*ತಾವು ಕಲಿತ ಶಾಲಾ-ಕಾಲೇಜುಗಳಿಗೆ ಹಳೆಯ ವಿದ್ಯಾರ್ಥಿಗಳು ಕೊಡುಗೆಗಳನ್ನು ನೀಡುತ್ತಾರೆ
*ರಾಜ್ ಭಾರ್ಗವ್ ತಾವು ಕಲಿತ ಕಾಲೇಜಿನಲ್ಲಿ ಒಂದು ಕೋಟಿ ರೂ. ಮೊತ್ತದ ನಿಧಿ ಸ್ಥಾಪಿಸಿದ್ದಾರೆ
*ಈ ನಿಧಿ ಮೂಲಕ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು
ಕಾಲೇಜಿನಲ್ಲಿ ವ್ಯಾಸಂಗ ಮುಗೀತು, ಉದ್ಯೋಗ ಸಿಕ್ತು ಅಂದ್ರೆ ಸಾಕು.. ಆಮೇಲೆ ಕಾಲೇಜಿನ ನೆನಪೇ ಇರಲ್ಲ. ಆದ್ರೆ ಕೆಲವರು ತಾವು ಓದಿ ಬಂದ ಶಿಕ್ಷಣ ಸಂಸ್ಥೆಯನ್ನ ಎಂದಿಗೂ ಮರೆಯಲ್ಲ. ಕೆಲವರು ವಾಟ್ಸ್ ಆ್ಯಪ್ ಗ್ರೂಪ್ ಮಾಡ್ಕೊಂಡ್ ಹಳೆ ನೆನಪುಗಳನ್ನ ಮೆಲುಕು ಹಾಕೋದು, ಗೆಟ್ ಟುಗೆದರ್ ಮಾಡೋದು, ನೆಚ್ಚಿನ ಶಿಕ್ಷಕರು ನಿವೃತ್ತಿಯಾದ್ರೆ ಬೀಳ್ಕೊಡುಗೆ ನೀಡುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ನಂಟು ಹೊಂದಿರುತ್ತಾರೆ. ಇನ್ನು ಕೆಲವರು ತಾವೇನಾದ್ರೂ ಉನ್ನತ ಹುದ್ದೆಯಲ್ಲಿದ್ರೆ, ತಮ್ಮ ಶಾಲೆ ಅಥವಾ ಕಾಲೇಜಿಗೆ ಕೈಲಾದ ಸಹಾಯ ಮಾಡ್ತಾ ಇರ್ತಾರೆ. ಇದೇ ರೀತಿಯಲ್ಲಿ ಇಲ್ಲೊಬ್ರು ನಿವೃತ್ತ ಸರ್ಕಾರಿ ಅಧಿಕಾರಿಯೊಬ್ರು ತಾವು ಓದಿದ ಕಾಲೇಜಿಗೆ ದೊಡ್ಡ ಮೊತ್ತದ ದೇಣಿಗೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಹೌದು...ದೆಹಲಿ ವಿಶ್ವವಿದ್ಯಾನಿಲಯದ ಹಿಂದೂ ಕಾಲೇಜಿ (Hindu College) ನ ಹಳೆ ವಿದ್ಯಾರ್ಥಿಯೊಬ್ಬರು ಕಾಲೇಜಿನ ಸ್ಕಾಲರ್‌ಶಿಪ್ ಫೌಂಡೇಶನ್‌ಗಾಗಿ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಭಾರತ ಸರ್ಕಾರದ ಗೃಹ ವ್ಯವಹಾರಗಳ ಇಲಾಖೆಯ ಮಾಜಿ ಮುಖ್ಯ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ರಾಜ್ ಭಾರ್ಗವ ಅವರು, ಹಿಂದೂ ಕಾಲೇಜಿಗೆ ಇಷ್ಟು ದೊಡ್ಡ ಮೊತ್ತದ ವಿದ್ಯಾರ್ಥಿವೇತನ ದಯಪಾಲಿಸಿದ್ದಾರೆ. ಈ ಮೂಲಕ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಿನ ಹಸ್ತ ಚಾಚಿದ್ದಾರೆ.
