ಖಾಸಗಿ ಶಾಲೆಗಳಿಗೆ ಫೀಸ್ ಕಟ್ಟಬೇಕು ಅಂದ್ರೆ ಸಾಕು ಒಂದು ಕ್ಷಣ ಸಾಕಪ್ಪ ಸಾಕು ಅವರ ಸಹವಾಸ ಅನ್ನೋ ಪೋಷಕರೇ ಹೆಚ್ಚು. ಅಂತದ್ರಲ್ಲಿ ಇಲ್ಲೊಂದು ಖಾಸಗಿ ಶಾಲೆ ಸುಮಾರು ಮಕ್ಕಳಿಗೆ ಫ್ರೀ ಆಗಿಯೇ ವಿದ್ಯಾಭ್ಯಾಸ ಕೊಡುವ ಮೂಲಕ ಇಡೀ ಜಿಲ್ಲೆಗೆ ಮಾದರಿ ಖಾಸಗಿ ಶಾಲೆ ಎನ್ನುವ ಹೆಗ್ಗಳಿಕೆ ಗಳಿಸಿದೆ.
ಚಿತ್ರದುರ್ಗ: ಖಾಸಗಿ ಶಾಲೆಗಳಿಗೆ ಫೀಸ್ ಕಟ್ಟಬೇಕು ಅಂದ್ರೆ ಸಾಕು ಒಂದು ಕ್ಷಣ ಸಾಕಪ್ಪ ಸಾಕು ಅವರ ಸಹವಾಸ ಅನ್ನೋ ಪೋಷಕರೇ ಹೆಚ್ಚು. ಅಂತದ್ರಲ್ಲಿ ಇಲ್ಲೊಂದು ಖಾಸಗಿ ಶಾಲೆ ಸುಮಾರು ಮಕ್ಕಳಿಗೆ ಫ್ರೀ ಆಗಿಯೇ ವಿದ್ಯಾಭ್ಯಾಸ ಕೊಡುವ ಮೂಲಕ ಇಡೀ ಜಿಲ್ಲೆಗೆ ಮಾದರಿ ಖಾಸಗಿ ಶಾಲೆ ಎನ್ನುವ ಹೆಗ್ಗಳಿಕೆ ಗಳಿಸಿದೆ. ಚಿತ್ರದುರ್ಗ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಇರುವ ನೂತನ್ ಇಂಗ್ಲೀಷ್ ಮೀಡಿಯಂ ವಿದ್ಯಾಸಂಸ್ಥೆ ಎಷ್ಟೋ ಅನಾಥ ಮಕ್ಕಳ ಬಾಳಿಗೆ ಬೆಳಕಾಗಿದೆ. ಕೊರೊನಾ ಸಮಯದಲ್ಲಿ ತಂದೆ ತಾಯಿ ಕಳೆದುಕೊಂಡ ಮಕ್ಕಳು, ತಂದೆ ತಾಯಿ ಪ್ರೀತಿಯನ್ನೇ ಕಾಣದೇ ಅನಾಥವಾಗಿ ಬೆಳೆದಿರೋ ಮಕ್ಕಳಿಗೆ ಈ ಶಾಲೆ ದೇವಾಲಯವಾಗಿದೆ.
ಈ ಶಾಲೆಯಲ್ಲಿ ಸದ್ಯ 500ಕ್ಕೂ ಅಧಿಕ ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಅದ್ರಲ್ಲಿ 90 ಮಂದಿ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಕೊಡುತ್ತಿದ್ದೇವೆ. ಅದ್ರಲ್ಲಿ 38 ಮಕ್ಕಳು ಅನಾಥರು, ಕೋವಿಡ್‌ನಲ್ಲಿ ತಂದೆ ತಾಯಿ ಕಳೆದುಕೊಂಡವರು, ಆಕ್ಸಿಡೆಂಡ್‌ನಲ್ಲಿ ಪೋಷಕರನ್ನ ಕಳೆದುಕೊಂಡವರೇ ಆಗಿದ್ದಾರೆ. ಇನ್ನುಳಿದ 52 ಜನ ಮಕ್ಕಳು ತುಂಬಾ ಬಡತನದಿಂದ ಬೆಳದಿರೋ ಮಕ್ಕಳು ಎನ್ನುವ ಕಾರಣಕ್ಕೆ ಅವರಿಗೆ ಉಚಿತ ಶಿಕ್ಷಣ ನೀಡಲಾಗ್ತಿದೆ. ನಾವು ಪಟ್ಟಿರೋ ಕಷ್ಟವನ್ನು ಈ ಮಕ್ಕಳು ಪಡಬಾರದು ಎನ್ನುವ ಉದ್ದೇಶದಿಂದ ನಮ್ಮ ಸಂಸ್ಥೆಯಲ್ಲಿ ಉಚಿತ ಶಿಕ್ಷಣವನ್ನು ಕೊಡ್ತಿದ್ದೀವಿ. ಆ ಮಕ್ಕಳು ಎಲ್ಲರಂತೆ ಓದಿ ಮುಂದೆ ಒಳ್ಳೆಯ ಕೆಲಸಕ್ಕೆ ಸೇರಲಿ. ಇಂತಹ ಅನಾಥ ಮಕ್ಕಳಿಗೆ (orphan childrens) ಉಚಿತವಾಗಿ ಶಿಕ್ಷಣ (Education) ಕೊಡುವ ಮೂಲಕ ನಮಗೆ ಆತ್ಮ ತೃಪ್ತಿ ಸಿಗುತ್ತೆ ಅಂತಾರೆ ಆಡಳಿತ ಮಂಡಳಿಯವರು.
