ರಾಜಸ್ಥಾನದಲ್ಲಿ ವೈದಿಕ ಶಿಕ್ಷಣ ಮತ್ತು ಸಂಸ್ಕೃತ ಮಂಡಳಿ ಶೀಘ್ರ ಆರಂಭ

By Suvarna NewsFirst Published Jun 17, 2021, 10:29 AM IST
Highlights

ರಾಜಸ್ಥಾನವು ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ವೈದಿಕ ಶಿಕ್ಷಣ ಮತ್ತು ಸಂಸ್ಕೃತ ಮಂಡಳಿಯನ್ನು ಸ್ಥಾಪಿಸಲು ಮುಂದಾಗಿದೆ. ಆ ಮೂಲಕ, ಸಂಸ್ಕೃತ ಅಭಿವೃದ್ಧಿಗೆ ಮುಂದಾಗಿದೆ. ಮುಂದಿನ ನಾಲ್ಕೈದು ತಿಂಗಳಲ್ಲಿ ಮಂಡಳಿ ಸ್ಥಾಪನೆಯಾಗುವ ಸಾಧ್ಯತೆ ಇದೆ.

ಭಾರತದ ಪುರಾತನ ಶಿಕ್ಷಣ ಪದ್ಧತಿ ಅಂದ್ರೆ ಅದು ವೈದಿಕ ಶಿಕ್ಷಣ. ವೇದಗಳ ಕಲಿಕೆಗೆ ಬಹಳ ಮಹತ್ವ ಹಾಗೂ ಹೆಚ್ಚಿನ ಪ್ರಾಶಸ್ತ ಸಿಗುತ್ತಿದ್ದ ಕಾಲವದು. ಗುರುಕುಲ, ಋಷಿಮುನಿಗಳ ಸಾಮಿಪ್ಯದಲ್ಲಿ ವಿದ್ಯಾಭ್ಯಾಸ ಮಾಡಿಸಲಾಗುತ್ತಿತ್ತು. ವೇದಗಳನ್ನ ಕಲಿಸುತ್ತಾ ಜ್ಞಾನ ಭಂಡಾರವನ್ನ ಹಂಚಲಾಗುತ್ತಿತ್ತು. ಹೀಗೆ ವೈದಿಕ ಹಾಗೂ ಸಂಸ್ಕೃತ ಶಿಕ್ಷಣ ಅದರದ್ದೇ ಮಹತ್ವ ಪಡೆದುಕೊಂಡಿದೆ. ಇದೀಗ ಅದೇ ಪುರಾತನ ಶಿಕ್ಷಣವನ್ನ ಜಾರಿಗೊಳಿಸಲು ರಾಜಸ್ಥಾನ ಸರ್ಕಾರ ತೀರ್ಮಾನಿಸಿದೆ. ಅದಕ್ಕಾಗಿ ವೈದಿಕ ಶಿಕ್ಷಣ ಮತ್ತು ಸಂಸ್ಕೃತ ಮಂಡಳಿಯನ್ನು ಸ್ಥಾಪಿಸಲು ಮುಂದಾಗಿದೆ. 

ಪ್ರಾಚೀನ ಸಂಸ್ಕೃತ ಗ್ರಂಥಗಳ ಜ್ಞಾನವನ್ನು ಪುನರುಜ್ಜೀವನಗೊಳಿಸಲು ಮತ್ತು ವಿಜ್ಞಾನ ಹಾಗೂ ಯೋಗದ ಮೂಲಕ ವೇದಗಳನ್ನು ಕಲಿಸಲು ವೈದಿಕ ಶಿಕ್ಷಣ ಮತ್ತು ಸಂಸ್ಕೃತ ಮಂಡಳಿಯನ್ನು ರಚಿಸಲು ಅಲ್ಲಿನ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಮುಂದಿನ ನಾಲ್ಕೈದು ತಿಂಗಳಲ್ಲಿ ಮಂಡಳಿ ಸ್ಥಾಪನೆಯಾಗುವ ಸಾಧ್ಯತೆ ಇದೆ.

ಆ್ಯಪ್ಸ್ ಸಹಾಯದಿಂದ ಹೋಮ್‌ವರ್ಕ್, ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಮಾಹಿತಿ!

ಮಂಡಳಿಯ ಉದ್ದೇಶಗಳು, ಕಾರ್ಯಚಟುವಟಿಕೆ ಮತು ಅದರ ಕಾರ್ಯಸ್ವರೂಪವನ್ನ ರೂಪಿಸಲು ಸಮಿತಿ ರೂಪಿಸಿದ್ದು, ಅದು ರಾಜಸ್ಥಾನ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ಸಂಸ್ಕೃತ ಶಿಕ್ಷಣ ರಾಜ್ಯ ಸಚಿವ ಸುಭಾಷ್ ಗರ್ಗ್ ತಿಳಿಸಿದ್ದಾರೆ. ಕಮಿಟಿಯ ಶಿಫಾರಸುಗಳನ್ನು ಆಧರಿಸಿ, ಮಂಡಳಿಯು ವೇದ ಜ್ಞಾನಕ್ಕೆ ಸಂಬಂಧಿಸಿದ 
ಶಿಕ್ಷಣದ  ಮಾದರಿಗಳನ್ನು ಅಳವಡಿಸಿಕೊಳ್ಳಲಿದೆ ಎಂದು ಸಚಿವರು ಹೇಳಿದ್ದಾರೆ. 

ಅಂದಹಾಗೇ ವೈದಿಕ ಶಿಕ್ಷಣ ಮತ್ತು ಸಂಸ್ಕೃತ ಮಂಡಳಿಯನ್ನು ಸ್ಥಾಪಿಸುವುದರ ಜೊತೆಗೆ ಸಂಸ್ಕೃತ ಭಾಷೆ ಮತ್ತು ಶಿಕ್ಷಣವನ್ನು ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳುವುದಾಗಿ 2018ರ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು.
 

