1-12 ಕ್ಲಾಸಲ್ಲಿ ಕನ್ನಡ ಕಲಿಕೆ ಕಡ್ಡಾಯಕ್ಕೆ ಶಿಫಾರಸು

Published : Jul 12, 2022, 09:06 AM IST
1-12 ಕ್ಲಾಸಲ್ಲಿ ಕನ್ನಡ ಕಲಿಕೆ ಕಡ್ಡಾಯಕ್ಕೆ ಶಿಫಾರಸು

ಸಾರಾಂಶ

*    1ನೇ ಭಾಷೆ ಕನ್ನಡ, 2ನೇ ಭಾಷೆ ಇಂಗ್ಲಿಷ್‌, 3ನೇ ಭಾಷೆ ಐಚ್ಛಿಕ *    ಎನ್‌ಇಪಿ ಅಡಿ ಕೇಂದ್ರಕ್ಕೆ ರಾಜ್ಯದ ಪ್ರಸ್ತಾವ *    3ನೇ ಭಾಷೆಯಾಗಿ ಸಂಸ್ಕೃತಕ್ಕೆ ಆದ್ಯತೆ   

ಬೆಂಗಳೂರು(ಜು.12): ‘ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ 1ರಿಂದ 12ನೇ ತರಗತಿ ವರೆಗಿನ ಮಕ್ಕಳಿಗೆ ಪ್ರಥಮ ಭಾಷೆಯಾಗಿ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಬೇಕು. ದ್ವಿತೀಯ ಭಾಷೆಯಾಗಿ ಇಂಗ್ಲಿಷ್‌ ಮತ್ತು ತೃತೀಯ ಭಾಷೆಯಾಗಿ ಭಾರತದ ಯಾವುದಾದರೊಂದು ಭಾಷೆಯನ್ನು ಕಲಿಸಬೇಕು. ಈ ವೇಳೆ 3ನೇ ಭಾಷೆಯಾಗಿ ಸಂಸ್ಕೃತಕ್ಕೆ ಆದ್ಯತೆ ನೀಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ(ಎನ್‌ಇಪಿ) ಈ ಅಂಶಗಳು ಅವಕಾಶ ಪಡೆಯಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ, ‘ರಾಷ್ಟ್ರೀಯ ಶಿಕ್ಷಣ ನೀತಿಗೆ ಯಾವ್ಯಾವ ಅಂಶ ಅಳವಡಿಸಿಕೊಳ್ಳಬೇಕು?’ ಎಂಬ ಬಗ್ಗೆ ಪ್ರಸ್ತಾವ ಸಿದ್ಧಪಡಿಸಲು ರಾಜ್ಯ ಸರ್ಕಾರವು ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ಗೋಪಾಲ್‌ ಅವರ ನೇತೃತ್ವದ ಕಾರ್ಯಪಡೆ ರಚಿಸಿತ್ತು. ಈ ಕಾರ್ಯಪಡೆಯು 26 ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮಿತಿ ರಚಿಸಿ ಆ ಸಮಿತಿಗಳಿಂದ ವರದಿ ಪಡೆದಿತ್ತು. ಅದನ್ನು ಆಧರಿಸಿ ತಾನು ಸಿದ್ಧಪಡಿಸಿದ ವರದಿಯನ್ನು ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಕಾರ್ಯಪಡೆ ಸಲ್ಲಿಸಿತ್ತು. ರಾಜ್ಯ ಸರ್ಕಾರ ಈ ವರದಿಯನ್ನು ಒಪ್ಪಿ ಕೇಂದ್ರಕ್ಕೆ ರವಾನಿಸಿದೆ.

