ.ಯು.ಜೆ.ಉಜ್ವಲ್ ಜಂಟಿಯಾಗಿ ಬಿಡುಗಡೆ ಮಾಡಿದರು.

ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಸಂಪೂರ್ಣ ಮೌಲ್ಯಮಾಪನ ಪ್ರಕ್ರಿಯೆಯನ್ನು ಎಂಟು ದಿನಗಳ ಮುಂಚಿತವಾಗಿಯೇ ಮುಗಿಸಿದೆ. ಆ ಮೂಲಕ ಈ ಹಿಂದಿನ ದಾಖಲೆಗಳನ್ನು ಮುರಿದಿದೆ. ಈ ಹಿಂದೆ ಪರೀಕ್ಷೆ ಮುಗಿದ ಒಂದು ಗಂಟೆಯೊಳಗೆ ಫಲಿತಾಂಶ ಪ್ರಕಟಿಸಿತ್ತು. ಫಲಿತಾಂಶವನ್ನು ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ನೇರವಾಗಿ ಕಳುಹಿಸಲಾಗಿದೆ.

ಈ ಕುರಿತು ಮಾತನಾಡಿದ ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ತಂತ್ರಜ್ಞಾನ ಅಳವಡಿಕೆಯಲ್ಲಿ ವಿಟಿಯು ಸದಾ ಮುಂದಿದೆ. ವಿದ್ಯಾರ್ಥಿಗಳ ಸ್ನೇಹಿಯಾಗಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ. ಪರೀಕ್ಷೆ ಮುಗಿದ ಕೇವಲ 10 ನಿಮಿಷದಲ್ಲಿ ಫಲಿತಾಂಶ ನೀಡುವುದು ಸುಲಭದ ವಿಷಯವಲ್ಲ. ಇದಕ್ಕೆ ಸಹಕಾರ ನೀಡಿದ ವಿಟಿಯು ಆಡಳಿತ ಸಿಬ್ಬಂದಿ, ಪರೀಕ್ಷಾ ವಿಭಾಗದ ಸಿಬ್ಬಂದಿ ಮತ್ತು ಸಂಯೋಜಿತ ಕಾಲೇಜುಗಳ ಸಿಬ್ಬಂದಿಗೆ ಅಭಿನಂದನೆ ತಿಳಿಸುತ್ತೇನೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಉದ್ಯೋಗ ಮತ್ತು ಉನ್ನತ ಶಿಕ್ಷಣ ಪಡೆಯಲು ಫಲಿತಾಂಶದ ನಿರೀಕ್ಷೆಯಲ್ಲಿರುತ್ತಾರೆ. ಹೀಗಾಗಿ ನಾವು ಶೀಘ್ರ ಫಲಿತಾಂಶ ನೀಡಿದ್ದೇವೆ ಎಂದರು.

ಫಲಿತಾಂಶದ ಇತಿಹಾಸ:

2025ರ ಮೇನಲ್ಲಿ ನಡೆದ 2021ರ ಬ್ಯಾಚ್‌ನ 50,321 ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಒಂದು ಗಂಟೆಯೊಳಗೆ ವಿವಿ ಪ್ರಕಟಿಸಿತ್ತು. 2024ರ ಮೇನಲ್ಲಿ ನಡೆದ 2020ರ ಬ್ಯಾಚ್‌ನ 37,011 ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ 3 ಗಂಟೆಯಲ್ಲಿ ಪ್ರಕಟಿಸಿತ್ತು. 2023ರಲ್ಲಿ ನಡೆದ 2019ರ ಬ್ಯಾಚ್‌ನ ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಎರಡನೇ ದಿನ ನೀಡಿತ್ತು. ಆ ವೇಳೆ 43,662 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು.

ವಿದ್ಯಾರ್ಥಿಗಳು https://results.vtu.ac.in/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಫಲಿತಾಂಶವನ್ನು ಪಡೆದುಕೊಳ್ಳಬಹುದು.

10 ನಿಮಿಷದಲ್ಲಿ ಸಾಧ್ಯವಾಗಿದ್ದೇಗೆ?

ವಿಟಿಯು ವ್ಯಾಪ್ತಿಯಲ್ಲಿರುವ 220 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳ ಥಿಯರಿ ಪರೀಕ್ಷೆಯನ್ನು ಮೇ ಮೊದಲ ವಾರದಿಂದ ಮೇ 19ರವರೆಗೆ ನಡೆಸಲಾಗಿತ್ತು. ಡಿಜಿಟಲ್‌ ಮೌಲ್ಯಮಾಪನ ವ್ಯವಸ್ಥೆಯ ಮೂಲಕ ಆಯಾ ದಿನದಂದೇ ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನವನ್ನು ನಡೆಸಿ ಅಂಕಗಳನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿಡಲಾಗಿತ್ತು. ಶುಕ್ರವಾರ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು. ಮಧ್ಯಾಹ್ನ 2.30 ರಿಂದ ಸಂಜೆ 5.30ರವರೆಗೆ ನಡೆಯಿತು. ಪರೀಕ್ಷೆ ಮುಗಿದ 5 ನಿಮಿಷದಲ್ಲಿ ಅಂಕಗಳನ್ನು ಕ್ರೋಢೀಕರಿಸಿ 10 ನಿಮಿಷದಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ.

PREV
Read more Articles on
click me!

Recommended Stories

Success Story: ದೇಶದ ಮೊದಲ ವಿವಾಹಿತ ಮಹಿಳಾ IPS, ಪ್ರೆಗ್ನೆನ್ಸಿಯಲ್ಲೇ UPSC ಕ್ರ್ಯಾಕ್; ಇಲ್ಲಿದೆ ಆ 'ಲೇಡಿ ಸಿಂಘಂ' ಗ್ರೇಟ್‌ ಸ್ಟೋರಿ!
ಶಿಕ್ಷಣ ನೀತಿ ಬದಲಾಗದೆ ದೇಶ ಬದಲಾಗದು: ಡಾ. ಬಿಳಿಮಲೆ | ಚುನಾವಣೆ ವ್ಯವಸ್ಥೆ ಬಗ್ಗೆಯೂ ಕಳವಳ