ಕಳೆದ ಜನವರಿಯಲ್ಲಿ ವೇದಗಳ ಬಗ್ಗೆ ಸಂಶೋಧನೆ ನಡೆಸಲು ವಿದ್ಯಾರ್ಥಿಗಳನ್ನು ಉತ್ತೇಜಿಸುವ ಪ್ರಕ್ರಿಯೆಯನ್ನು ಶೀರ್ಘ ತ್ವರಿತಗೊಳಿಸುವುದಾಗಿ ಸಿಎಂ ಅಶೋಕ್ಗೆಹ್ಲೋಟ್ ಘೋಷಿಸಿದ್ದರು. 

ವೇದಗಳು ಉತ್ತಮ ಆಡಳಿತದ ತತ್ವಗಳ ನಿಧಿ. ಈ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವ ಮೂಲಕ, ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಬಹುದು ಎಂದು ಅಶೋಕ್ ಗೆಹ್ಲೋಟ್ ಜೈಪುರದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದ್ದರು.

ಕೇರಳದ 5ನೇ ತರಗತಿ ಬಾಲಕಿಯ ಪತ್ರಕ್ಕೆ ಮಾರು ಹೋದ ಸಿಜೆಐ!

ಈ ಸಮಿತಿಯು ಇತರ ರಾಜ್ಯಗಳಲ್ಲಿ ಅನುಸರಿಸುತ್ತಿರುವ ವೈದಿಕ ಬೋಧನೆಯ ಹಲವಾರು ಮಾದರಿಗಳನ್ನು ಅಧ್ಯಯನ ಮಾಡಿದ್ದು, ಶಾಲೆಗಳಿಗೆ ಪಠ್ಯಕ್ರಮ ಹೇಗಿರಬೇಕೆಂದು ಶಿಫಾರಸು ಮಾಡಿದೆ. ಇದರಲ್ಲಿ ವಿಜ್ಞಾನ, ಗಣಿತ, ಸಂಸ್ಕೃತ, ಯೋಗ ಮತ್ತು ಧ್ಯಾನ ಮುಂತಾದ ವಿಷಯಗಳು ಸೇರಿವೆ. ಶಾಲಾ ವಿದ್ವಾಂಸರು ವೈದಿಕ ಕಲಿಕೆಯ ವಿವಿಧ ಶಾಖೆಗಳಲ್ಲಿ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುವಂತೆ ಸಮಿತಿ ಶಿಫಾರಸು ಮಾಡಿದೆ. 

ರಾಜಸ್ಥಾನದಲ್ಲಿ ಪ್ರಸ್ತುತ ಸುಮಾರು 20 ವಸತಿ ಸಹಿತ ವೇದ ಶಾಲೆಗಳಿವೆ. ಇದರಲ್ಲಿ ಪ್ರಾಚೀನ ಶಿಕ್ಷಕ-ಶಿಷ್ಯ ಸಂಪ್ರದಾಯಕ್ಕೆ ಅಂಟಿಕೊಂಡಿರುವ ‘ಗುರುಕುಲಗಳು’ ಸೇರಿವೆ. ಈ ಗುರುಕುಲಗಳನ್ನ ಟ್ರಸ್ಟ್‌ಗಳ ಮೂಲಕ ನಡೆಸಲಾಗ್ತಿದೆ. ಆದರೆ ಶಿಕ್ಷಣವನ್ನು ನೀಡಲು ಯಾವುದೇ ನಿಗದಿತ ಪಠ್ಯಕ್ರಮವನ್ನು ಅನುಸರಿಸುತಿಲ್ಲ. 

ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸಂಸ್ಕೃತಿ ವಿಶ್ವವಿದ್ಯಾಲಯಗಳ ಅಸ್ತಿತ್ವದಲ್ಲಿವೆ. ಆ ಮೂಲಕ ಸಂಸ್ಕೃತ ಭಾಷೆ ಅಭಿವೃದ್ಧಿ ಮತ್ತು ಸಂಸ್ಕೃತದಲ್ಲೇ ಶಿಕ್ಷಣ ನೀಡುವ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಈಗ ರಾಜಸ್ಥಾನದಲ್ಲೂ ಇಂಥದ್ದೇ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಆ ಮೂಲಕ ವೇದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ.

ನೀಟ್ ಪರೀಕ್ಷೆಯನ್ನೂ ರದ್ದು ಮಾಡಲು ತಮಿಳುನಾಡು ಒತ್ತಾಯ

ಈಗಾಗಲೇ ರಾಜಸ್ಥಾನದಲ್ಲಿ ವೇದ ಶಾಲೆಗಳಿವೆ. ಆದರ, ಈ ಶಾಲೆಗಳಿಗೆ ನಿರ್ದಿಷ್ಟವಾದ ಪಠ್ಯಕ್ರಮವಾಗಲೀ, ವ್ಯವಸ್ಥೆಯಾಗಲಿ ಇರಲಿಲ್ಲ. ಸರ್ಕಾರವು ವೈದಿಕ ಶಿಕ್ಷಣ ಮತ್ತು ಸಂಸ್ಕೃತ ಮಂಡಳಿ ಸ್ಥಾಪನೆಯ ಮೂಲಕ ಅದಕ್ಕೊಂದು ವ್ಯವಸ್ಥೆಯ ರೂಪಿಸಲು ಮುಂದಾಗಿದೆ. ಮಂಡಳಿ ಸ್ಥಾಪನೆಯ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅದರಂತೆ ಈ ಸ್ಥಾಪನೆ ಮಾಡಲಾಗುತ್ತಿದೆ.

click me!