ಹಿಂದೂ ಕಾಲೇಜಿನ ಪ್ರಸಿದ್ಧ ಹಳೆಯ ವಿದ್ಯಾರ್ಥಿಯಾಗಿರೋ ಭಾರ್ಗವ ಅವರು, ಡಿಗ್ರಿಯಲ್ಲಿ ಸಮಾಜ ವಿಜ್ಞಾನಕ್ಕಾಗಿ ವಿದ್ಯಾರ್ಥಿವೇತನ ಪ್ರತಿಷ್ಠಾನಕ್ಕಾಗಿ 1 ಕೋಟಿ ರೂಪಾಯಿ ಕಾರ್ಪಸ್ ಫಂಡ್ ಮಾಡಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ ಆ ಸ್ಕಾಲರ್ಶಿಪ್ ಫಂಡ್ನಿಂದ ಐದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ಹಿಂದೂ ಕಾಲೇಜಿನಲ್ಲಿ ಲಿಖಿತ ಮೆರಿಟ್ ಅಸೆಸ್‌ಮೆಂಟ್ ಟೆಸ್ಟ್ (Merit Assesment Test-MAT) ಅನ್ನು ಒಳಗೊಂಡಿರುವ ಕಠಿಣ ಪ್ರಕ್ರಿಯೆ ಮೂಲಕ ಸ್ಕಾಲರ್ಶಿಪ್ಗೆ ಅರ್ಹ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಲಾಗಿದೆ. ಟೆಸ್ಟ್ ಬರೆದ ಬಳಿಕ ಪರಿಣಿತ ಸಮಿತಿಯು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಐಐಟಿ ವಿದ್ಯಾರ್ಥಿಗೆ ಪ್ರತಿಷ್ಠಿತ ಕಾರ್ಗಿಲ್ ಗ್ಲೋಬಲ್ ಸ್ಕಾಲರ್‌ಶಿಪ್
ಸದ್ಯ ಈ ಮೊದಲ ವರ್ಷವೇ ಕಾಲೇಜಿನ ಐವರು ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪರೀಕ್ಷೆಯನ್ನ ಗೆದ್ದು ಬೀಗಿದ್ದಾರೆ. ಇತಿಹಾಸ ವಿಭಾಗದ ಆಯುಷ್ ಸಿಂಗ್ ರಾಜ್‌ಪೂತ್ ಮತ್ತು ರಾಜಕೀಯ ವಿಜ್ಞಾನ ಭಾಗದ ಗವಿಶ್ ಲೋಹತ್ ಎಂಬ ಇಬ್ಬರು ವಿಜೇತರಿಗೆ, ಕಾಲೇಜು ಆಡಳಿತ ಮಂಡಳಿ 75,000 ರೂಪಾಯಿ ಬಹುಮಾನ ಮತ್ತು ಟ್ಯಾಬ್ಲೆಟ್ ಸಾಧನವನ್ನು ನೀಡಿದೆ. ಇನ್ನು ರನ್ನರ್ ಅಪ್ಗಳಾದ ಇತಿಹಾಸ ವಿಭಾಗದ ದಿವ್ಯಾ ಮತ್ತು ಅರ್ಥಶಾಸ್ತ್ರ ವಿಭಾಗದ ವಿಸ್ಮಯ್ ವೈರಾಗಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಗಿದೆ. ಇದಲ್ಲದೆ, ಐದನೇ ವಿದ್ಯಾರ್ಥಿಗೆ ಅವರ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಗುರುತಿಸಿ ಟ್ಯಾಬ್ಲೆಟ್ ಸಾಧನವನ್ನು ಸಹ ನೀಡಲಾಗಿದೆ.
ಜಿಯೋ ಇನ್ಸಿಟ್ಯೂಟ್ ಆರಂಭ, ಮೊದಲ ಬ್ಯಾಚ್ ಸ್ವಾಗತಿಸಿದ ಸಂಸ್ಥೆ
ವಿದ್ಯಾರ್ಥಿವೇತನವು ನವೀಕರಿಸಬಹುದಾದ ಮತ್ತು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಕಾಲೇಜು ವಾತಾವರಣದಲ್ಲಿ ವಿದ್ಯಾರ್ಥಿ ವೇತನಗಳಿಗಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದರ ಜೊತೆಗೆ ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯ ಮಾಡುತ್ತವೆ. ರಾಜ್ ಭಾರ್ಗವ್ (Raj Bhargava) ಅವರು ದೊಡ್ಡ ಮೊತ್ತದ ಕಾಣಿಕೆಯನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಅಧ್ಯಯನದತ್ತ ಪ್ರೇರೇಪಿಸಲು ಸಹಾಯ ಮಾಡಿದ್ದಾರೆ. ಕಲಿತ ಶಾಲೆಗಳಿಗೆ ಹಿಂದಿರುಗಿ ಕೈಲಾದ ಮಟ್ಟಿಗೆ ಸಹಾಯ ಮಾಡುವುದು ಹಳೆಯ ವಿದ್ಯಾರ್ಥಿಗಳ ಕೈಗೊಳ್ಳುವ ನೀತಿ ನಡೆದುಕೊಂಡು ಬಂದಿದೆ. ಅದೇ ನಿಟ್ಟಿನಲ್ಲಿ ಭಾರ್ಗವ ಅವರು ತಾವು ಕಲಿತ ಕಾಲೇಜಲ್ಲಿ ದೊಡ್ಡ ಮೊತ್ತದ ನಿಧಿ ಸ್ಥಾಪಿಸುವ ಮೂಲಕ ಧನ್ಯತೆ ಮೆರೆದಿದ್ದಾರೆ. ಈ ನಿಧಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಆ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.