
ಬೆಂಗಳೂರು (ಏ.09): ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಬಿದ್ದು ಪಾರದರ್ಶಕತೆ ಹೆಚ್ಚಾಗಿದೆ. ಇದರಿಂದ ಫಲಿತಾಂಶ ಕುಸಿತವಾಗಿದೆ. ಆದರೆ, ಫಲಿತಾಂಶ ಉತ್ತಮಪಡಿಸಲು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಚೇರಿಯಲ್ಲಿ ಮಂಗಳವಾರ ಫಲಿತಾಂಶ ಬಿಡುಗಡೆ ಮಾಡಿ ಮಾತನಾಡಿದ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗಿದೆ.
ಫಲಿತಾಂಶ ಎಷ್ಟು ಕುಸಿದಿದೆ ಎಂದು ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಮಂಡಳಿ ನಿಯಮಗಳ ಪ್ರಕಾರ, ಪರೀಕ್ಷೆ 1ಕ್ಕೆ ಈ ಬಾರಿಯ ಫಲಿತಾಂಶದ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಫಲಿತಾಂಶ ಉತ್ತಮಪಡಿಸಲು ಪರೀಕ್ಷೆ-2 ಮತ್ತು 3ರಲ್ಲಿ ಅವಕಾಶವಿದೆ. ಪಾಸಾಗದ ವಿಷಯಗಳು ಮಾತ್ರವಲ್ಲದೆ ಈಗ ಬಂದಿರುವ ಫಲಿತಾಂಶ ಉತ್ತಮಪಡಿಸಿಕೊಳ್ಳಲು ವಿಷಯವಾರು ಅಥವಾ ಒಟ್ಟಾರೆ ಎಲ್ಲ ವಿಷಯಗಳಿಗೂ ಮತ್ತೆ ಪರೀಕ್ಷೆ ಬರೆಯಬಹುದು. ಮೂರೂ ಪರೀಕ್ಷೆಯಲ್ಲಿ ತಾವು ಇಚ್ಛಿಸಿದ ಫಲಿತಾಂಶವನ್ನು ಅಂತಿಮವಾಗಿ ಉಳಿಸಿಕೊಳ್ಳಬಹುದು ಎಂದು ಹೇಳಿದರು. ಉಳಿದ ಎರಡು ಪರೀಕ್ಷೆಗಳಿಗೆ ನೋಂದಾಯಿಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಡೆಯುವುದಿಲ್ಲ. ಕಲಿಕೆಯಲ್ಲಿ ನಮ್ಮಿಂದ ತೊಂದರೆ ಆಗಿದೆ.
ಅದಕ್ಕೆ ವಿದ್ಯಾರ್ಥಿಗಳಿಗೆ ಹೊರೆ ಆಗಬಾರದು ಎಂದು ಈ ವರ್ಷಕ್ಕೆ ಮಾತ್ರ ಶುಲ್ಕ ವಿನಾಯಿತಿಗೆ ತೀರ್ಮಾನಿಸಿದ್ದೇವೆ. ಮುಂದಿನ ದಿನಗಳಲ್ಲಿ ಫಲಿತಾಂಶ ಉತ್ತಮ ಪಡಿಸಲು ಕ್ರಮ ವಹಿಸಲಾಗುವುದು ಎಂದರು. ಸರ್ಕಾರಿ ಕಾಲೇಜುಗಳಲ್ಲಿ ಫಲಿತಾಂಶ ತೀವ್ರ ಕುಸಿತದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಯಂ ಉಪನ್ಯಾಸಕರ ಕೊರತೆ ಕಡಿಮೆ ಮಾಡಲು ಶೀಘ್ರದಲ್ಲೇ ನೇಮಕಾತಿ ನಡೆಸುತ್ತೇವೆ. ಅತಿಥಿ ಉಪನ್ಯಾಸಕರಿಂದ ಹೆಚ್ಚಿನ ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇವೆ ಎಂದು ತಿಳಿಸಿದರು.
2nd PUC Result 2025: ವೈದ್ಯ ದಂಪತಿಯ ಪುತ್ರಿ, ವಿಜ್ಞಾನ ಟಾಪರ್ ಅಮೂಲ್ಯಗೆ ಎಂಜಿನಿಯರ್ ಆಗುವಾಸೆ!
ಸುಧಾರಣೆ ಕಾಣದ ಚಿಕ್ಕೋಡಿ, ಬೆಳಗಾವಿ ಫಲಿತಾಂಶ: 2025ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬೆಳಗಾವಿ ಶೈಕ್ಷಣಿಕ ಜಿಲ್ಲೆ (ಶೇ.65.37) ರಾಜ್ಯಕ್ಕೆ 26ನೇ ಸ್ಥಾನ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ (66.76) 24ನೇ ಸ್ಥಾನ ಪಡೆದುಕೊಂಡಿವೆ. ಎರಡೂ ಜಿಲ್ಲೆಗಳು ಶೈಕ್ಷಣಿಕ ಸುಧಾರಣೆ ಕಂಡಿಲ್ಲ. 2024ರಲ್ಲಿ 27ನೇ ಸ್ಥಾನ ಪಡೆದಿದ್ದ ಬೆಳಗಾವಿ ಈ ಬಾರಿ 26ನೇ ಸ್ಥಾನಕ್ಕೆ ಏರಿದೆ. ಕಳೆದ ಬಾರಿ 15ನೇ ಸ್ಥಾನಕ್ಕೇರಿದ್ದ ಚಿಕ್ಕೋಡಿ ಜಿಲ್ಲೆ ಈ ಬಾರಿ 24ನೇ ಸ್ಥಾನಕ್ಕೆ ಕುಸಿದಿದೆ. ಚಿಕ್ಕೋಡಿ ಜಿಲ್ಲೆಯು ಶೈಕ್ಷಣಿಕ ಸುಧಾರಣೆ ತೀರಾ ಕುಸಿದಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಮುಂದಿನ ದಿನಗಳಲ್ಲಿ ಉಜ್ವಲವಾಗಲಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿನಂದನೆ ಸಲ್ಲಿಸಿದ್ದಾರೆ.