British Education System ಬದಲಾವಣೆಗೆ ಮೋದಿ ಕರೆ

‘ಈ 26 ವಿಷಯ ಪತ್ರಿಕೆಗಳ (ಪೊಜಿಷನ್‌ ಪೇಪರ್‌) ಪೈಕಿ ‘ಭಾಷಾ ಶಿಕ್ಷಣ’ ಕುರಿತ ಪತ್ರಿಕೆಯಲ್ಲಿ ಕರ್ನಾಟಕದಲ್ಲಿ 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಬೇಕು. ದ್ವಿತೀಯ ಭಾಷೆಯಾಗಿ ಇಂಗ್ಲಿಷ್‌ ಮತ್ತು ತೃತೀಯ ಭಾಷೆಯಾಗಿ ಮಕ್ಕಳ ಆದ್ಯತೆ ಮೇಲೆ ಭಾರತದ ಯಾವುದಾದರೊಂದು ಭಾಷೆಯನ್ನು ಕಲಿಯಲು ಅವಕಾಶ ನೀಡಬೇಕು’ ಎಂದು ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.

3ನೇ ಭಾಷೆಯಾಗಿ ಸಂಸ್ಕೃತಕ್ಕೆ ಆದ್ಯತೆ:

ಈ ಮಧ್ಯೆ, ‘ಮೂರನೇ ಭಾಷೆಯಾಗಿ ಭಾರತದ ಯಾವುದಾದರೊಂದು ಭಾಷೆಯನ್ನು ಕಲಿಸಬೇಕೆಂಬ ಅಂಶದಲ್ಲಿ ಸಂಸ್ಕೃತಕ್ಕೆ ಆದ್ಯತೆ ನೀಡಬೇಕು’ ಎಂದೂ ಶಿಫಾರಸು ಮಾಡಲಾಗಿದೆ. ಆದರೆ ಇದಕ್ಕೆ ಆಕ್ಷೇಪ ಕೂಡ ಕೇಳಿಬಂದಿದೆ. ‘ಇದರಿಂದ ಇತರೆ ಭಾಷಾ ಮಕ್ಕಳು ತಮ್ಮ ಮಾತೃಭಾಷೆಯನ್ನು ಕನಿಷ್ಠ ಮೂರನೇ ವಿಷಯವಾಗಿಯಾದರೂ ಅಧ್ಯಯನ ಮಾಡಲು ಸಾಧ್ಯವಾಗದೆ ಹೋಗುತ್ತದೆ’ ಎಂಬ ಆರೋಪಗಳು ಕೆಲ ಶಿಕ್ಷಣ ತಜ್ಞರಿಂದ ಕೇಳಿಬಂದಿವೆ.

ಆದರೆ, ಇದನ್ನು ರಾಜ್ಯ ಸರ್ಕಾರದ ಕಾರ್ಯಪಡೆಯ ಅಧ್ಯಕ್ಷರಾದ ಮದನ್‌ ಗೋಪಾಲ್‌ ಅವರು ನಿರಾಕರಿಸಿದ್ದಾರೆ. ‘ಇಂತಹ ಆರೋಪ ಮಾಡುತ್ತಿರುವವರು ವಿಷಯ ಪತ್ರಿಕೆಯನ್ನೇ ಓದಿಲ್ಲ ಎನಿಸುತ್ತದೆ. ‘ಭಾಷಾ ಶಿಕ್ಷಣ’ ವಿಷಯ ಪತ್ರಿಕೆ ಸಿದ್ಧಪಡಿಸಿದ ತಜ್ಞರ ಸಮಿತಿಯು ಎಲ್ಲೂ ಕೂಡ ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಕಲಿಸಬೇಕೆಂದು ಹೇಳಿಲ್ಲ. ಯಾವುದಾದರೂ ಒಂದು ಭಾರತೀಯ ಭಾಷೆಯ ಆಯ್ಕೆಗೆ ಅವಕಾಶ ನೀಡಬೇಕೆಂದು ಹೇಳಿದೆ. ಅದರಲ್ಲಿ ತಮಿಳು, ತೆಲುಗು, ಮರಾಠಿ ಸೇರಿ ಬೇರೆ ಬೇರೆ ರಾಜ್ಯ ಭಾಷೆಗಳ ಜೊತೆಗೆ ಸಂಸ್ಕೃತವೂ ಇರುತ್ತದೆ’ ಎಂದರು.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