ನಾರಾಯಣ ಗುರು ಪಾಠ ಮತ್ತೆ ಸಮಾಜ ವಿಜ್ಞಾನಕ್ಕೇ ಸೇರ್ಪಡೆ: ನಾಗೇಶ್‌ ಸೂಚನೆ

By Govindaraj SFirst Published Jul 12, 2022, 5:00 AM IST
Highlights

ಶಾಲಾ ಪಠ್ಯ ಪರಿಷ್ಕರಣೆ ನಂತರ ಕನ್ನಡ ವಿಷಯದ ಪಠ್ಯಪುಸ್ತಕಕ್ಕೆ ಸೇರಿಸಲಾಗಿರುವ ಬ್ರಹ್ಮಶ್ರೀ ನಾರಾಯಣಗುರು ಅವರ ಪಾಠವನ್ನು ವಾಪಸ್‌ ಸಮಾಜ ವಿಜ್ಞಾನ ಪಠ್ಯಕ್ಕೆ ಸೇರಿಸಲು ಅಗತ್ಯ ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು (ಜು.12): ಶಾಲಾ ಪಠ್ಯ ಪರಿಷ್ಕರಣೆ ನಂತರ ಕನ್ನಡ ವಿಷಯದ ಪಠ್ಯಪುಸ್ತಕಕ್ಕೆ ಸೇರಿಸಲಾಗಿರುವ ಬ್ರಹ್ಮಶ್ರೀ ನಾರಾಯಣಗುರು ಅವರ ಪಾಠವನ್ನು ವಾಪಸ್‌ ಸಮಾಜ ವಿಜ್ಞಾನ ಪಠ್ಯಕ್ಕೆ ಸೇರಿಸಲು ಅಗತ್ಯ ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೋಮವಾರವಷ್ಟೆ ನಗರದಲ್ಲಿ ಸಚಿವ ನಾಗೇಶ್‌ ಅವರನ್ನು ಭೇಟಿ ಮಾಡಿದ್ದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಅವರು ನಾರಾಯಣಗುರುಗಳ ಪಾಠವನ್ನು ಸಮಾಜ ವಿಜ್ಞಾನದಲ್ಲಿ ಕೈಬಿಟ್ಟು ಕನ್ನಡ ಭಾಷಾ ವಿಷಯಕ್ಕೆ ಸೇರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. 

ನಾರಾಯಣಗುರುಗಳ ಕುರಿತ ಪಾಠ ಸಮಾಜ ವಿಜ್ಞಾನ ಪಠ್ಯದಲ್ಲಿದ್ದರೆ ಎಲ್ಲ ಮಕ್ಕಳೂ ಓದುತ್ತಾರೆ. ಕನ್ನಡ ಭಾಷಾ ಪಠ್ಯದಲ್ಲಿದ್ದರೆ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡುವ ಮಕ್ಕಳು ಮಾತ್ರ ಓದುತ್ತಾರೆ. ಹಾಗಾಗಿ ಈ ಪಾಠವನ್ನು ಸಮಾಜ ವಿಜ್ಞಾನ ಪಠ್ಯಕ್ಕೆ ವಾಪಸ್‌ ಸೇರಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದರು. ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಕೂಡ ಜೊತೆಗಿದ್ದರು. 

Davanagere: ಪಠ್ಯಪುಸ್ತಕ ಲೋಪದ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕನಕ ಸ್ವಾಮೀಜಿ

ಇದರ ಬೆನ್ನಲ್ಲೇ ಸಚಿವರು ನಾರಾಯಣ ಗುರುಗಳ ಪಾಠವನ್ನು ಕನ್ನಡ ಭಾಷಾ ಪಠ್ಯದಿಂದ ಕೈಬಿಟ್ಟು ಸಮಾಜ ವಿಜ್ಞಾನ ವಿಷಯಕ್ಕೆ ಮರು ಸೇರ್ಪಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್‌ ಅವರಿಗೆ ಪತ್ರ ಬರೆದು ಸೂಚಿಸಿದ್ದಾರೆ. ಈ ಹಿಂದೆ ನಾರಾಯಣ ಗುರುಗಳ ಪಾಠವನ್ನು ಸಮಾಜ ವಿಜ್ಞಾನ ಪಠ್ಯದಿಂದ ಕೈಬಿಟ್ಟಿದ್ದ ಬಗ್ಗೆ ತೀವ್ರ ವಿವಾದ ಆಗಿತ್ತು. ಆಕ್ಷೇಪಗಳು ವ್ಯಕ್ತವಾದ ಬಳಿಕ ಕನ್ನಡ ಭಾಷಾ ವಿಷಯಕ್ಕೆ ಸರ್ಕಾರ ಸೇರಿಸಿತ್ತು.