ಶಾಲಾ ಶುಲ್ಕದ ನಡುವೆ ಪೋಷಕರಿಗೆ ಮತ್ತೊಂದು ದರ ಏರಿಕೆ ಬಿಸಿ: ಖಾಸಗಿ ಶಾಲೆಗಳ ವಾಹನ ಶುಲ್ಕ ಹೆಚ್ಚಳ?
ಇನ್ನೂ ನೂತನ್ ವಿದ್ಯಾಸಂಸ್ಥೆಯಲ್ಲಿ (Nutan education trust) ಉಚಿತ ಶಿಕ್ಷಣ ಪಡೆದು ಓದುತ್ತಿರುವ ಮಕ್ಕಳನ್ನ ಮಾತನಾಡಿಸಿದಾಗ, ಕಳೆದ ವರ್ಷ ನನ್ನ ತಂದೆಯನ್ನು ನಾನು ಕಳೆದುಕೊಂಡೆ, ಆಗಿನಿಂದ ನನಗೆ ಓದೋದಕ್ಕೆ ತುಂಬಾ ಕಷ್ಟವಾಗಿತ್ತು. ಈ ಶಾಲೆಯಲ್ಲಿ ನಮಗೆ ಉಚಿತ ಶಿಕ್ಷಣ ಸಿಗುತ್ತಿದೆ. ಇಲ್ಲಿನ ಶಿಕ್ಷಣ ತುಂಬಾ ಚೆನ್ನಾಗಿದೆ. ಚೆನ್ನಾಗಿ ಓದುತ್ತಿರುವೆ. ನಮ್ಮ ಸಂಸ್ಥೆಯ ಅಧ್ಯಕ್ಷರು ನಮಗೆ ಒಂದು ಅವಕಾಶ ಕೊಟ್ರು ಅವರ ಮಾತಿನಂತೆ ತುಂಬಾ ಚೆನ್ನಾಗಿ ಈ ಶಾಲೆಯಲ್ಲಿ ಓದುತ್ತಿರುವೆ. ಮುಂದೆ ನಾನು IAS ಆಫೀಸರ್ ಆಗಬೇಕೆನ್ನುವ ಆಸೆಯಿದೆ. ನನ್ನ ಕನಸೆಲ್ಲಾ ಪೂರ್ಣವಾದ ಮೇಲೆ ಈ ನಮ್ಮ ಶಾಲೆಗೆ ಸಹಾಯ ಮಾಡಿಯೇ ಮಾಡ್ತೀನಿ. ನನ್ನ ರೀತಿಯೇ ಬಹಳಷ್ಟು ಅನಾಥ ಮಕ್ಕಳಿಗೆ ಈ ಶಾಲೆ ಆಶ್ರಯದಾತವಾಗಿದೆ ಎಂದು ಹೇಳುತ್ತಾಳೆ ಬಾಲಕಿ ಸಂಗೀತಾ.
Raichur: ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಬಸ್ ಖರೀದಿಗೆ ಸರ್ಕಾರ ಚಿಂತನೆ: ಸಚಿವ ಬಿ.ಸಿ.ನಾಗೇಶ್
ಒಟ್ಟಾರೆಯಾಗಿ ಫೀಸ್ ಕಟ್ಟಿ ಫೀಸ್ ಕಟ್ಟಿ ಎಂದು ಪೋಷಕರ ರಕ್ತ ಹೀರುವ ಈ ಕಾಲಘಟ್ಟದಲ್ಲಿ, ಅನಾಥ ಮಕ್ಕಳು ಹಾಗೂ ಬಡ ಮಕ್ಕಳು ಉತ್ತಮ ಶಿಕ್ಷಣ ಪಡೆದು ಮುಂದೆ ಒಳ್ಳೆಯ ಜೀವನ ರೂಪಿಸಿಕೊಳ್ಳಲಿ ಎಂದು ನೂತನ್ ವಿದ್ಯಾಸಂಸ್ಥೆ ಫ್ರೀ ಎಜುಕೇಶನ್ ಕೊಡ್ತಿರೋದಕ್ಕೆ ನಿಜಕ್ಕೂ ಕೋಟೆನಾಡಿನ ಮಂದಿಯೆಲ್ಲಾ ಭೇಷ್ ಎನ್ನುತ್ತಿದ್ದಾರೆ. ಇನ್ನಾದರು ಖಾಸಗಿ ಶಾಲೆಗಳು ಈ ಶಾಲೆಯನ್ನ ಮಾದರಿಯಾಗಿ ತೆಗೆದುಕೊಂಡು ಮುನ್ನಡೆಯಬೇಕಿದೆ.