ಬರಗೂರು ರಾಮಚಂದ್ರಪ್ಪ ಕಿಡಿ: ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿಯು ಸಂಪೂರ್ಣ ಮೂಲಭೂತವಾದದ ಮನಸ್ಥಿತಿಯಲ್ಲಿ ಪಠ್ಯ ಪರಿಷ್ಕರಿಸಿದ್ದು, ಇದಕ್ಕೆ ರಾಜ್ಯಾದ್ಯಂತ ಎದ್ದಿರುವ ಪ್ರತಿರೋಧ ಹಾಗೂ ಮಕ್ಕಳಿಗೆ ಬೋಧಿಸಬಾರದೆಂಬ ಕೂಗಿಗೆ ನನ್ನ ಸಹಮತವಿದೆ ಎಂದು ಈ ಹಿಂದಿನ ಪಠ್ಯ ಪರಿಷ್ಕರಣಾ ಸಮಿತಿಯ ಸರ್ವಾಧ್ಯಕ್ಷರಾಗಿದ್ದ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ. 

ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿಯು ಬುಧವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಕರ್ನಾಟಕ ಪಠ್ಯ ಪುಸ್ತಕ ಪರಿಷ್ಕರಣೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಕ್ರತೀರ್ಥ ಸಮಿತಿಯು ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಒಬ್ಬ ದಲಿತ ಲೇಖಕನ ಪಾಠವನ್ನೂ ಬಿಟ್ಟಿಲ್ಲ.  ಮಹಿಳಾ ಲೇಖಕಿಯರ ಶೇ.90ರಷ್ಟು ಪಾಠಗಳನ್ನು ಕೈಬಿಟ್ಟಿದೆ. ಸಾವಿತ್ರಿ ಬಾ ಪುಲೆ, ಅಬ್ಬಕ್ಕದೇವಿ, ಯಶೋಧರ ದಾಸಪ್ಪ ಅವರಂತಹ ಮಹಿಳಾ ಸಮಾಜ ಸುಧಾಕರು, ಸ್ವಾತಂತ್ರ್ಯ ಹೋರಾಟಗಾರ್ತಿಯರ ಕುರಿತ ಪಾಠಗಳನ್ನು ಉಳಿಸಿಲ್ಲ. ಬೌದ್ಧ, ಜೈನ ಸೇರಿ ಬೇರೆ ಬೇರೆ ಧರ್ಮಗಳ ಪಾಠಗಳನ್ನು ತೆಗೆದಿದ್ದಾರೆ. 

ಪಠ್ಯ ಪರಿಷ್ಕರಣೆ ವಿವಾದ: ದೇವೇಗೌಡರ ಮನೆಗೇ ಹೋಗಿ ಪಠ್ಯ ವಿವರಣೆ ಕೊಟ್ಟಿದ್ದೇವೆ, ನಾಗೇಶ್‌

ಜಾತಿ, ವರ್ಣ, ಅಸ್ಪೃಶ್ಯತೆ, ವರ್ಗ ಸಮಾಜದ ವಿರುದ್ಧ ಹೋರಾಟದ ವಿಚಾರಗಳು ಹಾಗೂ ಇವುಗಳ ವಿರುದ್ಧ ದನಿಯಾಗಿರುವ ಲೇಖಕರ ಎಲ್ಲ ಪಾಠಗಳನ್ನು ತೆಗೆಯಲಾಗಿದೆ. ಒಟ್ಟಾರೆ ಇದು ಮೂಲಭೂತವಾದಿ ಮನಸ್ಥಿತಿಯಲ್ಲಿ ಮಾಡಿರುವ ದಲಿತ, ಮಹಿಳಾ, ಅಲ್ಪಸಂಖ್ಯಾತ ವಿರೋಧಿ ಪರಿಷ್ಕರಣೆಯಾಗಿದೆ. ಇದರ ವಿರುದ್ಧದ ಹೋರಾಟಕ್ಕೆ ನನ್ನ ಸಾಂಸ್ಕೃತಿಕ ಸಹಮತವಿದೆ ಎಂದರು. ಸಂವಾದದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌, ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌, ಪ್ರೊ.ರಾಜಪ್ಪ ದಳವಾಯಿ, ಬಿ.ಎಂ.ಹನೀಫ್‌, ಕೆ.ಆರ್‌.ಸೌಮ್ಯ, ಜಿ.ಟಿ.ಪಾಟೀಲ್‌ ವಿಷಯ ಮಂಡಿಸಿದರು.

click me!